ಮಾನ್ಯ ಮುಖ್ಯಮಂತ್ರಿಗಳೆ,
ಸೌಜನ್ಯಾ ಪ್ರಕರಣ ಅತ್ಯಂತ ಗಂಭೀರವಾದದ್ದು. ಅಪ್ರಾಪ್ತ ಪ್ರಾಯದ ಕಾಲೇಜು ವಿದ್ಯಾರ್ಥಿನಿಯ ರೇಪ್ & ಮರ್ಡರ್ ಪ್ರಕರಣವಿದು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ನೀಡಿ ಒಂದೂವರೆ ತಿಂಗಳು ಕಳೆದರೂ, ಒಂದೂವರೆ ತಿಂಗಳಿಂದ ಸಂತ್ರಸ್ತೆಯ ಕುಟುಂಬಸ್ಥರು ಹಾಗೂ ಸಾರ್ವಜನಿಕರು, ಸಂಘಟನೆಗಳು ರಾಜ್ಯಾದ್ಯಂತ ನಿರಂತರವಾಗಿ ಪ್ರತಿಭಟನೆ, ಧರಣಿ ನಡೆಸುತ್ತಿದ್ದರೂ ಇನ್ನೂ ಸಹ ಸರಕಾರ ಜಡ್ಜ್ ಮೆಂಟ್ ಕಡೆಗೆ ಗಮನಹರಿಸಿಲ್ಲ ಎಂಬುದು ಅತ್ಯಂತ ಬೇಸರದ ವಿಷಯ. ಮಾತ್ರವಲ್ಲ, ನಿಮ್ಮದು ಕಾಳಜಿ ರಹಿತ, ಬೇಜವಾಬ್ದಾರಿ ಸರಕಾರ ಎಂದು ತಿಳಿಯಬೇಕಾಗುತ್ತದೆ. ನಿಮ್ಮ ನಡೆ ಮತ್ತು ನುಡಿಯಲ್ಲಿ ಪ್ರಾಮಾಣಿಕತೆ ಮತ್ತು ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ.
ಸೌಜನ್ಯಾ ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗಿದೆ ಎಂದು ಹೇಳುತ್ತೀರಿ ! ಎಲ್ಲಿ ಇತ್ಯರ್ಥವಾಗಿದೆ ? ಹೇಗೆ ಇತ್ಯರ್ಥವಾಗಿದೆ ? ಎನ್ನುವುದನ್ನು ನೀವೇ ದಯವಿಟ್ಟು ಸಾರ್ವಜನಿಕರಿಗೆ ತಿಳಿಸಬೇಕು.
ಪೊಲೀಸರು, ಸಿಐಡಿಯವರು, ಸಿಬಿಐ ನವರ ಆರೋಪಪಟ್ಟಿಯಲ್ಲಿ ಆರೋಪಿ ಎಂದು ಹೇಳಿದ ಸಂತೋಷ್ ರಾವ್ ನಿರ್ದೋಷಿ ಎಂದು ನ್ಯಾಯಾಲಯ ಹೇಳಿದೆ. ಅತ್ಯಾಚಾರ ನಡೆಸಿದವರು ಯಾರೋ ಬೇರೆಯವರು ಎಂದೂ ಖಚಿತವಾಗಿದೆ. ತನಿಖಾಧಿಕಾರಿಗಳು ಗಂಭೀರ ಕರ್ತವ್ಯಲೋಪ ಎಸಗಿದ್ದು, ಅತ್ಯಾಚಾರ ಪ್ರಕರಣದ ಸಾಕ್ಷ್ಯನಾಶಪಡಿಸಿದ್ದೂ ಸ್ಪಷ್ಟವಾಗಿದೆ. ರೇಪಿಸ್ಡರು ಇನ್ನೂ ಸಹ ಸಾರ್ವಜನಿಕವಾಗಿ ಓಡಾಡುತ್ತಿದ್ದಾರೆ. ಹೀಗಿರುವಾಗ ಇನ್ನೂ ಸಹ ರೇಪಿಸ್ಟರ ವಿರುದ್ಧ ಒಂದು ದೃಢ ನಿರ್ಧಾರ ತೆಗೆದುಕೊಂಡು ಕ್ರಮ ತೆಗೆದುಕೊಳ್ಳಲು ಮೀನ ಮೇಷ ಎಣಿಸುತ್ತೀರಿ ಎಂದಾದರೆ ನಿಮ್ಮ ನಡೆಯಲ್ಲಿ ಪ್ರಾಮಾಣಿಕತೆ ಮತ್ತು ಕಾಳಜಿ ಎರಡೂ ಸಹ ಅತ್ಯಾಚಾರಕ್ಕೊಳಗಾದ ಬಾಲಕಿ, ಆಕೆಯ ಕುಟುಂಬಕ್ಕೆ, ಆಕೆಯಂತೆಯೇ ಅತ್ಯಾಚಾರಕ್ಕೀಡಾಗಿ ಕೊಲೆಯಾದ ನೂರಾರು ಹೆಣ್ಮಕ್ಕಳ ಪರವಾಗಿ ಇಲ್ಲವೆಂದು ನಾವು ತಿಳಿಯಬೇಕಾಗುತ್ತದೆ.
ವಿಧಾನಸೌಧದೊಳಗಡೆಯೇ ಒಬ್ಬರ ವಿರುದ್ಧ ಇನ್ನೊಬ್ಬರು ಏಕವಚನದಲ್ಲಿ ಬಾಯಿಗೆ ಬಂದಂತೆ ಲಂಗುಲಗಾಮಿಲ್ಲದೆ ಟೀಕೆ ಮಾಡುತ್ತಾ ಹರಿಹಾಯುತ್ತಿರುವುದು, ಬಯ್ದಾಡುತ್ತಿರುವುದನ್ನು ನಾವು ನಮ್ಮ ಕಣ್ಣಾರೆ ನೋಡಿದ್ದೇವೆ, ಕಿವಿಯಾರೆ ಕೇಳಿದ್ದೇವೆ. ನಿಮ್ಮ ಸರಕಾರದ ಗೃಹ ಸಚಿವರ ಪುತ್ರನ ಮೇಲೆ ಶಾಸಕರೇ ಅವಹೇಳನ ಮಾಡುತ್ತಾರೆ. ಇಂಥ ವಿಷಯದಲ್ಲಿ ನೀವು ಕಠಿಣ ಕ್ರಮ ಜರುಗಿಸುವುದೇ ಆದರೆ, ಅದು ಮೊತ್ತಮೊದಲು ಕಲಾಪ ನಡೆಯುವಾಗ ವಿಧಾನಸೌಧದೊಳಕ್ಕೆ ಪ್ರವೇಶ ಪಡೆಯುವ ನಿಮ್ಮಂಥವರ (ಮಂತ್ರಿಗಳು, ಶಾಸಕರು) ಮೇಲೆಯೇ ಮೊದಲು ತೆಗೆದುಕೊಳ್ಳಬೇಕಾಗುತ್ತದೆ. ಅದು ಬಿಟ್ಟು ಯಾರನ್ನೋ ರಕ್ಷಿಸಲು ಹೋರಾಟಗಾರರನ್ನು ಬೆದರಿಸಲು ನೀವು ಮುಂದಾಗುತ್ತೀರಿ ಎಂದಾದರೆ ನಿಮಗೆ ನಮ್ಮ ಧಿಕ್ಕಾರವಿದೆ.
~ ಶ್ರೀರಾಮ ದಿವಾಣ (ಮೂಡುಬೆಳ್ಳೆ, ಉಡುಪಿ)
01/08/2023