Spread the love

ಗ್ರೀಕ್ ಪುರಾಣ ಕಥೆಗಳಲ್ಲಿ ಮೈದಾಸನೆಂಬ ರಾಜನ ಹೆಸರು ಪ್ರಖ್ಯಾತವಾಗಿದೆ. ಆತ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತದೆ. ಮೈದಾಸ ಸ್ಪರ್ಶ ( Golden touch ) ಎಂದೇ ಸದಾ ಯಶಸ್ವಿಯಾಗುವವರಿಗೆ ಕರೆಯಲಾಗುತ್ತದೆ……

ಅದರ ಬಗ್ಗೆ ಒಂದು ಕಥೆ ಇದೆ. ಒಬ್ಬಾತನಿಗೆ ದೇವರು ಪ್ರತ್ಯಕ್ಷವಾಗಿ ಏನು ವರ ಬೇಕು ಎಂದು ಕೇಳಿದಾಗ ದುರಾಸೆಗೆ ಬಿದ್ದ ಆತ ನಾನು ಮುಟ್ಟಿದ್ದೆಲ್ಲಾ ಚಿನ್ನವಾಗಲಿ ಎಂಬ ವರ ಕೇಳುತ್ತಾನೆ. ದೇವರು ತಥಾಸ್ತು ಎಂದು ಮರೆಯಾಗುತ್ತದೆ. ಮುಂದೆ ಆತ ಮುಟ್ಟಿದ ಹೆಂಡತಿ ಮಕ್ಕಳು ಕೊನೆಗೆ ತಿನ್ನುವ ಅನ್ನವೂ ಚಿನ್ನವಾಗಿ ಆತ ಹಸಿವಿನಿಂದ ನರಳುವಂತಾಗುತ್ತದೆ…..

ಸದ್ಯದ ನಮ್ಮ ‌ಸ್ಥಿತಿ ಇದನ್ನು ನೆನಪಿಸುತ್ತಿದೆ. ಮೂವತ್ತು ನಲವತ್ತು ವರ್ಷಗಳ ಹಿಂದೆ ಬಹುತೇಕ ನಾವುಗಳು ಅನ್ನಕ್ಕಾಗಿ ಪರಿತಪ್ಪಿಸುತ್ತಿದ್ದೆವು. ಅದೃಷ್ಟವಶಾತ್ ಇಂದು ಊಟ ವಸತಿ ಬಟ್ಟೆ ತಕ್ಕಮಟ್ಟಿಗೆ ಎಲ್ಲರಿಗೂ ಇದೆ.‌ ಆದರೆ ದುರಾದೃಷ್ಟವಶಾತ್ ನಮ್ಮಲ್ಲಿ ಬಹುತೇಕರಿಗೆ ಚಿನ್ನವಿದೆ ಅನ್ನವಿಲ್ಲ ಅರ್ಥಾತ್‌ ಅನ್ನವಿದ್ದರು ಅದನ್ನು ಅನುಭವಿಸಿ ಹೊಟ್ಟೆ ತುಂಬ ತಿನ್ನುವ ಯೋಗವಿಲ್ಲ ಕಾರಣ ಅನಾರೋಗ್ಯ….

ಸರಸ್ವತಿಯನ್ನು ( ಜ್ಞಾನವನ್ನು ) ಮರೆತು ಕೇವಲ ಲಕ್ಷ್ಮಿಯ ಹಿಂದೆ ಬಿದ್ದ ಪರಿಣಾಮವಿದು. ಇಪ್ಪತ್ತು ವರ್ಷಗಳ ಹಿಂದೆ ಅಷ್ಟೇನು ಮಹತ್ವ ಪಡೆಯದ ವರ ಮಹಾಲಕ್ಷ್ಮಿ ಹಬ್ಬ ಇಂದು ಬಹಳಷ್ಟು ಮಧ್ಯಮ ವರ್ಗದವರು ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಲು ಕಾರಣ ಹಣದ ಬಗೆಗಿನ ಅತಿಯಾದ ಮೋಹ ಮತ್ತು ಮಾಧ್ಯಮಗಳ ಜ್ಯೋತಿಷಿಗಳು ಸೃಷ್ಟಿಸಿರುವ ಉತ್ಪ್ರೇಕ್ಷಿತ ಭ್ರಮಾಲೋಕ…..

ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುವುದೇನೆಂದರೆ ಭಕ್ತಿಗಿಂತ ಹೆಚ್ಚಾಗಿ ಆಸೆಗಳೇ ಮೇಲುಗೈ ಪಡೆದಿವೆ.‌ ಅದರೊಳಗಿನ ಒಳ್ಳೆಯ ಮೌಲ್ಯಗಳು ಕಾಣೆಯಾಗಿವೆ. ಒಳಗೆ ಅಪ್ರಾಮಾಣಿಕತನ ತುಂಬಿಕೊಂಡು ಲಕ್ಷ್ಮೀ ರೂಪದ ಹಣ ಒಡವೆ ಅಲಂಕಾರಗಳನ್ನು ಪೂಜಿಸಿದರೆ ಫಲವೇನು. ಇದು ಆತ್ಮವಂಚನೆಯಾಗುವುದಿಲ್ಲವೇ…..

ಕಾಯಕವೇ ಕೈಲಾಸ ತತ್ವದ ವಿರುದ್ಧ ದಿಕ್ಕಿನಲ್ಲಿ ಹಣ ಮಾಡುವ ತಂತ್ರಗಾರಿಕೆಗೆ ನಾವುಗಳು ಶರಣಾಗಿದ್ದೇವೆ. ಅನಾರೋಗ್ಯ ಆತ್ಮಹತ್ಯೆ ಅಪಘಾತ ಎಂಬ ಸಾವುಗಳು ಒತ್ತಡದ ಬದುಕಿನ ಪರಿಣಾಮ ನಮ್ಮನ್ನು ಆವರಿಸಿವೆ…..

ಆದ್ದರಿಂದ ಈ ವರ ಮಹಾಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಒಂದಷ್ಟು ಆತ್ಮಾವಲೋಕನದ ಅವಶ್ಯಕತೆ ಇದೆ.
” ಸಾಕು ಎಂಬುವವನು ಶ್ರೀಮಂತ – ಬೇಕು ಎಂಬುವವನು ಬಡವ ” ಎಂಬ ನುಡಿ ಮಾತಿನ ನಿಜವಾದ ಒಳ ಅರ್ಥವನ್ನು ಅರಿತುಕೊಂಡು ಅದನ್ನು ಅಳವಡಿಸಿಕೊಳ್ಳಬೇಕಿದೆ…….

ಸಂಪ್ರದಾಯ ಮತ್ತು ಆಚರಣೆಗಳಲ್ಲಿ ಒಂದಿಷ್ಟು ಮೌಡ್ಯ ತುಂಬಿದ್ದರು ಹಬ್ಬಗಳು ನಮ್ಮ ಸಮಾಜದ
ಬಹುಮುಖ್ಯ ಸಂಭ್ರಮಗಳು.
ಸ್ವಲ್ಪ ಹಿಂದಿನವರೆಗೂ ಹಬ್ಬಗಳು ರುಚಿಯಾದ ಊಟ ಮತ್ತು ಹೊಸ ಬಟ್ಟೆಗಳಿಗೆ ಆಕರ್ಷಕ ಸಮಯವಾಗಿತ್ತು. ಆದರೆ ಆಧುನಿಕತೆಯ ಭರದಲ್ಲಿ ಅದು ಇಂದು ಶಿಥಿಲವಾಗಿ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳುವ ಹಂತದಲ್ಲಿವೆ. ಕೇವಲ ಕಾಟಾಚಾರದ, ತೋರಿಕೆಯ ಪ್ರದರ್ಶನವಾಗಿದೆ…….

ಎಲ್ಲದರಲ್ಲಿಯೂ ಬದಲಾವಣೆಗಳಾಗುತ್ತಿರುವ ಈ ಕಾಲ ಘಟ್ಟದಲ್ಲಿ ಹಬ್ಬಗಳಲ್ಲಿಯೂ ಒಂದಷ್ಟು ಆಧುನಿಕತೆಯ ಆಚರಣೆಗಳನ್ನು ಅಳವಡಿಸಿಕೊಂಡರೆ ನಿಜಕ್ಕೂ ಮತ್ತೆ ಅದು ತನ್ನ ನಿಜ ಅರ್ಥದ ಸಂತೋಷ ಸಂಭ್ರಮಗಳ ಕೂಟಗಳಾಗಿ ಮಾರ್ಪಡಬಹುದು…….

ಬಹುತೇಕರಲ್ಲಿ ಈಗ ಊಟ ಬಟ್ಟೆಗಳ ಸಂಭ್ರಮ ಅಷ್ಟಾಗಿ ಉಳಿದಿಲ್ಲ. ಎಲ್ಲಾ ರೀತಿಯ ಊಟ ಬಟ್ಟೆಗಳು ಎಲ್ಲಾ ಸಂದರ್ಭದಲ್ಲಿಯೂ ಲಭ್ಯವಿದೆ. ಅದಕ್ಕಾಗಿ ಹಬ್ಬಗಳಿಗಾಗಿ ಕಾಯುವ ಸ್ಥಿತಿ ಇಲ್ಲ. ಆದರೆ ನಿಜವಾಗಿ ಕಾಣೆಯಾಗಿರುವುದು ಸ್ನೇಹ, ಪ್ರೀತಿ, ವಿಶ್ವಾಸ , ಆತ್ಮೀಯ ವಾತಾವರಣ ಮತ್ತು ಮಾನವೀಯ ಮೌಲ್ಯಗಳು.
ಅದನ್ನು ಪುನರ್ ಸ್ಥಾಪಿಸಲು ಹಬ್ಬಗಳನ್ನು ವೇದಿಕೆ ಮಾಡಿಕೊಳ್ಳಬಹುದು……

ಹೇಗೆ ವಿವಿಧ ಕಾರಣಗಳಿಗಾಗಿ
ಆಧುನಿಕ ಪಾರ್ಟಿಗಳನ್ನು ಆಯೋಜಿಸಲಾಗುತ್ತದೋ ಹಾಗೆ ಹಬ್ಬಗಳನ್ನು ಆತ್ಮೀಯರ, ಗೆಳೆಯರ, ಬಂಧುಗಳ ಸ್ನೇಹಕೂಟಗಳಾಗಿ ಮಾರ್ಪಡಿಸಿ ಮನಸ್ಸಿಗೆ ಮುದ ನೀಡುವಂತೆ ಮಾಡಿಕೊಳ್ಳಬಹುದು…..

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ದಿನ ಹಿರಿಯರೊಂದಿಗೆ ಚಿಂತನ – ಮಂಥನ, ಮಕ್ಕಳಿಗೆ ಒಂದಷ್ಟು ಆಟಗಳು, ಭವಿಷ್ಯದ ಯೋಜನೆಗಳನ್ನು ಮನೆಯ ಒಳಗೇ ಚರ್ಚಿಸುವ ಒಂದು ವೇದಿಕೆ ಸೃಷ್ಟಿಸಬಹುದು……

ಅಲ್ಲದೆ ಆರ್ಥಿಕವಾಗಿ ತೀರಾ ಕೆಳಸ್ತರದ, ಹಬ್ಬದ ಊಟಕ್ಕೆ ಆಸೆಪಡುವ ಒಂದಷ್ಟು ನಮ್ಮ ಸುತ್ತಮುತ್ತಲ ಬಡವರಿಗೆ ಒಳ್ಳೆಯ ಹಬ್ಬದೂಟ ಹಾಕುವ ಸ್ವಯಂ ತೃಪ್ತಿಯ ಕೆಲಸವನ್ನು ಮಾಡಬಹುದು. ಆಗ ಹಬ್ಬಗಳ ಮಹತ್ವ ಹೆಚ್ಚಾಗಿ ಆತ್ಮತೃಪ್ತಿಯ ಜೊತೆಗೆ ಮುಂದಿನ ಹಬ್ಬಕ್ಕೆ ಕಾಯುವ ಸಂತಸ ಉಳಿಯುತ್ತದೆ…….

ಇಲ್ಲದಿದ್ದರೆ ಹಬ್ಬಗಳು ಒಣ ಆಚರಣೆಗಳಿಂದ ತಮ್ಮ ಪ್ರಾಮುಖ್ಯತೆ ಕಳೆದುಕೊಳ್ಳಬಹುದು.
ಟಿವಿ ಜ್ಯೋತಿಷಿಗಳ ಎಡಬಿಡಂಗಿತನದ ತೀರಾ ಜೊಳ್ಳಾಗಬಹುದು ಮತ್ತು ಕುಟುಂಬ ವ್ಯವಸ್ಥೆ ಒಂದು ವ್ಯಾಪಾರಿ ಸಂಸ್ಥೆಯಾಗಿ ಬದಲಾಗಬಹುದು…..

ಇದು ಅವರವರ ಅನುಕೂಲಗಳನ್ನು ಅವಲಂಭಿಸಿರುತ್ತದೆ. ನನ್ನ ಆಶಯ ಮತ್ತು ಅನಿಸಿಕೆ ಅಷ್ಟೆ…….

ಎಲ್ಲರಿಗೂ ಹಬ್ಬದ ಶುಭಾಶಯಗಳು…..

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..

error: No Copying!