ಓಡುವರು ಜನ ಬಾಂಬುಗಳಿಗೆ ಹೆದರಿ,
ಭಯದಿಂದ ಕಿರುಚುವರು ಜನ ಬಂದೂಕಿನ ಸದ್ದಿಗೆ,
ಗೋಳಾಡುವರು ಜನ ರಕ್ತ ಸಿಕ್ತ ಶವಗಳ ರಾಶಿಗೆ,
ಶರಣಾಗುವರು ಜನ ಆಯುಧಗಳ ಝಳಪಿಗೆ,
ನಡುಗುವರು ಜನ ದ್ವೇಷದ ಮಾತುಗಳಿಗೆ,
ವಲಸೆ ಹೋಗುವರು ಜನ ಪ್ರಾಣದ ರಕ್ಷಣೆಗಾಗಿ……
ಆದರೂ ಮತ್ತೆ ಮತ್ತೆ ಜನ ಇವುಗಳಿಗೇ ಆಕರ್ಷಿತರಾಗುವರು,
ಬೆಳಕಿನ ಕಿರಣಗಳಿಗೆ ಪತಂಗಗಳು ಬಲಿಯಾಗುವ ಹಾಗೇ….
ವಿಚಿತ್ರ ವಿಶ್ವದ ವಿಚಿತ್ರ ಜನ……
ನೆಮ್ಮದಿ ನೀಡುವ ಪ್ರೀತಿಯನ್ನು ನಿರ್ಲಕ್ಷಿಸುವರು,
ಸುಖ ನೀಡುವ ಶಾಂತಿಯನ್ನು ತಿರಸ್ಕರಿಸುವರು,
ತೃಪ್ತಿ ನೀಡುವ ಅಹಿಂಸೆಯನ್ನು ಹಾಸ್ಯ ಮಾಡುವರು,
ನಗು ನೀಡುವ ಕ್ಷಮೆಯನ್ನು ಹಂಗಿಸುವರು,
ಸಾರ್ಥಕತೆಯ ಕರುಣೆಯನ್ನು ವ್ಯಂಗ್ಯವಾಡುವರು,
ಆಹ್ಲಾದಕರ ಸರಳತೆಯನ್ನು ದೌರ್ಬಲ್ಯವೆನ್ನುವರು……
ಹುಚ್ಚರ ಸಂತೆ ಕಣಣ್ಣ ಇದು ಹುಚ್ಚರ ಸಂತೆ…..
ಮಾನವೀಯ ಮೌಲ್ಯಗಳನ್ನು ನಾಶ ಮಾಡುವರು,
ರಾಕ್ಷಸ ಗುಣಗಳನ್ನು ಬೆಳೆಸುವರು,
ಬಾಯಲ್ಲಿ ಮಾತ್ರ ದೇವರು – ಧರ್ಮದ ಜಪ ಮಾಡುವರು,
ನಡವಳಿಕೆಯಲ್ಲಿ ದೆವ್ವ – ಸೈತಾನನ ಲಕ್ಷಣಗಳನ್ನು ತೋರ್ಪಡಿಸುವರು,……
ನಗುವುದೋ ಅಳುವುದೋ ಈ ಚಿತ್ರಾವಿಚಿತ್ರ ಜನರನ್ನು ನೋಡಿ…….
ಅವನನ್ನು ನಾನು ಕತ್ತರಿಸಿದರೆ, ಅವನು ನನ್ನನ್ನು ಚುಚ್ಚಿದರೆ, ಆಗುವ ನೋವು ಯಾತನೆ ತಿಳಿದೂ ತಿಳಿದೂ ಅದನ್ನೇ ಮಾಡುವುದು ಮಾನವ ಧರ್ಮವೇ – ರಾಕ್ಷಸ ಧರ್ಮವೇ, ಅಷ್ಟು ತಿಳಿವಳಿಕೆ ಇಲ್ಲದ ಮನುಷ್ಯರ ನಡುವೆ ನಾವು ನೀವು…..
ಅವಳನ್ನು ಚಿತ್ರಹಿಂಸೆ ನೀಡಿ ನಾನು ಭೋಗಿಸಿ ಸಾಮೂಹಿಕ ಅತ್ಯಾಚಾರ ಮಾಡಿ ಗಹಗಹಿಸಿ ನಗಬೇಕು, ಇವಳು ಮಾತ್ರ ನನ್ನ ತಾಯಿ, ನನ್ನ ತಂಗಿ, ನನ್ನ ಹೆಂಡತಿ, ನನ್ನ ಮಗಳು, ಇವಳನ್ನು ಮಾತ್ರ ಯಾರೂ ಮುಟ್ಟಬಾರದು ಎಂಬ ಆತ್ಮಘಾತುಕ ನೀಚತನದ ಮನುಷ್ಯರ ನಡುವೆ ಬದುಕು ಸಾಗಬೇಕು……
ಮನುಷ್ಯರೇ ನಿರ್ಮಿಸಿದ ಎಷ್ಟೊಂದು ಚರ್ಚುಗಳು, ಮಸೀದಿಗಳು, ದೇವಸ್ಥಾನಗಳು, ಮಂದಿರಗಳು, ಎಷ್ಟೊಂದು ದೇವರುಗಳು, ಎಷ್ಟೊಂದು ಶಾಂತಿಯ ಮಂತ್ರಗಳು, ಆದರೆ ಅದಕ್ಕೆ ಹತ್ತು ಪಟ್ಟು ಹೆಚ್ಚು ವಿನಾಶಕಾರಿ ಆಯುಧಗಳು, ಬಾಂಬುಗಳು ಮತ್ತು ಅದಕ್ಕೂ ಮಿಗಿಲಾಗಿ ವಿಕೃತ ಅನುಮಾನದ ಮನಸ್ಥಿತಿಗಳು…..
ಆತ್ಮವಂಚಕ ಮನುಷ್ಯರು ಸಾರ್ ನಾವು ಆತ್ಮವಂಚಕ ಮನುಷ್ಯರು……
ಒಳ್ಳೆಯದನ್ನು ಹೇಳುತ್ತಾ ಹೋಗುವರು,
ಕೆಟ್ಟದ್ದನ್ನು ಮಾಡುತ್ತಾ ಇರುವರು,
ಶಾಸ್ತ್ರಗಳನ್ನು ಪಠಿಸುತ್ತಾ ಇರುವುದು,
ಶಸ್ತ್ರಾಸ್ತ್ರಗಳನ್ನು ಉಪಯೋಗಿಸುತ್ತಾ ಇರುವುದು,…
ನೀಚರಯ್ಯ ಮನುಜರು ನೀಚರು…..
ನಡೆ ನುಡಿಯ ಅಂತರ ಹೆಚ್ಚಾದಷ್ಟು ಮನುಷ್ಯರು ತಮ್ಮ ಬೆಲೆಯನ್ನೇ ಕಳೆದುಕೊಳ್ಳುತ್ತಿದ್ದಾರೆ. ಇತಿಹಾಸದ ಅನುಭವ ಪಾಠವಾಗದೆ ಶಾಪವಾಗುತ್ತಿದೆ..
ಭೂತದ ಬಾಯಲ್ಲಿ ಭಗವದ್ಗೀತೆ, ಖುರಾನ್, ಬೈಬಲ್ ಗಳ ಪಠಣ,
ಮನುಷ್ಯರ ಕೈಯಲ್ಲಿ ಕತ್ತಿ ಮಚ್ಚುಗಳ ಪ್ರದರ್ಶನ…..
ವಿಷ ಜಂತಗಳು ಸಾರ್ ನಾವು ವಿಷ ಜಂತುಗಳು……
ನಾಶವಾಗುವ ಮುನ್ನ ಎಚ್ಚೆತ್ತುಕೊಳ್ಳಿ…….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………