Spread the love

ಸೌಜನ್ಯಾ ಹೋರಾಟ: ಕೇಮಾರು ಸ್ವಾಮೀಜಿ, ತಿಮರೋಡಿ ಸೌಜನ್ಯಾ ಮನೆಗೆ ಭೇಟಿ

2012ರ ಅಕ್ಟೋಬರ್ 9ರಂದು ಸೌಜನ್ಯಾಳನ್ನು ಬಲವಂತವಾಗಿ ಅಪಹರಿಸಿದ 4 – 5 ಜನರ ಗ್ಯಾಂಗ್, ಮಧ್ಯರಾತ್ರಿಯವರೆಗೂ ತೋಟದ ಮನೆಯೊಂದರಲ್ಲಿ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊನೆಗೆ ಕೊಂದಿತು. ಬಳಿಕ ಮರುದಿನ, ಅಂದರೆ ಅಕ್ಟೋಬರ್ 10ರಂದು ಬೆಳಕು ಹರಿಯುವ ಮೊದಲೇ, ಜನರು ಗಾಢ ನಿದ್ದೆಯಲ್ಲಿರುವ ಸಮಯದಲ್ಲಿ ಶವವನ್ನು ಕಾಡಿನಲ್ಲಿ ತಂದಿಟ್ಟು, ಕಾಡಿನಲ್ಲಿಯೇ ಯಾರೋ ಅತ್ಯಾಚಾರ ನಡೆಸಿ ಕೊಂದಂತೆ ಬಿಂಬಿಸುವ ಸನ್ನಿವೇಶವನ್ನು ಅಲ್ಲಿ ಕೃತಕವಾಗಿ ಸೃಷ್ಟಿಸಿ ನಿರ್ಗಮಿಸಿದ್ದಾರೆ. ಕೊಲೆಗಡುಕರ ತಂಡ ಸೌಜನ್ಯಾಳನ್ನು ಅಪಹರಿಸಿದ್ದು ನೇತ್ರಾವತಿ ಸ್ನಾನಘಟ್ಟದ ಸಮೀಪದ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಬಳಿಯಿಂದ. ಬಳಿಕ ಶವವನ್ನು ತಂದಿರಿಸಿದ್ದು ಸಹ ಇಲ್ಲಿಯೇ ಸಮೀಪದ ಕಾಡಿನಲ್ಲಿ. ಮಧ್ಯೆ ಸಾಮೂಹಿಕ ಅತ್ಯಾಚಾರವೆಸಗಿದ್ದು ಮಾತ್ರ ಸುಮಾರು 25 – 30 ಕಿಲೋ ಮೀಟರ್ ದೂರದ ತೋಟದ ಮನೆಯೊಂದರಲ್ಲಿ.

ಈ ಅಮಾನವೀಯ ಕ್ರೌರ್ಯದ ವಿರುದ್ಧ ಮೊತ್ತಮೊದಲು ಜನವಾದಿ ಮಹಿಳಾ ಸಂಘಟನೆ (JMS)ಯ ನಿಯೋಗವೊಂದು ಅಕ್ಟೋಬರ್ 12ರಂದು ಬೆಳ್ತಂಗಡಿ ತಾಲೂಕು ತಹಶೀಲ್ದಾರರ ಕಚೇರಿಗೆ ತೆರಳಿ ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿ ಆರೋಪಿಗಳ ಪತ್ತೆಗೆ ಮತ್ತು ಕಠಿಣ ಕ್ರಮಕ್ಕೆ ಒತ್ತಾಯಿಸಿತು. ಬಳಿಕ ಅಕ್ಟೋಬರ್ 17ರಂದು JMS, SFI ಮತ್ತು DYFI ಸಂಘಟನೆಗಳು ಸಂಯುಕ್ತವಾಗಿ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಿ ಸೌಜನ್ಯಾ ನ್ಯಾಯಪರವಾದ ಬಹಿರಂಗ ಹೋರಾಟಕ್ಕೆ ಚಾಲನೆ ನೀಡಿತು.

ಸೌಜನ್ಯಾ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮಂಗಳೂರಿನ ಇಬ್ಬರು ಪತ್ರಕರ್ತರಿಗೆ , ಈ ಪ್ರಕರಣದ ಹಿಂದೆ ಪ್ರಭಾವೀಗಳ ಅಭಿಮಾನಿಗಳು ಇರುವುದು ಮತ್ತು ಪ್ರಕರಣವನ್ನು ಶಾಶ್ವತವಾಗಿ ಮುಚ್ಚಿಹಾಕಲು ಪ್ರಭಾವಿಗಳು ತೆರೆಮರೆಯಲ್ಲಿ ಕೆಲಸ ಮಾಡಿರುವುದು ಸ್ಪಷ್ಟವಾಗಿತ್ತು. ಹಾಗಾಗಿ ಜನಪರ ಕಾಳಜಿಯಿಂದ ಆ ಇಬ್ಬರೂ ಪತ್ರಕರ್ತರು ಕೇಮಾರು ಸ್ವಾಮೀಜಿಗಳನ್ನು ಸಂಪರ್ಕಿಸಿ, ಅವರಿಗೆ ವಿಷಯದ ಗಂಭೀರತೆಯನ್ನು ಮನವರಿಕೆ ಮಾಡಿಕೊಟ್ಟರು. ಸಾರ್ವಜನಿಕ ಜನಜಾಗೃತಿಯ ಮೂಲಕ ಹೋರಾಟದ ರಂಗಕ್ಕೆ ಇಳಿಯಬೇಕೆಂಬ ಅವರ ಪ್ರೀತಿಯ, ಅಭಿಮಾನದ ವಿನಮ್ರ ವಿನಂತಿಯನ್ನು ಸ್ವಾಮೀಜಿ ಮನ್ನಿಸಿದರು ಹಾಗೂ ನವೆಂಬರ್ 2ರಂದು ಸೌಜನ್ಯಾ ಮನೆಗೆ ಭೇಟಿ ನೀಡುವ ಮೂಲಕ ಹೋರಾಟ ಆರಂಭಿಸಲು ನಿರ್ಧರಿಸಿದರು.

ನಿಗದಿಪಡಿಸಿದ ದಿನಾಂಕವನ್ನು ಕೇಮಾರು ಶ್ರೀ ಸಾಂದೀಪನಿ ಸಾಧನಾಶ್ರಮದ ಶ್ರೀ ವಿಠಲದಾಸ ಸ್ವಾಮೀಜಿಯವರು ಪತ್ರಕರ್ತರಿಗೆ ತಿಳಿಸಿಯೂ ಆಯಿತು. ಕರೆದರೆ ಯಾರೆಲ್ಲಾ ಬರುವ ಸಾಧ್ಯತೆ ಇತ್ತೋ ಅವರನ್ನೆಲ್ಲ ಕರೆಯುವ ಕೆಲಸವನ್ನೂ ಸ್ವಾಮೀಜಿಗಳು ಪ್ರಾರಂಭಿಸಿದ್ದರು.

ಕೇಮಾರು ಸ್ವಾಮೀಜಿಗಳು ತುಳುನಾಡಿನಲ್ಲಿ ಆರೆಸ್ಸೆಸ್ ಪರಿವಾರದ ಸಂಘಟನೆಗಳು ಆಯೋಜಿಸುವ ಸಭೆ ಸಮಾವೇಶಗಳಲ್ಲಿ ಭಾಗವಹಿಸಿ ಮಾತನಾಡುವ ಅತ್ಯಂತ ಪ್ರಮುಖ ಮತ್ತು ಖಾಯಂ ಸ್ವಾಮೀಜಿಗಳೇ ಆಗಿದ್ದರು. ಹಾಗಾಗಿ ಹಿಂದುತ್ವವಾದದ ಪ್ರತಿಪಾದಕ ಸಂಘಟನೆಗಳ ನಾಯಕರೆಲ್ಲರೊಂದಿಗೆ ಆತ್ಮೀಯ ಸಂಪರ್ಕ – ಸಂಬಂಧ ಹೊಂದಿದ್ದರು. ಆದರೆ, ಸೌಜನ್ಯಾ ನ್ಯಾಯಪರ ಹೋರಾಟಕ್ಕೆ ಮಾತ್ರ ಬಹುತೇಕ ಇವರಾರೂ ಸ್ವಾಮೀಜಿಯ ಜೊತೆಗೆ ಬರುವ ಸಾಧ್ಯತೆ ಇರಲಿಲ್ಲ. ಇದು ಸ್ವಾಮೀಜಿಗಳಿಗೂ ಬಹಳ ಚೆನ್ನಾಗಿಯೇ ಗೊತ್ತಿತ್ತು. ಮನುಷ್ಯತ್ವ ಮೊದಲು, ಅನ್ಯಾಯದ ವಿರುದ್ಧ ಧ್ವನಿ ಎತ್ತುವುದು ಆದ್ಯತೆ ಎಂಬ ನಿಲುವಿನವರಾದ ಕೇಮಾರು ಶ್ರೀಗಳು , ತನ್ನ ಜೊತೆಗೆ ಬರುವವರನ್ನು ಕರೆಯತೊಡಗಿದರು. ಹೀಗೆ ಸ್ವಾಮೀಜಿಗಳಿಂದ ಆಮಂತ್ರಿತರಾದವರಲ್ಲಿ ಒಬ್ಬರು ಪ್ರಮುಖ ನಾಯಕರೆಂದರೆ ತಿಮರೋಡಿ ಮಹೇಶ್ ಶೆಟ್ಟಿಯವರಾಗಿದ್ದರು.

ತಿಮರೋಡಿ ವಿರುದ್ಧ ಬೆಳ್ತಂಗಡಿ ಪೊಲೀಸರು ಜಾಮೀನು ರಹಿತ ಸೆಕ್ಷನ್ ಗಳಡಿಯಲ್ಲಿ ಕೇಸು ದಾಖಲಿಸಿದ್ದರು. ಪೊಲೀಸ್ ಕಾನ್ ಸ್ಟೇಬಲ್ ಓರ್ವ ಅವರಿಗೆ ಕಾಲ್ ಮಾಡಿ, “ಕೂಡಲೇ ತಲೆಮರೆಸಿಕೊಳ್ಳಿ, ಇಲ್ಲವಾದರೆ ನಕ್ಸಲ್ ಜೊತೆಗೆ ಸಂಪರ್ಕ ಇರುವುದಾಗಿ ಹೇಳಿ ಎನ್ ಕೌಂಟರ್ ಮಾಡ್ತಾರೆ” ಎಂದು ಹೆದರಿಕೆ ಹುಟ್ಟಿಸುವ ಕೆಲಸ ಮಾಡುವಲ್ಲಿ ಯಶಸ್ವಿಯೂ ಆದರು. ಪೊಲೀಸ್ ಇಲಾಖೆ, ಅಧಿಕಾರಿಗಳು ಅತ್ಯಂತ ವ್ಯವಸ್ಥಿತವಾಗಿ ಇಂಥ ಸುಳ್ಳು ಹೇಳುವ, ಹೆದರಿಕೆ ಹುಟ್ಟಿಸುವ ಕೆಲಸಗಳನ್ನೆಲ್ಲಾ ಮಾಡಲು, ಮಾಡಿಸಲು ಸಿದ್ಧಹಸ್ತರು. ಯಾವಾಗ ಏನು ಮಾಡಬೇಕೋ ಅದನ್ನವರು ಮಾಡಿಯೇ ತೀರುತ್ತಾರೆ. ತಿಮರೋಡಿಯವರು ಸ್ವಲ್ಪವೂ ತಡಮಾಡಲಿಲ್ಲ, ಯೋಚಿಸುವ ಅಥವಾ ಕ್ರಾಸ್ ಚೆಕ್ ಮಾಡುವ ಪರಿಸ್ಥಿತಿಯಲ್ಲೂ ಅವರಿರಲಿಲ್ಲ. ಸರಿ, ತಿಮರೋಡಿಯವರು ಸ್ವಲ್ಪವೂ ತಡಮಾಡದೆ ಮನೆಯಿಂದ ಕಾಲ್ಕಿತ್ತು, ತಲೆಮರೆಸಿಕೊಂಡರು. ನಿರೀಕ್ಷಣಾ ಜಾಮೀನಿಗಾಗಿ ಕಾನೂನು ಪ್ರಕ್ರಿಯೆ ಶುರುಮಾಡಿದರು.

ಕೇಮಾರು ಸ್ಚಾಮೀಜಿಗಳ ಆತ್ಮೀಯ, ಪ್ರೀತಿಯ ಕರೆಗೆ ತಿಮರೋಡಿ ಸಮ್ಮತಿ ವ್ಯಕ್ತಪಡಿಸಿದರು. ಆದರೆ ಎರಡು ದಿನ, ಎರಡೇ ಎರಡು ದಿನ ಮುಂದೂಡುವಂತೆ ಕೇಳಿಕೊಂಡರು. ಈ ಕಾರಣಕ್ಕೆ, ನವೆಂಬರ್ 2 ಎಂದು ನಿಗದಿಯಾಗಿದ್ದ ಕಾರ್ಯಕ್ರಮ ನವೆಂಬರ್ 5 ಎಂದು ಮರು ನಿಗದಿಯಾಯಿತು.

ಅಂದು ಕೇಮಾರು ಈಶ ವಿಠಲದಾಸ ಸ್ವಾಮೀಜಿಗಳು ಸೌಜನ್ಯಾಳ ಮನೆಗೆ ಭೇಟಿ ನೀಡಿದರು. ಅಂದು ಅವರೊಂದಿಗೆ ವಿವಿಧ ಸಂಘಟನೆಗಳ ನಾಯಕರುಗಳಾದ ತಿಮರೋಡಿ ಮಹೇಶ್ ಶೆಟ್ಟಿ, ಶಿವಕುಮಾರ್ ಕರ್ಜೆ, ಸದಾಶಿವ ಶೆಟ್ಟಿ ಸಹಿತ ಅನೇಕ ಮಂದಿ ಇದ್ದರು. 150 – 200 ಜನ ಕಾರ್ಯಕರ್ತರೂ ಇದ್ದರು. ಸೌಜನ್ಯಾಳ ಮನೆಯವರಿಗೆ ಸಾಂತ್ವಾನ ಹೇಳಿದ ಕೇಮಾರು ಶ್ರೀಗಳು, ಧೈರ್ಯ ನೀಡಿದರಲ್ಲದೆ, ಮಾಧ್ಯಮದವರ ಜೊತೆಗೂ ಮಾತನಾಡುವ ಮೂಲಕ ಹೋರಾಟದ ರಣಕಹಳೆ ಮೊಳಗಿಸಿಯೇಬಿಟ್ಟರು.

(ಮುಂದುವರಿಯುವುದು)

~ ಶ್ರೀರಾಮ ದಿವಾಣ, ಉಡುಪಿ .

error: No Copying!