Spread the love

ಧರ್ಮಸ್ಥಳ: ಸ್ಥಾನಿಕ ಶಿವ ಬ್ರಾಹ್ಮಣ ಸನ್ಯಾಸೀ ಅರ್ಚಕರೇ ಅಣ್ಣಪ್ಪಯ್ಯರು, ಇವರೇ ಬಳಿಕ ಸ್ವಾಮಿಯಾಗಿ ಆರಾಧನೆಗೊಂಡರು

“ಕುಡುಮದಲ್ಲಿ ಭೂಮಾಲಕರಾಗಿ ಸ್ಥಾನಿಕರು ಬಾಳುತ್ತಿದ್ದರು. ಈ ಪ್ರದೇಶವು ಮೂಲಿವರ್ಗದ ದುರ್ಮುಖಿಚಿಟ್ಟೆ (ಮನೆತನದ ಹೆಸರು) ಪ್ರಕಾರದ ಅಣ್ಣಪ್ಪಯ್ಯನಿಗೆ ಸೇರಿತ್ತು. ಕದಿರೆಯ ಕೆರೆಯಲ್ಲಿದ್ದ ಶಿವಲಿಂಗವನ್ನು ತಂದು ಇಲ್ಲಿ ಸ್ಥಾಪಿಸಿ ಅದಕ್ಕೆ “ಮಂಜುನಾಥ ಸ್ವಾಮಿ” ಎಂದು ಹೆಸರಿಟ್ಟು ಆರಾಧಿಸಿದರೆಂದು ಪ್ರತೀತಿ. ಅಣ್ಣಪ್ಪಯ್ಯನ ನಂತರ ಲಿಂಗಯ್ಯ ಈ ಸ್ಥಳಕ್ಕೆ ಒಡೆಯನಾಗಿದ್ದನು. ದೇವಸ್ಥಾನವನ್ನು ಹಿಂದೆ ಸ್ಥಾನಿಕರೇ ನಡೆಸಿಕೊಂಡು ಪೂಜಾ ಕರ್ಮಾದಿಗಳನ್ನು ಮಾಡುತ್ತಿದ್ದರೆಂದು ಪ್ರತೀತಿ ಇದೆ.”

ಧರ್ಮಸ್ಥಳದ “ಹತ್ತಿರದ ಮಲರಮಾಡಿಯ ಆಸ್ತಿಯು, ನೆಲ್ಯಾಡಿ ಬೀಡಿನ ಬರ್ಮ ಪೆರ್ಗಡೆಗೆ ಸೇರಿತ್ತು”, “ಮಕ್ಕಳ ಕಟ್ಟಿನ ಜೈನ ಶೆಟ್ಟರಾದ ಇವರಿಗೆ ತುಳುನಾಡಿನ ಬಂಗರಾಜರು, ಬೈಲಂಗಡಿ ಮೂಲರು ಸಹಾಯ ಮಾಡುತ್ತಿದ್ದರು. 17ನೇ ಶತಮಾನದಲ್ಲಿ ಬಂಗರಾಜರ ಬಲಕುಂದಿ ಅವರು ನಂದಾವರದಲ್ಲಿ ಇದ್ದರು. ಬೈಲಂಗಡಿಯ ಮೂಲರು ಸೋಮಳಾದೇವಿಯ ಮರಣಾ ನಂತರ ಹೀನಸ್ಥಿತಿಗೆ ಬಂದರು. ಬೀಡುಗಳಲ್ಲಿ ಇದ್ದ ಜೈನಶೆಟ್ಟಿ ಬಲ್ಲಾಳರುಗಳು, ತಮ್ಮ ಬೇಳೆ ಬೇಯಿಸಿ ಆಸ್ತಿಗಳಿಕೆಗೆ ತೊಡಗಿದಾಗ, ನಂದಾವರದ ಬಂಗರಾಜರ ಆತ್ಮೀಯ, ಕುಮಾರಯ್ಯನು ಬಂಟ್ವಾಳದ ಪಠೇಲನಾಗಿ ನೇಮಕಗೊಂಡನು. ಅವನ ಕುಟುಂಬದವರು ಕುಡುಮದ ಹತ್ತಿರದ ಮಲರಮಾಡಿ (ನೆಲ್ಯಾಡಿ ಬೀಡಿನ ಸ್ವಲ್ಪ ದೂರದಲ್ಲಿ) ಇದ್ದರು. ಕುಡುಮದ ಸ್ಥಾನಿಕ ಬ್ರಾಹ್ಮಣರಿಗೂ, ಜೈನಶೆಟ್ಟಿಗಳಿಗೂ ಆಗಾಗ ಜಗಳ ಬರುತ್ತಿತ್ತು. ಸ್ಥಳ ಜಾಗದ ವಿಚಾರವಾಗಿ ಭಾರೀ ಹೊಯ್ದಾಟವಿತ್ತು.”
(ಕುಡುಮ – ಧರ್ಮಸ್ಥಳ / ಅನಂತರಾಮ ಬಂಗಾಡಿ / 2018)

ಸರಿಸುಮಾರು ಇದೇ ಕಾಲಘಟ್ಟದಲ್ಲಿ, ಹೇಗಾದರೂ ಮಾಡಿ ಟಿಪ್ಪುವನ್ನು ಸೋಲಿಸಲೇಬೇಕೆಂದು ಬ್ರಿಟೀಷರು ಪಣತೊಟ್ಟರು. ಬಂಟ್ವಾಳದ ಪಠೇಲ ಕುಮಾರಯ್ಯನ ಮೂಲಕ ಟಿಪ್ಪುವಿನ ಕುರಿತು ಮಾಹಿತಿ ಸಂಗ್ರಹಿಸಿದ ಬ್ರಿಟೀಷರು, ಟಿಪ್ಪು ಜಮಾಲಾಬಾದ್ ಕೋಟೆಯ ಉಗ್ರಾಣದಲ್ಲಿ ಸಂಗ್ರಹಿಸಿಟ್ಟಿದ್ದ ಮದ್ದುಗುಂಡುಗಳನ್ನು ಫಿರಂಗಿ ಇಟ್ಟು ಸ್ಪೋಟಿಸಿದರು. ಬಳಿಕ ಟಿಪ್ಪುವಿನ ಸೈನಿಕರನ್ನು ಸೆರೆಹಿಡಿದು ಗಲ್ಲಿಗೇರಿಸಿದರು. ಈ ವಿಶೇಷ ಕಾರ್ಯಾಚರಣೆಗೆ ತಮ್ಮ ಜೊತೆಗೆ ಪೂರ್ಣವಾಗಿ ಸಹಕರಿಸಿದ ಕುಮಾರಯ್ಯನಿಗೆ ಬ್ರಿಟೀಷರು ಪ್ರತಿಫಲವಾಗಿ ಸ್ಥಾನಿಕ ಬ್ರಾಹ್ಮಣರ ಕುಡುಮ ಮತ್ತು ಇದಕ್ಕೆ ಸಂಬಂಧಿಸಿದ ಎಲ್ಲಾ ಆಸ್ತಿಗಳನ್ನೂ ಕೊಟ್ಟರು.

1797ರವರೆಗೂ ಕುಡುಮದ ಮಂಜುನಾಥ ಸ್ವಾಮಿ ದೇವಸ್ಥಾನದ ಆಡಳಿತವಿದ್ದುದು ಸ್ಥಾನಿಕ ಶಿವ ಬ್ರಾಹ್ಮಣ ಕುಟುಂಬದವರ ಕೈಯ್ಯಲ್ಲಿಯೇ. ಇದೇ ಕುಟುಂಬಕ್ಕೆ ಸೇರಿದ ಅಣ್ಣಪ್ಪಯ್ಯನವರ ಅಧಿಕಾರದ ಅವಧಿಯಲ್ಲಿ ಇವರೇ ಇಲ್ಲಿ ಪೂಜಾ ಕರ್ಮಾದಿಗಳನ್ನು ಮಾಡುತ್ತಿದ್ದರು. ಸನ್ಯಾಸಿಯೂ ಆಗಿದ್ದ ಇವರನ್ನು ಒಂದು ಹಂತದಲ್ಲಿ ಇಲ್ಲಿನ ಅಧಿಕಾರಕ್ಕಾಗಿ ನಡೆದ ಸಂಘರ್ಷದಲ್ಲಿ ಮೋಸದಿಂದ ಅತ್ಯಂತ ವ್ಯವಸ್ಥಿತವಾಗಿ ಮುಗಿಸಲಾಯಿತು‌. ಅನಂತರದ ದಿನಗಳಲ್ಲಿ ಕಂಡುಬಂದ ವಿವಿಧ ತೊಂದರೆಗಳಿಗೆ ಪರಿಹಾರಾರ್ಥವಾಗಿ ಇವರನ್ನು ಮುಗಿಸಿದವರೇ ಇವರಿಗೆ ಗುಡಿ ನಿರ್ಮಿಸಿ ಆರಾಧಿಸಲು ಶುರು ಮಾಡಿದರಂತೆ. ಮಾತ್ರವಲ್ಲ, ಪ್ರಾಯಶ್ಚಿತ್ತಾರ್ಥವಾಗಿ ವಿವಿಧ ಕಾರ್ಯಕ್ರಮಗಳನ್ನು ಆರಂಭಿಸಿದರಂತೆ.

ಈ ಮೇಲಿನ ಅಮೂಲ್ಯ ಮಾಹಿತಿಗಳ ಜೊತೆಗೆ ಇದಕ್ಕೆ ಸಂಬಂಧಿಸಿದ ಇನ್ನಷ್ಟೂ ಮಾಹಿತಿಗಳನ್ನು ಸ್ಥಾನಿಕ ಶಿವ ಬ್ರಾಹ್ಮಣರ ಮನೆಗಳ ಹಿರಿಯರು ಆತ್ಮೀಯರಾಗಿ ಕೇಳಿದಾಗ ಮೌಖಿಕವಾಗಿ ತಿಳಿಸುತ್ತಾರೆ. ಲಿಖಿತ ಸಾಹಿತ್ಯ, ದಾಖಲಾತಿಗಳಷ್ಟೇ ಅಮೂಲ್ಯವಾದದ್ದು ಪರಂಪರೆಯಿಂದ ಹರಿದುಬಂದ, ಹರಿದುಬರುವ ಮೌಖಿಕ ಮಾಹಿತಿಗಳಾಗಿವೆ. ಇಂಥಾ ಮಾಹಿತಿಗಳನ್ನೂ ದಾಖಲಿಸುವುದು ಇತಿಹಾಸದ ದಾಖಲೀಕರಣ ಪ್ರಕ್ರಿಯೆಯಲ್ಲಿಅತೀ ಅಗತ್ಯವಾದುದೂ ಆಗಿದೆ.

ಪ್ರಸ್ತುತ, ಶ್ರೀ ಮಂಜುನಾಥೇಶ್ವರ ದೇವಸ್ಥಾನದ ಅಡಿಸ್ಥಳವೂ (ಸರ್ವೇ ನಂಬ್ರ 188/ 1.72 ಎಕರೆ) ಡಿ‌ ವೀರೇಂದ್ರ ಹೆಗ್ಗಡೆಯವರ ಸ್ವಂತ ಹೆಸರಿನಲ್ಲಿದೆ. ಆದರೆ 1974ರ ವರೆಗೂ ದೇವಸ್ಥಾನಕ್ಕೆ ಸೇರಿದ ಆಸ್ತಿಗಳೂ ಶ್ರೀ ಕ್ಷೇತ್ರದ ಪಾರಂಪರಿಕ ಆಸ್ತಿಯೆಂದೇ ದಾಖಲಾಗಿತ್ತು.
(ಜನತಾ ನ್ಯಾಯಾಲಯದ ಮುಂದೆ ಬಯಲಾದ ಹೆಗ್ಗಡೆ ಕರ್ಮಕಾಂಡ / ಸತ್ಯಮೇವ ಜಯತೇ ಸಂಘಟನೆಗಳ ಒಕ್ಕೂಟ – ಕರ್ನಾಟಕ, ನಾಗರಿಕ ಸೇವಾ ಟ್ರಸ್ಟ್ , ಗುರುವಾಯನಕೆರೆ / 2023)

ಈ ಎಲ್ಲಾ ಲಿಖಿತ ದಾಖಲೆಗಳು ಮತ್ತು ಪರಂಪರೆಯಿಂದ ಹರಿದು ಬಂದ ಮೌಖಿಕ ಮಾಹಿತಿಗಳ ಪ್ರಕಾರ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನವು ಒಂದು ಸಾರ್ವಜನಿಕ ದೇವಸ್ಥಾನ ಎಂಬುದು ಸ್ಪಷ್ಟವಾಗುತ್ತದೆ.

(ಮುಂದುವರಿಯುವುದು)

~ ಶ್ರೀರಾಮ ದಿವಾಣ, ಉಡುಪಿ.

error: No Copying!