ತನ್ನದೇ ಅತಿಹೆಚ್ಚು 70 ಪದಕಗಳ ದಾಖಲೆ ಮುರಿದು 107 ಗಳಿಸಿದ ಭಾರತ…..
ಆದರೆ ಚೀನಾ ಜಪಾನ್ ಕೊರಿಯಾ ದೇಶಗಳಿಗೆ ಹೋಲಿಸಿದಾಗ ಈಗಲೂ ಕಳಪೆ ಗುಣಮಟ್ಟ ಹೊಂದಿರುವುದು ಸಹ ಅಷ್ಟೇ ಸತ್ಯ……
ಈಗ ಆ ಏರು ಮುಖ ಸಾಧನೆಯನ್ನು ಮತ್ತಷ್ಟು ಎತ್ತರಕ್ಕೆ ತೆಗೆದುಕೊಂಡು ಹೋಗಬೇಕಾಗಿರುವ ಜವಾಬ್ದಾರಿ ಸರ್ಕಾರ ಮತ್ತು ಮಕ್ಕಳ ಪೋಷಕರಿಗೆ ಇದೆ….
ಎಲ್ಲಾ ಮಕ್ಕಳೂ ಕ್ರೀಡಾಸಕ್ತರಾಗಿರುವುದಿಲ್ಲ ಅಥವಾ ಕ್ರೀಡಾ ಪ್ರತಿಭೆ ಹೊಂದಿರುವುದಿಲ್ಲ. ಆದರೆ ಕೆಲವು ಕ್ರೀಡಾ ಪ್ರತಿಭೆಗಳನ್ನು ಕಣ್ಣಿಗೆ ಕಾಣುವಷ್ಟು ಮೇಲ್ನೋಟಕ್ಕೆ ಗುರುತಿಸಬಹುದು. ಅಂತಹ ಮಕ್ಕಳಿಗೆ ತಕ್ಷಣಕ್ಕೆ ಸಹಾಯ, ಪ್ರೋತ್ಸಾಹ, ಅವಕಾಶ, ವೇದಿಕೆ, ಭದ್ರತೆ, ಮಾರ್ಗದರ್ಶನ ಮತ್ತು ಆರ್ಥಿಕ ಸಹಾಯದ ಅವಶ್ಯಕತೆ ನೀಡಬೇಕಾಗುತ್ತದೆ. ನಮ್ಮ ದೇಶದಲ್ಲಿ ಆ ವಿಷಯದಲ್ಲಿ ಸಾಕಷ್ಟು ಕೊರತೆ ಕಾಣುತ್ತಿದೆ…..
ಭ್ರಷ್ಟಾಚಾರ, ಜಾತಿ, ರಾಜಕೀಯ, ಬಡವರ ನಿರ್ಲಕ್ಷ್ಯ ಮತ್ತು ಅಸೂಯೆ ಬಹುಮುಖ್ಯವಾಗಿ ಇಲ್ಲಿ ಅಡ್ಡ ಪರಿಣಾಮಗಳನ್ನು ಬೀರುತ್ತದೆ. ಅಧಿಕಾರ ಇರುವವರಲ್ಲಿ ವಿಶಾಲ ಮನೋಭಾವದ ಕೊರತೆ ಕಂಡುಬರುತ್ತದೆ. ಅದರ ನಿರ್ವಹಣೆ ಸರಿಯಾದ ರೀತಿಯಲ್ಲಿ ಮಾಡಿದರೆ ಬಹುಶಃ ವಿಶ್ವಮಟ್ಟದ ಕ್ರೀಡೆಯಲ್ಲಿ ಭಾರತ ಬಲಿಷ್ಠ ಶಕ್ತಿಯಾಗಿ ಹೊರಹೊಮ್ಮಬಹುದು…..
ಮೂವತ್ತು ವರ್ಷಗಳ ಹಿಂದಿಗಿಂತ ಈಗಿನ ಮಧ್ಯಮ ವರ್ಗದ ಜನರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದೆ. ಆಹಾರ, ವಸತಿ, ಶಿಕ್ಷಣ, ಸಂಪರ್ಕ ಸಮಾಧಾನಕರವಾಗಿದೆ. ಜೀವನ ಭದ್ರತೆಯು ಇದೆ. ಈಗ ಕ್ರೀಡಾ ಸಾಧನೆಗೆ ನಿಜಕ್ಕೂ ಅನುಕೂಲಕರ ವಾತಾವರಣವಿದೆ. ಆದರೆ ಪೋಷಕರ ಆತಂಕ ಮತ್ತು ಸ್ವಾರ್ಥ ಕ್ರೀಡಾ ಕ್ಷೇತ್ರ ನಿರೀಕ್ಷಿತ ವೇಗದಲ್ಲಿ ಬೆಳವಣಿಗೆ ಕಾಣುತ್ತಿಲ್ಲ……
ಖ್ಯಾತ ಕ್ರಿಕೆಟ್ ಆಟಗಾರ, ಭಾರತದ ಗೋಡೆ ಎಂದು ಹೆಸರಾಗಿದ್ದ ರಾಹುಲ್ ದ್ರಾವಿಡ್ ಆಟಗಾರರಿಗೆ ತರಬೇತಿಯ ಸಮಯದಲ್ಲಿ ಈ ಒಂದು ಉದಾಹರಣೆ ನೀಡುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಓದಿದ್ದೇನೆ. ಅದರ ಸಾರಾಂಶ…….
ಚೀನಾ ದೇಶದ ಕಾಡಿನಲ್ಲಿ ಒಂದು ಸಸ್ಯ ಇದೆಯಂತೆ. ಅದನ್ನು ಸುಮಾರು 20 ವರ್ಷಗಳಷ್ಟು ದೀರ್ಘಕಾಲ ನೀರೆರೆದು ಪೋಷಿಸಿ ಹೆಚ್ಚು ಆರೈಕೆ ಮಾಡಿದರೆ ಕೇವಲ ಒಂದು ಮೀಟರ್ ಎತ್ತರ ಬೆಳೆಯುವುದಂತೆ. ಆದರೆ ನಂತರದ ಎರಡು ವರ್ಷಗಳಲ್ಲಿ ತಾನೇ ಸುಮಾರು 25/30 ಮೀಟರ್ ಎತ್ತರ ಬೆಳೆಯುವುದಂತೆ……..
ಶ್ರಮ, ತಾಳ್ಮೆ, ಏಕಾಗ್ರತೆ ಮತ್ತು ನಿರಂತರ ಪ್ರಯತ್ನ ಮಾಡಿದರೆ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂಬುದನ್ನು ಆಟಗಾರರಿಗೆ ಮನವರಿಕೆ ಮಾಡಿಕೊಡಲು ಈ ಕಥೆ ಅಥವಾ ವೈಜ್ಞಾನಿಕ ಸತ್ಯ ಹೇಳಿದ್ದಾರೆ.
ಸಾಕಷ್ಟು ವಾಸ್ತವಕ್ಕೆ ಹತ್ತಿರವಾಗಿದೆ ಎಂದು ಅನಿಸುವುದಿಲ್ಲವೇ…
ಯಾವುದೇ ವ್ಯಕ್ತಿಯ, ಯಾವುದೇ ಸಂಸ್ಥೆ – ಸಂಘಟನೆಯ, ಯಾವುದೇ ಕ್ಷೇತ್ರದ ಯಶಸ್ಸು ಸುಲಭವಾಗಿ ದಕ್ಕುವುದಿಲ್ಲ. ಐಎಎಸ್ ಐಪಿಎಸ್ ಮುಂತಾದ ಸ್ಪರ್ಧಾ ಪರೀಕ್ಷೆಗಳಾಗಲಿ, ಕ್ರೀಡಾ ಕ್ಷೇತ್ರದ ಸಾಧನೆಯಾಗಲಿ, ಸಾಹಿತ್ಯ ಸಂಗೀತ ಸಿನಿಮಾ ವಿಜ್ಞಾನ ರಂಗದಲ್ಲಾಗಲಿ, ರಾಜಕೀಯ, ವ್ಯಾಪಾರ ವ್ಯವಹಾರಗಳಲ್ಲಾಗಲಿ, ಸಂಘ ಸಂಸ್ಥೆ ಸಮಾಜ ಸೇವೆ ಹೋರಾಟಗಳಲ್ಲಾಗಲಿ ಎಲ್ಲದಕ್ಕೂ ಈ ಕಥೆ ಏಕಪ್ರಕಾರವಾಗಿ ಅನ್ವಯಿಸುತ್ತದೆ…….
ನಿರಂತರತೆಯ ಜೊತೆಗೆ ಸಮರ್ಪಣಾ ಮನೋಭಾವವೂ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಮತ್ತು ಶೀಘ್ರ ಪ್ರತಿಫಲದ ನಿರೀಕ್ಷೆ ಮಾಡಬಾರದು.
ಇದಕ್ಕೆ ಅನೇಕ ನಿದರ್ಶನಗಳು ನಮ್ಮ ನಡುವೆ ಕಾಣಸಿಗುತ್ತವೆ. ಸೋಲು – ಸಾವಿನ ಅಂಚಿಗೆ ತಲುಪಿಯೂ ನಿರಾಶರಾಗದೆ ಮತ್ತೆ ಚೇತರಿಸಿಕೊಂಡು ಸತತ ಮತ್ತು ಪ್ರಾಮಾಣಿಕ ಪ್ರಯತ್ನದ ಫಲವಾಗಿ ಯಶಸ್ವಿಯಾದ ಉದಾಹರಣೆಗಳು ಸಹ ನಮ್ಮ ನಡುವೆ ಸಾಕಷ್ಟು ಇವೆ. ಯಶಸ್ಸು ಮತ್ತು ವಿಫಲತೆಯ ನಡುವಿನ ಶ್ರಮದ ಅಂತರ ಸದಾ ನಮ್ಮ ಗಮನದಲ್ಲಿರಲಿ…….
ಸಮಾಜ ನಮ್ಮ ನಿರೀಕ್ಷೆಯಂತೆ ಅಥವಾ ನಮ್ಮ ನಿಯಂತ್ರಣದಲ್ಲಿ ಇರುವುದಿಲ್ಲ. ಆದರೆ ನಮ್ಮನ್ನು ನಾವು ನಿಯಂತ್ರಿಸಿಕೊಳ್ಳಲು ಸಾಧ್ಯ……
ಕ್ರೀಡೆ ಸೋಲು ಗೆಲುವು ಅವಮಾನ ನಿರಾಸೆ ಕೋಪ ದ್ವೇಷ ಅಸೂಯೆ ಸಂಭ್ರಮ ಎಲ್ಲವನ್ನೂ ಒಳಗೊಂಡ ಒಂದು ವಿಜ್ಞಾನವೂ ಹೌದು. ಅದರಲ್ಲಿ ಬದುಕಿನ ಅನೇಕ ಪಾಠಗಳು ಅಡಗಿವೆ.
ಇದ್ದಕ್ಕಿದ್ದಂತೆ ಬದಲಾಗುವ ತಿರುವುಗಳು, ಏರಿಳಿತಗಳು, ಪ್ರೇಕ್ಷಕರ ಪ್ರತಿಕ್ರಿಯೆಗಳು, ಅನಿರೀಕ್ಷಿತಗಳು, ಅನಿವಾರ್ಯಗಳು, ವಿರುದ್ಧ ತಂಡದ ಒತ್ತಡಗಳು, ಅಂಪೈರುಗಳ ಸರಿ – ತಪ್ಪು ನಿರ್ಣಯಗಳು, ಅದೃಷ್ಟದಾಟ ಎಲ್ಲವೂ ಬದುಕಿಗೆ ಪಾಠವಾಗುತ್ತಾ ಸಾಗುತ್ತದೆ……
ನೋಡುವ ದೃಷ್ಟಿಕೋನ, ಆಸಕ್ತಿ, ಗ್ರಹಿಕೆಯ ಸಾಮರ್ಥ್ಯ, ಮನಸ್ಸಿನ ವಿಶಾಲತೆ, ಭಾವನೆಗಳ ಶುದ್ದತೆ, ತಾಳ್ಮೆ ಇಲ್ಲಿ ಮುಖ್ಯವಾಗುತ್ತದೆ. ಜೊತೆಗೆ ನಮ್ಮ ಕ್ರಿಯೆ ಪ್ರತಿಕ್ರಿಯೆಗಳು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ…..
ಸುಮಾರು 140 ಕೋಟಿ ಜನಸಂಖ್ಯೆಯನ್ನು ಹೊಂದಿರುವ ನಮ್ಮ ನಿಮ್ಮೆಲ್ಲರ ದೇಶ ಭಾರತ ಭ್ರಷ್ಟಾಚಾರ, ಸೋಮಾರಿತನ, ಜಾತಿ ಪದ್ದತಿ, ಕೇವಲ ಹಣಗಳಿಕೆಯ ವ್ಯಾಮೋಹ, ಚುನಾವಣಾ ಅಕ್ರಮ ಎಲ್ಲವನ್ನೂ ಮೀರಿ ಕ್ರೀಡೆಗಳೂ ಸೇರಿ ಎಲ್ಲಾ ಕ್ಷೇತ್ರಗಳಲ್ಲಿ ಆದಷ್ಟು ಬೇಗ ವಿಶ್ವಮಟ್ಟದ ಸಾಧನೆ ಮಾಡುವಂತಾಗಲಿ…….
ನಮ್ಮ ಮಕ್ಕಳು ಒಳ್ಳೆಯ ಮನೆ, ಉದ್ಯೋಗ, ಆಸ್ತಿ, ಒಡವೆ, ವಾಹನ, ಭರ್ಜರಿ ಮದುವೆ, ಪಾರ್ಟಿ ಮುಂತಾದ ಐಹಿಕ ಸುಖ ಭೋಗಗಳ ಜೊತೆಗೆ ಈ ರೀತಿಯ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸಹ ಹೆಚ್ಚು ತೊಡಗಿಸಿಕೊಂಡು ದೇಶದ ಘನತೆಯನ್ನು ಕಾಪಾಡುವಂತಾಗಲಿ…..
ದೇವರು, ಧರ್ಮ, ಜಾತಿ, ಭಾಷೆ ಸಂಘರ್ಷಗಳಲ್ಲಿಯೇ ತಮ್ಮನ್ನು ಹೆಚ್ಚು ಯೋಚಿಸುವಂತೆ ಮಾಡಿಕೊಂಡು, ವಿವಿಧ ಚಟಗಳಿಗೆ ದಾಸರಾಗಿ, ರಾಜಕಾರಣಿಗಳಿಗೆ, ಸಿನಿಮಾ ನಟನಟಿಯರಿಗೆ ಜೈಕಾರ ಹಾಕುತ್ತಾ, ಸಾಮಾಜಿಕ ಜಾಲತಾಣಗಳ ಕಾಮಿಡಿಗಳಿಗೆ, ವಿಕೃತಗಳಿಗೆ ಹೆಚ್ಚು ಆಕರ್ಷಿತರಾಗಿ ನಮ್ಮ ಸಮಯವನ್ನು ಹಾಳು ಮಾಡಿಕೊಂಡು ವ್ಯರ್ಥ ಮಾಡುವುದಕ್ಕಿಂತ ಮತ್ತಷ್ಟು ಪ್ರಯೋಜನಕಾರಿ ಜೀವನವನ್ನು ರೂಪಿಸಿಕೊಂಡು ಸಾಧಕರಾಗುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸೋಣ ಎಂಬ ಸಂಕಲ್ಪವನ್ನು ಈಗಿನಿಂದಲೇ ಕೈಗೊಂಡು ಕಾರ್ಯ ಪ್ರವೃತ್ತರಾಗೋಣ……
ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾ ಪಟುಗಳಿಗೆ ಅಭಿನಂದನೆಗಳು……………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068……..