” ದೇವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕಿಲ್ಲ. ಮನುಷ್ಯರ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂಬುದು ನನಗೆ ಬೇಕು “
ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್………..
ಎಷ್ಟೊಂದು ಅಧ್ಯಯನ, ಚಿಂತನೆ, ಸಂಶೋಧನೆಯ ಫಲವಾಗಿ ಮೂಡಿದ ವಿದ್ವತ್ಪೂರ್ಣ ಅನುಭಾವದ ಮಾತುಗಳಿವು. ಜಗತ್ತಿನ ಹಿಂಸಾತ್ಮಕ ಘರ್ಷಣೆಗಳನ್ನು ನೋಡಿದಾಗ ಇದರ ಮಹತ್ವ ಅರ್ಥವಾಗುತ್ತದೆ…
ಮನುಷ್ಯ ಮನುಷ್ಯನನ್ನು ಪ್ರೀತಿಸದೆ, ಗೌರವಿಸದೆ, ರಕ್ಷಿಸದೆ ದೇವರು ಧರ್ಮಕ್ಕಾಗಿ ಮನುಷ್ಯರನ್ನೇ ಕೊಲ್ಲುತ್ತಾ ಅದನ್ನು ದೇವರಿಗೆ ಅರ್ಪಿಸುತ್ತಾ ಬದುಕುತ್ತಿರುವ ರೀತಿ ಅತ್ಯಂತ ವಿಚಿತ್ರವಾಗಿದೆ. ಬಂದೂಕು ಬಾಂಬುಗಳು ಇವೆ ಎಂದು ಸಿಕ್ಕ ಸಿಕ್ಕ ಜನರನ್ನು ಕೊಲ್ಲುವ ಮನಸ್ಥಿತಿಯೇ ದೇವರು ಧರ್ಮದ ಆಧಾರದ ಮೇಲೆ ನಿರ್ಮಾಣವಾಗಿದೆ ಎಂಬುದು ಮತ್ತಷ್ಟು ಆತಂಕಕಾರಿ ಬೆಳವಣಿಗೆ……
ನಿನ್ನನ್ನು ಕೊಂದು ನಾನು ಸುಖವಾಗಿರುತ್ತೇನೆ ಎಂಬ ಕಾಲವೂ ಮುಗಿದು – ನಿನ್ನನ್ನು ಕೊಲ್ಲುತ್ತೇನೆ ನಾನೂ ಸಾಯುತ್ತೇನೆ ಎಂಬ ಕಾಲ ಬಂದಾಗಿದೆ………
ವಿಶ್ವ ವಿನಾಶದ ಕಾಲ ಸನ್ನಿಹಿತವಾಗಿದೆ. ಸಾವಿಗೂ ಹೆದರದ ಮನಸ್ಥಿತಿ ನಿರ್ಮಾಣವಾದರೆ ಬದುಕಿಗೆಲ್ಲಿಯ ಬೆಲೆ……..
ತಾನು ಸಾಯುವುದು ಖಚಿತವಾಗಿದ್ದರೂ ಶತ್ರುವಿನ ಕೋಟೆಯೊಳಗೆ ನುಗ್ಗಿ ಎಷ್ಟು ಸಾಧ್ಯವೋ ಅಷ್ಟು ಜನರನ್ನು ಕೊಂದು ತಾನೂ ಕೊಲೆಯಾಗುವ ಜನರು ಹೆಚ್ಚಾಗುತ್ತಿರುವ ಸನ್ನಿವೇಶದಲ್ಲಿ ಮಾನವ ಜನಾಂಗ ಉಳಿಯಬಹುದೇ. ರಕ್ಷಣೆ ಎಂಬುದು ಅದೃಷ್ಟದಾಟವೇ……
” ಮನುಷ್ಯ ಹೋರಾಡಬೇಕಿರುವುದು ಬದುಕಲೇ ಹೊರತು ಸಾಯಲು ಅಲ್ಲ. ಆದರೆ ಈಗ ಜಾಗಕ್ಕಾಗಿ, ಧರ್ಮಕ್ಕಾಗಿ ಬದುಕಿಗಿಂತ ಸಾವೇ ಹೆಚ್ಚು ಮಹತ್ವ ಪಡೆಯುತ್ತಿರುವಾಗ ಬದುಕಿಗೆ ಅರ್ಥವಿದೆಯೇ……
ಯುದ್ಧಗಳನ್ನು ನಿಲ್ಲಿಸಲು ಪ್ರಯತ್ನಿಸಬೇಕಾದ ಪರಿಸ್ಥಿತಿಯಲ್ಲಿ ಒಂದೊಂದು ದೇಶ ಒಬ್ಬೊಬ್ಬರ ಪರ ನಿಂತು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರುವ ಸಂದರ್ಭದಲ್ಲಿ ಮನುಷ್ಯ ಕಾಡು ಮೃಗವೇ ಆಗಿದ್ದಾನೆ. ಹಿಂಸೆಯ ತೀವ್ರತೆ ಗಮನಿಸುತ್ತಿದ್ದರೆ ಭೀಕರ, ಭಯಂಕರ, ಭಯಾನಕ, ಬೀಭತ್ಸ ಎಂಬ ಪದಗಳು ಸಹ ತೀಕ್ಷ್ಣತೆ ಕಳೆದುಕೊಂಡು ಪೇಲವವಾಗಿವೆ. ಎಂತಹ ನೀವ ಕೃತ್ಯವೂ ಸಹ ಆಶ್ಚರ್ಯವನ್ನುಂಟುಮಾಡದೆ ಸಹಜವಾಗಿಯೇ ತೆಗೆದುಕೊಳ್ಳುವ ಮನೋಭಾವ ಬೆಳವಣಿಗೆ ಹೊಂದಿದೆ…..
ಈ ಕ್ರೂರಿಗಳ ಯುದ್ಧದಿಂದ ಕೇವಲ ಮನುಷ್ಯ ಮಾತ್ರ ನಾಶ ಹೊಂದುತ್ತಿಲ್ಲ. ಪ್ರಕೃತಿಯ ಮಡಿಲಾದ ಭೂಮಿಯೂ ವಿನಾಶದ ಅಂಚಿಗೆ ಬಂದು ನಿಂತಿದೆ. ರಾಕೆಟ್‌ಗಳು ಮಿಸೈಲುಗಳು ನೆಲವನ್ನೇ ಛಿದ್ರಗೊಳಿಸಿ ಹೊಗೆಯ ವಿಷಾನಿಲವನ್ನೇ ಸೃಷ್ಟಿ ಮಾಡುತ್ತಿದೆ. ನೀರು ಮಲಿನವಾಗುತ್ತಿದೆ…..
ಮಾಧ್ಯಮಗಳು ಯುದ್ದ ಭೂಮಿಯಿಂದ ನೇರ ಪ್ರಸಾರ ಮಾಡಿ ಅದು ಒಂದು ದೊಡ್ಡ ಸಾಧನೆ ಎಂಬಂತೆ ಹಿಂಸೆಯನ್ನು ಮತ್ತಷ್ಟು ರೋಚಕಗೊಳಿಸುತ್ತಿವೆ. ಧರ್ಮಾಧಿಕಾರಿಗಳು ಪೂಜೆ ಪ್ರಾರ್ಥನೆ ನಮಾಜುಗಳಲ್ಲಿ ದೇವರನ್ನು ಸ್ಮರಿಸುತ್ತಾ ಮೈ ಮರೆತಿದ್ದಾರೆ. ಶಸ್ತ್ರಾಸ್ತ್ರ ಉತ್ಪಾದಕರು ವ್ಯಾಪಾರದಲ್ಲಿ ಬ್ಯುಸಿಯಾಗಿದ್ದಾರೆ. ಆಡಳಿತಗಾರರು ತಂತ್ರ ಕುತಂತ್ರ ಪ್ರತಿತಂತ್ರ ಪತ್ರಿಕಾಗೋಷ್ಠಿಗಳಲ್ಲಿ ನಿರತರಾಗಿದ್ದಾರೆ.
ಸಾಮಾನ್ಯ ಜನ ಬದುಕಿನ ನಿತ್ಯ ಕರ್ಮಗಳಲ್ಲಿ ಮುಳುಗಿದ್ದಾರೆ. ಸಾಮಾಜಿಕ ಜಾಲತಾಣಗಳು ಎಲ್ಲವನ್ನೂ ಮರೆಸುತ್ತಿವೆ…….
ಈ ಸನ್ನಿವೇಶದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ ಮನುಷ್ಯ ಸಮಾನತೆಯನ್ನು ಪ್ರೀತಿಯ ಭಾವದಲ್ಲಿ ಸಮ್ಮಿಲನಗೊಳಿಸಿ ಹೊಂದಾಣಿಕೆಯ ಸಮಾಜ ರೂಪಿಸದಿದ್ದರೆ ಮಾನವ ಬಹುತೇಕ ಅಳಿವಿನ ಅಂಚಿಗೆ ಬಂದು ನಿಂತಿದ್ದಾನೆ ಎಂದೇ ಅರ್ಥ. ಖುರಾನ್ ಬೈಬಲ್ ಭಗವದ್ಗೀತೆ, ಅಲ್ಲಾ ಯೇಸು ರಾಮ ಎಲ್ಲರೂ ಎಲ್ಲವೂ ತಮ್ಮ ಪ್ರಭಾವ ಕಳೆದುಕೊಂಡಿದ್ದಾರೆ ಎಂದೇ ಭಾವಿಸಬೇಕಾಗುತ್ತದೆ….
ದಯವಿಟ್ಟು ನಿಜ ಮನುಷ್ಯರು ಯೋಚಿಸಲು ಪ್ರಾರಂಭಿಸಿ. ಭೂಮಿಯನ್ನು, ಮನುಷ್ಯರನ್ನು ಉಳಿಸಲು ಒಂದು ದೊಡ್ಡ ಸಾರ್ವಜನಿಕ ಅಭಿಯಾನ ಕರ್ನಾಟಕದಿಂದಲೇ ಪ್ರಾರಂಭಿಸಬಹುದೇ. ವಿಶ್ವಕ್ಕೆ ಕನ್ನಡ ನಾಡು ಶಾಂತಿಯ ಸಂದೇಶ ಕಳಿಸಲು ಪ್ರಯತ್ನಿಸಬಹುದೇ. ಈ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಪ್ರಾರಂಭವಾದರೆ ಅದಕ್ಕೆ ಒಂದು ಸಂಘಟನಾತ್ಮಕ ರೂಪ ನೀಡಬಹುದು.
ವಿಶ್ವದ ಎಲ್ಲಾ ಸಾಮಾನ್ಯ ನಾಗರಿಕರು ಶಾಂತಿಯ ಪರವಾಗಿ ಧ್ವನಿ ಮೊಳಗಿಸಿದರೆ ಮಾತ್ರ ಈ ಭೂಮಿಗೆ ಉಳಿಗಾಲ. ಇಲ್ಲದಿದ್ದರೆ ಇದೇ ಭೂಮಿ ಕೆಲವೇ ವರ್ಷಗಳಲ್ಲಿ ನರಕವಾಗುತ್ತದೆ.
ಈಗಾಗಲೇ ಸಿರಿಯಾ ಪ್ಯಾಲೆಸ್ಟೈನ್ ಇಸ್ರೇಲ್ ಉಕ್ರೇನ್ ಆಫ್ಘನಿಸ್ತಾನ್ ಸುಡಾನ್ ಇಥೋಪಿಯಾ ಮುಂತಾದ ದೇಶಗಳು ಸುಡುಗಾಡಿನ ರೂಪ ಪಡೆಯುತ್ತಿವೆ. ಮುಂದಿನ ಸರದಿ ನಮ್ಮದು ನಿಮ್ಮದು. ಆಯ್ಕೆ ನಮ್ಮ ಮುಂದಿದೆ………
ಆಧುನಿಕ ಜಗತ್ತಿನ ಎಲ್ಲಾ ಸೌಕರ್ಯಗಳನ್ನು ಉಪಯೋಗಿಸಿಕೊಂಡು ಸುಖ ಪಡಬೇಕೆ ಅಥವಾ ಅದರಿಂದಲೇ ನಾಶವಾಗಬೇಕೇ. ಯೋಚಿಸುವ ಸರದಿ ನಮ್ಮದು………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068……….