Spread the love

ಸೌಜನ್ಯಾ ಹೋರಾಟ: ಸಿಬಿಐ ತನಿಖೆಯ ಆದೇಶದೊಂದಿಗೆ ಮುಗಿದಿತ್ತು – ಕಾವಲು ನಾಯಿಗಳಾಗಬೇಕಿತ್ತು….

ಧರ್ಮಸ್ಥಳದ ಸೌಜನ್ಯ ರೇಪ್ & ಮರ್ಡರ್ ಪ್ರಕರಣ ಖಂಡಿಸಿ ಮತ್ತು ಸಿಓಡಿ, ಸಿಬಿಐ ತನಿಖೆಗೆ ಒತ್ತಾಯಿಸಿ ಬೆಳ್ತಂಗಡಿಯಲ್ಲಿ, ಬೆಳ್ತಂಗಡಿಯ ಸಂಘಟನೆಗಳಿಂದ ಮಾತ್ರವಲ್ಲ, ರಾಜ್ಯದ ವಿವಿಧ ತಾಲೂಕು, ಜಿಲ್ಲೆಗಳಲ್ಲೂ ಹಲವಾರು ಸಂಘಟನೆಗಳಿಂದ ಹೋರಾಟ ನಡೆದಿತ್ತು. ವಿದ್ಯಾರ್ಥಿಗಳು ಹಾಗೂ ಮಹಿಳೆಯರೂ ಹೋರಾಟ ನಡೆಸಿದ್ದಾರೆ.

ಇದೇ ಅವಧಿಯಲ್ಲಿ ಧರ್ಮಸ್ಥಳದ ಡಿ. ವೀರೇಂದ್ರ ಹೆಗ್ಗಡೆ ಪರವಾಗಿ, ಅವರನ್ನು ಬೆಂಬಲಿಸಿ ಬೆಳ್ತಂಗಡಿ, ಮಂಗಳೂರು, ಉಡುಪಿಯಲ್ಲಿ ಬೃಹತ್ ಪ್ರತಿಭಟನೆಗಳು ನಡೆದುವು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರು, ಜನಪ್ರತಿನಿಧಿಗಳು, ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಸಹಿತ ವಿವಿಧ ಮಠಾಧೀಶರು, ಸಂಘ ಪರಿವಾರದ ನಾಯಕರು, ಉದ್ಯಮಿಗಳು, ಗಣ್ಯರು ಹೆಗ್ಗಡೆ ಪರ ಸಮಾವೇಶಗಳಲ್ಲಿ ಭಾಗವಹಿಸಿದ್ದರು ಮತ್ತು ಅವರಿಗೆ ಬೆಂಬಲ ವ್ಯಕ್ತಪಡಿಸಿ ಹೇಳಿಕೆಗಳನ್ನು ನೀಡಿದ್ದರು. ಹಾಲಿ – ಮಾಜಿ ಮಂತ್ರಿಗಳು ಹೆಗ್ಗಡೆ ಪರವಾಗಿದ್ದು ಅವರ ಬೆನ್ನಿಗೆ ನಿಂತಿದ್ದರು. ಬೆಳ್ತಂಗಡಿಯಲ್ಲಿ ನಡೆದ ಹೆಗ್ಗಡೆ ಪರ ಸಭೆಯಲ್ಲಿ ಸೌಜನ್ಯಾಳ ತಾಯಿ ಕುಸುಮಾವತಿಯವರ ತಂದೆ ಬಾಬು ಗೌಡರೂ ಭಾಗವಹಿಸಿದ್ದರು. ಇಂಥ ಸಭೆಗಳನ್ನು ನಿಜಕ್ಕೂ ನಡೆಸಲೇಬಾರದಿತ್ತು. ಯಾವುದೇ ಒತ್ತಡವಿಲ್ಲದೆ ನಡೆಯಬೇಕಾದ ತನಿಖಾ ಕಾರ್ಯಕ್ಕೆ ಸಭೆಗಳು ಆತಂಕವನ್ನು ಉಂಟುಮಾಡಿತು. ಸಿಓಡಿ ಮತ್ತು ಸಿಬಿಐ ತನಿಖಾಧಿಕಾರಿಗಳ ತನಿಖೆಯಲ್ಲಿ ಪಕ್ಷಪಾತವಾಗಲು ರಾಜಕೀಯ ಒತ್ತಡ, ಸೂಟ್ಕೇಸ್ ಮಹಿಮೆ, ಜೀವಭಯದ ಜೊತೆಗೆ ಹೆಗ್ಗಡೆ ಪರವಾಗಿ ನಡೆದ ಸಮಾವೇಶಗಳಲ್ಲಿ ಭಾಗಿಗಳಾದ ಪ್ರತಿಯೊಬ್ಬರ ಪಾಲೂ ಇದೆ, ಇದ್ದೇ ಇರುತ್ತದೆ.

ಕೊನೆಗೂ ರಾಜ್ಯ ಸರಕಾರ ಸೌಜನ್ಯಾ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿತು. ಇಲ್ಲಿಂದ ಬಳಿಕ ಸೌಜನ್ಯಾ ನ್ಯಾಯಪರ ಹೋರಾಟಗಳು ತಣ್ಣಗಾಯಿತು. ಇದು ಸಹಜ. ಇದರಲ್ಲೇನೂ ಆಶ್ಚರ್ಯವಿಲ್ಲ. ಆದರೆ ಸಿಓಡಿ ಮತ್ತು ಸಿಬಿಐ ತನಿಖೆಗಳ ಅವಧಿಯಲ್ಲಿ ಸೌಜನ್ಯಾ ನ್ಯಾಯಪರ ಹೋರಾಟಗಾರರು (ಮುಖ್ಯವಾಗಿ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ನಾಯಕರು) ಕಾವಲುನಾಯಿಗಳಂತೆ ಕೆಲಸ ಮಾಡಲು ವಿಫಲರಾದರು. ಪ್ರಕರಣದ ತನಿಖಾ ಪ್ರಕ್ರಿಯೆಯಲ್ಲಿ ಅನ್ಯಾಯವಾಗಲು, ನ್ಯಾಯ ಸಿಗದಿರಲು ಕಾರಣವಾದ ವಿವಿಧ ಕಾರಣಗಳ ಪೈಕಿ ಒಂದು ಕಾರಣವೆಂದು ಗುರುತಿಸುವುದಾದರೆ ಅದು; ಹೋರಾಟಗಾರರು ಅಧಿಕಾರಿಗಳ ತನಿಖಾ ಪ್ರಕ್ರಿಯೆಗಳಲ್ಲಿನ ಲೋಪಗಳನ್ನು ಸಾರ್ವಜನಿಕರ ಮತ್ತು ಸರಕಾರದ ಗಮನಕ್ಕೆ ತರಲು ವಿಫಲವಾದದ್ದು. ಕಾಲಕಾಲಕ್ಕೆ ಮಧ್ಯಪ್ರವೇಶ ಮಾಡಬಹುದಿತ್ತು. ಮತ್ತು ಈ ಅವಧಿಯಲ್ಲಿ ನಡೆದ ಅನ್ಯಾಯಗಳನ್ನು ಮುಂದಿಟ್ಟುಕೊಂಡೂ ಸಾರ್ವಜನಿಕ ಹೋರಾಟ ನಡೆಸಬೇಕಿತ್ತು. ಹೀಗೆ ಮಾಡುವಲ್ಲಿ ಹೋರಾಟಗಾರರು ಆಸಕ್ತಿವಹಿಸದೇ ಹೋದುದು ಒಂದು ಗಂಭೀರಲೋಪವೆಂದೇ ಹೇಳಬಹುದು.

ಸಿಓಡಿ ಮತ್ತು ಸಿಬಿಐ ಅಧಿಕಾರಿಗಳು ಏನು ಮಾಡಬೇಕಿತ್ತು, ಏನೆಲ್ಲಾ ಮಾಡಿದರು, ಏನೆಲ್ಲಾ ಮಾಡಿಲ್ಲ ಎಂಬುದು ಬಹಿರಂಗ ಚರ್ಚೆ ಕಾಲಕಾಲಕ್ಕೇ ಆಗಬೇಕಿತ್ತು. ಸರಕಾರಕ್ಕೆ ತಿಳಿಸುವ ಕೆಲಸವೂ ಆಗಬೇಕಿತ್ತು. ತನಿಖಾಧಿಕಾರಿಗಳ ವರ್ಗಾವಣೆ ಇತ್ಯಾದಿಗಳಾದಾಗಲೂ ಯಾರೂ ಸಾರ್ವಜನಿಕವಾಗಿ ದೊಡ್ಡದಾಗಿ ಪ್ರಶ್ನಿಸಲೇ ಇಲ್ಲ. ಇಂಥಾ ಹಲವು ವಿಷಯಗಳಿವೆ. ಇಂಥ ಕೆಲ ಲೋಪಗಳನ್ನು ಗುರುತಿಸಿಕೊಂಡರೆ, ಮುಂದಕ್ಕೆ ಮರು ತನಿಖೆ ನಡೆಯುವ ಸಂದರ್ಭದಲ್ಲಿ ಹೋರಾಟಗಾರರು ಮಾಡಲೇಬೇಕಾದ ಕೆಲಸಗಳನ್ನು ಪಟ್ಟಿಮಾಡಿಕೊಂಡು ಏನಾದರೂ ಮಾಡಲು ಸಾಧ್ಯ. ಇಲ್ಲವಾದರೆ ಮುಂದೆಯೂ ತನಿಖಾಧಿಕಾರಿಗಳು ಸೂಟ್ಕೇಸ್ ಮಹಿಮೆ ಮತ್ತು ರಾಜಕೀಯ ಒತ್ತಡ, ಪ್ರಭಾವಗಳಿಗೆ ಒಳಗಾಗಿ ಅವರು ಬರೆದದ್ದೇ ತನಿಖೆಯಾಗಿಬಿಡುವ ಸಾಧ್ಯತೆ ಇದೆ. ಹೀಗಾದರೆ ಮತ್ತೆ ಐದೋ ಹತ್ತೋ ವರ್ಷ ತನಿಖೆ, ವಿಚಾರಣೆ ಇತ್ಯಾದಿ ನಡೆದು ಕೊನೆಗೂ ಹಿಂದಿನಂತೆಯೇ ಮುಕ್ತಾಯವಾದರೆ ಮತ್ತೆ ಬೊಬ್ಬೆ ಹೊಡೆದು ಪ್ರಯೋಜನವಾದರೂ ಏನು ?

ಕೇವಲ ಭಾಷಣಗಳಿಂದ ಈ ಪ್ರಕರಣದಲ್ಲಿ ಹೆಚ್ಚು ಪ್ರಯೋಜನ ಇಲ್ಲ. ಕಾನೂನು ಹೋರಾಟ ಮತ್ತು ಆಗಾಗ ಅನುಭವಿಗಳು ಹಾಗೂ ತಜ್ಞರ ಮಧ್ಯಪ್ರವೇಶದಿಂದ ಮಾತ್ರ ಏನಾದರೂ ಪ್ರಯೋಜನ ಆದೀತು.

2013ರಲ್ಲೇ ಹೋರಾಟಗಾರರು ಧರ್ಮಸ್ಥಳದಲ್ಲಿ ನಡೆದ ನೂರಾರು ಅಸಹಜ ಸಾವುಗಳು ಮತ್ತು ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಪಿ ಐ ಎಲ್ ಹಾಕುವುದಾಗಿ ಘೋಷಿಸಿದ್ದರು. ಈ ಘೋಷಣೆಗೂ ಈಗ ಹತ್ತು ವರ್ಷ ಕಳೆಯಿತು. ಆದರೆ ಪಿ ಐ ಎಲ್ ಹಾಕುವ ಕೆಲಸ ಮಾತ್ರ ಮಾಡಲೇ ಇಲ್ಲ.
(ಸಧ್ಯಕ್ಕೆ ಇಷ್ಟು ಸಾಕು)

~ ಶ್ರೀರಾಮ ದಿವಾಣ, ಉಡುಪಿ.

error: No Copying!