ಮಗಳು ಪದ್ಮಲತಾ (17) ಕಾಲೇಜು ಬಿಟ್ಟು ಮನೆಗೆ ಬಾರದೆ ಕಾಣೆಯಾದ ಬಗ್ಗೆ ತಂದೆ ದೇವಾನಂದ್ ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರೆ, ಪೊಲೀಸರು ದೂರು ಸ್ವೀಕರಿಸಲು ನಿರಾಕರಿಸಿದರು. ಕಾನೂನು ಪಾಲಿಸದೆ ಗಂಭೀರ ಕರ್ತವ್ಯಲೋಪವೆಸಗಿದ ಪೊಲೀಸ್ ಅಧಿಕಾರಿಗಳು, ಅದರ ಮೇಲೆ ದೇವಾನಂದ್ ವಿರುದ್ಧವೇ ಹರಿಹಾಯ್ದರು. ಬಾಯಿಗೆ ಬಂದಂತೆ ಬೈಯ್ದುಬಿಟ್ಟರು. ಏನೇನೋ ಬೇಡದ್ದನ್ನು ಊಹಿಸಿಯೋ, ಅಥವಾ ಎಲ್ಲವನ್ನೂ ತಿಳಿದಿದ್ದು ದೇವಾನಂದರನ್ನು ಹಿಮ್ಮೆಟ್ಟಿಸುವ ದುರುದ್ಧೇಶದಿಂದಲೋ ಪದ್ಮಲತಾಳ ವ್ಯಕ್ತಿತ್ವಕ್ಕೆ ಹಾನಿ ಎಸಗುವ ಅಭಿಪ್ರಾಯಗಳನ್ನು ತಮ್ಮ ಅಸಹ್ಯ ನಾಲಿಗೆಯಲ್ಲಿ ಹೊರ ಹಾಕಿದ್ದರು ನೀಚ ಪೊಲೀಸರು.
ಪೊಲೀಸರನ್ನು ನಯಾಪೈಸೆಗೂ ನಂಬುವ ಸ್ಥಿತಿ ಇರಲಿಲ್ಲ. ಸ್ವತಹಾ ದೇವಾನಂದ್ ಹಾಗೂ ಸಂಗಾತಿಗಳು ಪದ್ಮಲತಾಳಿಗಾಗಿ ಬಡಿಯದ ಮನೆ ಬಾಗಿಲುಗಳೇ ಇಲ್ಲ ಎಂಬಷ್ಟು ಹುಡುಕಾಡಿದರು. ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ಯಾಕೆಂದರೆ, ಆಕೆ ಸಾಮಾನ್ಯ ಜನರ ಮನೆಯಲ್ಲೇನೂ ಇರಲಿಲ್ಲವಲ್ಲ ? ದೇವಾನಂದರಿಗಾಗಲೀ, ದೇವಾನಂದರ ಜಾತಿಯವರಿಗೇನೇ ಪ್ರವೇಶಕ್ಕೆ ಅವಕಾಶವಿಲ್ಲದ ತೋಟದ ಮನೆಯೊಳಗಿದ್ದಳಲ್ಲಾ…!
ಮಗಳು ಪದ್ಮಲತಾ ಕಾಣೆಯಾದದ್ದಲ್ಲ, ಉದ್ಧೇಶಪೂರ್ವಕವಾಗಿಯೇ ಸಂಘಟಿತ ಸಂಚಿನಿಂದ ನಡೆಸಿದ ಅಪಹರಣ ಎಂಬುದು ದೇವಾನಂದ್ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದವರಿಗೆಲ್ಲರಿಗೂ ಸ್ಪಷ್ಟವಾಯಿತು. ಪರಮಪಾಪಿ ಪಾಳೆಗಾರನ ಗ್ಯಾಂಗ್ ನ ಕೆಲವು ಮಂದಿ ಸದಸ್ಯರು ದೇವಾನಂದರ ಮನೆಗೇ ಬಂದು ಬೆದರಿಕೆ ಹಾಕಿದ್ದು, ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಹೇಳಿಯೇ ಸುಮ್ಮನಿರುವಂತೆ ಎಚ್ಚರಿಕೆ ಕೊಟ್ಟದ್ದೂ ನಡೆಯಿತು.
ಡಾ. ಬಿ. ಆರ್. ಹೆರಳೆಯವರ ಪತ್ನಿ ವೇದವಲ್ಲಿ ಟೀಚರ್ ಅವರ ರೇಪ್ & ಮರ್ಡರ್ ನಡೆದಾಗ ಧರ್ಮಸ್ಥಳ ಮತ್ತು ಉಜಿರೆ ಗ್ರಾಮಗಳ ಜನ ಯಾವ ರೀತಿ ನಡೆದುಕೊಂಡರೋ, ಅದೇ ರೀತಿಯಲ್ಲಿ ಪದ್ಮಲತಾ ಅಪಹರಣ ಪ್ರಕರಣ ನಡೆದ ಬಳಿಕವೂ ನಡೆದುಕೊಂಡರು. ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾಗಿ ಸದಾ ಸಾರ್ವಜನಿಕ ಸೇವೆಯಲ್ಲಿದ್ದ ಡಾ. ಹೆರಳೆಯವರಲ್ಲಿ ಅಂದು ಮುಖ ನೋಡಿ ಮಾತಾಡುವವರೇ ಇರಲಿಲ್ಲ. ಕಾರ್ಮಿಕ ರೈತ ಮುಖಂಡರಾಗಿದ್ದ ಯಳಚಿತ್ತಾಯರು, ವಿಷ್ಣುಮೂರ್ತಿ ಭಟ್ಟರಂಥ ಮೂರ್ನಾಲ್ಕು ಮಂದಿಯನ್ನು ಬಿಟ್ಟರೆ ಬೇರೆ ಒಬ್ಬರೇ ಒಬ್ಬರ ಸಾಂತ್ವನದ ನುಡಿಗಳಾಗಲೀ, ಧೈರ್ಯದ ಮಾತುಗಳಾಗಲೀ, ಸಹಕಾರ ನೀಡುವ ಭರವಸೆಯಾಗಲೀ ಡಾ. ಹೆರಳೆಯವರಿಗೆ ಬೇರೆ ಒಬ್ಬೇ ಒಬ್ಬರಿಂದಲೂ ಸಿಕ್ಕಿರಲಿಲ್ಲ. ಪದ್ಮಲತಾ ಅಪಹರಣ ನಡೆದ ಬಳಿಕವೂ ಈ ಎರಡೂ ಗ್ರಾಮಗಳಲ್ಲಿ ಮತ್ತದೇ ಶೋಚನೀಯ ಪರಿಸ್ಥಿತಿ ಉಂಟಾಯಿತು. ಗೋಮುಖ ಗಣ್ಯರ ವ್ಯಾಘ್ರ ಮುಖದ ಪರಿಚಯ ಸಾರ್ವಜನಿಕರಿಗಿತ್ತಾದ ಕಾರಣ, “ನಮಗೆ ಬೇಡ” ಎಂದು ಅವರೆಲ್ಲ ಮೌನವಹಿಸಿದ್ದರೆ, ಉಳಿದವರು ಒಂದಲ್ಲ ಒಂದು ರೀತಿಯಲ್ಲಿ, ಪ್ರತ್ಯಕ್ಷವಾಗಿಯೂ, ಪರೋಕ್ಷವಾಗಿಯೂ ಪಾಳೆಗಾರರ ಫಲಾನುಭವಿಗಳೇ ಆಗಿದ್ದರಲ್ಲಾ…?
ಕರ್ನಾಟಕ ಪ್ರಾಂತ ರೈತ ಸಂಘ ಧರ್ಮಸ್ಥಳ ಮತ್ತು ಉಜಿರೆ ಗ್ರಾಮಗಳ ಇತಿಹಾಸದಲ್ಲಿಯೇ ಮೊತ್ತಮೊದಲ ಬಾರಿಗೆ ದುಷ್ಟ ಪಾಳೆಗಾರರ ಕ್ರೌರ್ಯದ ವಿರುದ್ಧ ಬಹಿರಂಗವಾಗಿ ಪ್ರತಿಭಟನಾ ಸಭೆ ನಡೆಸಿತು. ಪಾಳೆಗಾರರ ಚರಿತ್ರೆಯಲ್ಲಿಯೇ ಮೊತ್ತಮೊದಲ ಬಾರಿಗೆ ವಿಷ್ಣುಮೂರ್ತಿ ಭಟ್ಟರು ಹಾಗೂ ಲಕ್ಣ್ಮಣ ಗೌಡರು ಪಾಳೆಗಾರರ ವಿರುದ್ಧ ನೇರಾನೇರವಾಗಿ, ನಿರ್ಭೀತಿಯಿಂದ ಸಾರ್ವಜನಿಕವಾಗಿ ವೇದಿಕೆಯ ಮೇಲೆ ನಿಂತು ಸಾಲು ಸಾಲು ಪ್ರಶ್ನೆಗಳನ್ನು ಕೇಳಿದರು. ಪೊಲೀಸರನ್ನು, ಸರಕಾರವನ್ನು ದುಷ್ಟಕೂಟದ ಜನರ ತನಿಖೆಗೆ ಒತ್ತಾಯಿಸಿದರು. ಈ ಹೋರಾಟದ ಪರಿಣಾಮವಾಗಿ ಪ್ರಕರಣವೇನೋ ದಾಖಲಾಯಿತು. ಆದರೆ ತನಿಖೆ ಮಾತ್ರ ನಾಟಕವೇ ಆಗಿತ್ತಷ್ಟೆ…
ಹೋರಾಟ ಮುಂದುವರಿದಿತ್ತು. ಮಂಗಳೂರಿನಲ್ಲೂ ಪ್ರತಿಭಟನೆ ನಡೆಯಿತು. ಪ್ರೊ. ಪುರುಷೋತ್ತಮ ಬಿಳಿಮಲೆ, ಸಾರಾ ಅಬೂಬಕ್ಕರ್, ಡಾ. ನರೇಂದ್ರ ನಾಯಕ್ ಮೊದಲಾದವರ ನೇತೃತ್ವದಲ್ಲಿ ನೆಹರೂ ಮೈದಾನದಲ್ಲಿ ನಡೆದ ಬಹಿರಂಗ ಪ್ರತಿಭಟನಾ ಸಭೆಯಲ್ಲಿ ಸಾಕಷ್ಟು ದೊಡ್ಡ ಸಂಖ್ಯೆಯಲ್ಲಿಯೇ ರೈತರು, ಕಾರ್ಮಿಕರು ಪಾಲ್ಗೊಂಡು ಸರಕಾರಕ್ಕೊಂದು ಸ್ಪಷ್ಟ ಸಂದೇಶವನ್ನು ರವಾನಿಸಿತು. ಮಾತ್ರವಲ್ಲ, ಪ್ರತಿಭಟನೆಗೆ ಬಂದವರೆಲ್ಲರೂ, ದೇವಾನಂದರ ಜೊತೆಗೆ ನಾವಿದ್ದೇವೆ ಎಂಬುದನ್ನು ಸಾರಿ ಸಾರಿ ಹೇಳಿದರು.
ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಸಿಪಿಐಎಂ ಶಾಸಕರಾದ, ನಿಜವಾದ ಜನರ ಪರವಾದ ಧ್ವನಿಯಾಗಿದ್ದ ಆರ್. ವೆಂಕಟರಾಮಯ್ಯ ಅವರು ಎಲ್ಲಿ ರಂಗ ಪ್ರವೇಶ ಮಾಡಬೇಕಾಗಿತ್ತೋ ಅಲ್ಲಿಯೇ ರಂಗಪ್ರವೇಶ ಮಾಡಲು ನಿರ್ಧರಿಸಿದ್ದರು…
(ಮುಂದುವರಿಯುವುದು)
~ ಶ್ರೀರಾಮ ದಿವಾಣ, ಉಡುಪಿ.