ಉಡುಪಿ: ದಿನಾಂಕ:01-08-2023(ಹಾಯ್ ಉಡುಪಿ ನ್ಯೂಸ್)
ಇಂದು ಉಡುಪಿ ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯರವರು ಅಧಿಕಾರಿಗಳು , ಸಚಿವರು ಹಾಗೂ ಸ್ಥಳೀಯ ಶಾಸಕರುಗಳೊಂದಿಗೆ ಉಡುಪಿ ಜಿಲ್ಲೆಯಲ್ಲಾದ ಮಳೆಹಾನಿ ಹಾಗೂ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರಕ್ಕೆ ಆಗುವ ಯೋಜನೆಯ ಅಂದಾಜು ಮೊತ್ತದ ಪಟ್ಟಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು .
ಉಡುಪಿ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಹಾಗೂ ಪ್ರಾಕ್ರತಿಕ ವಿಕೋಪ ನಿರ್ವಹಣಾ ಸಭೆ ಯಲ್ಲಿ ಭಾಗವಹಿಸಿದರು. ಸಭೆಗೂ ಮುನ್ನ ಸಿದ್ಧರಾಮಯ್ಯ ರವರು ಜನತಾದರ್ಶನ ನಡೆಸಿದರು. ಖ್ಯಾತ ಮನೋರೋಗ ತಜ್ಞ ಡಾ..ಪಿ.ವಿ.ಭಂಡಾರಿಯವರ ನೇತೃತ್ವದ ತಂಡದವರು ಉಡುಪಿ ಜಿಲ್ಲೆಯಲ್ಲಿ ಬಹುಕಾಲದ ಬೇಡಿಕೆಯಾದ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸುವಂತೆ ಮನವಿಯನ್ನು ಸಲ್ಲಿಸಿದರು.
ಉಡುಪಿಯ ಕಾಲೇಜೊಂದರ ಶೌಚಾಲಯದಲ್ಲಿ ನಡೆದ ಮೊಬೈಲ್ ಚಿತ್ರೀಕರಣದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.ತನಿಖೆ ನಡೆಯುತ್ತಿದೆ.ಸದ್ಯದಲ್ಲೇ ಪೊಲೀಸರು ಕೋರ್ಟಿಗೆ ಮಾಹಿತಿ ನೀಡಲಿದ್ದಾರೆ. ನಿಜವಾಗಿ ಏನು ನಡೆದಿದೆ ಎಂದು ಆವಾಗ ತಿಳಿಯಲಿದೆ ಎಂದರು.
ಉಡುಪಿ ಬನ್ನಂಜೆಯಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ನಿಲಯ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು. ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಕಾಡದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.