Spread the love

ಕುಂದಾಪುರ: ದಿನಾಂಕ :07-10-2023(ಹಾಯ್ ಉಡುಪಿ ನ್ಯೂಸ್) ಕುಂದಾಪುರದ ಬನ್ಸ್ ರಾಘು ಎಂಬವನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಗಳನ್ನು ಕುಂದಾಪುರ ಪೊಲೀಸರ ವಿಶೇಷ ತಂಡ ಶಿವಮೊಗ್ಗದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

            ದಿನಾಂಕ 01-10-2023 ಭಾನುವಾರದಂದು ಕುಂದಾಪುರದ ಚಿಕ್ಕನ್ ಸಾಲ್ ರೋಡಿನಲ್ಲಿ ರಾಘವೇಂದ್ರ ಶೇರಿಗಾರ್ ಯಾನೆ ಬನ್ಸ್ ರಾಘುರವರು ಚೂರಿ ಇರಿತಕ್ಕೆ ಒಳಗಾಗಿ ಮೃತಪಟ್ಟಿದ್ದು ಆರೋಪಿತರು ಪರಾರಿಯಾಗಿದ್ದು ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣದಲ್ಲಿನ ಆರೋಪಿಗಳ ಪತ್ತೆ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯನ್ನು ಆಧಾರಿಸಿ ಆರೋಪಿತರ ಪತ್ತೆ ಬಗ್ಗೆ ಬೆಂಗಳೂರು, ಶಿವಮೊಗ್ಗ  ಕಡೆಗೆ ಎರಡು ಪೊಲೀಸರ ತಂಡ ತೆರಳಿದ್ದು ಆರೋಪಿತರಾದ ಶಫಿಉಲ್ಲ ಯಾನೆ ಆಟೋ ಶಫಿ ಪ್ರಾಯ 40 ವರ್ಷ, ಶಿವಮೊಗ್ಗ ಜಿಲ್ಲೆ ಮತ್ತು  ಮಹಮ್ಮದ್ ಇಮ್ರಾನ್ ಪ್ರಾಯ 43 ವರ್ಷ, ಶಿವಮೊಗ್ಗ ಜಿಲ್ಲೆ ಎಂಬವರನ್ನು ದಿನಾಂಕ 05-10-2023 ರಂದು ಶಿವಮೊಗ್ಗ ರೈಲ್ವೇ ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ.

         ಆರೋಪಿಗಳು ಮತ್ತು ಮೃತ ರಾಘವೇಂದ್ರ ಶೇರಿಗಾರ್ ಯಾನೆ ಬನ್ಸ್ ರಾಘುರವರಿಗೂ ವಾಹನ ತಾಗಿದ ವಿಚಾರಕ್ಕೆ ಗಲಾಟೆಯಾಗಿ ಆರೋಪಿತ ಶಫಿಉಲ್ಲಾ ಚಾಕುವಿನಿಂದ ರಾಘವೇಂದ್ರ ಶೇರಿಗಾರ್‌ರವರಿಗೆ ಇರಿದಿದ್ದು ರಾಘವೇಂದ್ರ ಶೇರಿಗಾರ್‌ರವರು ಮೃತಪಟ್ಟಿರುತ್ತಾರೆ.

ಆರೋಪಿಗಳು ಮತ್ತು ಮೃತರ ನಡುವೆ  ಬೇರೆ ಯಾವುದೇ ವೈಷಮ್ಯ, ಪೂರ್ವದ್ವೇಷ, ವ್ಯವಹಾರ ಮತ್ತು ಯಾವುದೇ ಸಂಘರ್ಷ ಇರುವುದು ಇದುವರೆಗಿನ ತನಿಖೆಯಿಂದ ಕಂಡುಬಂದಿರುವುದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ

. ಆರೋಪಿತ ಶಾಫಿ ಈತನಿಗೆ ಜುಗಾರಿ ಆಡುವ ಚಟವಿದ್ದು ಆತನ ಸ್ನೇಹಿತ ಇನ್ನೊಬ್ಬ ಆರೋಪಿತ ಇಮ್ರಾನ್‌ನನ್ನು ಜೊತೆಯಲ್ಲಿ ಕರೆದುಕೊಂಡು ಕಾರಿನಲ್ಲಿ ಬೇರೆ ಕಡೆ ಹೊಗಿ ಜುಗಾರಿ ಆಡುವುದಕ್ಕಾಗಿ ದಿನಾಂಕ 01-10-2023 ರಂದು ಅವರು ಕುಂದಾಪುರದಿಂದ ಶಿವಮೊಗ್ಗಕ್ಕೆ ಹೋಗುವಾಗ ಈ ಘಟನೆ ಸಂಭವಿಸಿದ್ದಾಗಿರುತ್ತದೆ ಎನ್ನಲಾಗಿದೆ. 

ಆರೋಪಿಗಳನ್ನು ದಿನಾಂಕ 06-10-2023 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಹೆಚ್ಚಿನ ತನಿಖೆಯ ಬಗ್ಗೆ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿರುತ್ತದೆ ಎಂದಿದ್ದಾರೆ.

          ಆರೋಪಿಗಳನ್ನು ಕುಂದಾಪುರ ಪೊಲೀಸ್ ಠಾಣೆಯ ಪಿ.ಎಸ್.ಐ ವಿನಯ ಕೊರ್ಲಹಳ್ಳಿ, ಶಂಕರನಾರಾಯಣ ಪೊಲೀಸ್ ಠಾಣೆಯ ಪಿ.ಎಸ್.ಐ ಮಧು. ಬಿ.ಇ ಹಾಗೂ ಸಿಬ್ಬಂದಿಯವರಾದ ಮಧು ಸೂದನ್, ರಾಮ, ಶ್ರೀಧರ್, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದರವರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

error: No Copying!