Spread the love

ಬಡ ಗೇಣಿದಾರರ, ಒಕ್ಕಲುದಾರರ ಪರ ಹೋರಾಟಗಾರರಾಗಿದ್ದ ದೇವಾನಂದರದ್ದು ಸದುದ್ಧೇಶದ ಪ್ರಾಮಾಣಿಕ ರಾಜಕೀಯವಾಗಿತ್ತು. ಅವರಿಗೆ ಬೇರೆ ಯಾವ ಸ್ಚಾರ್ಥವೂ ಇರಲಿಲ್ಲ. ಹಾಗಾಗಿ ಅವರಿಗೆ ಯಾವುದೇ ರೀತಿಯ ಕೆಟ್ಟ ಯೋಚನೆಗಳಾಗಲೀ, ಯೋಜನೆಗಳಾಗಲಿ ಇರಲಿಲ್ಲ. ಅಂಥಾ ಯಾವುದನ್ನೂ ಊಹಿಸುವ ವ್ಯಕ್ತಿತ್ವವಾಗಲೀ, ಮನಸ್ಥಿತಿಯಾಗಲೀ ಅವರದಾಗಿರಲಿಲ್ಲ. ಇಂಥಾ ದೇವಾನಂದರು ಸಂಘಟನೆ, ಹೋರಾಟ, ಚುನಾವಣೆಯ ಕೆಲಸಗಳಲ್ಲಿ ನಿರತರಾಗಿದ್ದಾಗ…

1986 ಡಿಸೆಂಬರ್ 26ರಂದು ಸಂಜೆ ಕಾಲೇಜು ಆವರಣದಿಂದ ಹೊರಗೆ ಬಂದ, ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಪದ್ಮಲತಾಳನ್ನು ಪೂರ್ವ ಸಂಚಿನ ಭಾಗವಾಗಿ ಕಾರಿನಲ್ಲಿ ಬಂದವರು ಅತ್ಯಂತ ವ್ಯವಸ್ಥಿತವಾಗಿ ಕಾರಿಗೆ ಹತ್ತಿಸಿ ಅಪಹರಿಸಿದ್ದರು.

ತನ್ನನ್ನು ಅಪಹರಣ ಮಾಡುತ್ತಿದ್ದಾರೆ ಎಂಬುದೇ ಪದ್ಮಲತಾಳಿಗೆ ಗೊತ್ತಾಗಲು ಸಾಧ್ಯವಿರಲಿಲ್ಲ. ಕಾರಣ, ಈ ಅಪಹರಣ ಮತ್ತು ಈ ಸಂದರ್ಭದಲ್ಲಿ ಪದ್ಮಲತಾ ಕಾರಿಗೆ ಹತ್ತಲು ಕಾರಣರಾದವರು ಮತ್ತು ಕಾರಿನೊಳಗಡೆ ಇದ್ದವರಾಡಿದ ಮಾತುಗಳು ಹಾಗೂ ಒಳಗಿರುವವರಲ್ಲಿ ಒಬ್ಬರು ದೊಡ್ಡಜನ, ಇನ್ನೊಬ್ಬರು ನಿತ್ಯ ನೋಡಿ ಗೌರವಿಸುವ ಆದರಣೀಯ, ಗೌರವಾನ್ವಿತರೆಂದ ಮೇಲೆ…. ಪಾಪ, ಆಕೆಗೆ ಹೇಗೆ ತಾನೇ ತನ್ನನ್ನು ಅಪಹರಿಸುತ್ತಾರೆಂಬ ಭಾವನೆ ಮೂಡಲು ಸಾಧ್ಯ ? ಇವುಗಳೆಲ್ಲದರ ಹಿಂದೆ ನಂಬಿಕೆ ಎಂಬುದೊಂದು ಇತ್ತಲ್ವಾ ?

ಕಾರಿನಲ್ಲಿ ಕರೆದೊಯ್ದು ಯಾರೂ ಇಲ್ಲದ ರೂಮಿನೊಳಕ್ಕೆ ಕರೆದೊಯ್ದ ಬಳಿಕವೇ ಪದ್ಮಲತಾಳಿಗೆ ಗೊತ್ತಾಗಿರಲು ಸಾಧ್ಯ , ಗೋಮುಖ ಗಣ್ಯರ ವ್ಯಾಘ್ರಮುಖ. ಪದ್ಮಲತಾ ಅಲ್ಲಿ ಆ ರಕ್ಕಸ ಗ್ಯಾಂಗ್ ನೊಂದಿಗೆ ಕಳೆದದ್ದು ಒಂದೆರಡು ದಿನಗಳಲ್ಲ. ಬರೋಬ್ಬರಿ 53 ದಿನಗಳು.

ಪದ್ಮಲತಾಳನ್ನು ಅಪಹರಿಸಿದ ರಕ್ಕಸನಿಗೆ, ರೇಪ್ & ಮರ್ಡರ್ ಮಾಡುವುದು ಶತ್ರುವಿನ ಮೇಲೆ ಪ್ರಯೋಗಿಸುವ ಒಂದು ಪ್ರಬಲ ಅಸ್ತ್ರವಾಗಿತ್ತು. ಈ ಅಸ್ತ್ರವನ್ನು ಅವರು ಹಿಂದಿನಿಂದಲೂ ತಮ್ಮ ಪರಂಪರೆಯ, ಪದ್ಧತಿಯ ಭಾಗವಾಗಿಯೇ ನಡೆಸಿಕೊಂಡು ಬಂದಿದ್ದರು. ತಮ್ಮ ಕಾಮ ತೀಟೆಯನ್ನು ತೀರಿಸಲೂ ಅವರು ಬಲಿಕೊಡುತ್ತಿದ್ದ ಹೆಣ್ಮಕ್ಕಳು ಸಹ ಹದಿಹರೆಯದವರೇ ಆಗಿದ್ದರು.

ಐವತ್ತೆರಡು ದಿನಗಳ ಕಾಲ ತಮ್ಮ ಧಿಗ್ಭಂಧನದಲ್ಲಿರಿಸಿದ ಪದ್ಮಲತಾಳನ್ನು ಕೊನೆಗೆ 1987 ಫೆಬ್ರವರಿ 17ರಂದು ನಿಷ್ಕರುಣೆಯಿಂದ ಕೊಂದುಬಿಟ್ಟರು. ಕೈ ಕಾಲುಗಳನ್ನು ಹಗ್ಗದಿಂದ ಕಟ್ಟಿ ದೇವಾನಂದರ ಮನೆಯ ಸಮೀಪವೇ ಹರಿದುಹೋಗುವ ನಿಡ್ಲೆ ಸೇತುವೆ ಪಕ್ಕದ ನೆರಿಯಾ ಹೊಳೆಯ ಪಾದೆಕಲ್ಲಿನ ಮೇಲಿರಿಸಿ ಕೈತೊಳೆದುಕೊಂಡರು ಪಾಪಿಗಳು.

ಬೆಳ್ತಂಗಡಿ ಪೊಲೀಸರ ಕಥೆ ಇನ್ನು ಕೇಳಬೇಕೇ ? ಆಗ ಸಬ್ ಇನ್ಸ್ ಪೆಕ್ಟರ್ ಆಗಿದ್ದವರು ಎಫ್. ಎಸ್. ಮೆಂಡೋನ್ಸಾ ಎಂಬವರು. ಇವರು 18/1987, ಕಲಂ 302 ಮತ್ತು 201 ಐಪಿಸಿಯಂತೆ ಪ್ರಕರಣ ದಾಖಲಿಸಿಕೊಂಡರು. ಬಳಿಕ ಕಣ್ಣಿದ್ದೂ ಕುರುಡರಾದರು, ಕಿವಿ ಇದ್ದೂ ಕಿವುಡರಾದರು ಹೃದಯಹೀನರು.

ಪದ್ಮಲತಾ ಅಪಹರಣಗೊಂಡ 1986 ಡಿಸೆಂಬರ್ 22ರಿಂದ 1987ರ ಫೆಬ್ರವರಿ 17ರ ವರೆಗೆ ಏನೆಲ್ಲಾ ನಡೆಯಿತು ಗೊತ್ತಾ…

(ಮುಂದುವರಿಯುವುದು)

~ ಶ್ರೀರಾಮ ದಿವಾಣ , ಉಡುಪಿ.

error: No Copying!