Spread the love

ಮುಳಿಕ್ಕಾರುವಿನ ಮಲೆಕುಡಿಯ ಸಮುದಾಯದ 16 ಕುಟುಂಬಗಳನ್ನು ಒಕ್ಕಲೆಬ್ಬಿಸಲು ಪಾಳೆಗಾರ ಜಮೀನ್ದಾರರು ನಿರ್ಧರಿಸಿಬಿಟ್ಟಿದ್ದರು. ಕರ್ನಾಟಕ ಪ್ರಾಂತ ರೈತ ಸಂಘದ ಸ್ಥಳೀಯ ಘಟಕದ ಅಧ್ಯಕ್ಷರಾಗಿದ್ದ ದೇವಾನಂದ್ ಅವರು ತಮ್ಮ‌ ಬಳಗದ ಮಾಧವನ್ ಪಿಳ್ಳೆ, ಶಿವಣ್ಣ ಮಲೆಕುಡಿಯ, ವಾಸು ಮಲೆಕುಡಿಯ ಮೊದಲಾದವರ ತಂಡ ಕಟ್ಟಿಕೊಂಡು ಮನೆಮನೆಗೆ ಹೋಗಿ ಜಾಗೃತಿ ಕೆಲಸಗಳನ್ನು ಮಾಡತೊಡಗಿದ್ದರು. ಹದಿನಾರೂ ಕುಟುಂಬಗಳನ್ನು ಒಟ್ಟಿಗೆ ಸೇರಿಸಲು ಯಶಸ್ವಿಯಾಗಿದ್ದ ದೇವಾನಂದರು, ಮುಂದಿನ ಹೋರಾಟಕ್ಕೂ ಸಿದ್ಧತೆ ನಡೆಸಿದ್ದರು. ಒಕ್ಕಲುದಾರರ ಪರವಾಗಿ ದೇವಾನಂದರು ವಿವಿಧ ಹಂತದ ಮಾತುಕತೆಗಳಲ್ಲಿಯೂ ಭಾಗಿಯಾಗುತ್ತಿದ್ದರು. ಬೆಳ್ತಂಗಡಿ ತಾಲೂಕಿನ ಕಾರ್ಮಿಕ ನಾಯಕರಾಗಿದ್ದ ವಿಷ್ಣುಮೂರ್ತಿ ಭಟ್ಟರು ಹಾಗೂ ತಂಡದವರ ಬೆಂಬಲ ಮತ್ತು ಮಾರ್ಗದರ್ಶನವೂ ದೇವಾನಂದರ ಬಳಗಕ್ಕಿತ್ತು.

ಅಷ್ಟರಲ್ಲಿ ಚುನಾವಣೆ ಘೋಷಣೆ ಆಯ್ತು. (1986-87) ಒಂದೆಡೆ ಜಿಲ್ಲಾ ಪಂಚಾಯಿತಿ ಚುನಾವಣೆ, ಇನ್ನೊಂದೆಡೆ ಮಂಡಲ ಪಂಚಾಯಿತಿ ಚುನಾವಣೆ. ಧರ್ಮಸ್ಥಳ, ಕೊಕ್ಕಡ, ಪಟ್ರಮೆ, ನಿಡ್ಲೆ, ಕಳಂಜ, ಹತ್ಯಡ್ಕ, ರೆಕ್ಯ, ಶಿಶಿಲ, ಶಿಬಾಜೆ ಸಹಿತ ಒಟ್ಟು 13 ಗ್ರಾಮಗಳನ್ನು ಒಳಗೊಂಡ ಜಿ. ಪಂ. ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನ ನಾರಾಯಣ ಮಲೆಕುಡಿಯರು ಗೆದ್ದರೆ, ಸಿಪಿಐಎಂ ಪಕ್ಷದ ನಾರಾಯಣ ಮಲೆಕುಡಿಯರು ನೇರಾನೇರ ಸ್ಪರ್ಧೆ ನೀಡಿ ಎರಡನೇ ಸ್ಥಾನ ಪಡೆದು ಕ್ಷೇತ್ರದಲ್ಲಿ ಪಕ್ಷಕ್ಕಿರುವ ಜನಬೆಂಬಲವನ್ನು ತೋರಿಸಿಕೊಟ್ಟಿದ್ದರು. ಇಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಜನತಾದಳ ಮೂರನೇ ಸ್ಥಾನಗಳಿಸಿದರೆ, ಬಿಜೆಪಿ ನಾಲ್ಕನೇ ಸ್ಥಾನ ಪಡೆದಿತ್ತು.

ಜಿ. ಪಂ. ಚುನಾವಣೆ ನಡೆದ ಎರಡೇ ತಿಂಗಳ ಅಂತರದಲ್ಲಿ ಮಂಡಲ ಪಂಚಾಯತ್ ಚುನಾವಣೆ ನಿಗದಿಯಾಗಿತ್ತು. ಧರ್ಮಸ್ಥಳ ಗ್ರಾಮವನ್ನೊಳಗೊಂಡ ಮಂಡಲ ಪಂಚಾಯತ್ ಕ್ಷೇತ್ರದಲ್ಲಿ ಒಟ್ಟು 13 ವಾರ್ಡ್ ಗಳಿತ್ತು. ಇವುಗಳಲ್ಲಿ ಎಂಟು ಕ್ಷೇತ್ರಗಳಿಗೆ ಅವಿರೋಧವಾಗಿ ಅಬ್ಯರ್ಥಿಗಳ ಆಯ್ಕೆಯಾಗಿತ್ತು. ಐದು ವಾರ್ಡ್ ಗಳಿಗೆ ಚುನಾವಣೆ ನಿಗದಿಯಾಯಿತು. ಈ ಐದು ವಾರ್ಡ್ ಗಳಲ್ಲಿ ಚುನಾವಣೆ ನಡೆಯಲು ದೇವಾನಂದ್ ಅವರೇ ಮುಖ್ಯ ಕಾರಣರಾಗಿದ್ದರು.

1986 – 87ರವರೆಗೂ ಧರ್ಮಸ್ಥಳ ಗ್ರಾಮ ಪಂಚಾಯತ್ ಅಥವಾ ಮಂಡಲ ಪಂಚಾಯತ್ ನಲ್ಲಿ ಚುನಾವಣೆಯೇ ನಡೆಯುತ್ತಿರಲಿಲ್ಲ. ಹೆಗ್ಗಡೆಯೇ ತಮಗೆ ಬೇಕಾದವರನ್ನು ಮಾತ್ರ ಅಬ್ಯರ್ಥಿಗಳನ್ನಾಗಿ ಆಯ್ಕೆಮಾಡುತ್ತಿದ್ದರು. ಹೆಗ್ಗಡೆಯ ಅನುಮತಿ, ಆಶೀರ್ವಾದ ಇಲ್ಲದೆ ಅಬ್ಯರ್ಥಿಯಾಗುವ ಪ್ರಶ್ನೆಯೇ ಇಲ್ಲಿ ಇರಲಿಲ್ಲ. ಬಹುತೇಕ ಪಕ್ಷಗಳ ನಾಯಕರು ಗುಲಾಮರಾಗಿದ್ದರು. ದೇವಾನಂದ್ ಅವರು ಐದು ಕ್ಷೇತ್ರಗಳಲ್ಲಿ ಅಬ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಒಂದು ಕ್ಷೇತ್ರಕ್ಕೆ ತಾವೇ ಸ್ವತಹಾ ನಾಮಪತ್ರ ಸಲ್ಲಿಸಿ ಅಬ್ಯರ್ಥಿಯಾಗಿದ್ದರು. ಚುನಾವಣಾ ಕೆಲಸಗಳನ್ನು ಆರಂಭಿಸಿದ್ದರು ದೇವಾನಂದರು.

ಹೆಗ್ಗಡೆಯ ಅನುಮತಿ ಇಲ್ಲದೆ, ಹೆಗ್ಗಡೆಯ ಕ್ಯಾಂಡಿಡೇಟ್ ಆಗಿದ್ದ ಕಾಂಗ್ರೆಸ್ ನ ಇಂದ್ರ ಎಂಬವರ ವಿರುದ್ಧ ದೇವಾನಂದ್ ಚುನಾವಣೆಗೆ ಸ್ಪರ್ಧಿಸಿದ್ದರು. ಈ ವಿಷಯ ಗ್ರಾಮದಲ್ಲೂ, ಹೊರಗಡೆಯೂ ವ್ಯಾಪಕ ಚರ್ಚೆಗೂ ಕಾರಣವಾಗಿತ್ತು.

ಬಡ ಗೇಣಿದಾರರು, ಒಕ್ಕಲಿನವರ ಮೇಲೆ ಪಾಳೆಗಾರರು, ಜಮೀನ್ದಾರರು ನಡೆಸುತ್ತಿದ್ದ ಶೋಷಣೆ, ದೌರ್ಜನ್ಯಗಳ ವಿರುದ್ಧ ಸೆಟೆದು ನಿಂತು ನ್ಯಾಯಪರ ಹೋರಾಟ ನಡೆಸುತ್ತಿದ್ದ ದೇವಾನಂದ್ ಅವರಿಗೆ ಮಂಡಲ ಪಂಚಾಯತ್ ನಲ್ಲಿ ತಾನು ಹಾಗೂ ಗೇಣಿದಾರರ ಪರವಾಗಿರುವ ಅಬ್ಯರ್ಥಿಗಳು ಗೆದ್ದರೆ ಗೇಣಿದಾರರ ಹೋರಾಟಕ್ಕೆ ಹೆಚ್ಚು ಬಲ ಸಿಗಬಹುದೆಂಬ ಅಭಿಪ್ರಾಯವಿತ್ತು. ಇದರ ಜೊತೆಗೆ ಒಕ್ಕಲೆಬ್ಬಿಸುವ ಹೋರಾಟದಲ್ಲಿ ಮಂಡಲ ಪಂಚಾಯಿತಿ ಮೂಲಕ ನ್ಯಾಯ ದೊರಕಿಸಿಕೊಡಲು ಅನುಕೂಲವಾಗುತ್ತದೆ ಎಂಬ ಆಶಯವಿತ್ತು.

ಇಂಥ ಸದುದ್ಧೇಶದ ಆಶಯಗಳೊಂದಿಗೆ ಬಡ ಜನರ ಧ್ವನಿಯಾಗಲು ಹೊರಟ ದೇವಾನಂದ್ ಅವರ ಧ್ವನಿಯನ್ನು ಉಡುಗಿಸಲು ಹುನ್ನಾರ ನಡೆಸಿದ ರಕ್ಕಸ ಪಡೆ, ದೇವಾನಂದ್ ಅವರ ಮೇಲಿನ ಸೇಡು ತೀರಿಸಲು ಅವರ ಹದಿಹರೆಯಯದ ಮಗಳನ್ನೇ ಬಳಸಿಕೊಳ್ಳಲು ಸಂಘಟಿತ ಸಂಚು ನಡೆಸಿದ್ದು ಮಾತ್ರ ಪ್ರಾಮಾಣಿಕ ಹೋರಾಟಗಾರ ದೇವಾನಂದ್ ಅವರ ಅರಿವಿಗೆ ಬರಲೇ ಇಲ್ಲ…

(ಮುಂದುವರಿಯುವುದು)

~ ಶ್ರೀರಾಮ ದಿವಾಣ, ಉಡುಪಿ.

error: No Copying!