ಮಣಿಪಾಲ: ದಿನಾಂಕ 12/10/2023 (ಹಾಯ್ ಉಡುಪಿ ನ್ಯೂಸ್) ಪರ್ಕಳ ಜಂಕ್ಷನ್ ನಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸುಡುಮದ್ದು ಸಂಗ್ರಹಿಸಿದ್ದ ರಘುರಾಮ ಜನರಲ್ ಸ್ಟೋರ್ ಗೆ ಮಣಿಪಾಲ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ ವಿ ಅವರು ದಾಳಿ ನಡೆಸಿ ಸುಡು ಮದ್ದನ್ನು ವಶಪಡಿಸಿಕೊಂಡಿದ್ದಾರೆ.
ಮಣಿಪಾಲ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರಾದ ದೇವರಾಜ್ ಟಿ.ವಿ ಅವರಿಗೆ ಪರ್ಕಳ ಜಂಕ್ಷನ್‌ನಲ್ಲಿ ರಘುರಾಮ ಜನರಲ್ ಸ್ಟೋರ್ಸ್ ಎಂಬ ಅಂಗಡಿಯಲ್ಲಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಸುಡುಮದ್ದುಗಳನ್ನು, ಪಟಾಕಿಗಳನ್ನು ಸಂಗ್ರಹಿಸಿಟ್ಟಿರುತ್ತಾರೆ ಎಂಬ ಬಗ್ಗೆ ಬಂದ ಸಾರ್ವಜನಿಕ ಮಾಹಿತಿಯಂತೆ ಕೂಡಲೇ ದಾಳಿ ನಡೆಸಲು ಉಡುಪಿ ತಹಸೀಲ್ದಾರರನ್ನು ಮತ್ತು ಜಿಲ್ಲಾ ಅಗ್ನಿ ಶಾಮಕ ದಳದ ಅಧಿಕಾರಿಯವರನ್ನು ಬರಮಾಡಿಕೊಂಡು ಮಾಹಿತಿ ಬಂದ ಸ್ಥಳಕ್ಕೆ ದಾಳಿ ನಡೆಸಿ ಅಲ್ಲಿದ್ದ ಒಟ್ಟು 766 ಕೆ.ಜಿ ಸುಡುಮದ್ದನ್ನು (ಮೌಲ್ಯ ರೂಪಾಯಿ 1,26,700/-) ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: 9B(1) (b) Explosive Act 1984 ಮತ್ತು ಕಲಂ: 286 ಐಪಿಸಿ ರಂತೆ ಪ್ರಕರಣ ದಾಖಲಾಗಿದೆ.