Spread the love

ಇಡೀ ದೇಶದಲ್ಲಿ ಇನ್ನೂ ಸಂಪೂರ್ಣ ನಿಯಂತ್ರಿಸಲು ಸಾಧ್ಯವಾಗದ ಮತ್ತು ಹೆಚ್ಚು ಹೆಚ್ಚು ಅಕ್ರಮಗಳು ನಡೆಯುತ್ತಿರುವ ಮತ್ತೊಂದು ಕ್ಷೇತ್ರ ವಿವಿಧ ಪರೀಕ್ಷೆಗಳನ್ನು ನಡೆಸುವುದು…….

ಎಷ್ಟೇ ತಂತ್ರಜ್ಞಾನ ಅಭಿವೃದ್ಧಿಯಾಗುತ್ತಿದ್ದರು ಈ ವಿಭಾಗದ ಕಳ್ಳತನ, ವಂಚನೆ, ಮೋಸ ತಡೆಯಲು ಸಾಧ್ಯವಾಗುತ್ತಿಲ್ಲ……

ಸಿಸಿಟಿವಿ, ಕೈ ಬೆರಳ ಗುರುತು, ಮುಖ ಚಹರೆಯ ಸ್ಕ್ಯಾನ್, ಅನಿರೀಕ್ಷಿತ ದಾಳಿ, ತಟಸ್ಥರ ಮೇಲ್ವಿಚಾರಣೆ, ಕಠಿಣ ಶಿಕ್ಷೆ ಇನ್ನೂ ಎಷ್ಟೇ ಭದ್ರತೆ ಮಾಡಿದ್ದರು ಯಾವುದೇ ಉತ್ತಮ ಫಲಿತಾಂಶ ಬಂದಿಲ್ಲ…..

ಏನೇ ಮಾಡಿದರು ಒಂದಲ್ಲ ಒಂದು ಕುತಂತ್ರ ಮಾಡುತ್ತಲೇ ಇರುತ್ತಾರೆ. ‌ವ್ಯಕ್ತಿಗಳು ಭ್ರಷ್ಟರಾದರೆ ಅವರು ಯಂತ್ರಗಳನ್ನು ಭ್ರಷ್ಟ ಮಾಡುವುದು ಕಷ್ಟವೇನಲ್ಲ…..

ಖಾಸಗಿ ವಲಯದಲ್ಲಿ ಉದ್ಯೋಗ ನೀಡಲು ಹಲವಾರು ಮಾನದಂಡಗಳನ್ನು ಉಪಯೋಗಿಸುತ್ತಾರೆ. ಕೇವಲ ಅಂಕಗಳು ಮಾತ್ರವಲ್ಲ ಅದನ್ನು ಮೀರಿದ ಒಟ್ಟು ವ್ಯಕ್ತಿತ್ವ ಗಮನಿಸುತ್ತಾರೆ. ಕೆಲಸದ ಸಾಮರ್ಥ್ಯ ಸಹ ಮುಖ್ಯವಾಗುತ್ತದೆ. ಜೊತೆಗೆ ಅದು 30 ವರ್ಷಗಳ ಶಾಶ್ವತ ಉದ್ಯೋಗವೇನು ಅಲ್ಲ. ಯಾವುದೇ ಕ್ಷಣದಲ್ಲಿ ಅವರ ಕೆಲಸ ತೃಪ್ತಿಕರವಾಗಿಲ್ಲದಿದ್ದರೆ ಉದ್ಯೋಗದಿಂದ ತೆಗೆದು ಹಾಕುತ್ತಾರೆ….

ಆದರೆ ಸಮಸ್ಯೆ ಇರುವುದು ಶಿಕ್ಷಣ, ಉದ್ಯೋಗ ಮತ್ತು ಬಡ್ತಿಗಾಗಿ ಸರ್ಕಾರ ನಡೆಸುವ ಪರೀಕ್ಷೆಗಳಲ್ಲಿ. ಖಾಸಗಿಯವರಂತೆ ಅತ್ಯಂತ ಕಠಿಣ ನಿಯಮಗಳನ್ನು ರೂಪಿಸಲು ‌ಸಾಧ್ಯವಿಲ್ಲ. ಇಲ್ಲಿ ಲಾಭಕ್ಕಿಂತ ಹೆಚ್ಚಾಗಿ ಇಡೀ ವ್ಯವಸ್ಥೆಯ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ಯೋಜನೆ ರೂಪಿಸಬೇಕು. ಪ್ರತಿಭೆಯೂ ಮುಖ್ಯ, ಸ್ಪರ್ಧೆಯೂ ಮುಖ್ಯ, ಶೋಷಿತ ವರ್ಗಗಳ ಅಭಿವೃದ್ಧಿಯೂ ಮುಖ್ಯ…..

ಶೈಕ್ಷಣಿಕ ಪರೀಕ್ಷೆಗಳಲ್ಲಿ ಹೇಗೋ ಸ್ವಲ್ಪ ಮಟ್ಟಿನ ನಿಯಂತ್ರಣ ಸಾಧ್ಯವಾಗಬಹುದು. ಎಲ್ಲಾ ರೀತಿಯ ವಿದ್ಯಾರ್ಥಿಗಳು ನಕಲು ಮಾಡುವುದಿಲ್ಲ. ಆದರೆ ಉದ್ಯೋಗಕ್ಕಾಗಿ ಪರೀಕ್ಷೆಗಳು ಅತ್ಯಂತ ಅಪಾಯಕಾರಿ ಹಂತ ತಲುಪಿದೆ. ಏಕೆಂದರೆ ಒಮ್ಮೆ ಸರ್ಕಾರಿ ಉದ್ಯೋಗ ದೊರೆತರೆ ಇಡೀ ಬದುಕು ” ಸೆಟಲ್ ” ಆದಂತೆ ಎಂಬ ಅಭಿಪ್ರಾಯ ಮಧ್ಯಮ ಮತ್ತು ಕೆಳ ವರ್ಗದ ಜನರಲ್ಲಿ ಮನೆ ಮಾಡಿದೆ…

ಅದಕ್ಕೆ ಯಾವ ಹಂತಕ್ಕೆ ಹೋಗಲು ಸಹ ಉದ್ಯೋಗಾಂಕ್ಷಿಗಳು ಸಿದ್ದರಾಗಿರುತ್ತಾರೆ. ಅಲ್ಲದೆ ಭಾರತೀಯ ಸಮಾಜದಲ್ಲಿ ಜಾತಿ, ಭಾಷೆ, ಧರ್ಮ, ಪ್ರದೇಶ, ಭ್ರಷ್ಟಾಚಾರ ಮುಂತಾದ ಒಂದು ರೀತಿಯ ಕೆಟ್ಟ ಅನುವಂಶಿಕ ಗುಣಗಳು ಬಹುತೇಕರಲ್ಲಿ ಅಡಕವಾಗಿದೆ. ಅದನ್ನು ಮೀರುವುದು ಅಷ್ಟು ಸುಲಭವಲ್ಲ….

ಇದು ಸಮಸ್ಯೆಯ ರೂಪವಾದರೆ ಪರಿಹಾರವೂ ಅಷ್ಟೇ ಸಂಕೀರ್ಣವಾಗಿದೆ. ಏಕೆಂದರೆ ಇಡೀ ವ್ಯವಸ್ಥೆ ಭ್ರಷ್ಟಗೊಂಡಿರುವಾಗ ನಾವು ರೂಪಿಸಬಹುದಾದ ಎಲ್ಲಾ ನಿಯಮಗಳು ಅನುಷ್ಠಾನಕ್ಕೆ ತರಬೇಕಾಗಿರುವುದು ಇದೇ ಜನಗಳು. ಅವರು ಕಾಲಕ್ರಮೇಣ ಅದರ ಹುಳುಕುಗಳನ್ನು ಹುಡುಕಿ ದುರುಪಯೋಗ ಪಡಿಸಿಕೊಳ್ಳುವುದು ನಿಶ್ಚಿತ……

ಪ್ರತಿ ಬಾರಿ ಹೊಸ ನಿಯಮಗಳನ್ನು ರೂಪಿಸಿದರೆ ಅಪಾರ ಹಣ ಮತ್ತು ಶ್ರಮ ವ್ಯರ್ಥವಾಗುತ್ತದೆ ಮತ್ತು ಆಗಲೂ ಪ್ರಾಮಾಣಿಕ ಆಯ್ಕೆ ನಿಶ್ಚಿತವೇನು ಇಲ್ಲ….

ಯಾವುದೇ ಒಂದು ಉದ್ಯೋಗಕ್ಕೆ ಅರ್ಹರ ಆಯ್ಕೆ ಅನಿವಾರ್ಯ. ‌ಅದಕ್ಕೆ ಸಾಕಷ್ಟು ಬೇಡಿಕೆ ಮತ್ತು ಸ್ಪರ್ಧೆ ಇದ್ದೇ ಇದೆ. ಅದಕ್ಕಾಗಿ ಪರೀಕ್ಷೆಗಳು ಸಹ ಅನಿವಾರ್ಯ. ಅದನ್ನು ಯಾವುದೇ ರೂಪದಲ್ಲಾದರು ಮಾಡಲೇ ಬೇಕಾಗುತ್ತದೆ. ಬಹುಶಃ ದೇಶದ ಅತ್ಯಂತ ಪರಿಣಿತ ತಜ್ಞರ ಒಂದು ತಂಡ ರಚಿಸಿ ಒಬ್ಬ ವ್ಯಕ್ತಿಗೆ ಒಂದು ಉದ್ಯೋಗ ಪಡೆಯಲು ಇರಬೇಕಾದ 10 ಮಾನದಂಡಗಳನ್ನು ರೂಪಿಸಿ ಅಷ್ಟರಲ್ಲಿಯೂ ಉತ್ತಮ ಸಾಮರ್ಥ್ಯ ಪಡೆಯುವವರೆಗೆ ಉದ್ಯೋಗ ನೀಡಬೇಕು. ಇದು ಸ್ವಲ್ಪ ದೀರ್ಘವಾದ ಮತ್ತು ಶ್ರಮದಾಯಕ ವಿಧಾನ ಆಗಿರಬಹುದು. ಆದರೆ ಈ‌ ಭ್ರಷ್ಟ ವ್ಯವಸ್ಥೆಯಲ್ಲಿ ಇದು ಅನಿವಾರ್ಯವೇ ಆಗಿದೆ. ಇಲ್ಲದಿದ್ದರೆ ಪರೀಕ್ಷಾ ಅಕ್ರಮ ತಡೆಯುವುದು ಕಷ್ಟ.

ಇದರಲ್ಲಿಯೂ ಅವ್ಯವಹಾರ ಆಗಬಹುದು. ಆದರೆ ಹೆಚ್ಚು ಮಾನದಂಡಗಳು ಇರುವುದರಿಂದ ಭ್ರಷ್ಟಾಚಾರ ವ್ಯಾಪಕವಾಗದೆ ಕಡಿಮೆ ಆಗಬಹುದು. ಜೊತೆಗೆ ಇಂಟೆಲಿಜೆನ್ಸ್ ನೀಡುವ ವರದಿಯ ಆಧಾರದ ಮೇಲೆ ದೇಶದ ಅತ್ಯಂತ ಪ್ರಾಮಾಣಿಕ ಅಧಿಕಾರಿಗೆ ಉದ್ಯೋಗ ಪರೀಕ್ಷೆ ಮತ್ತು ಆಯ್ಕೆಯ ಜವಾಬ್ದಾರಿ ನೀಡಬೇಕು. ಪ್ರೊಬೆಷನರಿ ಸಮಯ ಅಥವಾ ಆಯ್ಕೆಯ ತಾತ್ಕಾಲಿಕ ಅವಧಿಯನ್ನು ಎರಡು ಮೂರು ವರ್ಷಗಳ ಅವಧಿಗೆ ವಿಸ್ತರಿಸಿ ಅಲ್ಲಿ ಉದ್ಯೋಗಿಯ ಸಾಮರ್ಥ್ಯ ಗಮನಿಸಿ ಆಯ್ಕೆ ಅಧಿಕೃತ ಗೊಳಿಸುವ ಅಥವಾ ನಿರಾಕರಿಸುವ ಪದ್ದತಿ ಜಾರಿ ಮಾಡಬೇಕು…..

ಹೀಗೆ ಇನ್ನೂ ಅನೇಕ ಮಾರ್ಗಗಳು ಪರೀಕ್ಷಾ ಅಕ್ರಮ ತಡೆಯಲು ಸ್ವಲ್ಪ ಸಹಕಾರಿ ಆಗಬಹುದು. ಆದರೆ ಇದೆಲ್ಲಕ್ಕಿಂತ ಮುಖ್ಯವಾಗಿ ಇಡೀ ಸಮಾಜದ ಮಾನವೀಯ ಮೌಲ್ಯಗಳು ಮತ್ತು ನೈತಿಕ ಮೌಲ್ಯಗಳನ್ನು ಪುನರ್ ಸ್ಥಾಪಿಸುವ, ಭ್ರಷ್ಟ ಹಣದ‌ ಪ್ರಭಾವ ತಗ್ಗಿಸುವ, ಜಾತಿ ನಿರ್ಮೂಲನೆ ಮಾಡುವ, ಸ್ವಜನ ಪಕ್ಷಪಾತ ತಪ್ಪಿಸುವ, ರಾಜಕೀಯ ಹಸ್ತಕ್ಷೇಪ ತಡೆಯುವ, ಮತದಾನ ಪವಿತ್ರ ಗೊಳಿಸುವ ಕೆಲಸಗಳು ನಿರಂತರವಾಗಿ ನಡೆದಾಗ ಮಾತ್ರ ಪರೀಕ್ಷಾ ಅಕ್ರಮಗಳು ನಿಲ್ಲಲು ಸಾಧ್ಯ. ಇಲ್ಲದಿದ್ದರೆ ಇದೇ ವ್ಯವಸ್ಥೆಯಲ್ಲಿ ಗೊಣಗಿಕೊಳ್ಳುತ್ತಾ ಅನುಭವಿಸುತ್ತಲೇ ಇರಬೇಕು.

ಪ್ರಾಮಾಣಿಕತೆ ಎಂಬುದು ಕೇವಲ ಮರೀಚಿಕೆ ಎಂದು ದೇಶದ ಯುವ ಜನಾಂಗ ಭಾವಿಸಿ ಒಪ್ಪಿಕೊಳ್ಳುವ ಮುನ್ನ ಎಚ್ಚರಗೊಳ್ಳಿ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………

error: No Copying!