Spread the love

ಮೊನ್ನೆ ಬೆಂಗಳೂರಿನ ಸುಮಾರು 68 ಶಾಲೆಗಳಿಗೆ ಬಾಂಬ್ ಸ್ಫೋಟದ ಬೆದರಿಕೆಯ ಇ ಮೇಲ್ ಬಂದ ಕಾರಣ ಮಕ್ಕಳು, ಪೋಷಕರು, ಶಿಕ್ಷಕರು, ಜವಾಬ್ದಾರಿಯುತ ನಾಗರಿಕ ಮನಸ್ಸುಗಳು ತುಂಬಾ ಆತಂಕಕ್ಕೆ ಒಳಗಾದರು. ಮಾಧ್ಯಮಗಳು ಅಗತ್ಯಕ್ಕಿಂತ ಹೆಚ್ಚು ಸುದ್ದಿಯನ್ನು ಮಾಡಿದರು. ಪೋಲೀಸರು ಒಂದಷ್ಟು ತಪಾಸಣೆ ಮಾಡಿದ ನಂತರ ಅದು ನಕಲಿ ಎಂದು ಸಾಬೀತಾಯಿತು. ಅದನ್ನು ಕಳುಹಿಸಿದವರ ಪತ್ತೆ ಕಾರ್ಯ ನಡೆಯುತ್ತಿದೆ……

ಕೇವಲ ಇ ಮೇಲ್ ಸಂದೇಶ ಇಷ್ಟು ತಲ್ಲಣ ಉಂಟುಮಾಡುವುದಾದರೆ ಒಂದು ವೇಳೆ ಆ ಬೆದರಿಕೆ ನಿಜವಾಗಿ ಆ ಶಾಲೆಗಳಲ್ಲಿ ಬಾಂಬುಗಳು ಸ್ಪೋಟಿಸಿದ್ದರೆ ಆಗುತ್ತಿದ್ದ ಅನಾಹುತ ಹೇಗಿರುತ್ತಿತ್ತು ಒಮ್ಮೆ ಕಲ್ಪಿಸಿಕೊಳ್ಳಬಹುದೇ….

ಅಪಶಕುನ ನುಡಿಯಬೇಡ ಎಂದು ನೀವು ನನ್ನನ್ನು ಶಪಿಸಬಹುದು. ಆದರೆ ಪ್ರೀತಿ ಮತ್ತು ಅಹಿಂಸೆಯನ್ನು ನಿರ್ಲಕ್ಷಿಸಿ ಅಥವಾ ತಿರಸ್ಕರಿಸಿ ಹಿಂಸೆ, ದ್ವೇಷ ಅಸೂಯೆಯನ್ನು ಸಮಾಜದಲ್ಲಿ ಹೆಚ್ಚಾಗಿ ಸೃಷ್ಟಿಸಿದರೆ ಇದು ಮುಂದೊಮ್ಮೆ ನಿಜವೂ ಆಗಬಹುದು ಎಂಬ ಎಚ್ಚರಿಕೆಯ ಕಾರಣ ಇದನ್ನು ಪ್ರಸ್ತಾಪಿಸಲೇ ಬೇಕಾಗಿದೆ. ವಿಶ್ವದ ಕೆಲವು ಧರ್ಮಾಂದ ರಾಷ್ಟ್ರಗಳ ಸಮಕಾಲೀನ ಘಟನೆಗಳನ್ನು ನೋಡಿದರೆ ಮುಂದೆ ಈ ಬೆದರಿಕೆಗಳು ವಾಸ್ತವವಾಗಬಹುದು. ಅದರ ಪ್ರಾರಂಭಿಕ ಗುಣಲಕ್ಷಣಗಳು ಹೀಗೆಯೇ ಇರುತ್ತದೆ….

ಈ ಪತ್ರ ವಿಕೃತ – ಹುಚ್ಚನೊಬ್ಬನ ಆಟವೇ ಇರಬಹುದು. ಆದರೆ ಆ ಪತ್ರದ ಸಾರಾಂಶ ಸಮುದಾಯಗಳ ನಡುವಿನ ದ್ವೇಷದ ಕಿಚ್ಚಿಗೆ ಮತ್ತೊಂದು ರೂಪ ನೀಡುವ, ಅವುಗಳ ಒಳಗಿನ ಮಾನಸಿಕ ಚಿಂತನೆಯ ಮುಖವಾಡವನ್ನು ಬಹಿರಂಗಪಡಿಸುವ ಉದ್ದೇಶ ಹೊಂದಿದೆ….

ದೇಶದ – ಸಮಾಜದ ರಕ್ಷಣೆಯಲ್ಲಿ ಪ್ರೀತಿ ಮತ್ತು ಅಹಿಂಸೆಯ ಮಹತ್ವ ಪ್ರತಿಯೊಬ್ಬ ಪ್ರಜೆಯು ಅರ್ಥಮಾಡಿಕೊಳ್ಳಬೇಕು. ಅಹಿಂಸೆ ಎಂದರೆ ಶರಣಾಗತಿಯಲ್ಲ. ತನ್ನ ರಕ್ಷಣೆಯ ಮೊದಲ ಅಸ್ತ್ರವೇ ಅಹಿಂಸೆ. ಅದರಲ್ಲೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಸರ್ಕಾರಗಳು ಪೋಲೀಸ್, ಸೈನ್ಯ, ಅರೆ ಸೈನ್ಯ, ಗುಪ್ತದಳ, ಭಯೋತ್ಪಾದನೆ ನಿಗ್ರಹ ದಳ, ಇಂಟೆಲಿಜೆನ್ಸ್‌ ಹೀಗೆ ಅನೇಕ ವ್ಯವಸ್ಥೆಗಳನ್ನು ಹೊಂದಿದೆ. ಯಾರು ಏನೇ ಹೇಳಿದರು ಭಾರತದಲ್ಲಿ ಆ ವಿಷಯದಲ್ಲಿ ಆಂತರಿಕ ಭದ್ರತಾ ವ್ಯವಸ್ಥೆ ಉತ್ತಮವಾಗಿದೆ. ಕೆಲವು ಅಹಿತಕರ ಘಟನೆಗಳು ನಡೆದಿರುವುದು ನಿಜ. ಒಟ್ಟಾರೆ ಫಲಿತಾಂಶ ಸಮಾಧಾನಕರವಾಗಿದೆ…..

ಇಲ್ಲಿ ಸರ್ಕಾರ ಹೆಚ್ಚು ಕಡಿಮೆ ತನ್ನ ಜವಾಬ್ದಾರಿ ನಿರ್ವಹಿಸುತ್ತಿದೆ. ಆದರೆ ಸಮಾಜ ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ. ಕೆಲವು ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರು ಸಮುದಾಯಗಳ ನಡುವೆ ದ್ವೇಷ ಅಸೂಯೆ ಉಂಟುಮಾಡುತ್ತಿವೆ. ಅದರ ದುಷ್ಪರಿಣಾಮಗಳೇ ಈ ರೀತಿಯ ಕೃತ್ಯಗಳಿಗೆ ಕಾರಣವಾಗಿದೆ. ಧರ್ಮಗಳು ಮನುಷ್ಯರ ಒಳಗಿನ ಮಾನವೀಯ ಪ್ರಜ್ಞೆಯನ್ನು ಬೆಳೆಸಿ ಶಾಂತಿಯ ಸಂದೇಶ ನೀಡಬೇಕಾದ ಸಂದರ್ಭದಲ್ಲಿ ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದು ಒಬ್ಬರ ನಾಶಕ್ಕೆ ಮತ್ತೊಬ್ಬರನ್ನು ಪ್ರಚೋದಿಸುವ ಕೆಲಸ ಮಾಡುತ್ತಿವೆ….

ಸಾಮಾನ್ಯ ಜನ ಸಹ ಇದರ ಅರಿವಿಲ್ಲದೆ, ಅವರ ಬಲೆಯೊಳಗೆ ಸಿಲುಕುತ್ತಿದ್ದಾರೆ. ಒಂದು ಅರ್ಥಮಾಡಿಕೊಳ್ಳಬೇಕಾದ ವಿಷಯವೆಂದರೆ ಬಾಂಬುಗಳನ್ನು ಇಟ್ಟು ಅಮಾಯಕ ಜನರನ್ನು ಕೊಲ್ಲಲು ಚುನಾವಣೆ ನಡೆಯುವುದಿಲ್ಲ, ಬಹುಮತದ ಅವಶ್ಯಕತೆ ಇಲ್ಲ, ಬಹಿರಂಗ ಚರ್ಚೆಯು ನಡೆಯುವುದಿಲ್ಲ, ಅದಕ್ಕೆ ನಿರ್ದಿಷ್ಟ ಸಮಯವೂ ಇಲ್ಲ. ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಅತ್ಯಂತ ಗೌಪ್ಯವಾಗಿ ಕಾರ್ಯನಿರ್ವಹಿಸಿ ಬೃಹತ್ ಪ್ರಮಾಣದ ರಕ್ತ ಹರಿಸಬಹುದು. ನಮ್ಮ ಕಣ್ಣ ಮುಂದೆಯೇ ಹತ್ಯಾಕಾಂಡ ನಡೆಯಬಹುದು….

ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬ ಗಾದೆ ಮಾತನ್ನು ನೆನಪು ಮಾಡಿಕೊಳ್ಳಿ. ಈಗ ಕಾಲ ಇನ್ನೂ ಮಿಂಚಿಲ್ಲ. ಸಮುದಾಯಗಳ ನಡುವಿನ ಪ್ರೀತಿ ವಿಶ್ವಾಸವನ್ನು ಬಲಗೊಳಿಸುವ ಕೆಲಸ ತುರ್ತಾಗಿ ಆಗಬೇಕಾಗಿದೆ. ಹಿಂಸೆಯ ವಿರುದ್ಧ ಅಹಿಂಸೆಯನ್ನು, ದ್ವೇಷದ ವಿರುದ್ಧ ಪ್ರೀತಿಯನ್ನು, ಅಸೂಯೆಯ ವಿರುದ್ಧ ಸಹಕಾರವನ್ನು, ಅಜ್ಞಾನದ ವಿರುದ್ಧ ಅರಿವನ್ನು, ಬಾಂಬಿನ ವಿರುದ್ಧ ಹೂವನ್ನು, ಸಿಡುಕಿನ ವಿರುದ್ಧ ಸುಂದರ ನಗುವನ್ನು ಸಮಾಜದಲ್ಲಿ ಹೆಚ್ಚು ಹೆಚ್ಚು ಪಸರಿಸಬೇಕಿದೆ…..

ನಮ್ಮ ನಿಮ್ಮ ಮಕ್ಕಳು ನಿಜ ಬಾಂಬುಗಳಿಗೆ ಬಲಿಯಾಗುವ ಮುನ್ನ ನಮ್ಮ ಕರ್ತವ್ಯಗಳನ್ನು ಸರಿಯಾಗಿ ನಿರ್ವಹಿಸೋಣ. ಒಮ್ಮೆ ಈ ರೀತಿಯ ಭಯಾನಕ ದುರಂತ ಸಂಭವಿಸಿದರೆ ಮುಂದೆ ಹಿಂಸೆಗೆ ಕೊನೆ ಇರುವುದಿಲ್ಲ. ಅಪಘಾತಗಳು ಜೀವನದಲ್ಲಿ ನಿತ್ಯವೂ ನಡೆಯುವುದಿಲ್ಲ. ಆದರೆ ಒಮ್ಮೆ ನಡೆದರೆ ಬಹುತೇಕ ನಾವು ಇರುವುದಿಲ್ಲ. ಆ ಪ್ರಜ್ಞೆ ಸದಾ ಜಾಗೃತವಾಗಿರಲಿ…..

ಯಾರನ್ನು ಯಾರೂ ನಾಶ ಮಾಡಲು ಸಾಧ್ಯವಿಲ್ಲ. ಆದರೆ ಆ ಪ್ರಕ್ರಿಯೆಯಲ್ಲಿ ನಡೆಯುವ ಹಿಂಸೆ ವರ್ಣನಾತೀತ. ಆದ್ದರಿಂದ ಎಲ್ಲರೂ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಹೊಂದಾಣಿಕೆಯ ಮನೋಭಾವ ಪ್ರದರ್ಶಿಸೋಣ. ಯಾವುದೇ ರೀತಿಯ ಪ್ರಚೋದನೆಯನ್ನು ಮಾಡದಿರೋಣ. ಒಂದು ಸಮುದಾಯ ಸ್ವಲ್ಪ ಆಕ್ರಮಣಕಾರಿ ಇರಬಹುದು. ಮತ್ತೊಂದು ಸಮುದಾಯ ಸಂಯಮದಿಂದ ಅದನ್ನು ನಿಭಾಯಿಸಬೇಕು. ಮಕ್ಕಳಂತೆ ಕಚ್ಚಾಟ ಮಾಡಬಾರದು. ಎಲ್ಲರ ಅಂತಿಮ ಉದ್ದೇಶ ಪ್ರೀತಿ ಮತ್ತು ಅಹಿಂಸೆ ಮಾತ್ರ. ಇದು ಸಾಧ್ಯವಾದರೆ ವಿಭಜಕ ಶಕ್ತಿಗಳನ್ನು ನಿಗ್ರಹಿಸಲು ಸರ್ಕಾರಕ್ಕೆ ಸುಲಭವಾಗುತ್ತದೆ. ಇಲ್ಲದಿದ್ದರೆ ಕೇವಲ ರಕ್ಷಣಾ ವ್ಯವಸ್ಥೆಯಿಂದ ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ…..

ಇಲ್ಲಿ ಯಾವುದೇ ನಿರ್ದಿಷ್ಟ ಧರ್ಮವನ್ನು ಉಲ್ಲೇಖಿಸುತ್ತಿಲ್ಲ. ಏಕೆಂದರೆ ಮಾನವ ಧರ್ಮವೇ ಅಂತಿಮ. ಎಲ್ಲಾ ಧರ್ಮಗಳಲ್ಲಿ ಶಾಂತಿಯ ಇದೆ, ಹಿಂಸೆಯೂ ಇದೆ. ಧರ್ಮಗಳು ಅಳಿದರು ಮಾನವ ಉಳಿಯಲಿ ಎಂಬುದೇ ಎಲ್ಲರ ಆಶಯವಾಗಿರಬೇಕು. ಬಾಂಬುಗಳು ಮತ್ತು ಧರ್ಮಗಳು ಮನುಷ್ಯರನ್ನು ಕೊಲ್ಲುತ್ತವೆ ಅಥವಾ ಅದರ ಅನುಯಾಯಿಗಳು ಕೊಲ್ಲುತ್ತಾರೆ. ಆದರೆ ಸಂವಿಧಾನ ಮತ್ತು ಮಾನವೀಯತೆ ಮನುಷ್ಯರನ್ನು ಮತ್ತು ಸಮಾಜವನ್ನು ರಕ್ಷಿಸುತ್ತದೆ. ಆಯ್ಕೆ ನಮ್ಮದು…..

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………

error: No Copying!