ಕಾರ್ಕಳ ನಗರ: ದಿನಾಂಕ:,16-08- 2023(ಹಾಯ್ ಉಡುಪಿ ನ್ಯೂಸ್) ಕುಕ್ಕುಂದೂರು ಗ್ರಾಮದ ನಿವಾಸಿಗಳೀರ್ವರು ಬ್ಯಾಂಕ್ ಸಾಲ ಪಡೆದು ಇದೀಗ ಸಾಲ ಕಟ್ಟದೇ ಇರುವ ಬಗ್ಗೆ ಜಗಳ ಮಾಡಿಕೊಂಡು ಹಲ್ಲೆ ಮಾಡಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಕುಕ್ಕುಂದೂರು ಗ್ರಾಮದ ಅಯ್ಯಪ್ಪನಗರ ಗರಡಿ ಬಳಿ ನಿವಾಸಿಯಾಗಿರುವ ಆನಂದ ಎಂಬವರ ಹೆಂಡತಿ ಶ್ರೀಮತಿ ಸರೋಜರವರು ವಿಶ್ವ ಕರ್ಮ ಬ್ಯಾಂಕ್‌ನಲ್ಲಿ ಸದಸ್ಯರಾಗಿದ್ದು ಅದೇ ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದು, ಅಪಾದಿತ ವಿಶ್ವನಾಥ ಎಂಬಾತನು ಅದೇ ಬ್ಯಾಂಕ್‌ನಲ್ಲಿ ಸಾಲ ಪಡೆದಿರುತ್ತಾನೆ ಎಂದಿದ್ದಾರೆ. ದಿನಾಂಕ 13-08-2023 ರಂದು ಸಂಜೆ ಅಪಾದಿತರಾದ ವಿಶ್ವನಾಥ, ಸಂಜೀವ , ಮಂಜುನಾಥ, ಪ್ರೇಮ ಮತ್ತು ವಿಶಾಲ ಎಂಬವರು ಆನಂದರವರ ಮಗಗ್ಗ ಅಕ್ರಮ ಪ್ರವೇಶ ಮಾಡಿ ಆನಂದ ಮತ್ತು ಅವರ ಹೆಂಡತಿಗೆ ಹಲ್ಲೆ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ 448, 323, 354 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ. ಆನಂದ ಮತ್ತು ಅವರ ಪತ್ನಿ ಸರೋಜ ರವರು ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುತ್ತಾರೆ ಎಂದು ಸುಶೀಲ ಎಂಬವರು ಪ್ರತಿ ದೂರು ನೀಡಿದ್ದಾರೆ.
ಸುಶೀಲ ಇವರ ಗಂಡ ವಿಶ್ವನಾಥ ರವರು ಕಾರ್ಕಳ ಬಸ್ ಸ್ಟ್ಯಾಂಡ್ ಬಳಿ ಇರುವ ವಿಶ್ವಕರ್ಮ ಬ್ಯಾಂಕ್‌ನಲ್ಲಿ ವಿಶ್ವಕರ್ಮ ಗ್ರೂಪ್ ನ ಅಧ್ಯಕ್ಷರಾಗಿದ್ದು , ಗ್ರೂಪ್‌ನಲ್ಲಿ ಸಾಲ ಪಡೆದುಕೊಂಡಿರುತ್ತಾರೆ ಎಂದಿದ್ದಾರೆ. ನೆರೆಮನೆಯ ಆನಂದ ಎಂಬವರ ಹೆಂಡತಿ ಸರೋಜ ಎಂಬವರು ಅದೇ ಗ್ರೂಪ್‌ನಲ್ಲಿ ಸದಸ್ಯರಾಗಿದ್ದು ಸರೋಜರವರು ತೆಗೆದುಕೊಂಡ ಸಾಲದ ಕಂತನ್ನು ಸರಿಯಾಗಿ ಕಟ್ಟದ ಕಾರಣ, ದಿನಾಂಕ 13-08-2023 ರಂದು ಮಧ್ಯಾಹ್ನ ಸುಶೀಲರವರು ಮತ್ತು ಅವರ ಗಂಡ ವಿಶ್ವನಾಥ ರವರು ಕುಕ್ಕುಂದೂರು ಗ್ರಾಮದ ಅಯ್ಯಪ್ಪ ನಗರ, ಕೆರ್ದಡ್ಡು ದರ್ಖಾಸ್ ಎಂಬಲ್ಲಿರುವ ಅಪಾದಿತ ಆನಂದ ಎಂಬವರ ಮನೆಗೆ ಸಾಲವನ್ನು ವಾಪಾಸು ಕಟ್ಟದೇ ಇರುವ ಬಗ್ಗೆ ಕೇಳಲು ಹೋದಾಗ ಅಪಾದಿತ ಆನಂದನು ಸುಶೀಲ ಮತ್ತು ಅವರ ಗಂಡನನ್ನುದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು ಆನಂದನು ಸುಶೀಲರಿಗೆ ಹಲ್ಲೆ ಮಾಡಿ ಅಪಾದಿತೆ ಸರೋಜ ಕತ್ತಿ ಮತ್ತು ಕಲ್ಲನ್ನು ಹಿಡಿದುಕೊಂಡು ಸುಶೀಲ ಮತ್ತು ಅವರ ಗಂಡನನ್ನುದ್ದೇಶಿಸಿ ಕೊಲ್ಲುವುದಾಗಿ ಜೀವಬೆದರಿಕೆ ಹಾಕಿರುತ್ತಾರೆ ಎಂದು ಪೊಲೀಸರಿಗೆ ದೂರಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ 504 354, 506(2) ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.