Spread the love

ದಿನಕ್ಕೆ 24 ಗಂಟೆಗಳು,
ವಾರಕ್ಕೆ ಒಟ್ಟು 7×24= 168 ಗಂಟೆಗಳು…..

ಒಬ್ಬ ಆರೋಗ್ಯವಂತ ಮನುಷ್ಯ ಸಾಮಾನ್ಯವಾಗಿ ದಿನಕ್ಕೆ 8 ಗಂಟೆಗಳು ನಿದ್ರೆ ಮಾಡಬೇಕು ಎಂದು ವೈದ್ಯಕೀಯ ವರದಿಗಳು ಹೇಳುತ್ತವೆ..
7×8 = 56 ಗಂಟೆಗಳು…

ಒಂದು ದಿನಕ್ಕೆ ಒಬ್ಬ ವ್ಯಕ್ತಿ ಊಟ ಉಪಹಾರ ಸ್ನಾನ ಶೌಚ ಮತ್ತು ಲಘು ಪಾನೀಯ ಮುಂತಾದ ಎಲ್ಲಾ ಕೆಲಸಗಳಿಗೆ ಕನಿಷ್ಠ 2 ಗಂಟೆಗಳ ಅವಧಿ ಬೇಕಾಗುತ್ತದೆ. ಅಂದರೆ,
7×2= 14 ಗಂಟೆಗಳು….

ಸಾಮಾನ್ಯವಾಗಿ ಯಾವುದೇ ಪ್ರದೇಶದಲ್ಲಿ ಉದ್ಯೋಗಕ್ಕಾಗಿ ಎರಡೂ ಬದಿಯ ಪ್ರಯಾಣದ ಅವಧಿ ದಿನಕ್ಕೆ ಸುಮಾರು 2 ಗಂಟೆಗಳ ಸಮಯ ಬೇಕು.
7×2= 14 ಗಂಟೆಗಳು…

ರಜಾ ಅವಧಿಯ ಭಾನುವಾರದ 24 ಗಂಟೆಗಳು ಸೇರಿ
168

  • 56
  • 14

– 14

84 ಗಂಟೆಗಳು ಉಳಿಯುತ್ತದೆ. ಬದುಕಿಗೆ ತೀರಾ ಅನಿವಾರ್ಯವಾದ ಈ 84 ಗಂಟೆಗಳನ್ನು ಹೊರತುಪಡಿಸಿ ಖ್ಯಾತ ಉದ್ಯಮಿಯೊಬ್ಬರ ಸಲಹೆಯಂತೆ ವಾರಕ್ಕೆ 70 ಗಂಟೆಗಳ ಉದ್ಯೋಗ ಮಾಡಿದರೆ ಉಳಿಯುವುದು ಕೇವಲ 14 ಗಂಟೆಗಳು ಮಾತ್ರ.

ಒಂದು ವರ್ಷದ ಅವಧಿಗೆ ಲೆಕ್ಕ ಹಾಕಿದರೆ ಕೆಲವು ರಜಾ ದಿನಗಳು ಸೇರಿದರೆ ಮತ್ತಷ್ಟು ಗಂಟೆಗಳು ಹೆಚ್ಚುವರಿಯಾಗಿ ಸೇರಬಹುದು.

ಇಷ್ಟು ಸಮಯದಲ್ಲಿಯೇ ನೀವು ಮದುವೆ, ಮಕ್ಕಳು, ತಂದೆ ತಾಯಿ ಅಜ್ಜ ಅಜ್ಜಿ, ಅಣ್ಣ ಅಕ್ಕ ತಂಗಿ ತಮ್ಮ ‌ಇತರ ಸಂಬಂಧಿಗಳು, ಸ್ನೇಹಿತರು, ಸ್ವಂತ ಮಕ್ಕಳ ಆರೈಕೆ, ಶಿಕ್ಷಣ ಪ್ರವಾಸ ನಿಮ್ಮ ಆರೋಗ್ಯ, ಹವ್ಯಾಸ, ತೃಪ್ತಿ ಎಲ್ಲವನ್ನೂ ನೋಡಿಕೊಳ್ಳಬೇಕು….

ಒಂದು ವೇಳೆ ಈ ನಿಯಮ ಜಾರಿಯಾದರೆ ಏನಾಗಬಹುದು………

ಈಗಾಗಲೇ ಬಸವಳಿದಿರುವ ಉದ್ಯೋಗಿಗಳು ಮತ್ತು ಅವರ ಬದುಕು ಮತ್ತಷ್ಟು ಅಧೋಗತಿಗೆ ಇಳೆಯಳಿದೆ. ಜೀವನ ಮತ್ತೂ ಯಾಂತ್ರೀಕೃತವಾಗಲಿದೆ….

ಇಡೀ ವಿಶ್ವದ ಮನುಷ್ಯನ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯವನ್ನು ಗಮನಿಸಿ ಆತನ ದುಡಿಯುವ ಅವಧಿಯನ್ನು ವೈಜ್ಞಾನಿಕವಾಗಿ 8 ಗಂಟೆ ಎಂದು ನಿರ್ಧರಿಸಲಾಗಿದೆ. ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ಸಾಮಾನ್ಯವಾಗಿ ಇದೇ ನಿಯಮವಿದೆ…..

ಇದಕ್ಕಾಗಿ ಹೆಚ್ಚಿನ ಸಂಬಳ ದೊರೆಯುತ್ತದೆ ನಿಜ. ಈಗಾಗಲೇ ಹಣ ಕೇಂದ್ರಿತ ಸಮಾಜ ನೆಮ್ಮದಿಯನ್ನು ಕಳೆದುಕೊಂಡು ಸಂಬಂಧಗಳನ್ನು ಕಳೆದುಕೊಂಡು ಅಸಹನೆ – ‌ಅತೃಪ್ತಿಯಿಂದ ಬಳಲುತ್ತಿದೆ. ಬಿಪಿ ಶುಗರ್ ಥೈರಾಯ್ಡ್ ಗ್ಯಾಸ್ಟ್ರಿಕ್‌ ನಿದ್ರಾಹೀನತೆ ಹೃದ್ರೋಗ ಮೊದಲಾದ ಖಾಯಿಲೆಗಳು ಪ್ರತಿ ಮನೆಯ ಅತಿಥಿಗಳಾಗಿವೆ.

ಗಂಡ ಹೆಂಡತಿ ಇಬ್ಬರೂ ದುಡಿದರು ಬದುಕಿಗೆ ಹಣ ಸಾಕಾಗುತ್ತಿಲ್ಲ. ಸಂಬಳ ಜಾಸ್ತಿ ಮಾಡಿದರೂ ಪರೋಕ್ಷವಾಗಿ ಶಿಕ್ಷಣ ಆರೋಗ್ಯ ವಿದ್ಯುತ್ ನೀರು ಗ್ಯಾಸ್ ಸಾರಿಗೆ ಮೊಬೈಲ್ ಇಂಟರ್ನೆಟ್ ಆಹಾರ ಪದಾರ್ಥಗಳು ಮುಂತಾದ ಎಲ್ಲಾ ವಸ್ತುಗಳ ಬೆಲೆ ಏರಿಸಿ ಪರೋಕ್ಷವಾಗಿ ನಮ್ಮ ಹಣವನ್ನು ಹಗಲು ದರೋಡೆ ಮಾಡಲಾಗುತ್ತಿದೆ. ಈ ಕಡೆ ಕೊಟ್ಟು ಆ ಕಡೆ ಕಿತ್ತುಕೊಳ್ಳುವ ವ್ಯವಸ್ಥೆಯಲ್ಲಿ ಯಾರಿಗಾಗಿ ನಮ್ಮ ಅಪೂರ್ವ ಬದುಕನ್ನು ಕಳೆದುಕೊಳ್ಳಬೇಕು……

ಇದು ಮೇಲ್ನೋಟದ ಸಮಸ್ಯೆ. ಆಂತರಿಕವಾಗಿ ದಿನದಲ್ಲಿ ಇಷ್ಟು ದೀರ್ಘಕಾಲ ಕೆಲಸ ಮಾಡಿದರೆ ಕೆಲಸದ ಗುಣಮಟ್ಟ ಕುಸಿಯುತ್ತದೆ. ಆರೋಗ್ಯ ಹಾಳಾಗುತ್ತದೆ. ಉತ್ಪಾದನೆ ಕಡಿಮೆಯಾಗುತ್ತದೆ. ಕೌಟುಂಬಿಕ ವ್ಯವಸ್ಥೆಗೆ ತೊಂದರೆಯಾಗುತ್ತದೆ. ಮಕ್ಕಳ ಪಾಲನೆ ಪೋಷಣೆ ಹಿರಿಯರ ಬಗೆಗಿನ ಕಾಳಜಿ ಕಡಿಮೆಯಾಗುತ್ತದೆ……

ಪುರುಷರಂತೆ ಮಹಿಳೆಯರಿಗು ದಿನದ 24 ಗಂಟೆ ದುಡಿಯಲು ಅನುಮತಿಯನ್ನು ನೀಡಲಾಗಿದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿ ಆರ್ಥಿಕ ಅಭಿವೃದ್ಧಿ ಸಾಧಿಸುವ ಯೋಚನೆ ಮತ್ತು ಯೋಜನೆ ಇದರ ಹಿಂದಿದೆ. ಆದರೆ ಸಾಮಾಜಿಕ ಮತ್ತು ವೈಯಕ್ತಿಕ ಹಿತಾಸಕ್ತಿಗಳನ್ನು ಕಡೆಗಣಿಸಲಾಗಿದೆ. ಬಹುಶಃ ಇದನ್ನೇ ಅತಿಯಾಸೆ ಅಥವಾ ದುರಾಸೆ ಎನ್ನುವುದು……

ದಿನಕ್ಕೆ 8 ಗಂಟೆಗಳ ಕೆಲಸವೇ ಅತ್ಯುತ್ತಮ. ಆ ಕೆಲಸದ ಸಮಯದಲ್ಲಿಯೇ ಅತ್ಯಂತ ಪ್ರಾಮಾಣಿಕವಾಗಿ, ದಕ್ಷವಾಗಿ, ಆತ್ಮಸಾಕ್ಷಿಯಾಗಿ ಕೆಲಸ ಮಾಡಲು ಬೇಕಾದ ವಾತಾವರಣ ಮತ್ತು ಮನಸ್ಥಿತಿ ಕಲ್ಪಿಸುವ ನಿಟ್ಟಿನಲ್ಲಿ ಮತ್ತಷ್ಟು ಸುಧಾರಣೆಯ ಕ್ರಮಗಳು ಸ್ವಾಗತಾರ್ಹ. ಶಿಕ್ಷಣ ಆರೋಗ್ಯ ಮತ್ತು ಮಾರುಕಟ್ಟೆಯ ಬೆಲೆಗಳ ಮೇಲೆ ನಿಯಂತ್ರಣ ಸಾಧಿಸುವುದು ಅಷ್ಟೇ ಮುಖ್ಯ. ಅಪಘಾತ, ಅಪರಾಧ, ಅನಾರೋಗ್ಯ, ಆತ್ಮಹತ್ಯೆ ಇವುಗಳ ನಿಯಂತ್ರಣ ಸಹ ಬಹುಮುಖ್ಯ. ಗಾಳಿ ನೀರು ಆಹಾರ ಪರಿಸರದ ಶುದ್ದತೆಗೂ ಪ್ರಾಮುಖ್ಯತೆ ನೀಡಬೇಕು. ಆಗ ಕೆಲಸದ ಅವಧಿಯ ಹೆಚ್ಚಳದ ಅವಶ್ಯಕತೆಯೇ ಇರುವುದಿಲ್ಲ….

ಹಾಗೆಯೇ ಕೆಲವೊಮ್ಮೆ ನಮ್ಮ ಇಷ್ಟದ, ಅನಿವಾರ್ಯದ ಮತ್ತು ಆಸಕ್ತಿಯಾದ ಕೆಲಸವನ್ನು ಗಂಟೆಗಳ ಲೆಕ್ಕವಿಡದೆ ಮಾಡಲಾಗುತ್ತದೆ. ಅದು ಖಾಸಗಿಯಾದದ್ದು ಮತ್ತು ನಮ್ಮ ಆಯ್ಕೆಯಾಗಿರುತ್ತದೆ. ಅದು ತಾತ್ಕಾಲಿಕ ಮತ್ತು ಹೆಚ್ಚಿನ ಒತ್ತಡ ಇರುವುದಿಲ್ಲ. ಆದರೆ ಸಂಬಳದ ಉದ್ಯೋಗ, ಗುರಿ ನಿಗದಿಪಡಿಸಿದ ಕೆಲಸ ಅತ್ಯಂತ ಹೆಚ್ಚು ಒತ್ತಡ ನಿರ್ಮಾಣ ಮಾಡುತ್ತದೆ ಮತ್ತು ಅದು ನಿರಂತರವಾಗಿರುತ್ತದೆ. ನಮ್ಮ ಇಚ್ಚೆಯಂತೆ ವಿಶ್ರಾಂತಿ ಸಹ ದೊರೆಯುವುದಿಲ್ಲ.

ಕಾರ್ಮಿಕರು, ಬಂಡವಾಳಶಾಹಿಗಳು, ಸರ್ಕಾರಿ ಅಧಿಕಾರಿಗಳು, ಖಾಸಗೀಕರಣ, ಶೋಷಣೆ ಎಂಬ ವಿಷಯ ಹೊರತುಪಡಿಸಿ ಯೋಚಿಸಿದರು ಎಲ್ಲರಿಗೂ 8 ಗಂಟೆಗಳ ಅವಧಿಯೇ ಅತ್ಯುತ್ತಮ……

ಆದ್ದರಿಂದ ದಿನದ 24 ಗಂಟೆ ದುಡಿದರು, ಲಕ್ಷ ಲಕ್ಷ ಸಂಬಳ ಪಡೆದರು ಪ್ರಯೋಜನವಿಲ್ಲ. ಬದುಕು ಅತೃಪ್ತ‌ ಆತ್ಮವಾಗಿಯೇ ಉಳಿಯುತ್ತದೆ. ಯೋಚಿಸಿ. ಸಮಾಜ – ಬದುಕು ಜನಸಾಮಾನ್ಯರಾದ ನಮ್ಮದು. ಕೆಲಸ ಮಾಡುವವರು ನಾವು ಮತ್ತು ನಮ್ಮ ಹೆಂಡತಿ ಮಕ್ಕಳು…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…….

error: No Copying!