ಮಣಿಪುರ ಹಿಂಸಾಚಾರ….
ಏಕ್ ಭಾರತ್ ಶ್ರೇಷ್ಠ ಭಾರತ್ ಪರಿಣಾಮ……
ಬಹುತ್ವ ಭಾರತ್ ಬಲಿಷ್ಠ ಭಾರತ್ ಸರಿಯಾದ ಕ್ರಮ….
ತಮಿಳುನಾಡು – ಪಂಜಾಬ್ – ಮಣಿಪುರ ಹೀಗೆ ಅನೇಕ ರಾಜ್ಯಗಳು ಒಕ್ಕೂಟ ವ್ಯವಸ್ಥೆಯ ವಿರುದ್ಧ ಆಗಾಗ ಅಸಮಾಧಾನ ವ್ಯಕ್ತಪಡಿಸುತ್ತಲೇ ಬಂದಿವೆ.
ಸಂವಿಧಾನದ ಪ್ರಕಾರ ಕೇಂದ್ರ ಪಟ್ಟಿ, ರಾಜ್ಯ ಪಟ್ಟಿ ಮತ್ತು ಸಮವರ್ತಿ ಪಟ್ಟಿಯಂತೆ ಕಾರ್ಯನಿರ್ವಹಿಸಿದರೆ ಬಹುಶಃ ಯಾರದೂ ಹೆಚ್ಚಿನ ತಕರಾರು ಇರುವುದಿಲ್ಲ. ಆದರೆ ಕೇಂದ್ರ ಸರ್ಕಾರಗಳು ಅನೇಕ ಸಾರಿ ರಾಜ್ಯಗಳ ಮೇಲೆ ಸವಾರಿ ಮಾಡುವ ಪ್ರಯತ್ನ ಮಾಡುತ್ತವೆ. ಆಗ ಘರ್ಷಣೆ ಹೆಚ್ಚಾಗುತ್ತದೆ.
ಭಾರತ ವೈವಿಧ್ಯಮಯ ದೇಶ. ಇದು ಬಹಳ ಹಿಂದಿನಿಂದಲೂ ಅನೇಕ ಸ್ವತಂತ್ರ ಗಣರಾಜ್ಯಗಳ ಗುಂಪಾಗಿತ್ತು. ಮೌರ್ಯರು – ಗುಪ್ತರು ತದನಂತರ ಅನೇಕ ರಾಜ ಮನೆತನಗಳ ಕಾಲದಲ್ಲಿ ಅದು ಉತ್ತರವನ್ನು ದಾಟಿ ದಕ್ಷಿಣವರೆಗೆ, ಹಾಗೆಯೇ ಚೋಳ – ಚಾಳುಕ್ಯರ ಕಾಲದಲ್ಲಿ ದಕ್ಷಿಣದಿಂದ ಉತ್ತರದ ಕೆಲ ಭಾಗಗಳವರೆಗೆ ದಾಟಿತ್ತು. ಆಗಲೂ ಅನೇಕಾನೇಕ ಸ್ವತಂತ್ರ ರಾಜ್ಯಗಳು ಅಸ್ತಿತ್ವದಲ್ಲಿದ್ದವು. ಅರಬ್ ಪರ್ಶಿಯನ್ ಮೊಗಲ್ ದಾಳಿಯ ಸಮಯದಲ್ಲೂ ಸಂಪೂರ್ಣ ಭಾರತದ ಪರಿಕಲ್ಪನೆ ಇರಲಿಲ್ಲ. ಬ್ರಿಟಿಷರ ಕಾಲದಲ್ಲಿ ಸ್ವಲ್ಪ ಹೆಚ್ಚು ಐಕ್ಯತೆ ಸೃಷ್ಟಿಯಾದರೂ ಪರಿಪೂರ್ಣವಾಗಿರಲಿಲ್ಲ. ಸ್ವಾತಂತ್ರ್ಯ ನಂತರ ಸರ್ದಾರ್ ವಲ್ಲಭಭಾಯ್ ಪಟೇಲ್ ಗೃಹ ಮಂತ್ರಿಯಾಗಿ ಜವಹರಲಾಲ್ ನೆಹರು ಪ್ರಧಾನಮಂತ್ರಿಯಾಗಿ ತೆಗೆದುಕೊಂಡ ಗಟ್ಟಿ ನಿರ್ಧಾರಗಳ ಕಾರಣ ಇಡೀ ದೇಶ ಒಂದಾಗಿ ಭಾರತದ ಸಂಸದೀಯ ಪ್ರಜಾಪ್ರಭುತ್ವ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ನೇತ್ರತ್ವದ ಸಂವಿಧಾನದ ಕರಡನ್ನು ಒಪ್ಪಿಕೊಂಡು ಒಂದಾಯಿತು.
ಅದರ ಪ್ರಕಾರ ಇದೊಂದು ಗಣರಾಜ್ಯಗಳ ಒಕ್ಕೂಟ. ಮುಖ್ಯವಾಗಿ ರಕ್ಷಣೆ, ಹಣಕಾಸು, ವಿದೇಶಾಂಗ ಮುಂತಾದವು ಕೇಂದ್ರದ ಪ್ರಮುಖ ಆದ್ಯತೆಗಳು.
ಆದರೆ ರಾಜಕೀಯ ಕಾರಣಗಳಿಗಾಗಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಅಸಾಂವಿಧಾನಿಕ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ವಿರುದ್ಧ ಕೆಲವು ನಡೆಗಳಿಂದ ರಾಜ್ಯಗಳ ಸ್ವಾಯುತ್ತತೆಗೆ ಧಕ್ಕೆಯಾಯಿತು. ಚುನಾಯಿತ ಸರ್ಕಾರಗಳ ವಜಾ, ತುರ್ತುಪರಿಸ್ಥಿತಿ ಹೇರಿಕೆ ಮುಂತಾದ ಅನೇಕ ಕೆಲವು ಉದಾಹರಣೆಗಳು ಇವೆ. ಹಾಗೆಯೇ ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಅದಕ್ಕಿಂತ ನಾಲ್ಕಾರು ಹೆಜ್ಜೆ ಮುಂದೆ ಹೋಗಿ ರಾಜ್ಯಗಳ ಸ್ವಾಯುತ್ತೆ ಮತ್ತು ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ತಾಂತ್ರಿಕವಾಗಿ ಮತ್ತು ಕಾನೂನಾತ್ಮಕವಾಗಿ ಇದನ್ನು ನಿರಾಕರಿಸಲು ಕಾರಣಗಳು ಸಿಗಬಹುದು. ಆದರೆ ವಾಸ್ತವದಲ್ಲಿ ಪರೋಕ್ಷವಾಗಿ ಈ ದೇಶದ ವೈವಿಧ್ಯತೆ ನಾಶವಾಗಲು ಏಕ್ ಭಾರತ್ ಪರಿಕಲ್ಪನೆ ಸಹ ಕಾರಣವಾಗಿದೆ.
ಹಿಂದೆ ಇಂದಿರಾಗಾಂಧಿಯವರ ತಪ್ಪು ರಾಜಕೀಯ ನಿರ್ಧಾರದಿಂದ ಖಾಲಿಸ್ತಾನ್ ಚಳವಳಿ ಹಿಂಸಾರೂಪ ತಳೆದು ಕೊನೆಗೆ ಅವರನ್ನೇ ಬಲಿ ತೆಗೆದುಕೊಂಡಿತು. ಅದೃಷ್ಟವಶಾತ್ ಅವರ ಮಗ ರಾಜೀವ್ ಗಾಂಧಿ ಪ್ರಧಾನಿಯಾಗಿ ಸಂತ ಲೋಂಗೋವಾಲ್ ಅವರೊಂದಿಗೆ ಒಪ್ಪಂದ ಮಾಡಿಕೊಂಡು ಪಂಜಾಬಿನಲ್ಲಿ ಶಾಂತಿ ನೆಲೆಸುವಂತೆ ಮಾಡಿದರು.
ಹಾಗೆಯೇ ಅಸ್ಸಾಂನಲ್ಲಿ ಭಾಂಗ್ಲಾ ವಲಸಿಗರ ಸಮಸ್ಯೆ ಹಿಂಸಾರೂಪ ಪಡೆಯಿತು. ಭೋಡೋ ಲ್ಯಾಂಡ್ ಚಳವಳಿ, ಗೂರ್ಖಾ ಲ್ಯಾಂಡ್ ಚಳವಳಿ ಈ ರೀತಿಯ ಪ್ರತ್ಯೇಕವಾದ ಬೆಳೆದು ಒಂದು ಹಂತದ ನಂತರ ಆಗಿನ ಕೇಂದ್ರ ಸರ್ಕಾರದೊಂದಿಗೆ ಒಪ್ಪಂದವಾಗಿ ಶಾಂತಿ ನೆಲೆಸಿತು.
ಈಗ ಭುಗಿಲೆದ್ದಿರುವ ಮಣಿಪುರ ಹಿಂಸಾಚಾರ ಮೇಲ್ನೋಟಕ್ಕೆ ಮೀಸಲಾತಿಯ ಅಸಮರ್ಪಕ ಜಾರಿ ಎನಿಸಿದರು ಆಳದಲ್ಲಿ ಜನಾಂಗೀಯ ದ್ವೇಷ, ಕೇಂದ್ರದ ಮಲತಾಯಿ ಧೋರಣೆ, ಈಗಿನ ಕೇಂದ್ರ ಗೃಹ ಮಂತ್ರಿಗಳ ಅನನುಭವ ಮತ್ತು ಅಜಾಗರೂಕತೆ ಕಾರಣವಾಗಿದೆ. ಅಷ್ಟೇ ಅಲ್ಲ ಈ ರೀತಿಯ ಆಂತರಿಕ ಕ್ಷೋಭೆಯ ಲಾಭ ಪಡೆಯಲು ಗಡಿಯನ್ನು ಹಂಚಿಕೊಂಡಿರುವ ವಿದೇಶಿ ಶಕ್ತಿಗಳು ಹೊಂಚು ಹಾಕುತ್ತಿರುತ್ತವೆ. ಗಲಭೆ ಕೋರರಿಗೆ ಶಸ್ತ್ರಾಸ್ತ್ರಗಳನ್ನು ಒದಗಿಸಿ ಪರೋಕ್ಷ ಯುದ್ಧವನ್ನು ಮಾಡುತ್ತವೆ.
ಈ ವಿಷಯದಲ್ಲಿ ಪ್ರಧಾನ ಮಂತ್ರಿಗಳ ಮೌನ ಸಹ ಸರಿಯಲ್ಲ. ಏನಾಗುತ್ತದೋ ನೋಡೋಣ, ಹಿಂಸೆ ನಿಯಂತ್ರಣಕ್ಕೆ ಬರಲಿ ಎಂದು ಕಾಯುವ ಮನೋಭಾವ ದುಬಾರಿಯಾಗಬಹುದು. ಇತರ ಪ್ರತ್ಯೇಕತಾ ಮನೋಭಾವದವರಿಗೆ ಈ ಮೌನ ಪ್ರೇರಣೆಯಾಗಬಾರದು. ಇತಿಹಾಸದ ಅನುಭವದಿಂದ ಕಲಿತ ಪಾಠಗಳಲ್ಲಿ ಈ ರೀತಿಯ ಹಿಂಸೆಗೆ ಶೀಘ್ರ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಅದು ಜನರ ಮನಸ್ಸಿನಾಳಕ್ಕೆ ಇಳಿದು ಮತ್ತಷ್ಟು ಅನಾಹುತ ಉಂಟು ಮಾಡುತ್ತದೆ ಎಂಬುದು ಒಂದು.
ಚುನಾವಣಾ ರಾಜಕೀಯ ಯಾವಾಗಲೂ ಇದ್ದದ್ದೇ. ಅದಕ್ಕಿಂತ ಈಗ ಮಣಿಪುರದ ಹಿಂಸೆ ಕೇಂದ್ರ ಸರ್ಕಾರದ ಆಡಳಿತದ ಮುಖ್ಯ ಆದ್ಯತೆಯಾಗಲಿ. ಜನರ ಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಳ್ಳುವ ಮುನ್ನ ಕಾರ್ಯೋನ್ಮಖವಾಗಲಿ. ಅವರ ಜೀವ ಜೀವನಕ್ಕೆ ರಕ್ಷಣೆ ದೊರೆಯಲಿ. ಎಲ್ಲರ ಜೀವಗಳು ಅಮೂಲ್ಯ.
ಆದ್ದರಿಂದ ದೇಶದ ವೈವಿಧ್ಯತೆಯನ್ನು ಕಾಪಾಡಿ
” ಬಹುತ್ವ ಭಾರತ್ ಬಲಿಷ್ಠ ಭಾರತ್ ” ಎಂಬ ತತ್ವವೇ ಭಾರತದ ಸಾಮಾಜಿಕ ಪರಿಸ್ಥಿತಿಗೆ ಹೆಚ್ಚು ಸೂಕ್ತವಾಗಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಇದ್ದ ವೈವಿಧ್ಯತೆ ಇಂದು ಮಾಯವಾಗಿ ಎಲ್ಲವೂ ಒಂದೇ ರೀತಿ ಕಾಣಬರುತ್ತಿದೆ. ಹೊರನೋಟ ಆಧುನೀಕರಣದ ಪ್ರಭಾವಕ್ಕೆ ಒಳಗಾಗಿದೆ ನಿಜ. ಇದೊಂದು ವ್ಯವಹಾರಿಕ ಅನಿವಾರ್ಯ ಬದಲಾವಣೆ. ಆದರೆ ಮನುಷ್ಯ ಪ್ರಜ್ಞೆ ಮತ್ತು ಸಂಸ್ಕೃತಿ ಆ ವೇಗದಲ್ಲಿ ಬದಲಾಗುತ್ತಿಲ್ಲ. ಆಧುನಿಕತೆಯ ಬದಲಾವಣೆಗಳೊಂದಿಗೆ ಸಂಘರ್ಷಕ್ಕೆ ಇಳಿದಿದೆ. ಜೀನ್ಸ್ ಪ್ಯಾಂಟ್ ಅಥವಾ ಮೊಬೈಲ್ ನಷ್ಟು ಸಲೀಸಾಗಿ ನಮ್ಮ ಸಂಸ್ಕೃತಿಯಲ್ಲಿ ಬದಲಾವಣೆ ಸಾಧ್ಯವಾಗುತ್ತಿಲ್ಲ. ಏಕೆಂದರೆ ರಾಜಕೀಯ ಮತ್ತು ಕಾರ್ಪೊರೇಟ್ ಸಂಸ್ಕೃತಿ ಅತ್ಯಂತ ಸ್ವಾರ್ಥ ಮತ್ತು ಆರ್ಥಿಕ – ಅಧಿಕಾರ ಕೇಂದ್ರಿತವಾಗಿದೆ.
ಇಂತಹ ಸನ್ನಿವೇಶದಲ್ಲಿ ಒಮ್ಮೆ ಜಾತಿ ಧರ್ಮ ಜನಾಂಗೀಯ ತಾರತಮ್ಯ ಜಾಗೃತವಾದರೆ ಅದು ಹಿಂಸಾರೂಪ ತಳೆಯುತ್ತದೆ. ಆದ್ದರಿಂದ ಸ್ಥಳೀಯ ಸಂಸ್ಕೃತಿ, ಸ್ಥಳೀಯ ನಾಯಕತ್ವ, ಸ್ಥಳೀಯ ಜನಾಭಿಪ್ರಾಯ ಗೌರವಿಸುತ್ತಾ ವೈವಿಧ್ಯತೆಯನ್ನು ಕಾಪಾಡಬೇಕು. ದೆಹಲಿ ಕೇಂದ್ರಿತ ಒತ್ತಾಯದ ಆಡಳಿತ ಒಕ್ಕೂಟ ವ್ಯವಸ್ಥೆಗೆ ಅಪಾಯಕಾರಿ.
ಮಣಿಪುರದಲ್ಲಿ ಶೀಘ್ರವಾಗಿ ಶಾಂತಿ ನೆಲೆಸಲಿ ಎಂದು ಆಶಿಸುತ್ತಾ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..