ದಿನಾಂಕ 7/8/2023 ಸೋಮವಾರ ನನ್ನ ಜನ್ಮದಿನದ ಪ್ರಯುಕ್ತ ಬಹಳಷ್ಟು ಜನ ಪ್ರೀತಿಯ ಶುಭಾಶಯಗಳನ್ನು ಕೋರಿದರು…….
2021 ರ ಇದೇ ದಿನ ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವನಮಾರ್ಪಳ್ಳಿಯಿಂದ 2020 ನವೆಂಬರ್ ಒಂದರಿಂದ ಪ್ರಾರಂಭಿಸಿದ ” ಜ್ಞಾನ ಭಿಕ್ಷಾ ಪಾದಯಾತ್ರೆ ” ತನ್ನ ಮದ್ಯದ ಹಾದಿಯ ಸಂದರ್ಭದಲ್ಲಿ ಬರೆದ ಕೃತಜ್ಞತಾಪೂರ್ವಕ ಬರಹವನ್ನು ಯಥಾವತ್ತಾಗಿ ಮತ್ತೊಮ್ಮೆ ಪ್ರಕಟಿಸುತ್ತಿದ್ದೇನೆ.
ಈ ಯಾತ್ರೆ ಅಂತಿಮವಾಗಿ ಅನಾರೋಗ್ಯದ ಕಾರಣ ನಾನು ಕುಸಿದು ಬಿದ್ದಾಗ ಒಟ್ಟು 385 ದಿನ, 11500 ಕಿಲೋಮೀಟರ್, 28 ಜಿಲ್ಲೆಗಳ 219 ತಾಲ್ಲೂಕುಗಳು ಮತ್ತು ಸುಮಾರು 1500 ಕ್ಕೂ ಹೆಚ್ಚು ಸಂವಾದಗಳನ್ನು ಕ್ರಮಿಸಿಯಾಗಿತ್ತು. ಆ ನೆನಪುಗಳ ಬುತ್ತಿಯಿಂದ……..
ಕ್ಷಮಿಸಿ…….
ಪ್ರತಿ ವಂದನೆ ಹೇಳಲೂ ಆಗದಷ್ಟು ನಿರಂತರ ಸುರಿಯುತ್ತಿರುವ ಮಳೆ, ಜೊತೆಗೆ ನಿರಂತರವಾಗಿ ಭೋರ್ಗರೆಯುವ ಜನ್ಮದಿನದ ಶುಭಾಶಯಗಳ ಒತ್ತಡವನ್ನು ತಡೆದು ಕೊಳ್ಳಲು ಒದ್ದಾಡುತ್ತಿರುವ ನನ್ನ ಸಂಗಾತಿ ಮೊಬೈಲು, ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೇರಲಾದ ವೀಕ್ ಎಂಡ್ ಕರ್ಪ್ಯೂ ಹೀಗೆ ಇನ್ನೂ ಹೇಳಿಕೊಳ್ಳಲಾಗದ ಕೆಲವು ಕಾರಣಗಳಿಂದಾಗಿ ನನಗೆ ಶುಭಕೋರಿದ ಪ್ರೀತಿಯ ಮನಸ್ಸುಗಳಿಗೆ ವೈಯಕ್ತಿಕವಾಗಿ ಕೃತಜ್ಞತೆಯ ಹೇಳಲು ಸಾದ್ಯವಾಗುತ್ತಿಲ್ಲ…..
ದಯವಿಟ್ಟು ಅದಕ್ಕಾಗಿ ದುರಹಂಕಾರ ಅಥವಾ ನಿರ್ಲಕ್ಷ್ಯ ಎಂದು ಭಾವಿಸದಿರಿ. ಪ್ರೀತಿ ಅಭಿಮಾನ ಗೌರವಗಳಿಗೆ ಸದಾ ತಲೆ ಬಾಗುವೆ. ಅದನ್ನು ಹೃದಯ ಪೂರ್ವಕವಾಗಿ ಸ್ವೀಕರಿಸಿರುವೆ. ಎಲ್ಲರ ಹಾರೈಕೆಗಳು, ಪ್ರೀತಿಯ ಹಿತ ನುಡಿಗಳು, ಆತ್ಮೀಯ ಬರಹಗಳು ನನ್ನ ಹೃದಯವನ್ನು ಹೊಕ್ಕಿವೆ……
ಅದು ನನ್ನನ್ನು ಮತ್ತಷ್ಟು ಶುದ್ದ ಮನಸ್ಸಿನಿಂದ ಪ್ರಾಮಾಣಿಕವಾಗಿ ಸಮಾಜದ ಮನಸ್ಸುಗಳ ಅಂತರಂಗದ ಚಳವಳಿ ಮಾಡಲು ಪ್ರೇರೇಪಿಸಿದೆ. ನಡೆಯುವ ಪ್ರತಿ ಹೆಜ್ಜೆಯನ್ನು ದೃಢವಾಗಿಸುತ್ತಾ, ನಿಮ್ಮ ಪ್ರೀತಿಯನ್ನು ಬಲವಾಗಿಸುತ್ತಾ, ಅಸಾಧ್ಯವಾದ ಕನಸುಗಳು ನನಸಾಗಿಸುತ್ತ ಮುನ್ನಡೆಸುತ್ತಿದೆ……
ಇಲ್ಲಿಯವರೆಗೆ ಸುಮಾರು 280 ದಿನಗಳ ಮತ್ತು ಸುಮಾರು 8500 ಕಿಲೋಮೀಟರುಗಳ ನಡಿಗೆಯ ನಂತರವೂ ಪ್ರಕೃತಿ ಮತ್ತು ಸಮಾಜ ಇನ್ನೂ ಈ ಅನಾಮಧೇಯ ಸಾಮಾನ್ಯ ವ್ಯಕ್ತಿಯನ್ನು ಸಹಿಸಿಕೊಳ್ಳುತ್ತಾ ಪ್ರೋತ್ಸಾಹಿಸುತ್ತಾ ಹರಸುತ್ತಿದೆ………
ನಿಜ ಮನುಷ್ಯರ ಹುಡುಕಾಟದ ಈ ಕಾಲ್ನಡಿಗೆಯಲ್ಲಿ ಅಗೋಚರ ಸಂಖ್ಯೆ ಮುಂದೊಮ್ಮೆ ಬಯಲಾದಾಗ ಸಮಾಜದ ಪರಿವರ್ತನೆಯ ಫಲಶೃತಿ, ದಿಕ್ಕು ಮತ್ತು ವೇಗ ತಾನೇತಾನಾಗಿ ಗುರುತಿಸಲ್ಪಡುತ್ತದೆ.
ಅಲ್ಲಿಯವರೆಗೂ……
ವೈದ್ಯನಾಗಬೇಕೆಂಬಾಸೆಯಾಗುತ್ತಿದೆ,….
ಎಂ ಬಿ ಬಿ ಎಸ್ ಓದಿ ಅಲ್ಲ,
ಪಿಹೆಚ್‌ಡಿ ಮಾಡಿ ಅಲ್ಲ,
ಗೌರವ ಡಾಕ್ಟರೇಟ್ ಪಡೆದೂ ಅಲ್ಲ,…..
ಜನರ ಮನಸ್ಸುಗಳ ರೋಗ ಗುರುತಿಸುವ,
ಸಮಾಜದ ನರಗಳ ದೌರ್ಬಲ್ಯ ಪತ್ತೆ ಹಚ್ಚುವ,
ಜೀವ ಸಂಕುಲದ ವಿನಾಶ ತಡೆಯುವ,
ಸಸ್ಯ ಸಂಕುಲದ ಜೀವ ಉಳಿಸುವ,
ಪ್ರಕೃತಿ ಮಾತೆಯ ಆರೋಗ್ಯ ಕಾಪಾಡುವ,
ಭೂತಾಯಿಯ ಒಡಲು ತಂಪಾಗಿಸುವ,
ವೈದ್ಯನಾಗಬೇಕೆಂಬಾಸೆಯಾಗುತ್ತಿದೆ….
ಕೊಳೆತ ಮನಸುಗಳ ಚಿಕಿತ್ಸೆ ಮಾಡಬೇಕೆಂಬಾಸೆ,
ನೆರೆತ ಕನಸುಗಳ ಚಿಗುರೊಡೆಯಿಸಬೇಕೆಂಬಾಸೆ,
ಮಲಿನ ಗಾಳಿಗೆ ಶುಧ್ದ ಆಮ್ಲಜನಕ ನೀಡುವಾಸೆ,
ಕಲ್ಮಶ ನೀರಿಗೆ ಗ್ಲೂಕೋಸ್ ಕೊಡುವಾಸೆ,
ಕಲಬೆರಕೆ ಆಹಾರಕ್ಕೆ ಕಿಮೋಥೆರಪಿ ಮಾಡುವಾಸೆ,
ಇಡೀ ಬದುಕಿಗೇ ಚೈತನ್ಯ ನೀಡಬೇಕೆಂಬಾಸೆ,
ಅದಕ್ಕಾಗಿ,
ವೈದ್ಯನಾಗಬೇಕೆಂಬಾಸೆಯಾಗುತ್ತಿದೆ…
ನೊಂದ ಪ್ರೇಮಿಗಳಿಗೆ ಹೃದಯದ ಬೈಪಾಸ್ ಶಸ್ತ್ರಚಿಕಿತ್ಸೆ ಮಾಡುವಾಸೆ,
ಬೆಂದ ಜೀವಗಳಿಗೆ ಅಂಗಾಂಗ ಮರುಜೋಡಣೆ ಮಾಡುವಾಸೆ,
ಮುಖವಾಡದ ಮನುಷ್ಯರಿಗೆ ಅದನ್ನು ಕಿತ್ತೆಸೆದು ಸಹಜತೆ ಕೊಡುವಾಸೆ,
ಭರವಸೆ ಇಲ್ಲದ ಪೊರೆ ಬಂದಿರುವ ಕಣ್ಣುಗಳಿಗೆ ಭವಿಷ್ಯದ ಸ್ಪಷ್ಟ ದೃಷ್ಟಿ ನೀಡುವಾಸೆ,
ಕಿವಿ ಕೇಳಿದರೂ ಜಾಣ ಕಿವುಡಾದವರಿಗೆ ಶ್ರವಣ ಸಾಧನ ಅಳವಡಿಸಬೇಕೆಂಬಾಸೆ,
ಎಲ್ಲಾ ವರ್ಗಗಳ ನಡುವೆ ಸರಾಗ ಸಂಪರ್ಕಕ್ಕಾಗಿ ಸ್ಟಂಟ್ ಅಳವಡಿಸಬೇಕೆಂಬಾಸೆ,
ಅದಕ್ಕಾಗಿ,
ವೈಧ್ಯನಾಗಬೇಕೆಂಬಾಸೆಯಾಗುತ್ತಿದೆ….
ಬನ್ನಿ ಗೆಳೆಯರೆ ನನ್ನೊಂದಿಗೆ,.
ನಾನು ಸೇರುವೆನು ನಿಮ್ಮೊಂದಿಗೆ,
ಹೊಸ ಮನ್ವಂತರಕ್ಕೆ ನಾಂದಿಯಾಡುವೆ,
ನವ ವೈದ್ಯಾಲಯ ತೆರೆಯೋಣ,
ಕುಣಿಯುತ್ತಾ – ನಲಿಯುತ್ತಾ – ಬದುಕೋಣ,
ನೆಮ್ಮದಿಯ ಬದುಕಿನತ್ತಾ ಸಾಗೋಣ,
ಸೃಷ್ಟಿಯಲಿ ಲೀನವಾಗುವವರೆಗೂ….
ಇದು ಕನಸಲ್ಲ – ಕಾಲ್ಪನಿಕವಲ್ಲ.
ಮುಂದೊಂದು ದಿನ …..
†*
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..