ಉಡುಪಿ: ದಿನಾಂಕ: 27-08-2023(ಹಾಯ್ ಉಡುಪಿ ನ್ಯೂಸ್) ಸಿಟಿ ಬಸ್ ನ ಟೈಮಿಂಗ್ ವಿಚಾರದಲ್ಲಿ ಬಸ್ ಚಾಲಕರ ನಡುವೆ ಹೊಡೆದಾಟ ನಡೆದು ಗಾಯಗೊಂಡ ಚಾಲಕ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರ್ನಾಡ್ ಗ್ರಾಮದ,ಕೊಕ್ಕರಕಲ್ ನಿವಾಸಿ ಸುನೀಲ್ ಕುಮಾರ್ (27) ಅವರು ತನ್ವೀರ್ ಬಸ್ಸಿನ ಚಾಲಕನಾಗಿ ಕೆಲಸಮಾಡಿಕೊಂಡಿದ್ದು, ದಿನಾಂಕ 25/08/2023 ರಂದು ಮಧ್ಯಾಹ್ನ ಉಡುಪಿ ಸಿಟಿಬಸ್ ನಿಲ್ದಾಣದಲ್ಲಿ ಟೈಮ್ ವಿಚಾರದಲ್ಲಿ JMT ಬಸ್ ನಂ:KA19D4722ನೇದರ ಚಾಲಕ ಪ್ರತಾಪ್ ಎಂಬವರು ಸುನಿಲ್ ಕುಮಾರ್ ರಿಗೆ ಬಸ್ಸಿಗೆ ಅಡ್ಡಇಟ್ಟು, ಬಸ್ಸಿನಿಂದ ಇಳಿದು ಬಂದಿದ್ದು, ಸುನೀಲ್ ಕುಮಾರ್ ಕೂಡ ಬಸ್ಸಿನಿಂದ ಇಳಿದು ವಿಚಾರಿಸಲು ಹೋದಾಗ ಪ್ರತಾಪ ನು ಸುನೀಲ್ ಕುಮಾರ್ ರ ಕಾಲರ್ ಗೆ ಕೈಹಾಕಿ ಮುಖಕ್ಕೆ 4-5 ಬಾರಿ ಕೈಯಿಂದ ಹೊಡೆದು ಬಸ್ಸಿಗೆ ಹೋಗಿ ಬಸ್ಸಿನ ಲಿವರ್ ನಿಂದ ಹೊಡೆಯಲು ಹೋದಾಗ ಸುನೀಲ್ ಕುಮಾರ್ ರ ಎಡಕಾಲಿಗೆ ತಾಗಿದ್ದು ನಂತರ ಬಸ್ಸಿನ ಚಕ್ರಕ್ಕೆ ಅಡ್ಡ ಇಡುವ ಮರದ ತುಂಡನ್ನು ಸುನೀಲ್ ಕುಮಾರ್ ರ ಬಲ ಕೈ ಮೇಲೆ ಬಿಸಾಡಿ ಕೈಯ ಮೂಳೆ ಮುರಿತ ಹಾಗೂ ರಕ್ತಗಾಯವಾಗಿದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪುನಃ ಸಂಜೆ ಸಮಯಕ್ಕೆ ಸಿಟಿಬಸ್ ನಿಲ್ದಾಣಕ್ಕೆ ಬಂದಾಗ ಆರೋಪಿಗಳಾದ ಪ್ರತಾಪ್, ಚಂದ್ರ, ವಿನೋದ, ಗಣೇಶ್ ಎಂಬವರು ಸುನೀಲ್ ಕುಮಾರ್ ರಿಗೆ ಕೈಯಿಂದ ಮುಖಕ್ಕೆ, ಭುಜಕ್ಕೆ ಹೊಡೆದು, ನಿನಗೆ ಬದುಕಲು ಬಿಡುವುದಿಲ್ಲ, ಕಾಲು ಮುರಿದು ಹಾಕುತ್ತೇವೆ. ಉಡುಪಿಯಲ್ಲಿ ನಿನ್ನನ್ನು ಕಂಡರೆ ಹೊಡೆದು ಹಾಕುತ್ತೇವೆ. ಎಂದು ಅವಾಚ್ಯ ಶಬ್ದಗಳಿಂದ ಬೈದು, ಬೆದರಿಕೆ ಹಾಕಿಹೋಗಿರುತ್ತಾರೆ ಎಂದು ಸುನೀಲ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 341, 323, 324, 504, 506 RW 34 IPC ಯಂತೆ ಪ್ರಕರಣ ದಾಖಲಾಗಿದೆ.