ಮಗಳು ಪದ್ಮಲತಾ ಕಾಣೆಯಾದ ಬಳಿಕ ದೇವಾನಂದ ಅವರು ಗ್ರಾಮದ ಪಾಳೆಗಾರರು ಹಾಗೂ ಇವರ ಆಪ್ತ ಬಂಟರಾಗಿದ್ದ ಗುಣಪಾಲ, ಲಕ್ಷ್ಮಣ, ರಾಮಕೃಷ್ಣ ಮುಂತಾದವರಲ್ಲಿಯೂ ಮಗಳು ಪದ್ಮಲತಾಳನ್ನು ಪತ್ತೆಹಚ್ಚಲು ಸಹಕರಿಸುವಂತೆ ವಿನಂತಿಸಿಕೊಂಡಿದ್ದರು. ಆಗ ಇವರೆಲ್ಲರೂ ಕೊಟ್ಟ ಉತ್ತರ; “ಪೊಲೀಸ್ ಕಪ್ಲೆಂಟ್ ಕೊಟ್ಟದ್ಯಾಕೆ ? ಮೂದಲೇ ಬಂದು ನನ್ನಲ್ಲಿ ಹೇಳಬೇಕಿತ್ತಲ್ವ, ಹೋಗು, ಪೊಲೀಸರ ಮೂಲಕವೇ ಹುಡುಕಿಸು, ಮಗಳು ಸಿಗ್ತಾಳೆ” ಎಂದಾಗಿತ್ತು. ಮಾತ್ರವಲ್ಲ, “ನಾಮಪತ್ರ ಹಿಂತೆಗೆದುಕೊ, ಮನೆಮನೆಗೆ ಹೋಗಿ ಗುಣಪಾಲ ಅರಿಗನಿಗೆ ಓಟು ಹಾಕುವಂತೆ ಕೇಳಿಕೊಂಡು ಬಾ, ಮಗಳನ್ನು ಹುಡುಕಿಸಿಕೊಡ್ತೇವೆ” ಎಂದು ಮುಖಕ್ಕೆ ಹೊಡೆದಂತೆ ಹೇಳಿಬಿಟ್ಟಿದ್ದರು. ಮನುಷ್ಯತ್ವದ ಲವಲೇಶವೂ ಇಲ್ಲದ ಇವರ ಈ ಪಾಳೆಗಾರಿಕೆಯ, ದರ್ಪದ, ದುರಹಂಕಾರದ ಮಾತುಗಳಲ್ಲಿಯೇ ಪದ್ಮಲತಾ ಅಪಹರಣ ಯಾಕಾಯಿತು, ಯಾರಿಂದಾಯಿತು ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿತ್ತು.
ಪದ್ಮಲತಾಳನ್ನು ಅಪಹರಣ ಮಾಡಿದವರು ಇಂಥವರೇ… ಎಂದು ಬಲವಾದ ಶಂಕೆ ವ್ಯಕ್ತಪಡಿಸಿ ದೇವಾನಂದ್ ಅವರು ಇಬ್ಬರು ಗಣ್ಯ ವ್ಯಕ್ತಿಗಳ ಹೆಸರನ್ನು ಪೊಲೀಸರಿಗೆ ನೀಡಿದ್ದರು. ಇದಕ್ಕೆ ವಿರುದ್ಧವಾಗಿ ಸೋಮನ್ ಎಂಬವರು ನೇರವಾಗಿ ಬಂದು ದೇವಾನಂದ್ ಅವರಿಗೆ ಜೀವ ಬೆದರಿಕೆ ಹಾಕಿದ ಘಟನೆಯೂ ನಡೆದಿತ್ತು. ಬೆದರಿಕೆ ಹಾಕುತ್ತಿರುವಾಗಲೇ ಈ ವರ್ತಮಾನ ಹೋರಾಟನಿರತರಿಗೆ ತಲುಪಿತು. ವಿಷಯ ತಿಳಿದ ಹೋರಾಟಗಾರರು ತಕ್ಷಣವೇ ಪೊಲೀಸರಿಗೆ ದೂರು ನೀಡಿ ಘಟನಾ ಸ್ಥಳಕ್ಕೆ ಹೊರಡಿಸಲು ಯಶಸ್ವಿಯಾದರು. ಮಾತ್ರವಲ್ಲ, ತಾವೂ ಸಹ ಘಟನಾ ಸ್ಥಳಕ್ಕೆ ತಲುಪಿದರು. ಇದರಿಂದಾಗಿ ಪೊಲೀಸರು ಸೋಮನ್ ನನ್ನು ಠಾಣೆಗೆ ಕರೆದೊಯ್ಯುವುದು ಅನಿವಾರ್ಯವಾಯಿತು. ಆದರೆ, ಸೋಮನ್ ನನ್ನು ವಿಚಾರಣೆ ಮಾಡುವ ಮೊದಲೇ ಠಾಣೆಗೆ ಬಂದ ಪಾಳೆಗಾರರ ಬಂಟರು ಸೋಮನ್ ನನ್ನು ಪೊಲೀಸ್ ಠಾಣೆಯಿಂದ ಬಿಡುಗಡೆಗೊಳಿಸಿ ಕರೆದೊಯ್ಯಲು ಸಫಲರಾದರು.
ಈ ನಡುವೆ, ಕುಮುದಿನಿ ಎಂಬ ಹೆಸರಿನಲ್ಲಿ, ತಾನು ಪದ್ಮಲತಾಳ ಸಹಪಾಠಿ ಎಂದು ಬರೆದ ಕೆಲವು ಪತ್ರಗಳು ಪದ್ಮಲತಾಳ ಮನೆಯವರಿಗೆ ಮಧ್ಯೆ ಮಧ್ಯೆ ಬಂದಿದ್ದುವು. ಈ ಪತ್ರಗಳಲ್ಲಿದ್ದ ವಿಷಯಗಳೆಲ್ಲವೂ ಮನೆಯವರ, ಸಾರ್ವಜನಿಕರ ಮತ್ತು ಪೊಲೀಸರ ದಿಕ್ಕು ತಪ್ಪಿಸುವ ಉದ್ಧೇಶಗಳನ್ನೇ ಹೊಂದಿದ್ದುದು ಸ್ಪಷ್ಟವಾಗಿತ್ತು. ಆದರೂ ಬಂದ ಪತ್ರಗಳ ಕೈ ಬರಹಗಳನ್ನು ಕಾಲೇಜು ವಿದ್ಯಾರ್ಥಿನಿಯರ ಕೈ ಬರೆಹಗಳ ಜೊತೆ ಹೋಲಿಕೆ ಮಾಡಿ ನೋಡಿ ನಿಜವಾಗಿಯೂ ಪತ್ರ ಬರೆದವರು ಯಾರು ಎಂದು ಪತ್ತೆಹಚ್ಚುವ ಕಾರ್ಯ ಮಾತ್ರ ಯಶಸ್ವಿಯಾಗಲಿಲ್ಲ. ಕಾರಣ, ವಿದ್ಯಾರ್ಥಿನಿಯರ ಹಸ್ತಾಕ್ಷರ ಗಳನ್ನು ಪೊಲೀಸರಿಗೆ ನೋಡಲು ಮತ್ತು ನೀಡಲು ಪ್ರಾಂಶುಪಾಲರು ಸ್ಪಷ್ಟವಾಗಿ ನಿರಾಕರಿಸಿದ್ದರು.
ಪದ್ಮಲತಾ ಅಪಹರಣದ ವಿರುದ್ಧ, ಸೂಕ್ತ ತನಿಖೆಗಾಗಿ ಎಸ್ ಡಿ ಎಂ ಪಿಯು ಕಾಲೇಜಿನ ವಿದ್ಯಾರ್ಥಿಗಳೂ ಪ್ರತಿಭಟನಾ ಮೆರವಣಿಗೆ ನಡೆಸಿ, ಭಾಷಣಗಳನ್ನು ಮಾಡಿ ಪೊಲೀಸ್ ಅಧಿಕಾರಿಗಳಿಗೆ, ಸರಕಾರಕ್ಕೆ ಮನವಿ ಸಲ್ಲಿಸಿದ್ದರು. ಇದರ ನೇತೃತ್ವ ವಹಿಸಿದವರನ್ನು ಮರುದಿನ ಪ್ರಾಂಶುಪಾಲರಾದ ಎಸ್. ಪ್ರಭಾಕರ್ ಅವರು ಆವೇಶಭರಿತರಾಗಿ ತರಾಟೆಗೆ ತೆಗೆದುಕೊಂಡರಂತೆ. ಪ್ರಭಾಕರ್ ಅವರಿಗೆ ಹೀಗೆ ಆವೇಶ ಬರಲೂ ಕಾರಣ ಇತ್ತು…
ಚುನಾವಣೆಯಲ್ಲಿ ಗೆದ್ದ ಹೆಗ್ಗಡೆ ಕ್ಯಾಂಡಿಡೇಟ್ ಕಾಂಗ್ರೆಸ್ ಬೆಂಬಲಿತ ಅಬ್ಯರ್ಥಿ ಗುಣಪಾಲ ಅರಿಗ ಅವರಿಗಿಂತ ಕೇವಲ ಏಳು ಮತಗಳನ್ನಷ್ಟೇ ಕಡಿಮೆ ಪಡೆದು ಸೋತಿದ್ದರು ಗೇಣಿದಾರರ ನಾಯಕರಾಗಿದ್ದ ದೇವಾನಂದರು. ಅಂತಿಮವಾಗಿ ಪದ್ಮಲತಾ ಅಪಹರಣ ಮತ್ತು ಕೊಲೆಯನ್ನು ಹೋರಾಟಗಾರರ ಮೇಲೆಯೇ ಹಾಕುವ ಸಂಚೂ ನಡೆಯಿತು. ಈ ಸಂಚನ್ನು ಅದು ಹೇಗೆಯೋ ಪೊಲೀಸ್ ಮೂಲಗಳಿಂದಲೇ ಹೋರಾಟಗಾರರಿಗೆ ಲೀಕ್ ಆದ ಕಾರಣ ಆ ಸಂಚನ್ನು ಬಳಿಕ ರೇಪಿಸ್ಟ್ ನರಹಂತಕರು ಜ್ಯಾರಿಗೊಳಿಸದೆ ಹೋದರು.
ಸುಮಾರು 56 – 57 ದಿನಗಳ ಕಾಲ ಪದ್ಮಲತಾ (17)ಳನ್ನು ಬಂಧನದಲ್ಲಿರಿಸಿ ನಿರಂತರವಾಗಿ ಸಾಮೂಹಿಕ ಅತ್ಯಾಚಾರವೆಸಗಿದ ಗಣ್ಯರೆನಿಸಿಕೊಂಡ ಪರಮಪಾಪಿ ರಕ್ಕಸರು ಕೊನೆಗೆ ಪದ್ಮಲತಾಳನ್ನು ಕೊಂದು ಹೊಳೆಗೆಸೆದರು.
ಸೌಜನ್ಯ ಪ್ರಕರಣದಲ್ಲಿ ರೇಪಿಸ್ಟ್ ರಕ್ಕಸರನ್ನು ರಕ್ಷಿಸಲು ಪೊಲೀಸರು ಅಮಾಯಕ ಸಂತೋಷ್ ರಾವ್ ಅವರನ್ನು ಹೇಗೆ ಫಿಕ್ಸಿಂಗ್ ಮಾಡಿ ಆರೋಪಿಯನ್ನಾಗಿ ಮಾಡಿದರೋ, ಹಾಗೆಯೇ ಅಂದು ಕೂಡಾ ಪೊಲೀಸರು ಅಮಾಯಕ ಯುವಕನೊಬ್ಬನನ್ನು ಫಿಕ್ಸಿಂಗ್ ಮಾಡುವ ಪ್ರಯತ್ನವನ್ನು ನಡೆಸಿದ್ದರು. ವಸಂತ್ ಎಂಬ ಯುವಕನನ್ನು ಮೂರು ದಿನಗಳ ಕಾಲ ಠಾಣೆಯ ಲಾಕಪ್ಪಿನಲ್ಲಿರಿಸಿ ಹೊಡೆದು ಬಡಿದು ಮಾಡಿ ತಪ್ಪೊಪ್ಪಿಕೊಳ್ಳುವಂತೆ ಮಾಡುವ ಪ್ರಯತ್ನ ನಡೆಸಿದ್ದರು. ಆಗ ವಸಂತನ ಊರಿನವರು ಇದನ್ನು ಸಹಿಸದಾದರು. ಅಮಾಯಕ ವಸಂತನನ್ನು ಅಪಹರಣ – ಅತ್ಯಚಾರ – ಕೊಲೆ ಕೇಸಿನಲ್ಲಿ ಫಿಕ್ಸ್ ಮಾಡುವುದರ ವಿರುದ್ಧ ಇಡೀ ಊರಿಗೆ ಊರೇ ಎದ್ದುನಿಂತಿತು. ಪೊಲೀಸರ ಅಧಿಕಾರ ದುರುಪಯೋಗದ ಕ್ರಮವನ್ನು, ಷಡ್ಯಂತ್ರವನ್ನು ಪ್ರತಿಭಟಿಸಿ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಲು ಮುಂದಾದರು. ಕೊನೆಗೆ, ನಿಜವಾದ ರೇಪಿಸ್ಟರನ್ನು ರಕ್ಷಿಸುವ ಕೆಲಸ ಮಾಡಲು ಹೋಗಿ ಇನ್ನೊಂದು ಎಡವಟ್ಟು ಮಾಡಿಕೊಳ್ಳುವುದು ಬೇಡವೆಂಬ ನಿರ್ಧಾರಕ್ಕೆ ಬಂದ ಪೊಲೀಸರು, ಅಂದು ವಸಂತ್ ಎಂಬ ಆ ಅಮಾಯಕ ಯುವಕನನ್ನು ಫಿಕ್ಸಿಂಗ್ ಮಾಡುವುದನ್ನು ಕೈಬಿಟ್ಟು ಬಿಡುಗಡೆಮಾಡಿದ್ದರು.
(ಮುಂದುವರಿಯುವುದು)
~ ಶ್ರೀರಾಮ ದಿವಾಣ, ಉಡುಪಿ.