ಬ್ರಹ್ಮಾಂಡ ಗುರೂಜಿ – ಜನಪ್ರಿಯತೆ – ಟಿವಿ ಮಾಧ್ಯಮಗಳು – ಸತ್ಯ ಮಿಥ್ಯದ ಹುಡುಕಾಟ…….
“‘ಬ್ರಹ್ಮಾಂಡ ಗುರೂಜಿ ” ಎಂದು ಕರೆಯಲ್ಪಡುವ ನರೇಂದ್ರ ಬಾಬು ಶರ್ಮ ಎಂಬ ವ್ಯಕ್ತಿ ಮತ್ತು ಆ ರೀತಿಯ ಕೆಲವು ಜ್ಯೋತಿಷಿಗಳು ಬಹುತೇಕ ಅನೇಕ ಕನ್ನಡ ಟಿವಿ ಸುದ್ದಿ ಮಾಧ್ಯಮಗಳಲ್ಲಿ ಅವರ ಆಹ್ವಾನದ ಮೇರೆಗೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರತಿ ಹಬ್ಬ, ಹುಣ್ಣಿಮೆ, ಅಮವಾಸ್ಯೆ, ಗ್ರಹಣ, ಪ್ರಾಕೃತಿಕ ವಿಕೋಪ, ಆಕಸ್ಮಿಕ ದುರಂತಗಳು, ಸಾಂಕ್ರಾಮಿಕ ರೋಗಗಳು, ರಾಜಕೀಯ ಪಲ್ಲಟಗಳು ಮುಂತಾದ ಸಂದರ್ಭದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಅದಕ್ಕೆ ಅವರಿಗಿರುವ ಅರ್ಹತೆ, ಜ್ಞಾನ, ಅಧ್ಯಯನ, ದೂರದೃಷ್ಟಿ, ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲವನ್ನೂ ಸಾರ್ವಜನಿಕ ವಿವೇಚನೆಗೆ ಬಿಡುತ್ತಾ……
ಅತ್ಯಂತ ಜವಾಬ್ದಾರಿಯುತ ಮಾಧ್ಯಮಗಳಲ್ಲಿ ಕುಳಿತು, ಪೌರಾಣಿಕ, ಕಾಲ್ಪನಿಕ ಕಥೆಗಳು, ಘಟನೆಗಳು, ವ್ಯಕ್ತಿಗಳನ್ನು ಐತಿಹಾಸಿಕ ಎಂಬಂತೆ ಬಿಂಬಿಸಿ, ಅದನ್ನು ಭಕ್ತಿಯ ಹೆಸರಿನಲ್ಲಿ ತಾನೇ ದೇವರ ಪ್ರತಿನಿಧಿ ಎಂಬಂತೆ ವರ್ಣಿಸಿ ಜನರಲ್ಲಿ ಇರಬಹುದಾದ ಮೌಡ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಿ ಸುಳ್ಳು – ಭ್ರಮೆಗಳನ್ನು ಸೃಷ್ಟಿಸುತ್ತಿರುವುದನ್ನು ಪ್ರಶ್ನಿಸಬೇಕಾಗಿರುವುದು ಯಾರು…..
ವಿವಿಧ ಕ್ಷೇತ್ರಗಳ ವಿಜ್ಞಾನಿಗಳು ತಮ್ಮ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿ ಈ ಬಗ್ಗೆ ದಿವ್ಯ ಮೌನ ವಹಿಸಿದ್ದಾರೆ. ಇದು ನಮಗೆ ಸಂಬಂಧಿಸಿದ ವಿಷಯವಲ್ಲ, ಇಲ್ಲದ ಉಸಾಬಾರಿ ನಮಗೇಕೆ ಎಂದು ನಿರ್ಲಕ್ಷಿಸಿದ್ದಾರೆ,
ಮಕ್ಕಳಿಗೆ ಪ್ರಪಂಚದ – ಬದುಕಿನ ಅರಿವು ಮೂಡಿಸುವ ಶಿಕ್ಷಕರು ಅಕ್ಷರ ಜ್ಞಾನಕ್ಕೆ ಮಾತ್ರ ಸೀಮಿತರಾಗಿ ನಮಗೂ ಇದು ಸಂಬಂಧಿಸಿಲ್ಲ, ನಾವ್ಯಾಕೆ ಮಾತನಾಡಬೇಕು ಎಂದು ಸುಮ್ಮನಿದ್ದಾರೆ. ಅಂಕಗಳಿಗಾಗಿ ಪಠ್ಯದಲ್ಲಿ ಎಷ್ಟಿದೆಯೋ ಅಷ್ಟೇ ಸಾಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ…..
ವಿವಿಧ ಧರ್ಮಗಳ, ಸಮುದಾಯಗಳ ಧಾರ್ಮಿಕ ಮುಖಂಡರು ಈ ರೀತಿಯ ಸ್ವಾಮಿಗಳು, ಗುರುಗಳು, ಮೌಲ್ವಿಗಳು, ಫಾದರ್ಗಳು, ಬ್ರದರ್ಗಳು ಇರುವುದೇ ನಮ್ಮ ಹಿತಾಸಕ್ತಿ ಕಾಪಾಡಲು. ಅವರು ಹೆಚ್ಚು ಜನಪ್ರಿಯತೆ ಪಡೆದು ಪರಿಣಾಮಕಾರಿ ಪ್ರಭಾವ ಬೀರಿದರೆ ನಮಗೇ ಹೆಚ್ಚು ಲಾಭ ಎಂದು ಲೆಕ್ಕ ಹಾಕುತ್ತಾ ಒಳಗೊಳಗೆ ಗಹಗಹಿಸಿ ನಗುತ್ತಿದ್ದಾರೆ…
ವೈದ್ಯರು, ಇಂಜಿನಿಯರುಗಳು, ಸಾಪ್ಟ್ ವೇರ್ ತಂತ್ರಜ್ಞರು ಮುಂತಾದವರು ಹೇಗೋ ಏನೋ ನಮಗೆ ಗ್ರಾಹಕರು ಹೆಚ್ಚಾಗಿ ಒಳ್ಳೆಯ ಆದಾಯ ಬಂದರೆ ಸಾಕು, ಇದನ್ನೆಲ್ಲಾ ಕೆಣಕಿ ಸುಮ್ಮನೆ ರಂಪಾಟ ಮಾಡುವುದು ಏಕೆ ಎಂಬ ಆಲೋಚನೆಯಲ್ಲಿ ನಿರ್ಲಿಪ್ತರಾಗಿದ್ದಾರೆ……
ವ್ಯಾಪಾರಿಗಳು, ಉದ್ದಿಮೆದಾರರು ಮುಂತಾದವರು ಲಾಭ ನಷ್ಟ ಹೊರತುಪಡಿಸಿದ ಯಾವುದೇ ಸತ್ಯ ಸುಳ್ಳು, ನೀತಿ ನಿಯಮ, ನ್ಯಾಯ ಅನ್ಯಾಯಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದೇ ಇಲ್ಲ. ಅವರಿಗೆ ಈ ವಿಷಯ ಮುಖ್ಯವೂ ಅಲ್ಲ…..
ವಕೀಲರು, ಲೆಕ್ಕ ಪರಿಶೋಧಕರು, ಚಾಲಕರು, ಪತ್ರಕರ್ತರು, ಸಾಹಿತಿಗಳು, ಹೋರಾಟಗಾರರು ಎರಡೂ ರೀತಿಯ ಅಭಿಪ್ರಾಯಗಳನ್ನು ಹೊಂದಿರುವವರಾದರೂ ಅದರ ಪರವಾಗಿ ಹೊಮ್ಮಿಸುವಷ್ಟು ದೊಡ್ಡ ಧ್ವನಿ ವಿರುದ್ಧವಾಗಿ ಹೊಮ್ಮಿಸುವುದಿಲ್ಲ. ವೈಯಕ್ತಿಕ ಹಿತಾಸಕ್ತಿಗೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ…..
ರಾಜಕಾರಣಿಗಳು, ಅಧಿಕಾರಿಗಳು ಎಂದಿನಂತೆ ತಮ್ಮ ಸ್ವಾರ್ಥದ ಪರಿಮಿತ ಒಳಗೆ ಬಂಧಿಯಾಗಿ ಅವಕಾಶವಾದಿತನವೇ ಅವರ ಹೆಜ್ಜೆಯಾಗಿರುತ್ತದೆ…..
ಇದರ ಸಂಪೂರ್ಣ ಲಾಭವನ್ನು ಈ ಟಿವಿ ಸುದ್ದಿ ವಾಹಿನಿಗಳು ಮತ್ತು ನರೇಂದ್ರ ಬಾಬು ಶರ್ಮ, ಆನಂದ್ ಗುರೂಜಿ ಅಂತಹವರು ಪಡೆಯುತ್ತಾರೆ……
ವೈಯಕ್ತಿಕವಾಗಿ ಯಾರು ಯಾವುದೇ ಅಭಿಪ್ರಾಯ ವ್ಯಕ್ತಪಡಿಸಲು ಸ್ವತಂತ್ರವಾಗಿದ್ದಾರೆ. ಆದರೆ ಸುಳ್ಳು, ವಂಚನೆ, ಮೌಡ್ಯ ಬಿತ್ತುವಿಕೆ, ಶೋಷಣೆಗೆ ಅವಕಾಶವಿಲ್ಲ. ಆದರೆ ಸುದ್ದಿ ಮಾಧ್ಯಮಗಳೇ ಇದಕ್ಕೆ ವೇದಿಕೆ ಕಲ್ಪಿಸುವುದು ಮೂರ್ಖತನವಲ್ಲವೇ…..
ನಮಗೆ ಯಾವುದೇ ಶಕ್ತಿ ಅಥವಾ ಅವರ ಸಾಮರ್ಥ್ಯ ಅಥವಾ ಅವರು ಕಲಿತಿರುವ ವಿದ್ಯೆಯ ಬಗ್ಗೆ ತಕರಾರಿಲ್ಲ. ಆದರೆ ಅದರ ವೈಜ್ಞಾನಿಕ ಮತ್ತು ಸಾರ್ವತ್ರಿಕ ಸತ್ಯ ಹಾಗು ವಾಸ್ತವದ ಬಗ್ಗೆ ಮಾತ್ರ ಪ್ರಶ್ನೆ ಇರುವುದು. ಅದನ್ನು ಖಚಿತಪಡಿಸಿದರೆ ಸಾರ್ವಜನಿಕವಾಗಿ ಅದನ್ನು ಧೈರ್ಯವಾಗಿ ಹೇಳಬಹುದು…..
ಜನರಿಗೆ ಜಗತ್ತಿನ ಸುದ್ದಿಗಳನ್ನು ಅದರ ನೈಜತೆಯೊಂದಿಗೆ ಪ್ರಸಾರ ಮಾಡಬೇಕಾದ ಸುದ್ದಿ ಮಾಧ್ಯಮಗಳು, ಇಂತಹ ಅತ್ಯಂತ ಅಪಾಯಕಾರಿ ವ್ಯಕ್ತಿಗಳ ಅಭಿಪ್ರಾಯವನ್ನು ಐತಿಹಾಸಿಕ ಸತ್ಯ ಎಂಬಂತೆ ಪ್ರಸಾರ ಮಾಡಿ ಸಾಮಾಜಿಕ – ಮಾನಸಿಕ ಅಧೋಗತಿಗೆ ಕಾರಣವಾಗುತ್ತಿರುವುದನ್ನು ಒಂದು ಸಂಘಟಿತ ಅಪರಾಧ ಎಂದು ಕರೆಯಬಹುದಲ್ಲವೇ…..
ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆ ವ್ಯಕ್ತಿಗಳು ಹೇಳುತ್ತಿರುವ ಮತ್ತು ಅವರಿಂದ ಅದನ್ನು ಹೇಳಿಸುತ್ತಿರುವ ಟಿವಿ ಪತ್ರಕರ್ತರು ಮತ್ತು ನಿರೂಪಕರು ತಮಗರಿವಿಲ್ಲದೇ ಹಬ್ಬಗಳೆಂಬ ಸಾಂಸ್ಕೃತಿಕ ಉತ್ಸವಗಳನ್ನೇ ನಾಶ ಮಾಡಿ ಕೇವಲ ಮೌಡ್ಯವನ್ನೇ ಮತ್ತು ಆಚರಣೆಗಳನ್ನೇ ಅಥವಾ ಶ್ರೀಮಂತಿಕೆಯ ಪ್ರದರ್ಶನವನ್ನೇ ಹಬ್ಬವೆಂದು ನಂಬಿಸಿ ಭಾರತೀಯ ಮೂಲ ಸಾಂಸ್ಕೃತಿಕ ಪರಂಪರೆಗೆ, ಭಾರತೀಯ ಮೌಲ್ಯಗಳಿಗೆ ಅಪಚಾರ ಮಾಡುತ್ತಿದ್ದಾರೆ…..
ಅದಕ್ಕೆ ನೇರವಾಗಿ ವೇದಿಕೆ ಕಲ್ಪಿಸಿ ಬಹುದೊಡ್ಡ ತಪ್ಪು ಮಾಡುತ್ತಿರುವುದು ಟಿವಿ ಸುದ್ದಿ ಮಾಧ್ಯಮಗಳು. ಮೂರ್ಖರ, ಲೋಭಿಗಳ, ಹಣದ ದುರುಳರ ಕೈಗೆ ಅತ್ಯಂತ ಮಹತ್ವದ ಟಿವಿ ಸುದ್ದಿ ಮಾಧ್ಯಮಗಳು ಸಿಲುಕಿ ನಲುಗಿತ್ತಿದೆ. ಭಾರತೀಯ ಸಮಾಜದ ಮೌಲ್ಯಗಳನ್ನು ಇವರು ಕೇವಲ ನಾಶ ಮಾಡುತ್ತಿಲ್ಲ. ಅದಕ್ಕೆ ವಿರುದ್ಧವಾದ ಮೌಲ್ಯಗಳಿಗೆ ಈ ಸಮಾಜದಲ್ಲಿ ಮಾನ್ಯತೆ ಸಿಗುವಂತೆ ಮಾಡುತ್ತಿವೆ…..
ಜನಸಾಮಾನ್ಯರಾದ ನಾವು ಮತ್ತು ಮೇಲೆ ಹೇಳಿದ ಸಮಾಜದ ಬಹುಮುಖ್ಯ ವ್ಯಕ್ತಿಗಳು ಮತ್ತು ಶಕ್ತಿಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಮಕ್ಕಳ ಭವಿಷ್ಯ ಒಳ್ಳೆಯ ಮತ್ತು ಗಟ್ಟಿತನದ ಅಡಿಪಾಯವಿಲ್ಲದ ಕಟ್ಟಡದಂತೆ ಕುಸಿದು ಬೀಳಬಹುದು….
ಆದ್ದರಿಂದ ದಯವಿಟ್ಟು ಸಾಧ್ಯವಿರುವ ಎಲ್ಲರೂ ಸುಳ್ಳು – ಭ್ರಮೆಗಳ ವಿರುದ್ಧ ಸತ್ಯ ಮತ್ತು ವಾಸ್ತವದ ಪರವಾಗಿ ನಮಗೆ ಎಷ್ಟು ಸಾಧ್ಯವೋ ಅಷ್ಟು ಧ್ವನಿ ಮೊಳಗಿಸೋಣ.
ಭಾರತೀಯ ಮೌಲ್ಯಗಳನ್ನು ಉಳಿಸೋಣ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………