Spread the love

ಮನೆ ಗೆದ್ದು ಮಾರು ಗೆಲ್ಲು
ಅಥವಾ
ಮನ ಗೆದ್ದು ಮಾರು ಗೆಲ್ಲು……

ಹೀಗೆ ಒಂದು ಜನಪದೀಯ – ಅನುಭಾವದ ಮಾತು ಚಾಲ್ತಿಯಲ್ಲಿದೆ. ಇದರ ವಾಸ್ತವತೆಯ ಬಗ್ಗೆ ಯೋಚಿಸತೊಡಗಿದಾಗ…..

ಮನೆ ಎಂದರೆ ಕುಟುಂಬ. ಕುಟುಂಬವನ್ನು ಸರಿಯಾಗಿ ಮತ್ತು ತೃಪ್ತಿಕರವಾಗಿ ನಿರ್ವಹಿಸಿದ ನಂತರ ಇತರ ಮುಖ್ಯವಾಗಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡರೆ ಮಾತ್ರ ಯಶಸ್ವಿಯಾಗಲು ಸಾಧ್ಯ. ಮನೆಯಲ್ಲಿಯೇ ಅತೃಪ್ತಿ ಇದ್ದರೆ ಅಥವಾ ಅದನ್ನು ಉತ್ತಮವಾಗಿ ನಿರ್ವಹಿಸದೆ ಸಮಾಜವನ್ನು ತಿದ್ದುವುದು ಸಾಧ್ಯವಿಲ್ಲ ಅದು ಒಂದು ರೀತಿಯ ವ್ಯಂಗ್ಯ ಎಂದು ಹೇಳಲಾಗುತ್ತದೆ. ಇದು ಸರಿಯೇ – ವಾಸ್ತವವೇ….

ಆಧುನಿಕ ಸಂಕೀರ್ಣ ಬದುಕಿನ ಕುಟುಂಬಗಳನ್ನು ಗಮನಿಸಿದಾಗ ಮನೆ ಎಂಬ ಈ ಮಾತುಗಳು ತುಂಬಾ ಪರಿಣಾಮಕಾರಿ ಎಂದು ಅನಿಸುವುದಿಲ್ಲ. ಮನೆ ಗೆಲ್ಲುವುದು ಅದರಲ್ಲೂ ಕೌಟುಂಬಿಕ ವ್ಯವಸ್ಥೆಯನ್ನು ಗೆಲ್ಲುವುದು ಅಷ್ಟು ಸುಲಭವಲ್ಲ. ಬಹುಶಃ ನಂಬುಗೆಯ ಏಳು ಜನ್ಮವಾದರೂ ಸಾಕಾಗುವುದಿಲ್ಲ……

ಮಧ್ಯಮವರ್ಗದ ಬದುಕು ತುಂಬಾ ಕಷ್ಟಕರ. ಅಪ್ಪ ಅಮ್ಮ ಗಂಡ ಹೆಂಡತಿ ಮಕ್ಕಳು ಅತ್ತೆ ಮಾವ ಸೊಸೆ ಅಳಿಯ ಮೈದುನ ಅತ್ತಿಗೆ ಅಜ್ಜ ಅಜ್ಜಿ ಈ ರೀತಿಯ ಸಂಬಂಧಗಳನ್ನು ನಿಭಾಯಿಸುವುದು ತುಂಬಾ ಕಠಿಣ. ನಗರ ಜೀವನದಲ್ಲಿ ಮತ್ತಷ್ಟು ಕಷ್ಟ. ಒಬ್ಬೊಬ್ಬರ ಅಭಿರುಚಿ, ಮನೋಭಾವ, ಅವರ ಗೆಳೆಯರ ಮಾತುಗಳು ಹೀಗೆ ಸಾಮಾಜಿಕ ವ್ಯವಸ್ಥೆಯೇ ಸ್ವಲ್ಪ ಗೊಂದಲದ ಗೂಡಾಗಿದೆ. ದೂರದಿಂದ ಹೇಳುವುದು, ಹೊಂದಾಣಿಕೆ ಅವಶ್ಯಕತೆ ಇದೆ ಎಂಬುದೆಲ್ಲಾ ಸುಲಭ. ವಾಸ್ತವದಲ್ಲಿ ಇದು ಬಹುಕಷ್ಟ. ಇಡೀ ಬದುಕನ್ನೇ ಇದಕ್ಕಾಗಿ ಸವೆಸಬೇಕಾಗುತ್ತದೆ. ಆಗಲೂ ಸರಿಯಾಗುತ್ತದೆ ಎಂಬ ಖಚಿತತೆ ಇಲ್ಲ. ಕೆಲವು ಉದಾಹರಣೆಗಳನ್ನು ಹೊರತುಪಡಿಸಿ ಬಹುತೇಕ ಕುಟುಂಬಗಳಲ್ಲಿ ವಿವಿಧ ಬಗೆಯ ಅಸಮಾಧಾನಗಳು ಇದ್ದೇ ಇರುತ್ತದೆ. ಕೆಲವು ಬಹಿರಂಗವಾಗಿ ವಿಭಜನೆಯಾದರೆ ಮತ್ತೆ ಕೆಲವು ಆಂತರಿಕವಾಗಿ ಪ್ರತ್ಯೇಕಿಸಲ್ಪಟ್ಟಿರುತ್ತದೆ. ಹಾಗಾದರೆ ಈ ಪರಿಸ್ಥಿತಿಯಲ್ಲಿರುವ ಯಾವುದೇ ವ್ಯಕ್ತಿ ಸಾಮಾಜಿಕ ಸೇವೆಯಲ್ಲಿ ತೊಡಗಲು ಅನರ್ಹನೇ. ಮನೆಯೇ ಗೆಲ್ಲಲಾಗದ ವ್ಯಕ್ತಿ ಹೊರಗೆ ಇನ್ನೇನು ಮಾಡಲು ಸಾಧ್ಯ ಎಂದು ನಿರ್ಲಕ್ಷಿಸಬೇಕೆ……

ಸಮಾಜ ಸೇವೆಯಲ್ಲಿ ತೊಡಗಬೇಕೆಂಬ ತುಡಿತದ ವ್ಯಕ್ತಿ ಯಾವುದೇ ಸಾಂಸಾರಿಕ ಜವಾಬ್ದಾರಿ ಹೊಂದಿರಬಾರದೇ ಅಥವಾ ಸಾಂಸಾರಿಕ ಬಂಧನಕ್ಕೆ ಒಳಗಾದ ಕೆಲವು ವರ್ಷಗಳ ನಂತರ ಸೇವೆ ಮಾಡಬೇಕೆಂಬ ಅಭಿಲಾಷೆ ಉಂಟಾದಾಗ ಕೌಟುಂಬಿಕ ವ್ಯವಸ್ಥೆಯ ವಿಫಲತೆ ಅದಕ್ಕೆ ಅಡ್ಡಿಯಾಗಬಹುದೇ ಅಥವಾ ವೈಯಕ್ತಿಕ ಬದುಕು ಮತ್ತು ಸಾಮಾಜಿಕ ಸೇವೆ ಎರಡು ಬೇರೆ ಬೇರೆಯೇ ಅಥವಾ ಒಂದಕ್ಕೊಂದು ಪೂರಕವೇ ಅದನ್ನು ಬೇರ್ಪಡಿಸಲು ಸಾಧ್ಯವಿಲ್ಲವೇ…….

ಉತ್ತರ ಅಷ್ಟು ಸುಲಭವಲ್ಲ. ಭಾರತದ ಸಂಕೀರ್ಣ ಸಾಮಾಜಿಕ ವ್ಯವಸ್ಥೆಯಲ್ಲಿ ಇದು ಬಹು ಆಯಾಮ ಹೊಂದಿದೆ ಮತ್ತು ವೈಯಕ್ತಿಕವಾಗಿ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ….

ಆದರೆ ಮನ ಗೆದ್ದು ಮಾರು ಗೆಲ್ಲು ಎಂಬುದು ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿದೆ.

ಮನೆ ಎಂಬ ವಿಷಯ ಬಂದಾಗ ಅಲ್ಲಿ ಇತರರು ಇರುತ್ತಾರೆ. ಆದರೆ ಮನ ಸಂಪೂರ್ಣ ವೈಯಕ್ತಿಕ ಮತ್ತು ನಾವು ಒಬ್ಬರೇ ಇರುತ್ತೇವೆ. ನಮ್ಮ ಎಲ್ಲಾ ಅರಿಷಡ್ವರ್ಗಗಳ ನಿಯಂತ್ರಣ ನಮಗೆ ಸೇರಿರುತ್ತದೆ. ಸಮಾಜ ಸೇವೆಗೆ ಬೇಕಾದ ಮತ್ತು ಬೇಡದ ಎಲ್ಲವನ್ನೂ ನಾವೇ ನಿರ್ಧರಿಸಬಹುದು…..

ನಮ್ಮ ಒಳಗಿನ ಎಲ್ಲಾ ಸ್ವಾರ್ಥ ದುರಾಸೆ ಮುಖವಾಡಗಳನ್ನು ಆತ್ಮಾವಲೋಕನ ಮಾಡಿಕೊಂಡು ನಿಷ್ಕಲ್ಮಶ ಮನಸ್ಸಿನಿಂದ ಮನ ಗೆದ್ದು ಮಾರು ಗೆಲ್ಲಲು ಹೊರಡಬಹುದು. ಆದ್ದರಿಂದ ಮನೆ ಗೆದ್ದು ಮಾರು ಗೆಲ್ಲು ಎಂಬುದು ಕಷ್ಟ ಸಾಧ್ಯ. ಕೆಲವರಿಗೆ ಮಾತ್ರ ಸೀಮಿತ. ಆದರೆ ಮನ ಗೆದ್ದು ಮಾರು ಗೆಲ್ಲು ಎಂಬುದು ವಾಸ್ತವಕ್ಕೆ ಹತ್ತಿರ ಮತ್ತು ಪ್ರತಿಯೊಬ್ಬರು ಪ್ರಯತ್ನಿಸಬಹುದು.‌

ಇದರ ಒಟ್ಟು ಸಾರಾಂಶ…..

ಒಂದು ವೇಳೆ ಮನೆ ಗೆದ್ದು ಮಾರ ಗೆಲ್ಲಲು ಪ್ರಯತ್ನಿಸಿದರೆ ಉತ್ತಮ, ಹಾಗೆಯೇ ಮನೆ ಗೆಲ್ಲಲು ವಿಫಲರಾದರು ಅದರ ಅನುಭವದ ಆಧಾರದಲ್ಲಿ ಮಾರು ಗೆಲ್ಲಲು ಹೊರಡುವುದು ತಪ್ಪೇನಲ್ಲ. ಇನ್ನಷ್ಟು ಹೆಚ್ಚು ತೊಡಗಿಸಿಕೊಳ್ಳುವ ಮುಖಾಂತರ ಇಲ್ಲಿ ಯಶಸ್ವಿಯಾಗುವ ಸಾಧ್ಯತೆಯು ಇರುತ್ತದೆ. ಇದು ವ್ಯಕ್ತಿಗಳ ಮನಸ್ಥಿತಿಯನ್ನು – ವ್ಯಕ್ತಿತ್ವವನ್ನು ಅವಲಂಬಿಸಿರುತ್ತದೆ.

ಜೊತೆಗೆ ಮನ ಗೆದ್ದು ಮಾರು ಗೆಲ್ಲುವುದು ಅತ್ಯಂತ ಅವಶ್ಯ. ಮನ ಗೆಲ್ಲದೇ ಮಾರು ಗೆಲ್ಲುವುದು ಆತ್ಮವಂಚನೆಯಾಗುತ್ತದೆ….

ಲೋಕ ರೂಢಿಯ ಗಾದೆ ಮಾತುಗಳ ಒಂದು ಸಣ್ಣ ಸರಳ ವಿಮರ್ಶೆ. ಇದನ್ನು ಮತ್ತಷ್ಟು ವಿಶಾಲವಾಗಿ – ಆಳವಾಗಿ ಇನ್ನೂ ವಿವಿಧ ಆಯಾಮಗಳಲ್ಲಿ ಚರ್ಚಿಸಬಹುದು. ಆ ನಿಟ್ಟಿನಲ್ಲಿ ಯೋಚಿಸಿ ಎಂಬ ಮನವಿಯೊಂದಿಗೆ…….


ನಿನ್ನೆ ದಿನಾಂಕ ‌26/11/2023 ಭಾನುವಾರ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಿದೆ.

ಮೊದಲನೆಯ ಕಾರ್ಯಕ್ರಮ ಬೆಂಗಳೂರು ವರ್ಕರ್ಸ್ ಯೂನಿಯನ್ ( BWU ) ಏರ್ಪಡಿಸಿದ್ದ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ 25 ಲಕ್ಷ ಕಾರ್ಮಿಕರ ಸಹಿ ಸಂಗ್ರಹ ಚಳವಳಿಯ ಉದ್ಘಾಟನಾ ಸಮಾರಂಭ.
ಅವರ ಪ್ರಮುಖ ಬೇಡಿಕೆಗಳು…..
1) ESI ಯೋಜನೆಗೆ ಒಳಪಡಲು ಇರುವ ವೇತನದ ಮಿತಿಯನ್ನು ರದ್ದುಪಡಿಸಬೇಕು.
2) ಒಂದು ವರ್ಷದ ಸೇವೆಗೆ ಇರುವ 15 ದಿನಗಳ ಗ್ರಾಚ್ಯುಟಿ ವೇತನ ಸೌಲಭ್ಯವನ್ನು 60 ದಿನಗಳಿಗೆ ಹೆಚ್ಚಿಸಬೇಕು.
3) ಗುತ್ತಿಗೆ ಕಾರ್ಮಿಕ ಪದ್ದತಿಯನ್ನು ರದ್ದುಪಡಿಸಬೇಕು.
4)ಬೆಲೆ ಏರಿಕೆ ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು…

ಇದಕ್ಕಾಗಿ 25 ಲಕ್ಷ ಕಾರ್ಮಿಕರ ಅಧೀಕೃತ ಸಹಿ ಸಂಗ್ರಹಿಸಿ ಪ್ರಧಾನ ಮಂತ್ರಿಗಳಿಗೆ ಸಲ್ಲಿಸಿ ಈ ಬೇಡಿಕೆಗಳನ್ನು ಪೂರೈಸಲು ಒತ್ತಾಯ ಪೂರ್ವಕ ಮನವಿ ಮಾಡುವುದು…

ಒಂದು ಕಾಲಕ್ಕೆ ಬಲಿಷ್ಠವಾಗಿದ್ದ ಕಾರ್ಮಿಕ ಚಳವಳಿ ಅನೇಕ ಕಾರಣಗಳಿಗಾಗಿ ಇಂದು ಒಗ್ಗಟ್ಟಿನ ಕೊರತೆಯನ್ನು ಎದುರಿಸುತ್ತಿದೆ. ಅದರಿಂದ ಶೋಷಣೆಗೂ ಒಳಗಾಗುತ್ತಿದೆ. ಕಾರ್ಪೊರೇಟ್ ಸಂಸ್ಕೃತಿ ಈ ಕಾರ್ಮಿಕರನ್ನು ತನ್ನ ಕಬಂಧ ಬಾಹುಗಳಲ್ಲಿ ಕಟ್ಟಿ ಹಾಕಿದೆ. ಅದನ್ನು ಮೀರಿ ಬೆಳೆಯಲು ಕೆಲವು ಕಿವಿ ಮಾತಿನ ರೂಪದ ಸಲಹೆಗಳನ್ನು ನೀಡಲಾಯಿತು.


ಮತ್ತೊಂದು ಕಾರ್ಯಕ್ರಮ ಬೆಂಗಳೂರು ವಿಜಯನಗರದ ಬ್ಲೂಬೆಲ್ ಪಬ್ಲಿಕ್ ಶಾಲೆಯ ಒಂದು ಅರ್ಥಪೂರ್ಣ ವಾರ್ಷಿಕೋತ್ಸವ ಕಾರ್ಯಕ್ರಮ. ” ಉಗಮ‌ “
ಕಾವೇರಿ ಜೀವ ನದಿಯೊಂದಿಗೆ ಒಂದು ನೃತ್ಯ ರೂಪಕ ಹಾಗು ಮಲ್ಲ ಕಂಬ ಮುಂತಾದ ‌ಸಾಹಸ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನವಾಗಿತ್ತು. ಅದರಲ್ಲಿ ಅತಿಥಿಯಾಗಿ ಭಾಗವಹಿಸಿ ಪೋಷಕರು ಮತ್ತು ಮಕ್ಕಳೊಂದಿಗೆ ಒಂದು ರೀತಿಯ ಆತ್ಮಾವಲೋಕನದ ಸಂವಾದ ಕಾರ್ಯಕ್ರಮದಂತೆ ಅವರನ್ನು ಸಂಸ್ಕಾರದೆಡೆಗೆ ಪ್ರೇರೇಪಿಸುವ ಹಿತ ನುಡಿಗಳನ್ನು ಹೇಳಲಾಯಿತು. ಶಾಲೆಯ ಸಂಸ್ಥಾಪಕರು ಮತ್ತು ಆತ್ಮೀಯ ಗೆಳೆಯರಾದ ಶ್ರೀಯುತ ರಾಜೇಶ್ ಅವರ ಆಹ್ವಾನದ ಮೇರೆಗೆ ಮಕ್ಕಳಲ್ಲಿ ಮಾನವೀಯ ಮೌಲ್ಯಗಳ ಸಂಸ್ಕಾರ ಬೆಳೆಸುವ ನಿಟ್ಟಿನಲ್ಲಿ ಒಂದು ಸಣ್ಣ ಪ್ರಯತ್ನ…..


ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………

error: No Copying!