ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರದ ಗೃಹ ಮಂತ್ರಿ ಡಾ. ಜಿ. ಪರಮೇಶ್ವರ್ ಅವರು, ಧರ್ಮಸ್ಥಳದಲ್ಲಿ ರೇಪ್ & ಮರ್ಡರ್ ಆದ ಸೌಜನ್ಯ (17) ಪ್ರಕರಣ “ಮುಗಿದ ಅಧ್ಯಾಯ” ಎಂದು ಧಾರವಾಡದಲ್ಲಿ ಪತ್ರಕರ್ತರ ಜೊತೆಗೆ ಮಾತನಾಡುತ್ತಾ (18/08/2023) ಹೇಳುವ ಮೂಲಕ ಅವರ ಉಳಿದಿದ್ದ ಅಲ್ಪ ಸ್ವಲ್ಪ ಘನತೆ ಮತ್ತು ಗೌರವಕ್ಕೆ, ವ್ಯಕ್ತಿತ್ವಕ್ಕೆ ಅವರ ಕೈಯಿಂದ ಅವರೇ ಶಾಶ್ವತವಾದ ಮಸಿಯನ್ನು ಬಳಿದುಕೊಂಡಿದ್ದಾರೆ. ಈ ಶಾಶ್ವತವಾದ ಮಸಿ ಅವರ ವ್ಯಕ್ತಿತ್ವಕ್ಕೆ ಅವರೇ ಬಳಿದುಕೊಂಡ ಮಸಿ ಆಗಿರುವ ಕಾರಣ, ಇದಕ್ಕೆ ಅವರೇ ಹೊಣೆಗಾರರು ಹೊರತು ಬೇರೆ ಯಾರೂ ಅಲ್ಲ. ಅವರಿಗಂಟಿದ ಈ ಶಾಶ್ವತವಾದ ಕಳಂಕದ ಫಲವನ್ನೂ ಅವರು ಅನುಭವಿಸಲೇಬೇಕಾಗುತ್ತದೆ. ಇದರಲ್ಲಿ ಯಾವ ಅನುಮಾನವೂ ಇಲ್ಲ.
ರಾಜ್ಯ ಸರಕಾರದ ಗೃಹ ಮಂತ್ರಿಯಂಥ ಒಂದು ಅತ್ಯಂತ ಜವಾಬ್ದಾರಿಯುತ, ಬಹಳ ಮೇಲ್ ಸ್ತರದ ಹೊಣೆಗಾರಿಕೆಗಳಿರುವ ಖಾತೆಯನ್ನು ವಹಿಸಿಕೊಂಡಿರುವ ವ್ಯಕ್ತಿ, ಒಂದು ಬಹಳ ಗಂಭೀರವೂ, ಮಹತ್ವದ್ದೂ ಆದ ಪ್ರಕರಣದ ಬಗ್ಗೆ ಇಷ್ಟು ಕೇವಲವಾಗಿ, ಹಗುರವಾಗಿ ಹೇಳಿಕೆ ಕೊಡಲು ಸಾಧ್ಯವೇ ? ಹೌದು, ಖಂಡಿತಾ ಸಾಧ್ಯವಿದೆ ! ಗೃಹ ಮಂತ್ರಿಯಾಗುವುದಕ್ಕೆ ಯೋಗ್ಯರಲ್ಲದವರು ಗೃಹಮಂತ್ರಿಯಾದರೆ ಮಾತ್ರ ಹೀಗೆ ಬೇಕಾಬಿಟ್ಟಿ ಹೇಳಲು ಸಾಧ್ಯವಿದೆ. ಇವರನ್ನು ಗೃಹ ಮಂತ್ರಿಯನ್ನಾಗಿ ಮಾಡಿದ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು. ನಮಗಲ್ಲ.
ಡಾ. ಜಿ. ಪರಮೇಶ್ವರ್ ಸೌಜನ್ಯಾ ಪ್ರಕರಣದ ಬಗ್ಗೆ ಹೀಗೆ ಹೇಳಲು ನಿಜಕ್ಕೂ ಕಾರಣ ಏನಿರಬಹುದು ? ಇದಕ್ಕೆ ಎರಡು ಮುಖ್ಯ ಕಾರಣಗಳಿರಬಹುದು.
ಒಂದು: ಸೂಟ್ಕೇಸ್ ಮಹಿಮೆ. ಈ ಮಹಿಮೆಯ ಕಾರಣದಿಂದಲೇ ಇದುವರೆಗೂ ನಮ್ಮ ರಾಜ್ಯವನ್ನಾಳಿದ ಯಾವುದೇ ಪಕ್ಷದ ಸರಕಾರವೂ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ದೇವಸ್ಥಾನವನ್ನು ಮುಜುರಾಯಿ ಅಧೀನಕ್ಕೆ ತೆಗೆದುಕೊಳ್ಳುವ ಪ್ರಾಥಮಿಕ ಕರ್ತವ್ಯವನ್ನು ಮಾಡಲು ಆಸಕ್ತಿ, ಇಚ್ಛಾಶಕ್ತಿ ತೋರಿಸದಿರುವುದು. ಮಾತ್ರವಲ್ಲ ಧರ್ಮಸ್ಥಳ ಮತ್ತು ಉಜಿರೆ ಗ್ರಾಮಗಳಲ್ಲಿ ನನ್ನ ಅಂದಾಜಿನ ಪ್ರಕಾರ ಕಡಿಮೆ ಎಂದರೂ ಕಳೆದ ಐವತ್ತು ವರ್ಷಗಳಿಂದ ನಡೆದ ನೂರಾರು ಕೊಲೆ ಮತ್ತು ರೇಪ್ & ಮರ್ಡರ್ ಪ್ರಕರಣಗಳನ್ನು ಆತ್ಮಹತ್ಯೆ ಎಂದೂ, ಅಸಹಜ ಸಾವು ಎಂದು ಪೊಲೀಸ್ ಅಧಿಕಾರಿಗಳು ಸುಳ್ಳು ದಾಖಲಾತಿಗಳನ್ನುಮಾಡಿ ಕಡತಕ್ಕೆ “ಸಿ” ರಿಪೋರ್ಟ್ ಎಂದು ಬರೆದು ಕೈತೊಳೆದುಕೊಳ್ಳಲು ಕಾರಣ. ಇದಕ್ಕೆ ಸಂಬಂಧಿಸಿ ಇದುವರೆಗೂ ಆಗಿ ಹೋದ ನಮ್ಮ ರಾಜ್ಯದ ಎಲ್ಲಾ ಗೃಹ ಮಂತ್ರಿಗಳು, ಆರೋಗ್ಯ ಮಂತ್ರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಂತ್ರಿಗಳು, ದ. ಕ. ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದವರು ಎಲ್ಲರೂ ಕಣ್ಣಿದ್ದೂ ಕುರುಡರು, ಕಿವಿ ಇದ್ದೂ ಕುರುಡರು. ಮಾತ್ರವಲ್ಲ, ಇವರೆಲ್ಲರೂ ಹೃದಯಹೀನರ ಸಾಮ್ರಾಜ್ಯದ ರಕ್ಷಕರು ಮತ್ತು ಪೋಷಕರು.
ಕಾರಣ ಎರಡು: ಕನಿಷ್ಟ ಅಧ್ಯಯನ ಮತ್ತು ಇಚ್ಛಾಶಕ್ತಿಯ ಕೊರತೆ ಹಾಗೂ ನಿಷ್ಕಾಳಜಿ. ಪರಮೇಶ್ವರ್ ಅವರು ವರ್ಗಾವಣೆ ದಂಧೆಕೋರ ದಲ್ಲಾಳಿಗಳ, ಮುಖವಾಡಧಾರಿಗಳ, ಗೋಮುಖವ್ಯಾಘ್ರರ, ಹಗಲುವೇಷಧಾರಿಗಳ ಆಪ್ತರು. ಇವುಗಳೆಲ್ಲದರ ಕಾರಣವಾಗಿ, ಇವರು ಕೇಳುವುದು, ಆಲಿಸುವುದು, ಪಾಲಿಸುವುದು ಮೇಲಿನವರ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನೇ ಹೊರತು, ತಮ್ಮ ಸ್ವಂತ ವಿವೇಕವನ್ನಾಗಲಿ, ವಿಚಾರ ಶಕ್ತಿಯನ್ನಾಗಲಿ ಅಲ್ಲ. ಇದು ಸ್ಪಷ್ಟ.
ಖಂಡಿತವಾಗಿಯೂ ಗೃಹ ಮಂತ್ರಿ ಪರಮೇಶ್ವರ್ ಅವರು ಸೌಜನ್ಯ ಪ್ರಕರಣದ ಬಗ್ಗೆ ಬೆಂಗಳೂರಿನ ಅಡಿಷನಲ್ ಸಿಟಿ ಸಿವಿಲ್ & ಸೆಷನ್ಸ್ ಜಡ್ಜ್ , ಚಿಲ್ಡ್ರನ್ಸ್ ಕೋರ್ಟ್ (ಸ್ಪೆಷಲ್) ದಿನಾಂಕ 16/06/ 2023ರಂದು ಸೌಜನ್ಯ ಪ್ರಕರಣ (ಸ್ಪೆಷಲ್. ಸಿಸಿ. ನಂ. 203/2016)ಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪನ್ನು ಓದದೇ ಇರುವುದು. ಓದಿದರೂ ಅರ್ಥವಾಗಿಲ್ಲ. ಅರ್ಥಮಾಡಿಕೊಳ್ಳುವ ಸಾಮರ್ಥ್ಯ ಇಲ್ಲದಿರುವುದು.
ಇಂಟೆಲಿಜೆಂಟ್ಸ್ ಎಡಿಜಿಪಿ ಯಾರೋ ಅವರು ಮತ್ತು ಡಿಜಿಪಿಯವರು ಇವರಿಗೆ (ಗೃಹಮಂತ್ರಿಗಳಿಗೆ) ಪ್ರಕರಣದ ಗಂಭೀರತೆ, ಮಹತ್ವದ ಬಗ್ಗೆ, ಕೋರ್ಟ್ ತೀರ್ಪಿನಲ್ಲಿರುವ ಗಂಭೀರವಾದ ಅಂಶಗಳ ಬಗ್ಗೆ ಸರಿಯಾಗಿ ಮಾಹಿತಿ ನೀಡದೆ, ತಿಳುವಳಿಕೆ ನೀಡದೆ, ಮನವರಿಕೆ ಮಾಡದೆ ಕತ್ತಲಲ್ಲಿರಿಸಿರುವ ಸಾಧ್ಯತೆಯೂ ಇದ್ದೇ ಇದೆ. ಇಲ್ಲಿ, ಸಂಬಂಧಿಸಿದ ಅಧಿಕಾರಿಗಳೂ ಸಹ ಸೂಟ್ಕೇಸ್ ಮಹಿಮೆಗೆ ಪಾತ್ರರಾಗಿರಬಹುದೆಂದು ಅಂದಾಜಿಸಲು ಬಲವಾದ ಅವಕಾಶವಿದೆ.
ಗೃಹ ಮಂತ್ರಿಗಳೇ, ಇನ್ನಾದರೂ ಧರ್ಮಸ್ಥಳ ಮತ್ತು ಉಜಿರೆ ಗ್ರಾಮಗಳನ್ನು ದೇಶದ ಸಂವಿಧಾನದ, ಕಾನೂನಿನ ವ್ಯಾಪ್ತಿಗೆ ಒಳಪಡಿಸುವ ಪ್ರಾಥಮಿಕ ಕೆಲಸಗಳನ್ನು ಮಾಡಿ. ಧರ್ಮಸ್ಥಳ ಮತ್ತು ಉಜಿರೆ ವಿದೇಶವಲ್ಲ, ನಿತ್ಯಾನಂದನ ಕೈಲಾಸ ದೇಶದಂತೆ ಒಂದು ಪ್ರತ್ಯೇಕ ದೇಶವೂ ಅಲ್ಲ ಎಂಬ ಕನಿಷ್ಟ ಪ್ರಜ್ಞೆ ನಿಮಗಿರಲಿ, ಇರಬೇಕು.
ನೀವು ಜನಪರ, ನ್ಯಾಯಪರ, ಸಂವಿಧಾನ ಮತ್ತು ಕಾನೂನು ಪರವಾಗಿಯೇ ಇದ್ದೀರಿ ಎಂದಾದರೆ, ರಾಜ್ಯದ ಹೆಣ್ಮಕ್ಕಳ ರೇಪ್ & ಮರ್ಡರ್ ವಿರುದ್ಧ ಇದ್ದೀರಿ ಎಂದಾದರೆ ಸೌಜನ್ಯಾ ಪರವಾಗಿ ಹೋರಾಟದಲ್ಲಿ ನಿರತರಾದ ಯಾರನ್ನಾದರೂ ಕರೆದು ಮಾತಾಡಿಸಿ ವಾಸ್ತವಾಂಶಗಳನ್ನು ತಿಳಿದುಕೊಳ್ಳಿ. ಕರೆದರೆ ನಾವು ಯಾರೂ ಸಹ ನಿಮ್ಮ ಜೊತೆ ಮಾತಾಡಲು, ಮನವರಿಕೆ ಮಾಡಿಕೊಡಲು ಬರಲು ಸಿದ್ಧರಿದ್ದೇವೆ.
~ ಶ್ರೀರಾಮ ದಿವಾಣ, ಉಡುಪಿ
@ 8105749711
19/08/2023