Spread the love

ಸೌಜನ್ಯಾ ಹೋರಾಟ: ಸಹಭಾಗಿತ್ವದಲ್ಲಿ ಜನ ಪಕ್ಷಪಾತ !

2012ರ ನವೆಂಬರ್ ಐದರಂದು ಧರ್ಮಸ್ಥಳದ ಸೌಜನ್ಯಾಳ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿ ಧೈರ್ಯ ನೀಡಿ ಹೋರಾಟದ ರಣಕಹಳೆ ಮೊಳಗಿಸಿದ ಕೇಮಾರು ಶ್ರೀ ಈಶ ವಿಠಲದಾಸ ಸ್ವಾಮೀಜಿ ಹಾಗೂ ತಿಮರೋಡಿ ಮಹೇಶ್ ಶೆಟ್ಟಿ ನೇತೃತ್ವದ ತಂಡ ಬಳಿಕ ಸರಿಸುಮಾರು ಒಂದು ವರ್ಷ ಕಾಲ ಯಾವುದೇ ಪ್ರತಿಭಟನಾ ಕಾರ್ಯಕ್ರಮಗಳನ್ನೂ ನಡೆಸಿದ್ದು ಕಂಡುಬರುವುದಿಲ್ಲ. ಈ ಸುಧೀರ್ಘ ಕಾಲ ಇವರೇಕೆ ಮೌನವಿದ್ದರು ಎಂಬ ಪ್ರಶ್ನೆ ಪ್ರಶ್ನೆಯಾಗಿಯೇ ಇದೆ. ಆದರೆ, 2013ರ ಅಕ್ಟೋಬರ್ 18ರಂದು ಬೆಳ್ತಂಗಡಿ ತಹಶೀಲ್ದಾರ್ ಕಚೇರಿ ಮುಂದೆ ಎಡ ದಲಿತ ಪ್ರಗತಿಪರ ಜನಪರ ಸಂಘಟನೆಗಳು ಆಯೋಜಿಸಿದ ಉಪವಾಸ ಸತ್ಯಾಗ್ರಹದಲ್ಲಿ ಕೇಮಾರು ಸ್ವಾಮೀಜಿ ಭಾಗವಹಿಸಿ ಮಾತಾಡಿದ್ದಾರೆ.

2013ರ ನವೆಂಬರ್ 25ರಂದು ಕೇಮಾರು ಸ್ವಾಮೀಜಿ ಹಾಗೂ ತಿಮರೋಡಿ ಮಹೇಶ್ ಶೆಟ್ಟಿ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ಬೃಹತ್ ಹೋರಾಟ ನಡೆಯಿತು. ಈ ಪ್ರತಿಭಟನೆಯಲ್ಲಿ ಸೌಜನ್ಯಾ ಮನೆಯವರಲ್ಲದೆ, ಖ್ಯಾತ ಕವಯಿತ್ರಿ, ಜನಪರ ಹೋರಾಟಗಾರ್ತಿ ಅತ್ರಾಡಿ ಅಮೃತಾ ಶೆಟ್ಟಿ, ಡಾ. ಬಿ. ಆರ್. ಹೆರಳೆ ಮೊದಲಾದವರು ಭಾಗವಹಿಸಿದ್ದರು. ಈ ಪ್ರತಿಭಟನೆಯೊಂದಿಗೆ ಕೇಮಾರು ಸ್ವಾಮೀಜಿ ಹಾಗೂ ತಿಮರೋಡಿ ಜಂಟಿ ನೇತೃತ್ವದ ಹೋರಾಟಕ್ಕೆ ಚಾಲನೆ ಸಿಕ್ಕಿತು. ಬಳಿಕ ಮಣಿಪಾಲ ಸಹಿತ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಕೆಲವೆಡೆಗಳಲ್ಲಿ ಸೌಜನ್ಯಾ ನ್ಯಾಯಪರ ಹೋರಾಟಗಳು ನಡೆದು ಸಿಬಿಐ ತನಿಖೆಗೆ ಒತ್ತಾಯಿಸಿದರು. ಇವರು ವಿವಿಧೆಡೆಗಳಲ್ಲಿ ನಡೆಸಿದ ಬಹುತೇಕ ಎಲ್ಲಾ ಪ್ರತಿಭಟನಾ ಸಭೆಗಳಲ್ಲೂ ಆಗ ಡಾ. ಹೆರಳೆ, ಅತ್ರಾಡಿ ಅಮೃತಾ ಮೊದಲಾದವರು ಭಾಗವಹಿಸಿ ಮಾತಾಡುತ್ತಿದ್ದರು.

ಎಡ, ದಲಿತ, ಮಹಿಳಾ, ವಿದ್ಯಾರ್ಥಿ, ಯುವಜನ ಕಾರ್ಮಿಕರು 2012ರ ಅಕ್ಟೋಬರ್ ನಲ್ಲಿ ಶುರುಮಾಡಿದ ಸೌಜನ್ಯಾ ನ್ಯಾಯಪರ ಹೋರಾಟವನ್ನು ನಿಲ್ಲಿಸಲೇ ಇಲ್ಲ. ತಾಲೂಕು, ಜಿಲ್ಲೆ, ರಾಜ್ಯ ಮಟ್ಟದಲ್ಲಿ ಹೋರಾಟಗಳನ್ನು ನಡೆಸಿದರು. ಸೌಜನ್ಯಾ ಪ್ರಕರಣದಲ್ಲಿ ನ್ಯಾಯ ಸಿಗಬೇಕೆಂದು ಬಯಸುವ ಪ್ರತಿಯೊಬ್ಬರೂ ಮೆಚ್ಚಿ ಅಭಿನಂದಿಸಲೇಬೇಕಾದ ರೀತಿಯಲ್ಲಿ ಈ ಸಂಘಟನೆಗಳ ಹೋರಾಟಗಳು ನಡೆದುವು.ಇತರರ ಎಲ್ಲಾ ಹೋರಾಟಗಳಿಗೂ ಮಾದರಿಯಾಗುವಂತಿತ್ತು ಇವರ ವಿವಿಧ ಹೋರಾಟಗಳು. ಯಾವುದೇ ಸ್ವಾರ್ಥವಿಲ್ಲದೆ ಅತ್ಯಂತ ಪ್ರಾಮಾಣಿಕವಾಗಿ ನಡೆದ ಇವರ ಹೋರಾಟಗಳಿಗೆ ಸೌಜನ್ಯ ನ್ಯಾಯಪರವೆಂದು ಹೇಳಿಕೊಳ್ಳುವ ತಾಲೂಕಿನ , ಜಿಲ್ಲೆಯ ಸೋಗಲಾಡಿ ಜನರು ಮಾತ್ರ ಸೂಕ್ತ ರೀತಿಯಲ್ಲಿ ಬೆಂಬಲಿಸದೆ ಹೋಗಿದ್ದು ಜನರ ಲೋಪಪೂರಿತ ಮನಸ್ಥಿತಿಗೆ ಸಾಕ್ಷಿ ಎನ್ನಬಹುದಷ್ಟೆ.

ನವೆಂಬರ್ ಒಂದರಂದು ರಾಜ್ಯೋತ್ಸವದ ದಿನ ಈ ಮೇಲಿನ ಸಂಘಟನೆಗಳು ಕರಿಪತಾಕೆ ಪ್ರದರ್ಶಿಸಿ, ಸಿಐಡಿ ತನಿಖಾ ವರದಿಯನ್ನು ಬೆಂಕಿಗೆ ಹಾಕಿ ಸುಟ್ಟು ಪ್ರತಿಭಟನೆ ದಾಖಲಿಸಿತು. ಇಲ್ಲಿ ಹೋರಾಟ ನಿರತರು ಬಂಧನಕ್ಕೂ ಒಳಗಾದರು. ನವೆಂಬರ್ 7ರಂದು ಬೆಳ್ತಂಗಡಿ ಸಹಿತ ರಾಜ್ಯದ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ ಸಿಐಟಿಯು ವತಿಯಿಂದ ಪ್ರತಿಭಟನಾ ಜಾಥಾ ಮತ್ತು ಬಹಿರಂಗ ಪ್ರತಿಭಟನಾ ಸಭೆ ನಡೆಯಿತು. ನವೆಂಬರ್ 14ರಂದು ಪಟ್ರಮೆಯಲ್ಲಿ ಪ್ರತಿಭಟನಾ ಜಾಥಾ ಮತ್ತು ಬಹಿರಂಗ ಸಭೆ ನಡೆಯಿತು. ನವೆಂಬರ್ 21 ರಿಂದ 26ರ ವರೆಗೆ ಧರ್ಮಸ್ಥಳದ ಪಾಂಗಾಳ ಮತ್ತು ಸುಳ್ಯದಿಂದ ಸಿಪಿಐಎಂ ವತಿಯಿಂದ ಎರಡು ಪ್ರತ್ಯೇಕ ಮಾರ್ಗಗಳಲ್ಲಿ ಎರಡು ಕಾಲ್ನಡಿಗೆ ಜಾಥಾಗಳು ಮಂಗಳೂರು ಡಿಸಿ ಕಚೇರಿವರೆಗೆ ನಡೆದುವು. ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪಶ್ಚಿಮ ಬಂಗಾಳದ ಸಿಪಿಐಎಂ ಸಂಸದರಾದ ಬಸುದೇವ ಆಚಾರ್ಯ ಅವರು ಭಾಗವಹಿಸಿದರು. ಇವರ ಹೋರಾಟ ಹೀಗೆ ನಿರಂತರವಾಗಿ ನಡೆಯಿತು‌. ಪ್ರಕರಣವನ್ನು ಜೀವಂತವಾಗಿ ಇರಿಸಿತು. ರಾಜ್ಯ ವ್ಯಾಪಕವಾಗಿ ಜನಜಾಗೃತಿ ಮೂಡಿಸಿತು.

ತುಳುನಾಡಿನ ದೊಡ್ಡ ಸಂಖ್ಯೆಯ ಜನರಲ್ಲಿ ನ್ಯಾಯಪರ ಕಾಳಜಿ, ನ್ಯಾಯಪರ ಮನಸ್ಥಿತಿಗಿಂತ ಹೆಚ್ಚು ದ್ವೇಷ ಮನಸ್ಥಿತಿ ಮನೆ ಮಾಡಿರುವುದು ರಹಸ್ಯ ವಿಷಯವೇನೂ ಅಲ್ಲ. ಕಳೆದ ಕೆಲ ದಶಕಗಳಿಂದ ಕೆಲ ಸಂಘಟನೆಗಳು ಅತ್ಯಂತ ವ್ಯವಸ್ಥಿತವಾಗಿ ಜನರಲ್ಲಿ ಈ ಮನಸ್ಥಿತಿಯನ್ನು ಬಿತ್ತುವಲ್ಲಿ ಯಶಸ್ವಿಯಾಗಿವೆ. ಹಾಗಾಗಿ ಜನರು ತಮ್ಮದು ನ್ಯಾಯಪರವೆಂದು ಹೇಳುತ್ತಾರಾದರೂ, ಈ ನ್ಯಾಯಪರ ಕಾಳಜಿಯೂ ಪಕ್ಷಪಾತದಿಂದ ಕೂಡಿರುತ್ತವೆ ಎಂಬುದು ಹಗಲಿನಷ್ಟೇ ಸ್ಪಷ್ಟ. ಆದರೆ ಧ್ವೇಷ ಮನಸ್ಥಿತಿಗೆ ಬಹಳ ಬೇಗನೇ ಇಲ್ಲಿನ ಜನರು ಸ್ಪಂದಿಸುವುದು ನಡೆಯುತ್ತಾಬಂದಿದೆ. ಇಂಥಾ ಕೆಲವು ಕಾರಣಗಳಿಂದಾಗಿ ಎಡ, ದಲಿತ, ಮಹಿಳಾ, ಕಾರ್ಮಿಕ, ಪ್ರಗತಿಪರ, ಜನಪರ, ವಿದ್ಯಾರ್ಥಿ – ಯುವಜನರು ಸೌಜನ್ಯಾ ನ್ಯಾಯಪರವಾಗಿ ನಿರಂತರವಾಗಿ ಮತ್ತು ನಿಸ್ವಾರ್ಥದಿಂದ ನಡೆಸಿಕೊಂಡು ಬಂದ ಹೋರಾಟಕ್ಕೆ ಸಾರ್ವಜನಿಕರು ನೀಡಿದ ಬೆಂಬಲ ಮಾತ್ರ ಕಡಿಮೆಯೆಂದೇ ಹೇಳಬಹುದು.

~ ಶ್ರೀರಾಮ ದಿವಾಣ, ಉಡುಪಿ.

error: No Copying!