Spread the love

ಅವರದು ನ್ಯಾಯಕ್ಕಾಗಿ ನಡೆಸಿದ ರಾಜಿರಹಿತ ಹೋರಾಟ. ಅವರು ಹೆಸರಿಗಾಗಿ, ದುಡ್ಡಿಗಾಗಿ ಆಸೆ ಪಟ್ಟವರಲ್ಲ. ನನ್ನ ನೆಚ್ಚಿನ ಗೆಳೆಯನ ಈ ಸ್ವಭಾವದ ಬಗ್ಗೆ ನನಗೆ ಹೆಮ್ಮೆ ಇದೆ.
( ಬರಹ : ಡಾ. ಎಸ್. ಹಯವದನ ಉಪಾಧ್ಯಾಯ )

1-1-2023ರಂದು ಪಟ್ಟಾಭಿರಾಮ ಸೋಮಯಾಜಿ ನಮ್ಮೆಲ್ಲರನ್ನು ಅಗಲಿ ಕಾಲವಾಗಿದ್ದಾರೆ. ನೆಚ್ಚಿನ ಗೆಳೆಯನಿಗೆ ಹೃತ್ಪೂರ್ವಕ ಶ್ರದ್ಧಾಂಜಲಿ.

ಹೊಸೂರು ಪಟ್ಟಾಭಿರಾಮ ಸೋಮಯಾಜಿ ನನ್ನ ದೀರ್ಘಕಾಲದ ಸ್ನೇಹಿತ. 1978ರಲ್ಲಿ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಅವರು ಇಂಗ್ಲಿಷ್ ಸಾಹಿತ್ಯದ ಬಿ.ಎ. ವಿದ್ಯಾರ್ಥಿ. ನಾನು ಬಿ.ಕಾಂ.ವಿದ್ಯಾರ್ಥಿ. ನಾನು ಕಾಮರ್ಸ್ ಕಲಿಯುತ್ತಿದ್ದರೂ ನನ್ನ ನಿಜವಾದ ಆಸಕ್ತಿ ಇದ್ದದ್ದು ಸಾಹಿತ್ಯದಲ್ಲಿ. ಕಾಲೇಜಿನ ಭಿತ್ತಿ ಪತ್ರಿಕೆಗೆ ನಾವಿಬ್ಬರೂ ಬರೆಯುತ್ತಿದ್ದೆವು. ಹಾಗಾಗಿ ಸಮಾನ ಆಸಕ್ತರಾಗಿದ್ದ ನಾವು ಗೆಳೆಯರಾದೆವು.

ಉಡುಪಿಯ ಸಗ್ರಿ ಗುಡ್ಡೆಯಲ್ಲಿರುವ ಆ ಕಾಲೇಜಿನ ಹತ್ತಿರವೇ ನನ್ನ ಮನೆ ಇತ್ತು. ಕುಂದಾಪುರದ ನೀಲಾವರದ ಹತ್ತಿರದ ಹೊಸೂರು ಎನ್ನುವ ಹಳ್ಳಿಯ ಪಟ್ಟಾಭಿ, ಉಡುಪಿಯ ಕುಂಜಿಬೆಟ್ಟು ಎನ್ನುವಲ್ಲಿ ಸಣ್ಣ ಬಾಡಿಗೆ ಮನೆಯ ಮಹಡಿಯಲ್ಲಿ ಸ್ವಂತ ಅಡಿಗೆ ಮಾಡಿಕೊಂಡು ವಾಸಿಸುತ್ತಿದ್ದರು. ನಾವಿಬ್ಬರೂ ಪರಸ್ಪರರ ಮನೆಗೆ ಹೋಗಿ ಸಾಹಿತ್ಯದ ಬಗ್ಗೆ ತುಂಬಾ ಚರ್ಚಿಸುತ್ತಿದ್ದೆವು. ಕಾಲೇಜಿನ ಸುತ್ತಲೂ ಇರುವ ಮಾವಿನ ಮರಗಳ ಕೆಳಗೆ ಕೂತು ಕನ್ನಡ ಸಾಹಿತ್ಯದ ಗಿರೀಶ್ ಕಾರ್ನಾಡ್, ಅನಂತಮೂರ್ತಿ, ಶಿವರಾಮ ಕಾರಂತರ ಬರಹಗಳ ಬಗ್ಗೆ ಮತ್ತು ಇಂಗ್ಲಿಷ್ ಸಾಹಿತ್ಯದ Murder in the Cathedral, The Outsider, Dostovsky ಬರಹಗಳ ಬಗ್ಗೆ ಆಗ ಚಾಲ್ತಿಯಲ್ಲಿದ್ದ ನವ್ಯ ಸಾಹಿತ್ಯದ ಬಗ್ಗೆ ತುಂಬಾ ಚರ್ಚಿಸುತ್ತಿದ್ದೆವು.

ಪಟ್ಟಾಭಿಯ ಜೊತೆ ಕಳೆದ ಆ ಮೂರು ವರ್ಷ ನನ್ನ ಜೀವನದ ಅರ್ಥಪೂರ್ಣ ವರ್ಷಗಳು!!! ಅವರು ನನಗೆ ಇಂಗ್ಲಿಷ್ ಸಾಹಿತ್ಯದ ಬಗ್ಗೆ ತುಂಬಾ ಒಳನೋಟ ನೀಡಿದ್ದರಿಂದ ಮುಂದೆ ನಾನು ಇಂಗ್ಲಿಷ್ ಸಾಹಿತ್ಯದಲ್ಲೇ ಎಂ.ಎ. ಮಾಡಲು ಪ್ರೇರಣೆ ಸಿಕ್ಕಿತು.

ಕಾಲೇಜಿನ ಭಿತ್ತಿ ಪತ್ರಿಕೆ Sagri centinal ಮತ್ತು ವಾರ್ಷಿಕ ಸಂಚಿಕೆಗಳಲ್ಲಿ ಅವರ ಪ್ರಬುದ್ಧ ಲೇಖನಗಳು ಪ್ರಕಟವಾಗುತ್ತಿದ್ದವು. ಇಡೀ ಕಾಲೇಜಿನಲ್ಲಿ ಅವರು ಒಳ್ಳೆಯ ಬರಹಗಾರ ಎಂದು ಗುರುತಿಸಲ್ಪಟ್ಟಿದ್ದರು. ಕಾಲೇಜಿನ ಪ್ರಾಂಶುಪಾಲ ದಿವಂಗತ ಪ್ರೊ. ಕು.ಶಿ. ಹರಿದಾಸ ಭಟ್, ಪ್ರಾಧ್ಯಾಪಕರಾದ ಕೃಷ್ಣಪ್ಪ, ಎನ್.ಟಿ. ಭಟ್, ರಾಮ ಭಟ್, ಶ್ರೀನಿವಾಸ ಭಟ್ ಮುಂತಾದವರ ಮೆಚ್ಚಿನ ವಿದ್ಯಾರ್ಥಿ ಇವರಾಗಿದ್ದರು. ಮುಂದೆ ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಬಿ.ಎ. ಪರೀಕ್ಷೆಯಲ್ಲಿ ‌‌Rank ಪಡೆದು ಕಾಲೇಜಿಗೆ ಕೀರ್ತಿ ತಂದರು.

ಆನಂತರ ಅವರು ಮೈಸೂರಿಗೆ ಹೋಗಿ ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಮಾಡಿದರು. ಅಲ್ಲಿ ಅವರು ಡಾ.ಯು.ಆರ್. ಅನಂತಮೂರ್ತಿಯವರ ಅಚ್ಚುಮೆಚ್ಚಿನ ವಿದ್ಯಾರ್ಥಿ ಆದರು. ಆ ಸಮಯದಲ್ಲಿ ಅನಂತಮೂರ್ತಿಯವರು ನಮ್ಮ ಕಾಲೇಜಿನ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಬಂದಿದ್ದರು. ಆಗ ನಮ್ಮ ಕನ್ನಡ ಪ್ರಾಧ್ಯಾಪಕ ಶಿವಸ್ವಾಮಿಯವರು ತಮ್ಮ ಹಳೇ ವಿದ್ಯಾರ್ಥಿ ಪಟ್ಟಾಭಿ ಬಗ್ಗೆ ಏನು ಹೇಳುತ್ತೀರಿ ಎಂದು ಕೇಳಿದಾಗ ಅನಂತಮೂರ್ತಿಯವರು He is one of my best student ಎಂದು ಹೇಳಿದ್ದರು!!!

ಮೈಸೂರಿನಲ್ಲಿ ಪಟ್ಟಾಭಿ ಬೌದ್ಧಿಕವಾಗಿ ತುಂಬಾ ಬೆಳೆದರು. ಮಹಾ ನಿಷ್ಠುರವಾದಿ ದಿವಂಗತ ಪ್ರೊಫೆಸರ್ ಬಿ. ದಾಮೋದರ ರಾವ್ ಕೂಡಾ ಅವರ ಪ್ರತಿಭೆ ಗುರುತಿಸಿ ಅವರನ್ನು ಪ್ರೋತ್ಸಾಹಿಸಿದರು. ಅನಂತಮೂರ್ತಿಯವರಂತೂ ಇವರನ್ನು ತಮ್ಮ ಅಂತರಂಗದ ಶಿಷ್ಯನನ್ನಾಗಿ ಸ್ವೀಕರಿಸಿ, ತನ್ನ ಮಗನಂತೆಯೇ ನೋಡಿಕೊಂಡರು. ಇವರು ಅವರ ಮನೆ ‘ಅಭಯ’ಕ್ಕೆ ಯಾವಾಗಲೂ ಹೋಗುತ್ತಿದ್ದರು.

ನಾನು ಆಗ ಬೆಂಗಳೂರಿನಲ್ಲಿ ಸಿ.ಎ. ಮಾಡುತ್ತಿದ್ದೆ. ನನಗೆ ಅದರಲ್ಲಿ ಆಸಕ್ತಿ ಇರಲಿಲ್ಲ. ಪಟ್ಟಾಭಿಯ ಬೆಂಬಲದಿಂದ ನಾನು ಸಿ.ಎ ಅರ್ಧಕ್ಕೆ ಬಿಟ್ಟು ಮೈಸೂರಿಗೆ ಹೋಗಿ, ಡಿಪ್ಲೊಮ ಇನ್ ಇಂಗ್ಲಿಷ್‌ಗೆ ಸೇರಿದೆ. ಆಗ ನಾನು ವಾಸಿಸಲು ತೊಡಗಿದ್ದು ಪಟ್ಟಾಭಿಯ ಪುಟ್ಟ ಬಾಡಿಗೆ ರೂಮ್‌ನಲ್ಲಿ. ಅವರ ಸಹಾಯದಿಂದಲೇ ನಾನು ಹಾಲೆಂಡ್‌ನ ಯಾನ್ ಬ್ರೋವರ್ ಜೊತೆ ದುಭಾಷಿಯಾಗಿ ಕೆಲಸಕ್ಕೆ ಸೇರಿ… ಮುಂದೆ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ. ಮಾಡಿ… ಲೆಕ್ಚರರ್ ಆಗಿ… ಅದೊಂದು ದೊಡ್ಡ ಕಥೆ. ಹಾಗೆ ಕಷ್ಟ ಕಾಲದಲ್ಲಿ ಸಹಾಯ ಮಾಡಿದ ಪಟ್ಟಾಭಿಗೆ ನಾನು ಚಿರ ಋಣಿ!!!

ರೂಮಿನಲ್ಲಿ ಒಟ್ಟಿಗೆ ಇದ್ದಾಗ ಅವರು ನನಗೂ ಪಾಠ ಮಾಡಿದ್ದಾರೆ. ಒಮ್ಮೆ ಷೇಕ್ಸ್‌ಪಿಯರ್‌ನ ಸಾನೆಟ್ The Expense of Spirit in the waste of Shame, is lust in action…. ಎನ್ನುವ ಸಾನೆಟನ್ನು ಅದ್ಭುತವಾಗಿ ಪಾಠ ಮಾಡಿದ್ದರು. ಅನಂತಮೂರ್ತಿಯವರ ಸಂಪಾದಕತ್ವದ ‘ರುಜುವಾತು’ ಪತ್ರಿಕೆಯ ಕೆಲಸವನ್ನು ಪಟ್ಟಾಭಿ ಇಷ್ಟಪಟ್ಟು ಮಾಡುತ್ತಿದ್ದರು. ಅವರ ಜೊತೆ ಮೀನಾ ಮೈಸೂರು ಮತ್ತು ಸರ್ವಮಂಗಳ ಇರುತ್ತಿದ್ದರು. ಪಟ್ಟಾಭಿಯವರಿಗೆ ಎಂ.ಎ.ಯಲ್ಲಿ ಪ್ರಥಮ ಸ್ಥಾನ ಬರಬೇಕಾಗಿತ್ತು. ಆದರೆ ಜಾತಿ ರಾಜಕಾರಣದಿಂದಾಗಿ ಅದು ಕೈ ತಪ್ಪಿ ಹೋಯಿತು. ಎಂ.ಜಿ.ಎಂ. ಕಾಲೇಜಿನವರು ಅವರನ್ನು ತಾವಾಗಿಯೇ ಉಪನ್ಯಾಸಕ ಹುದ್ದೆಗೆ ಆಹ್ವಾನಿಸಿದ್ದರು. ಆದರೆ ಪಟ್ಟಾಭಿ ಮೈಸೂರಿನಲ್ಲೇ ಉಳಿದರು.

ನಂತರ ಪಟ್ಟಾಭಿ ತಮ್ಮ ಉಪನ್ಯಾಸಕ ವೃತ್ತಿಯನ್ನು ಶುರು ಮಾಡಿದರು. ಮಂಗಳೂರು ವಿಶ್ವವಿದ್ಯಾನಿಲಯ ಸೇರಿದರು. ಈ ನಡುವೆ ಅವರು ಹಲವು ಹೋರಾಟಗಳಲ್ಲಿ ಭಾಗವಹಿಸಿ ಒಳ್ಳೆಯ ಹೆಸರು ಗಳಿಸಿದ್ದರು. ಅವರದು ನ್ಯಾಯಕ್ಕಾಗಿ ನಡೆಸಿದ ರಾಜಿರಹಿತ ಹೋರಾಟ. ಅವರು ಹೆಸರಿಗಾಗಿ, ದುಡ್ಡಿಗಾಗಿ ಆಸೆ ಪಟ್ಟವರಲ್ಲ. ನನ್ನ ನೆಚ್ಚಿನ ಗೆಳೆಯನ ಈ ಸ್ವಭಾವದ ಬಗ್ಗೆ ನನಗೆ ಹೆಮ್ಮೆ ಇದೆ.

ಪಟ್ಟಾಭಿಯವರ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳು ತುಂಬಾ ಚೆನ್ನಾಗಿತ್ತು. ಅವರು ಇತ್ತೀಚೆಗೆ ವಾಟ್ಸ್ಆ್ಯಪ್ ಕವನಗಳನ್ನು ಬರೆಯುತ್ತಾ ಇದ್ದರು. ಅವು ತುಂಬಾ ಅರ್ಥಪೂರ್ಣವಾಗಿರುತ್ತಿದ್ದವು. ಪಟ್ಟಾಭಿಯವರ ಮಾತೃಭಾಷೆ ಕುಂದಾಪ್ರ ಕನ್ನಡ. ಆ ಭಾಷಾ ಪ್ರಭೇದದಲ್ಲೂ ಅವರು ಒಳ್ಳೆಯ ಕವನಗಳನ್ನು ರಚಿಸಿದ್ದಾರೆ. ಪಟ್ಟಾಭಿ ಅದ್ಭುತ ಭಾಷಣಕಾರರು. ಸಾವಿರಾರು ಜನ ಸೇರಿದ್ದ ಸಭೆಗಳಲ್ಲಿ ಅವರು ನಿರ್ಭೀತಿಯಿಂದ ನಿರರ್ಗಳವಾಗಿ ಭಾಷಣ ಮಾಡಿದ್ದನ್ನು ನಾನು ನೋಡಿದ್ದೇನೆ. ಇಂಗ್ಲಿಷ್ ಭಾಷೆಯ ಸೆಮಿನಾರ್‌ಗಳಲ್ಲೂ ಅವರು ಮಿಂಚಿದ್ದನ್ನು ನಾನು ಕಂಡಿದ್ದೇನೆ.

ಅವರು ಸಾಹಿತ್ಯ ಕೃತಿಗಳನ್ನು ವಿಶ್ಲೇಷಣೆ ಮಾಡುವ ವಿಧಾನದಲ್ಲಿ ಅವರದೇ ಛಾಫು ಮೂಡಿಸಿದ್ದಾರೆ. ಈ ನಿಟ್ಟಿನಲ್ಲಿ ಅವರು ಇನ್ನೂ ಬಹಳಷ್ಟು ಕೆಲಸ ಮಾಡಲಿಕ್ಕಿತ್ತು. ನೆನಪಿನಿಂದ ಹೇಳುವುದಾದರೆ… ಪಟ್ಟಾಭಿ ಡಿಗ್ರಿಯಲ್ಲಿ ಇದ್ದಾಗ ಪ್ರಿನ್ಸಿಪಾಲ್ ಪ್ರೊ. ಕು.ಶಿ.ಹರಿದಾಸ ಭಟ್ ನಿವೃತ್ತರಾದರು. ಅವರ ಬಗ್ಗೆ ಆ ಸಂದರ್ಭದಲ್ಲಿ ಪಟ್ಟಾಭಿ ಒಂದು ಒಳ್ಳೆಯ ಲೇಖನ ಬರೆದಿದ್ದರು.

ಮೈಸೂರಿನಲ್ಲಿ ಇದ್ದಾಗ ಯಲ್ಲಿ “what shall we ever do!?” ಎನ್ನುವ ಕರ್ಕೆಗಾಡ್ ಮೇಲೆ ಪ್ರಬುದ್ಧ ಲೇಖನ ಬರೆದಿದ್ದರು. ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಪಟ್ಟು ‘ರಾಮಲಲ್ಲಾ’ ಮೇಲೆ ತುಂಬಾ ಒಳನೋಟದ ಲೇಖನ ಬರೆದಿದ್ದರು. ‘ರುಜುವಾತು’ನಲ್ಲಿ ಬೇಂದ್ರೆ ಅವರ ಕವನ ‘ಹುಬ್ಬಳಿಯಾಂವ’ ಮೇಲೆ ‘ಪದ್ಯ ಬಗೆವ ಬಗೆ’ ಶೀರ್ಷಿಕೆಯಡಿ ರಚನಾತ್ಮಕ ವಿಶ್ಲೇಷಣೆ ಮಾಡಿದ್ದರು.
ಇಂಗ್ಲಿಷ್ ಲೇಖಕ ಡಿ.ಎಚ್. ಲಾರೆನ್ಸನ ಕಾದಂಬರಿಗಳ ಬಗ್ಗೆ ಒಳನೋಟಗಳುಳ್ಳ ಅದ್ಭುತ ಭಾಷಣ ಮಾಡಿದ್ದನ್ನು ನಾನು ಕೇಳಿದ್ದೇನೆ. ಐಚ್ಛಿಕ ಇಂಗ್ಲಿಷ್‌ನ ವಿದ್ಯಾರ್ಥಿಗಳು ಇಂಗ್ಲಿಷ್ ಸಾಹಿತ್ಯದ ಮೇಲಿನ ಅವರ ಪಾಠಗಳನ್ನು ಹೊಗಳಿದ್ದನ್ನೂ ಕೇಳಿದ್ದೇನೆ.

✒️ : ಡಾ. ಎಸ್. ಹಯವದನ ಉಪಾಧ್ಯಾಯ, ಪ್ರಾಧ್ಯಾಪಕರು, ಕುಂದಾಪುರ.
….

error: No Copying!