ಭಾರತ – ಆಸ್ಟ್ರೇಲಿಯಾ…
ಕ್ರಿಕೆಟ್ ಫೈನಲ್…..
ಕ್ರೀಡಾ ಘನತೆಯನ್ನು – ಭಾರತದ ನಾಗರಿಕ ಪ್ರಜ್ಞೆಯನ್ನು ಉಳಿಸೋಣ ಮತ್ತು ವಿಶ್ವಕ್ಕೆ ಪ್ರಚರಿಸೋಣ……….
ಕ್ರಿಕೆಟ್ ಒಂದು ಜೂಜಾಟವಲ್ಲ,
ಮೋಜಿನಾಟವೂ ಅಲ್ಲ,
ಮನರಂಜನೆಯೂ ಅಲ್ಲ,
ವ್ಯಾಪಾರವು ಅಲ್ಲ,
ದೇಶದ ಸ್ವಾಭಿಮಾನದ ಪ್ರಶ್ನೆಯೂ ಅಲ್ಲ,,
ಅದೊಂದು ಕ್ರೀಡೆ, ಕೇವಲ ಕ್ರೀಡೆ ಮಾತ್ರ……..
2023 ರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ನಡೆಸುವ ಒಂದು ದಿನದ 50/50 ಓವರುಗಳ ವಿಶ್ವಕಪ್ ಸ್ಪರ್ಧೆಯಲ್ಲಿ ಅಂತಿಮವಾಗಿ ಭಾರತ ಮತ್ತು ಆಸ್ಟ್ರೇಲಿಯಾ ಫೈನಲ್ ತಲುಪಿದೆ. ಭಾನುವಾರ ಪ್ರಶಸ್ತಿಗಾಗಿ ಸ್ಪರ್ಧೆ ನಡೆದು ವಿಶ್ವಕಪ್ ವಿಜೇತರು ನಿರ್ಧರವಾಗುತ್ತಾರೆ….
ಬಹುತೇಕ ಸಮ ಬಲದ ತಂಡಗಳ ನಡುವಿನ ಹೋರಾಟ ಕುತೂಹಲಕಾರಿಯಾಗಿದೆ. ಆದರೂ ಭಾರತ ಗೆಲ್ಲಲಿ ಎಂದು ಆಶಿಸುತ್ತಾ……
ಭಾರತದ ಒಟ್ಟು ಜನಸಂಖ್ಯೆಯಲ್ಲಿ ಕನಿಷ್ಠ ಶೇಕಡಾ 30/40% ಜನರಿಗೆ ಕ್ರಿಕೆಟ್ ಬಗ್ಗೆ ಮಾಹಿತಿ ಇದೆ. ಆ ಕಾರಣದಿಂದಲೇ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ವಿಶ್ವದ ಶ್ರೀಮಂತ ಕ್ರೀಡಾ ಸಂಸ್ಥೆ ಎಂದು ಹೆಸರು ಗಳಿಸಿದೆ….
ಕ್ರಿಕೆಟ್ ನೆರಳಲ್ಲಿ ಭಾರತದ ಇತರ ಕ್ರೀಡೆಗಳು ಸೊರಗಿವೆ ಎಂಬ ಆರೋಪವೂ ಇದೆ. ಅಷ್ಟು ವ್ಯಾಪಕವಾಗಿ ಕ್ರಿಕೆಟ್ ಆವರಿಸಿದೆ.
ದುರಾದೃಷ್ಟವಶಾತ್ ಭಾರತದಲ್ಲಿ ಕ್ರಿಕೆಟ್ ಒಂದು ಕ್ರೀಡೆ ಎಂಬುದನ್ನು ಮೀರಿ ತೀರಾ ಅತಿರೇಕದ ಭಾವನೆಗಳನ್ನು ಮಾಧ್ಯಮಗಳು ಕೆರಳಿಸುತ್ತಿವೆ. ಅದೊಂದು ದೇಶದ ಪ್ರತಿಷ್ಠೆಯ ಪ್ರಶ್ನೆ ಎಂಬುದಾಗಿ ಬಿಂಬಿಸುತ್ತಿವೆ. ಚೆನ್ನಾಗಿ ಆಡಿದವರನ್ನು ದೇವರಂತೆ ಹಾಡಿ ಹೊಗಳಲಾಗುತ್ತಿದೆ. ಕೆಲವರು ಭಾರತ ಗೆಲ್ಲಲು ದೇವಾಲಯಗಳಲ್ಲಿ ಹೋಮ ಹವನ ಪೂಜೆಗಳನ್ನು ಮಾಡಿಸುತ್ತಾರೆ ಮತ್ತು ಮಾಧ್ಯಮಗಳು ಅದಕ್ಕೆ ಪ್ರಚಾರವನ್ನು ನೀಡುತ್ತವೆ….
ವಿವೇಚನಾ ಶಕ್ತಿಯ ಕೊರತೆ ಕಾಡುವುದೇ ಇಲ್ಲಿ. ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ ಆಶಯವನ್ನೇ ಕಳೆದುಕೊಳ್ಳುತ್ತದೆ. ಕ್ರೀಡೆ ಎಂಬುದು ಮಾನವ ಪ್ರತಿಭಾ ಪ್ರದರ್ಶನದ ಒಂದು ಆರೋಗ್ಯಕರ ಸ್ಪರ್ಧೆ. ದೈಹಿಕ ಮತ್ತು ಮಾನಸಿಕ ಶ್ರಮ ಹಾಗು ಸಾಮರ್ಥ್ಯ, ಕಲೆ ಮತ್ತು ಚಾಕಚಕ್ಯತೆಯ ತಂತ್ರ, ಸನ್ನಿವೇಶಗಳ ಸರಿಯಾದ ಉಪಯೋಗ ಮುಂತಾದ ಅಂಶಗಳನ್ನು ಒಳಗೊಂಡಿರುತ್ತದೆ. ಇದು ವೈಯಕ್ತಿಕ ಕ್ರೀಡೆಯೇ ಆಗಿರಲಿ, ತಂಡ ಕ್ರೀಡೆಯೇ ಆಗಿರಲಿ ಒಟ್ಟು ಪ್ರಕ್ರಿಯೆ ಹೀಗೆಯೇ ಇರುತ್ತದೆ. ಕೆಲವೊಮ್ಮೆ ಸ್ವಲ್ಪ ಸಣ್ಣಪುಟ್ಟ ವ್ಯತ್ಯಾಸಗಳು ಇರಬಹುದು. ಇದರ ಜೊತೆಗೆ ಒಂದು ಪ್ರದೇಶದ ಪ್ರಾಕೃತಿಕ ಅಂಶಗಳು, ಟಾಸ್, ಜನ ಬೆಂಬಲ, ತೀರ್ಪುಗಾರರ ತಪ್ಪುಗಳು ಮುಂತಾದ ಅಂಶಗಳು ಪರೋಕ್ಷವಾಗಿ ಸ್ವಲ್ಪಮಟ್ಟಿಗೆ ಪ್ರಭಾವ ಬೀರಬಹುದು. ಇದು ಎಲ್ಲಾ ವ್ಯಕ್ತಿ ಮತ್ತು ತಂಡಗಳಿಗೆ ಆಟದ ನಿಯಮಗಳಿಗೆ ಅನುಗುಣವಾಗಿ ಸ್ವಲ್ಪ ಅದೃಷ್ಟ – ದುರಾದೃಷ್ಟದ ಜೊತೆ ಏಕಪ್ರಕಾರವಾಗಿ ಅನ್ವಯಿಸುತ್ತದೆ.
ಆಯಾ ದೇಶದ, ರಾಜ್ಯದ, ಪ್ರದೇಶದ, ಊರಿನ ಅಥವಾ ಆ ವ್ಯಕ್ತಿಯ ಕುಟುಂಬದವರು, ಅಭಿಮಾನಿಗಳು ಮತ್ತು ಬೆಂಬಲಿಗರು ತಮ್ಮ ತಮ್ಮ ತಂಡಗಳ ವಿಜಯವನ್ನು ಬಯಸುವುದು, ನಿರೀಕ್ಷಿಸುವುದು, ಆತಂಕದಿಂದ ಕಾಯುವುದು ಮತ್ತು ತಮ್ಮ ನಂಬುಗೆಯ ದೈವದ ಪ್ರಾರ್ಥನೆ ಒಂದು ಸಹಜ ವರ್ತನೆ. ಅದನ್ನು ಮೀರಿ ಅತಿಯಾಗಿ ಏನೇ ಮಾಡಿದರು ಅದು ಅತಿರೇಕ ಮತ್ತು ದುರ್ವರ್ತನೆ. ಯಾವುದೇ ದೇಶ ಅಥವಾ ಧರ್ಮದವರೇ ಆಗಲಿ ಪೂಜೆ ಪುನಸ್ಕಾರಗಳು, ದೇಶದ ಒಟ್ಟು ಸಾಮರ್ಥ್ಯದ ಪ್ರದರ್ಶನ ಎಂಬಂತೆ ವರ್ತಿಸುವುದು ಕ್ರೀಡಾ ಧರ್ಮಕ್ಕೆ ವಿರುದ್ಧ ಮತ್ತು ಮೌಡ್ಯ. ಏಕೆಂದರೆ ಆ ಕ್ರಿಯೆಗಳು ಆಟಗಾರರು ಮತ್ತು ಕ್ರೀಡೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಕ್ರೀಡೆಯಲ್ಲಿ ಇಡೀ ದೇಶದ ಎಲ್ಲರೂ ಭಾಗವಹಿಸುವುದಿಲ್ಲ. ಹಾಗೆಯೇ ಕ್ರೀಡಾ ಫಲಿತಾಂಶ ಶಾಶ್ವತವೇನು ಅಲ್ಲ. ಆ ಕ್ಷಣದ ಸೋಲು ಗೆಲುವು ಮಾತ್ರ. ಅದು ಮತ್ತೆ ಆಡಿದಾಗ ಯಾವುದೇ ಸಮಯದಲ್ಲಿ ಬದಲಾಗಬಹುದು…..
ಇದು ಒಂದು ದೇಶದ ನಾಗರಿಕ ಪ್ರಜ್ಞೆಯ ಸಂಕೇತ. ಒಂದು ಹಂತದ ಕೂಗಾಟ, ಕಿರುಚಾಟ, ಚಪ್ಪಾಳೆ, ನೃತ್ಯ ಎಲ್ಲವೂ ವೈಯಕ್ತಿಕ ಮತ್ತು ಸಾಮೂಹಿಕ ಮಟ್ಟದಲ್ಲಿ ಸಹನೀಯ. ಆದರೆ ಅದನ್ನು ಮೀರಿ ಹಿಂಸೆ, ಅಸೂಯೆ, ಕೋಪ, ದ್ವೇಷ, ಪ್ರತಿಸ್ಪರ್ಧಿಯ ನಿಂದನೆ, ಫಲಿತಾಂಶ ಒಪ್ಪಿಕೊಳ್ಳದಿರುವುದು ಎಲ್ಲವೂ ವ್ಯಕ್ತಿಯ ಮತ್ತು ದೇಶದ ನಾಗರಿಕ ಪ್ರಜ್ಞೆಯನ್ನೇ ಪ್ರಶ್ನಿಸುವಂತಾಗುತ್ತದೆ. ಆದ್ದರಿಂದ ಭಾನುವಾರದ ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್ ಫೈನಲ್ ಅನ್ನು ಒಂದು ಸಜಹ ಕ್ರೀಡಾ ಸ್ಪೂರ್ತಿಯಿಂದ ಆಸ್ವಾಧಿಸೋಣ. ಸೋಲು ಗೆಲುವನ್ನು ಸಹ ಸಹಜವಾಗಿ ಸ್ವೀಕರಿಸೋಣ. ಈ ಟೆಲಿವಿಷನ್ ಸುದ್ದಿ ಮಾಧ್ಯಮಗಳ ಹುಚ್ಚು ಮತ್ತು ವಿಕೃತ ಸ್ವಭಾವದ ನಡವಳಿಕೆಗಳ ಸುದ್ದಿ ಪ್ರಸಾರದ ಅನಾಗರಿಕ ನಡವಳಿಕೆಗೆ ಬಲಿಯಾಗದೆ ದೇಶದ ಸಾಂಸ್ಕೃತಿಕ ವ್ಯಕ್ತಿತ್ವದ ಘನತೆಯನ್ನು ಎತ್ತಿ ಹಿಡಿಯೋಣ…..
ಈಗಿನ ಪರಿಸ್ಥಿತಿಯಲ್ಲಿ ಭಾರತದ ಕ್ರಿಕೆಟ್ ತಂಡ ಅತ್ಯಂತ ಬಲಶಾಲಿಯಾಗಿದೆ. ಹತ್ತು ಪಂದ್ಯಗಳಿಂದ ಅಜೇಯವಾಗುಳಿದು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದೆ. ಅತಿಥೇಯ ತಂಡಕ್ಕೆ ಸಿಗುವ ಎಲ್ಲಾ ಅನುಕೂಲಗಳು ಇವೆ. ಭಾರತವೇ ಈ ಬಾರಿಯ ವಿಶ್ವಕಪ್ ಗೆಲ್ಲಲಿ ಎಂದು ಆಶಿಸುತ್ತಾ,…….
ತೆಂಡೂಲ್ಕರ್, ವಿರಾಟ್ ಕೊಹ್ಲಿ, ಶಮಿ ಇವರುಗಳು ದೇವರುಗಳು ಅಲ್ಲ, ಅತಿ ಮಾನುಷ ಶಕ್ತಿಗಳು ಅಲ್ಲ, ಕೇವಲ ಪ್ರತಿಭಾವಂತ ಕ್ರೀಡಾ ಪಟುಗಳು ಮಾತ್ರ. ಅದನ್ನು ಗೌರವಿಸುತ್ತಾ, ಪೆಪ್ಸಿ ಕೋಕಾ ಕೋಲಾ ಮುಂತಾದ ವಿಷಕಾರಿ ಪಾನೀಯಗಳಿಗೆ ರೂಪದರ್ಶಿಗಳಾಗಿ ಹಣಕ್ಕಾಗಿ ದೇಶದ ಯುವ ಜನತೆಯ ಅನಾರೋಗ್ಯಕ್ಕೆ ಕಾರಣವಾಗುತ್ತಿರುವ, ಸ್ಥಳೀಯ ಎಳನೀರು, ನಿಂಬೆರಸ, ಕಬ್ಬಿನ ರಸ, ಹಾಲು, ಸಿರಿ ಧಾನ್ಯ ಗಂಜಿ ಮುಂತಾದ ಪಾನೀಯಗಳಿಗೆ ಪ್ರೋತ್ಸಾಹ ನೀಡದ, ಅತ್ಯಂತ ಅಪಾಯಕಾರಿ ಜೂಜಾಟವಾದ ಡ್ರೀಮ್ ಇಲೆವೆನ್, ರಮ್ಮಿ ಮುಂತಾದ ಆಟಗಳಿಗೆ ಮಾಡಲ್ ಆಗಿ ತಮ್ಮ ಮಾತು ಮತ್ತು ಉಡುಪುಗಳ ಮೂಲಕ ನಮ್ಮ ದೇಶದ ಅಂತಃ ಸತ್ವವಾದ ಯುವ ಜನತೆಯ ದಾರಿ ತಪ್ಪಿಸುತ್ತಿರುವ ಆ ಜಾಹೀರಾತುಗಳಲ್ಲಿ ಭಾಗವಹಿಸುತ್ತಿರುವ ಎಲ್ಲಾ ಕ್ರೀಡಾ ಪಟುಗಳು ಸ್ವಾರ್ಥಿಗಳು ಮತ್ತು ಹಣದಾಸೆಯ ದ್ರೋಹಿಗಳು ಎಂಬ ಜಾಗೃತಿಯ ಎಚ್ಚರಿಕೆಯೊಂದಿಗೆ……
ನಿನ್ನೆ ಆತ್ಮೀಯ ಗೆಳೆಯ ಮತ್ತು ಯಕ್ಷಗಾನ ಕಲಾವಿದರು ಮತ್ತು ಸಿನಿಮಾ ನಿರ್ದೇಶಕರು ಆದ ಶೃಂಗೇರಿಯ ರಮೇಶ್ ಬೇಗಾರ್ ಅವರ ಆಹ್ವಾನದ ಮೇರೆಗೆ ಅವರ ನಿರ್ದೇಶನದ
” ಜಲಪಾತ ” ಎಂಬ ಸಿನಿಮಾ ವೀಕ್ಷಿಸಿದೆ. ಮಲೆನಾಡ ಮಡಿಲಿನ ರಮೇಶ್ ಸಹಜವಾಗಿಯೇ ಕಳೆದ 40 ವರ್ಷಗಳಲ್ಲಿ ಮಲೆನಾಡಿನ ಪರಿಸರ ವಿನಾಶದ ಬಗ್ಗೆ ಅತ್ಯಂತ ಮಾರ್ವಿಕವಾಗಿ ದೃಶ್ಯ ಮಾಧ್ಯಮದ ಮೂಲಕ ಮೌನ ರೋಧನೆ, ಪ್ರತಿಭಟನೆ, ವಿಷಾದ ಮತ್ತು ಪರಿಹಾರದ ಜಾಗೃತಿಯನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಸಿನಿಮಾ ಮಾಧ್ಯಮ ಕೇವಲ ಮನರಂಜನೆಯ ಅಥವಾ ವಾಣಿಜ್ಯ ಉದ್ಯಮ ಮಾತ್ರವಲ್ಲ ಅದು ವ್ಯಕ್ತಿಯ ಮತ್ತು ಸಮಾಜದ ತವಕ ತಲ್ಲಣಗಳ ಅಭಿವ್ಯಕ್ತಿ ಸಹ ಎಂಬುದನ್ನು ರಮೇಶ್ ನಿರೂಪಿಸಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಮತ್ತು ಪರಿಸರ ಜಾಗೃತಿ ಎಲ್ಲರಲ್ಲಿ ಮೂಡಲಿ ಎಂದು ಆಶಿಸುತ್ತಾ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………