ಭಾರತ × ಚೀನಾ,
ಇರಾನ್ × ಇರಾಕ್,
ಅಮೆರಿಕ × ವಿಯೆಟ್ನಾಂ,
ಉತ್ತರ ಕೊರಿಯಾ × ದಕ್ಷಿಣ ಕೊರಿಯಾ,
ಜಪಾನ್ × ಚೀನಾ,
ಭಾರತ × ಪಾಕಿಸ್ತಾನ,
ಅಮೆರಿಕ × ಆಫ್ಘನಿಸ್ತಾನ,
ಅಮೆರಿಕ × ಇರಾಕ್,
ಉಕ್ರೇನ್ × ರಷ್ಯಾ,
ಇಸ್ರೇಲ್ × ಪ್ಯಾಲೆಸ್ಟೈನ್…….
ಹೀಗೆ ಸಾಲು ಸಾಲು ಯುದ್ದಗಳು ನಡೆದಿವೆ ಮತ್ತು ನಡೆಯುತ್ತಲೇ ಇವೆ ಮತ್ತು ನಡೆಯುತ್ತಲೇ ಇರುತ್ತದೆ.
ಯುದ್ಧ ಮತ್ತು ನ್ಯಾಯಾಲಯದಲ್ಲಿ ಗೆದ್ದವನು ಸೋತ – ಸೋತವನು ಸತ್ತ ಎಂಬ ಮಾತಿದೆ…..
ಯುದ್ದದಲ್ಲಿ ಗೆದ್ದವನು ಅದನ್ನು ಅನುಭವಿಸುವ ಮೊದಲೇ ಸೋತವನು ಮತ್ತೆ ಸಂಘಟಿತನಾಗಿ ಮೇಲೆ ಬೀಳುತ್ತಾನೆ. ಈಗ ಯುದ್ಧ ಮಾಡಲು ಸೈನಿಕ ಶಕ್ತಿಯೇ ಬೇಕೆಂದಿಲ್ಲ. ಆಧುನಿಕ ಶಸ್ತ್ರಾಸ್ತ್ರಗಳ ಭಯೋತ್ಪಾದನಾ ಸಂಘಟನೆಯೇ ಸಾಕು. ಸಂಖ್ಯೆಗಳು ಮುಖ್ಯವಲ್ಲ. ಸಾವು ನೋವುಗಳು ಮುಖ್ಯ….
ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿ ಮಾಡಿದ್ದಾರೆ. ಈಗ ಇಸ್ರೇಲ್ ಪ್ಯಾಲೆಸ್ಟೈನ್ ಮೇಲೆ ದಾಳಿ ಮಾಡುತ್ತಿದೆ. ಯಾರ ಕೈ ಮೇಲಾದರೂ ಸೋತವರು ಮತ್ತೆ ಸಂಘಟಿತರಾಗುತ್ತಾರೆ ಮತ್ತು ದಾಳಿ ಹಿಂಸೆ ನಿರಂತರ……
ಕಾಶ್ಮೀರವೇ ಇರಲಿ, ಕಾಬೂಲ್ ಇರಲಿ, ಗಾಜಾ ಪಟ್ಟಿಯೇ ಇರಲಿ, ಸಿರಿಯಾ ಇರಲಿ, ಸೋಲುವವರು ಇಲ್ಲ, ಗೆಲ್ಲುವವರು ಇಲ್ಲ, ಸಾಯುವವರು ಮಾತ್ರ ನಿರಂತರ……
ಬಾಂಬ್, ರಾಕೆಟ್, ಮಿಸೈಲ್ ದಾಳಿಗಳು ನಡೆದಾಗ ವಿಶ್ವದ ಯಾವುದೇ ಜಾಗದ ಜನ ಕಿರುಚಾಡುತ್ತಾ, ಅಳುತ್ತಾ, ಭಯಭೀತರಾಗುತ್ತಾ ಓಡುತ್ತಾರೆ. ಅಮೆರಿಕದ ನ್ಯೂಯಾರ್ಕ್ ಅವಳಿ ಕಟ್ಟಡಗಳ ಬಳಿಯ ಜನರೇ ಆಗಲಿ, ಲಾಹೋರ್ ಮಸೀದಿಯ ಬಳಿಯ ಜನರೇ ಆಗಲಿ, ಪ್ಯಾಲೆಸ್ಟೈನ್ ಜನರೇ ಆಗಲಿ, ಇಸ್ರೇಲ್ ಜನರೇ ಆಗಲಿ, ಆಫ್ರಿಕಾದ ಜನರೇ ಆಗಲಿ, ಮುಂಬಯಿ ಜನರೇ ಆಗಲಿ ಅವರ ವರ್ತನೆ ಬಹುತೇಕ ಹೀಗೇ ಇರುತ್ತದೆ…..
ಹೀಗೆ ಭಯಭೀತರಾಗಿ ಓಡುವ ಜನ ಸಾಮಾನ್ಯ ಸಮಯದಲ್ಲಿ ಸಂಘರ್ಷ ಮುಕ್ತವಾಗಿ ತಮ್ಮ ನೆರೆಹೊರೆಯವರೊಂದಿಗೆ ಶಾಂತಿ ಸಂಧಾನ ನಡೆಸಿ ಇರುವುದರಲ್ಲಿ ಕೊಟ್ಟು ತೆಗೆದುಕೊಳ್ಳುವ ಮೂಲಕ ಸ್ವಲ್ಪ ಸೌಹಾರ್ದ ವಾತಾವರಣ ನಿರ್ಮಿಸಿಕೊಳ್ಳಲು ಆಡಳಿತಗಾರರ ಮೇಲೆ ಒತ್ತಡ ಹೇರುವ ಯಾವ ಕೆಲಸವನ್ನು ಮಾಡುವುದಿಲ್ಲ. ಅದು ತಮಗೆ ಸಂಬಂಧಿಸಿಯೇ ಇಲ್ಲ ಎಂಬಂತೆ ಇರುತ್ತಾರೆ. ದುರ್ಘಟನೆ ಸಂಭವಿಸಿದಾಗ ಓ ಎಂದು ಅರಚುತ್ತಾ ಓಡುತ್ತಾರೆ…….
ಅಹಿಂಸೆಯ ಮಹತ್ವ ಅರಿಯದ ಹಿಂಸಾ ಮನೋಭಾವದವರು. ಅಹಿಂಸೆ ಎಂದರೆ ರಕ್ಷಣೆಯನ್ನು ಹೊರತುಪಡಿಸಿದ ಕಾರ್ಯವಿಧಾನ. ಅದೊಂದು ಧೈರ್ಯವಾದ ಸುಂದರ ಜೀವನ ಮಾರ್ಗ. ಅಲ್ಲಿ ಹಿಂಸೆ ಇರುವುದಿಲ್ಲ ಆದರೆ ರಕ್ಷಣೆಯೇ ಮೊದಲ ಆದ್ಯತೆ. ನೆಮ್ಮದಿ ಮತ್ತು ಸೌಹಾರ್ದ ಜೀವನ ಸಾಗಿಸಬಹುದು.
ಇದು ಭಾರತ ಪಾಕಿಸ್ತಾನ ಇಸ್ರೇಲ್ ಪ್ಯಾಲೆಸ್ಟೈನ್ ರಷ್ಯಾ ಉಕ್ರೇನ್ ಎಲ್ಲರಿಗೂ ಅನ್ವಯ. ಅದನ್ನು ಅರ್ಥ ಮಾಡಿಕೊಳ್ಳುವ ಬುದ್ಧಿಶಕ್ತಿ ಮಾತ್ರ ಜನರಿಗೆ ಇಲ್ಲ. ಏಕೆಂದರೆ ಮನುಷ್ಯ ಅತ್ಯಂತ ಸ್ವಾರ್ಥಿ, ಭಯಗ್ರಸ್ತ, ಅನುಮಾನಿ ಮತ್ತು ಧರ್ಮಾಂಧ…..
ವಿಶ್ವದ ಅನೇಕ ನಾಯಕರಿಗೆ ಬಾಯಿಯೇ ಬಿದ್ದು ಹೋಗಿದೆ. ಮಾತೇ ಹೊರಡದೆ ಮೂಕರಾಗಿದ್ದಾರೆ. ಮನಸ್ಸುಗಳು ಕಲ್ಲಾಗಿವೇ. ಹೃದಯಗಳು ಛಿದ್ರವಾಗಿದೆ. ಆದ್ದರಿಂದಲೇ ಶಸ್ತ್ರಾಸ್ತ್ರಗಳು ಮಾತನಾಡುತ್ತಿವೆ. ಇದೀಗ ಬಂದ ಸುದ್ದಿಯ ಪ್ರಕಾರ ಹಮಾಸ್ ಉಗ್ರರು ಇಸ್ರೇಲ್ ನ 40 ಮಕ್ಕಳ ಶಿರಚ್ಛೇದ ಮಾಡಿದ್ದಾರೆ. ಅವರ ರಾಕ್ಷಸೀ ಕೃತ್ಯವನ್ನು ಇಡೀ ಜಗತ್ತು ಖಂಡಿಸಬೇಕು. ಪ್ಯಾಲೆಸ್ಟೈನ್ ಜನರ ಸ್ವಾತಂತ್ರ್ಯ ಹೋರಾಟ ಬೆಂಬಲಿಸೋಣ ಆದರೆ ಭಯೋತ್ಪಾದನಾ ಕೃತ್ಯಗಳನ್ನಲ್ಲ. ಪ್ಯಾಲೆಸ್ಟೈನ್ ಹೋರಾಟಗಾರರಿಗೆ ಭಾರತದ ಸ್ವಾತಂತ್ರ್ಯ ಚಳವಳಿ ಮತ್ತು ಮಹಾತ್ಮ ಗಾಂಧಿಯವರನ್ನು ನೆನಪಿಸಬೇಕಿದೆ…….
ಎಲ್ಲಿ ಹೋದರು ಜಿ 21 ನಾಯಕರು. ಭೈಡೆನ್, ಪುಟಿನ್, ಜಿನ್ಪಿಂಗ್, ಮೋದಿ, ಸುನಾಕ್, ಮ್ಯಾಕ್ರಾನ್, ಓಲಾಪ್ ಸ್ಕೋಜ್, ಟ್ರುಡೋ ಎಲ್ಲಾ ಆರ್ಥಿಕ ಅಭಿವೃದ್ಧಿಯ ಕಡೆ ಮುಖ ಮಾಡಿದ್ದಾರೆ. ಆದರೆ ಈಗ ಮನುಷ್ಯ ಕುಲವೇ ಅಪಾಯಕ್ಕೆ ಸಿಲುಕಿದೆ……
ಇತಿಹಾಸ ಮರುಕಳಿಸುತ್ತಿದೆ. ಮಧ್ಯಕಾಲೀನ ಯುದ್ಧ ಹಿಂಸೆ ಧಾರ್ಮಿಕ ಮೂಲಭೂತವಾದ ಮತ್ತೆ ಪುನರಾವರ್ತನೆ ಆಗುತ್ತಿರುವುದು ಕಂಡುಬರುತ್ತಿದೆ. ಆಫ್ಘನಿಸ್ತಾನದಲ್ಲಿ 3000 ಜನ ಭೂಕಂಪದಿಂದ ಸತ್ತಿದ್ದಾರೆ. ಸಹಾಯಕ್ಕಾಗಿ ವಿಶ್ವದ ಮುಂದೆ ಅಂಗಲಾಚುತ್ತಿದ್ದಾರೆ. ಈಗ ಕೇಳುವವರು ಇಲ್ಲ……
ಇಸ್ರೇಲ್ ಜನಸಂಖ್ಯೆ ಈಗ ಸುಮಾರು ಒಂದು ಕೋಟಿ.
ಪ್ಯಾಲೆಸ್ಟೈನ್ ಜನಸಂಖ್ಯೆ ಸುಮಾರು 55 ಲಕ್ಷ, ಇಸ್ರೇಲ್ ವಿಸ್ತಾರ ಸುಮಾರು 22 ಸಾವಿರ ಸ್ಕ್ವೇರ್ ಕಿಲೋಮೀಟರ್. ಪ್ಯಾಲೆಸ್ಟೈನ್ ವಿಸ್ತಾರ ಸುಮಾರು 6 ಸಾವಿರ ಸ್ಕ್ವೇರ್ ಕಿಲೋಮೀಟರ್….
ಇಸ್ರೇಲ್ ಮತ್ತು ಪ್ಯಾಲಿಸ್ಟೈನ್ ಎರಡೂ ಕಡೆಯ ಮನುಷ್ಯರು ತುಂಬಾ ಕಟ್ಟುಮಸ್ತಾದ, ಆರೋಗ್ಯವಂತ, ಬುದ್ದಿವಂತ ಶ್ರಮಜೀವಿಗಳು. ಎರಡೂ ಕಡೆಯವರು ಎಷ್ಟೇ ಹೋರಾಟ ಮಾಡಿದರು ಬಹುಶಃ ಯಾರನ್ನು ಯಾರೂ ಸಂಪೂರ್ಣ ನಾಶಮಾಡಲು ಸಾಧ್ಯವಿಲ್ಲ. ಹೆಚ್ಚೆಂದರೆ ತಾತ್ಕಾಲಿಕ ಯಶಸ್ಸು ಸಿಗಬಹುದು. ಆದರೆ ಇಡೀ ಬದುಕು ಆತಂಕದಲ್ಲೇ ಕಳೆಯಬೇಕು. ತಂತ್ರ ಪ್ರತಿತಂತ್ರಕ್ಕೇ ಹಣ ಸಮಯ ಉಪಯೋಗಿಸಬೇಕು….
ಈ ಭೂಮಿಗೆ ಎಲ್ಲರೂ ವಲಸಿಗರೇ. ಯಾರೂ ಶಾಶ್ವತ ನಿವಾಸಿಗಳಲ್ಲ. ಯಾವ ಜಾಗ ಯಾವ ಧರ್ಮದ ಯಾರ ಆಸ್ತಿಯೂ ಅಲ್ಲ. ಅವಶ್ಯಕತೆಗೆ ಅನುಗುಣವಾಗಿ ಜೀವನ ರೂಪಗೊಂಡಿದೆ….
ಈಗ ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಂಡರೆ ಅಲ್ಲಿನ ಜನ ಸ್ವಲ್ಪ ನೆಮ್ಮದಿಯಿಂದ ಇರಬಹುದು. ಸುಖ ಪಡಬಹುದು. ನಾವು ಮನುಷ್ಯ ಪ್ರಾಣಿಗಳಲ್ಲ. ನಾವು ಶ್ರೇಷ್ಠ ಧರ್ಮ ಮತ್ತು ಸಮುದಾಯಗಳಿಗೆ ಸೇರಿದವರು. ಇತರರನ್ನು ಸಹಿಸುವುದಿಲ್ಲ ಎಂಬ ಹಠಕ್ಕೆ ಬಿದ್ದರೆ ಅವರು ಉಳಿಯುವುದಿಲ್ಲ, ಇವರು ಉಳಿಯುವುದಿಲ್ಲ, ನಾವು ಉಳಿಯುವುದಿಲ್ಲ. ಇದೇ ಮಾನವ ಇತಿಹಾಸವಾಗುವುದಾದರೆ ಸರ್ವನಾಶವೇ ಅಂತಿಮ ಫಲಿತಾಂಶವಾಗಬಹುದು. ಯಾರು ಯಾವುದೇ ಪಾಠ ಕಲಿಯುವುದಿಲ್ಲ ಸ್ವಾರ್ಥ ಅಜ್ಞಾನ ಹೊರತುಪಡಿಸಿ…..
ಕಾವೇರಿ ನದಿ ನೀರಿನ ಹಂಚಿಕೆಯನ್ನೇ ಶತಮಾನದಿಂದ ಒಂದೇ ದೇಶದ ಅಕ್ಕಪಕ್ಕದ ಒಂದೇ ಜನಾಂಗದ ಎರಡು ರಾಜ್ಯಗಳು ಬಗೆಹರಿಸಿಕೊಳ್ಳಲು ಸಾಧ್ಯವಾಗದೆ ಬಂದ್ ಪ್ರತಿಭಟನೆ ಮಾಡುತ್ತಿರುವಾಗ ಇನ್ನೂ ಇಸ್ರೇಲ್ ಪ್ಯಾಲೆಸ್ಟೈನ್ ಬಗ್ಗೆ ಮಾತನಾಡುವ ನೈತಿಕತೆಯೇ ನಿನಗೆ ಉಳಿದಿಲ್ಲ ಎಂದು ನನ್ನ ಆತ್ಮ ಮುಸಿಮುಸಿ ನಗುತ್ತಿದೆ….
ಶಾಂತಿ ಅಹಿಂಸೆ ಸೌಹಾರ್ದತೆ ಪ್ರೀತಿ ಸಹಕಾರ ಎಲ್ಲವೂ ಹುಚ್ಚರ ಬಡಬಡಿಕೆ ಮಾತ್ರವೇ, ಕೊಚ್ಚು ಕೊಲ್ಲು ಸೇಡು ರಕ್ತವೇ ಮಾನವ ಜನಾಂಗದ ನಿಜವಾದ ಗುಣವೇ………ಅನುಭವಿಸೋಣ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ,
9844013068………..