Spread the love

ಅರ್ಜುನ ಎಂಬ ಆನೆಯ ಸಾವು,
ಮತ್ತು
ಶ್ರೀಮತಿ ಭವಾನಿ ರೇವಣ್ಣ ಅವರ 1.5 ಕೋಟಿಯ ಕಾರು………

ಕಳ್ಳರನ್ನು ಹಿಡಿಯುವ ಪೋಲೀಸರ ಕಾರ್ಯಾಚರಣೆಯಲ್ಲಿ ಪೋಲೀಸರೇ ಹತ್ಯೆಯಾದಂತಾಗಿದೆ ಅರ್ಜುನನ ಸಾವು. ಬಹುಶಃ ಖೆಡ್ಡಾ ಕಾರ್ಯಾಚರಣೆಯ ಜವಾಬ್ದಾರಿ ಹೊತ್ತ ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯದಿಂದ ಅರ್ಜು‌ನನ ಸಾವು ಸಂಭವಿಸಿರುವ ಎಲ್ಲಾ ಸಾಧ್ಯತೆಗಳು ಇವೆ. ಒಂದಕ್ಕೊಂದು ಭಿನ್ನ ವರದಿಗಳು ಬರುತ್ತಿವೆ. ಸರ್ಕಾರ ಒಂದು ತಟಸ್ಥ ಅಧಿಕಾರಿಗಳಿಂದ ನಿಷ್ಪಕ್ಷಪಾತ ತನಿಖೆ ನಡೆಸಿದರೆ ಸತ್ಯ ಹೊರಬರಬಹುದು. ಅದರಿಂದ ತಪ್ಪಿತಸ್ಥರಿಗೆ ಶಿಕ್ಷೆ ಮತ್ತು ಮುಂದೆ ಈ ರೀತಿಯ ಕಾರ್ಯಾಚರಣೆಗಳಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಎಚ್ಚರಿಕೆ ವಹಿಸಬಹುದು…..

ಹುಲಿ ಉಗುರು ಮತ್ತು ಇತರ ಪ್ರಾಣಿಯ ವಸ್ತುಗಳ ಬಗ್ಗೆ ವೀರೋಚಿತವಾಗಿ ಮಾಧ್ಯಮಗಳ ಮುಂದೆ ಮಾತನಾಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಅರ್ಜನನ ರಕ್ಷಣೆಗಾಗಿ ಇನ್ನಷ್ಟು ಶ್ರಮವಹಿಸಿದ್ದರೆ ಒಳ್ಳೆಯದಿತ್ತು ಎಂಬ ಸಾರ್ವಜನಿಕ ಅಭಿಪ್ರಾಯವನ್ನು ಮಂಡಿಸುತ್ತಾ…..

ಮೂಕ ಪ್ರಾಣಿಗಳ ವಿಷಯದಲ್ಲಿ ಮನುಷ್ಯ ಇನ್ನೂ ಹೆಚ್ಚು ಹೃದಯವಂತಿಕೆ ತೋರಬೇಕು. ಇಲ್ಲದಿದ್ದರೆ ಮನುಷ್ಯರೇ ಖೆಡ್ಡಾಗೆ ಬೀಳಬಹುದು…..

ಅರ್ಜುನನ ಸಾಧನೆಗಳನ್ನು ಮೆಲುಕು ಹಾಕುತ್ತಾ ಅದಕ್ಕೆ ನಮ್ಮ ಆಶ್ರು ತರ್ಪಣೆ……

ಮತ್ತೊಂದು ಸುದ್ದಿ…..

ಎಷ್ಟೇ ನಿರ್ಲಕ್ಷಿಸಬೇಕೆಂದರು ಸಾಧ್ಯವಾಗದೆ ಆ ಹತ್ತು ನಿಮಿಷಗಳ ಶ್ರೀಮತಿ ಭವಾನಿ ರೇವಣ್ಣ ಅವರ ಅಪಘಾತದ ವಿಡಿಯೋ ತುಣುಕು ಸ್ವಲ್ಪ ಕೆಣಕುತ್ತದೆ…..

ಚಪ್ಪಲಿಯ ಬೆಲೆ ಎಷ್ಟೇ ಲಕ್ಷಗಳಿದ್ದರು ಅದನ್ನು ತಲೆಗೆ ಹಾಕಿಕೊಳ್ಳುವುದಿಲ್ಲ, ಕಾಲಿಗೆ ಹಾಕಿಕೊಳ್ಳಬೇಕು. ಹಾಗೆಯೇ ಕಾರು ಎಷ್ಟೇ ಬೆಲೆಯದ್ದಾದರು ರಸ್ತೆಗಳಲ್ಲಿ ಓಡಾಡಲೇ ಬೇಕು. ಆಗ ಯಾವುದೇ ರೀತಿಯ ಅಪಘಾತದ ಸಾಧ್ಯತೆ ಇದ್ದೇ ಇರುತ್ತದೆ…

ಆ ರೀತಿಯ ಆಕಸ್ಮಿಕಗಳಲ್ಲಿ ಅವರ ಕಾರಿಗೆ ಯಾರೋ ಒಬ್ಬರು ತಪ್ಪಾಗಿ ತಮ್ಮ ದ್ವಿಚಕ್ರ ವಾಹನ ಸಣ್ಣದಾಗಿ ಡಿಕ್ಕಿ ಹೊಡೆಯುತ್ತಾರೆ. ಅದಕ್ಕೆ ಶ್ರೀಮತಿ ಭವಾನಿ ರೇವಣ್ಣನವರ ಪ್ರತಿಕ್ರಿಯೆ ಮಾತ್ರ ಸ್ವೀಕಾರಕ್ಕೇ ಯೋಗ್ಯವಲ್ಲದ ಅಯೋಗ್ಯ ರೀತಿಯಲ್ಲಿತ್ತು….

ಮಾಜಿ ಸಚಿವ ರೇವಣ್ಣ ಮತ್ತು ವಿಧಾನ ಪರಿಷತ್ತಿನ ಸದಸ್ಯ ಸೂರಜ್ ರೇವಣ್ಣ ಅದನ್ನು ಒಪ್ಪಿಕೊಂಡು ಕ್ಷಮೆ ಯಾಚಿಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಮಾತ್ರ ತಮ್ಮ ಘನತೆಗೆ ತಕ್ಕುದಲ್ಲದ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ……

ಒಂದು ಹಂತಕ್ಕೆ ಶ್ರೀಮತಿ ಭವಾನಿ ರೇವಣ್ಣ ಅವರಿಗೆ ಸ್ವಲ್ಪ ರಿಯಾಯಿತಿ ನೀಡಬಹುದು. ಪರಿಚಿತರ ದುಬಾರಿ ಕಾರಿಗೆ ಯಾರೋ ಅಪರಿಚಿತರು ತಪ್ಪಾಗಿ ಗ್ರಹಿಸಿ ಅಪಘಾತ ಮಾಡಿ ಅವರು ಸಣ್ಣ ಪುಟ್ಟ ಗಾಯಗಳಿಂದ ಪಾರಾದಾಗ ಸಹಜವಾಗಿ ಸ್ವಲ್ಪ ಕೋಪ ಬರುತ್ತದೆ. ಆಗ ಬೈಕ್ ಸವಾರನಿಗೆ ಯಾರೇ ಆಗಲಿ ಬೈಯ್ಯುವುದು ಸಹಜ ಮತ್ತು ಸಾಮಾನ್ಯ. ಆದರೆ ಅದನ್ನು ಮೀರಿ ಭವಾನಿ ರೇವಣ್ಣನವರು ಅಹಂಕಾರಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ದುರಹಂಕಾರದ ಮಾತುಗಳನ್ನು ಆಡಿರುವುದು ಮತ್ತು ಅವರ ಅಮಾನವೀಯ ನಡವಳಿಕೆ ಒಪ್ಪಿಕೊಳ್ಳುವ ವಿಷಯವಲ್ಲ…..

ಮಧ್ಯ ವಯಸ್ಸು ದಾಟಿ, ಸಾರ್ವಜನಿಕ ಜೀವನದ ಅಧಿಕಾರ ಸ್ಥಾನಕ್ಕೆ ಹತ್ತಿರವಾಗಿದ್ದು, ಎಲ್ಲಾ ಆಗುಹೋಗುಗಳ ಬಗ್ಗೆ ಅರಿವಿದ್ದರು ಮನುಷ್ಯನಿಗಿಂತ ವಸ್ತುವಿಗೆ ಹಣದ ಕಾರಣಕ್ಕಾಗಿ ಬೆಲೆ ಕೊಡುವುದು ಮತ್ತು ಆತನ ಜೀವದ ಬಗ್ಗೆ ಕೇವಲವಾಗಿ ಮಾತನಾಡುವುದು ಸಹಿಸಲು ಸಾಧ್ಯವಿಲ್ಲ……

ಏನೋ ಒಂದಷ್ಟು ಬೈದು, ಪೋಲೀಸರಿಗೆ ಕಂಪ್ಲೇಂಟ್ ಕೊಟ್ಟು ವಾಹನ ವಿಮೆ ಸೌಲಭ್ಯ ಪಡೆದಿದ್ದರೆ ಅದು ಸಹಜವಾಗಿತ್ತು. ಆದರೆ ಅವರು ಹಣ ಅಧಿಕಾರದ ಕಾರಣಕ್ಕಾಗಿ ಮನಸ್ಸಿನೊಳಗಿನ ಸಾಮಾನ್ಯರ ಬಗೆಗಿನ ತಿರಸ್ಕಾರ ಹೊರ ಹಾಕಿರುವುದು ಈ ರೀತಿಯ ಕೆಲವರ ಮೂಲ ಮನೋಭಾವದ ಮುಖವಾಡ ಬಯಲಾದಂತಾಗಿದೆ…..

ಇದು ವ್ಯಾಪಕ ಟೀಕೆಗೆ ಒಳಗಾಗಿರುವುದರಿಂದ ವಸ್ತು ಸಂಸ್ಕೃತಿಯ ವಿಜೃಂಭಣೆಯ ವಿರುದ್ಧ ಜನಸಾಮಾನ್ಯರು ಮಾನವೀಯ ಮೌಲ್ಯಗಳ ಸಂಸ್ಕೃತಿಗೆ ಹೆಚ್ಚಿನ ಮಹತ್ವ ನೀಡಲು ಬಯಸುತ್ತಾರೆ ಎಂಬ ವಿಷಯ ಮೆಚ್ಚುಗೆಗೆ ಅರ್ಹವಾಗಿದೆ……

ಇನ್ನಾದರು ಭವಾನಿ ರೇವಣ್ಣನವರು ಸಾರ್ವಜನಿಕವಾಗಿ ಕ್ಷಮೆ ಕೇಳಿದರೆ ಉತ್ತಮ. ಕಾರು ಪವಿತ್ರವಲ್ಲ ಮನುಷ್ಯ ಮುಖ್ಯವಾಗಬೇಕು. ದೇವರು – ಧರ್ಮದ ಮೂಲ ಆಶಯ ಪೂಜೆ ಅಲಂಕಾರ, ಹಾಸನಾಂಬೆಯ ದರ್ಶನ ಮಾತ್ರವಲ್ಲ ಮಾನವೀಯ ನಡವಳಿಕೆಯೇ ಮುಖ್ಯವಾಗಬೇಕು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………

error: No Copying!