- ಉಡುಪಿ: ದಿನಾಂಕ: 10-10-2023(ಹಾಯ್ ಉಡುಪಿ ನ್ಯೂಸ್) ಬೆಂಗಳೂರಿನ ವಿವಾಹಿತ ಮಹಿಳೆ ಯೋರ್ವರನ್ನು ಪರಿಚಯ ಮಾಡಿಕೊಂಡು ತಾನು ಯಕ್ಷಿಣಿ ವಿದ್ಯೆಯಿಂದ ಸಂಕಷ್ಟ ಪರಿಹಾರ ಮಾಡುತ್ತೇನೆ ಎಂದು ಸುಳ್ಳು ಹೇಳಿ ನಂಬಿಸಿ ಆಕೆಗೆ ಇಪ್ಪತ್ತೊಂದು ಲಕ್ಷ ರೂಪಾಯಿ ವಂಚಿಸಿ ಕಣ್ಮರೆಯಾಗಿದ್ದಾನೆಂದು ಪ್ರವೀಣ್ ತಂತ್ರಿ ಎಂಬವನ ಮೇಲೆ ನೊಂದ ಮಹಿಳೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
- ಬೆಂಗಳೂರಿನ ಜೆ.ಪಿ ನಗರ ನಿವಾಸಿ ಶ್ರೀಮತಿ ಪ್ರತಿಭಾ (48) ರವರಿಗೆ ಉಡುಪಿಯ ಪ್ರವೀಣ್ ತಂತ್ರಿ ಎಂಬಾತನು ಸುಮಾರು 5-6 ತಿಂಗಳುಗಳ ಹಿಂದೆ ಪರಿಚಯವಾಗಿದ್ದು, ಶ್ರೀಮತಿ ಪ್ರತಿಭಾ ರವರ ಸಂಸಾರದ ಬಗ್ಗೆ ತಿಳಿದುಕೊಂಡು, ಶ್ರೀಮತಿ ಪ್ರತಿಭಾ ರವರಿಗೆ ಇರುವ ಸಾಂಸಾರಿಕ ಸಮಸ್ಯೆಗಳನ್ನು ಯಕ್ಷಿಣಿ ವಿದ್ಯೆಯ ಮುಖಾಂತರ ಕಷ್ಟ ಪರಿಹಾರ ಮಾಡುವುದಾಗಿ ನಂಬಿಸಿ ಶ್ರೀಮತಿ ಪ್ರತಿಭಾರವರಿಂದ ಹಂತ ಹಂತವಾಗಿ ಸುಮಾರು 1 ಲಕ್ಷದವರೆಗೆ ಹಣವನ್ನು ಪಡೆದು ಕೊಂಡಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ.
- ಆ ನಂತರ ಶ್ರೀಮತಿ ಪ್ರತಿಭಾರವರ ಗಂಡ ಮತ್ತು ಮಕ್ಕಳು ಹಾಕಿಕೊಳ್ಳುವ ಆಭರಣಗಳನ್ನು ಪೂಜೆ ಮಾಡಿಸಬೇಕೆಂದು ಹೇಳಿ ನಂಬಿಸಿ ದಿನಾಂಕ 24/05/2023 ರಂದು ಬೆಳಿಗ್ಗೆ ಕಾಸರಗೋಡು ಜಿಲ್ಲೆಯ ಐಲಾ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸುಮಾರು 20 ಲಕ್ಷ ಮೌಲ್ಯದ ಒಟ್ಟು 340 ಗ್ರಾಂ ತೂಕದ ಚಿನ್ನಾಭರಣಗಳನ್ನು ಶ್ರೀಮತಿ ಪ್ರತಿಭಾರಿಂದ ಪಡೆದು ಅವುಗಳನ್ನು ವಾಪಾಸು ಕೊಡದೆ ಶ್ರೀಮತಿ ಪ್ರತಿಭಾ ರವರಿಗೆ ನಂಬಿಕೆದ್ರೋಹ ಎಸಗಿ, ಮೋಸ ಮಾಡಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 406, 420 ಐಪಿಸಿ ಯಂತೆ ಪ್ರಕರಣ ದಾಖಲಾಗಿದೆ.