Spread the love

ಸಂಪ್ರದಾಯ – ಸಮಾಜ – ಭಾವನೆಗಳು -………

ಕಪಾಟಿನಲ್ಲಿ ಕೈಗೆ ಸಿಕ್ಕಿದ ಬಟ್ಟೆ ತೊಡುತ್ತಿದ್ದ ನಾನು ಈಗ ಮ್ಯಾಚಿಂಗ್ ಡ್ರೆಸ್ ಹುಡುಕುತ್ತಿದ್ದೇನೆ,
ಮುಖಕ್ಕೆ ಸ್ವಲ್ಪ ಕ್ರೀಮ್ – ಪೌಡರ್ ಹಚ್ಚುತ್ತಿದ್ದೇನೆ,
ಹೌದು, ಈಗಷ್ಟೇ ಜಿಮ್ ಗೆ ಸೇರಿದ್ದೇನೆ.
ಅಪ್ಪ ಅಮ್ಮ ತಂಗಿಯ ಮೇಲೆ ಸಿಡುಕುತ್ತಿದ್ದ ನಾನು ಈಗ ಸ್ವಲ್ಪ ಮೆತ್ತಗಾಗಿದ್ದೇನೆ,

ಆಗಾಗ ಬದುಕು ಬೇಸರವೆನಿಸುತ್ತಿತ್ತು ಈಗ ಬದುಕು ಎಷ್ಟೊಂದು ಸುಂದರ ಎಂದು ಪ್ರತಿ ಕ್ಷಣ ಅನಿಸುತ್ತಿದೆ,
ಓದುವ ಪ್ರತಿ ಅಕ್ಷರದಲ್ಲೂ ಬೇರೇನೋ ಕಾಣುತ್ತಿದೆ,
ಮೊಬೈಲ್ ನ ಪ್ರತಿ ಒಳ ಬರುವ ಕರೆಗಳು ಏನನ್ನೋ ಕಾತರಿಸುತ್ತದೆ.

ಇಷ್ಟು ಚಿಕ್ಕ ವಯಸ್ಸಿಗೇ ಏನೋ ದೊಡ್ಡ ಖಾಯಿಲೆ ಬಂದಿರಬೇಕು ಎಂದು ಭಯವಾಗುತ್ತಿದೆ.

ಮೊದಲೆಲ್ಲಾ ಹೀಗಿರಲಿಲ್ಲ,
ಆರಾಮವಾಗಿದ್ದೆ, ಈ ಬದಲಾವಣೆಗೆ ಯಾವ ವೈರಸ್‌ ಕಾರಣವೋ ತಿಳಿಯುತ್ತಿಲ್ಲ.
ಡಾಕ್ಟರ್ ಬಳಿ ಹೋಗುವಂತ ಯಾವ ತೊಂದರೆಯೂ ಇಲ್ಲ.

ಬಹುಶಃ ಏಳೆಂಟು ತಿಂಗಳ ಹಿಂದೆ ಒಂದು ಸಮಾರಂಭದಲ್ಲಿ ಆಕೆಯನ್ನು ನೋಡಿದ್ದೆ. ನಿಜ ಹೇಳಬೇಕೆಂದರೆ ಆ ಸಮಾರಂಭಕ್ಕೂ ನನಗೂ ಸಂಬಂಧವೇ ಇರಲಿಲ್ಲ. ಗೆಳೆಯರ ಒತ್ತಾಯದ ಮೇರೆಗೆ ಹೋಗಿದ್ದೆ. ಆಗ ಆಕಸ್ಮಿಕವಾಗಿ ಆಕೆಯನ್ನು ನೋಡಿದ್ದೆ. ಮೊದಲ ನೋಟಕ್ಕೆ ಶಾಕ್ ಹೊಡೆದಂತಾಯಿತು. ನೇರ ನನ್ನ ಹೃದಯದೊಳಗೆ ಪ್ರವೇಶಿಸಿದಳು.

ಅವಳ ಸೌಂದರ್ಯವನ್ನು ಬಹಿರಂಗವಾಗಿ ವರ್ಣಿಸಲಾರೆ. ಅದಕ್ಕೆ ಅಕ್ಷರ ರೂಪ ನೀಡಿ ಮಿತಿ ಗೊಳಿಸಲು ನನಗೆ ಇಷ್ಟವಿಲ್ಲ.

ಅಲ್ಲಿಂದ ಆಕೆಯ ಬಗ್ಗೆ ಮಾಹಿತಿ ಪಡೆದು, ಪರಿಚಯ ಮಾಡಿಕೊಂಡು ಒಂದು ಹಂತಕ್ಕೆ ತರಲು ಸುಮಾರು 6 ತಿಂಗಳಾಯಿತು. ಈಗ ಆಕೆ ನನ್ನ ಅಚ್ಚುಮೆಚ್ಚಿನ ಗರ್ಲ್ ಫ್ರೆಂಡ್. ದಿನವೂ ಮೊಬೈಲ್ ಮಾತುಕತೆ ನಡೆಯುತ್ತಲೇ ಇದೆ.

ಇಂದು ಆಕೆಯ ಬಳಿ ಗುಲಾಬಿ ಕೊಟ್ಟು ಪ್ರೇಮ ನಿವೇದನೆ ಮಾಡಲು ಮನಸ್ಸು ಹಂಬಲಿಸುತ್ತಿದೆ. ಹಾಗೆಯೇ ತುಂಬಾ ಭಯವಾಗುತ್ತಿದೆ. ಆಕೆ ಕೋಪಗೊಂಡರೆ ಅಥವಾ ನಿರಕಾರಿಸಿದರೆ…

ಅಯ್ಯಯ್ಯೋ, ಅದನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ. ಆಕೆ ಇಲ್ಲದ ಬದುಕು ಬೇಡವೇ ಬೇಡ……

ಆಕೆ ನಿರಾಕರಿಸಲಾಗದಂತೆ ಏನಾದರೂ ‌ವಿಶಿಷ್ಠ ರೀತಿಯಲ್ಲಿ ಪ್ರಪೋಸ್ ಮಾಡುವ ಹಂಬಲ.
ಎಷ್ಟೊಂದು ಸಿನಿಮಾ ನೋಡಿದ್ದೇನೆ. ಯಾಕೋ ಈಗ ಯಾವುದೂ ನೆನಪಾಗುತ್ತಿಲ್ಲ. ಪ್ರೀತಿಯ ಹುಚ್ಚು ಇಷ್ಟೊಂದು ಅತಿರೇಕಕ್ಕೆ ಹೋಗುತ್ತದೆ ಎಂದು ಭಾವಿಸಿರಲೇ ಇಲ್ಲ. ಈಗ ಏನು ಮಾಡಲಿ.

ಮನಸ್ಸು ಚಡಪಡಿಸುತ್ತಿದೆ. ಪ್ರೀತಿ ಎಂದರೆ ಇದೇನಾ !!!!!!!


ಪುಟ್ಟ ಪುಟ್ಟ ಕಂದಮ್ಮಗಳು
ಕಣ್ಣ ಮುಂದೆ ಬೆಳೆಯುತ್ತವೆ.
ಕಾಲಿಡುತ್ತವೆ ಹದಿಹರೆಯಕ್ಕೆ
ದೇಹ ಬೆಳೆದಂತೆ ಚಿಗುರುತ್ತವೆ
ಆಸೆ ಆಕಾಂಕ್ಷೆ, ಪ್ರೀತಿ ಪ್ರೇಮಗಳು…..

ಪ್ರೀತಿಯೆಂಬುದೂ ಒಂದು ಭಾವ – ಅನುಭಾವ – ಅನುಭವ.
ಅದನ್ನು ಕಣ್ತುಂಬಿ ನಲಿಯೋಣ.

ಗಾಬರಿಯಾಗದಿರಿ ಪೋಷಕ ಜೀವಗಳೇ,
ನಮ್ಮ ಮಕ್ಕಳೇನು ಲಜ್ಜೆಗೆಟ್ಟವರಲ್ಲ,
ಅವರಿಗೂ ಭಾವನೆಗಳಿವೆ,
ನೋಡುತ್ತಾ ಕೇಳುತ್ತಾ ಅನುಭವಿಸುತ್ತಾ ಬೆಳೆಯುತ್ತವೆ,
ಪ್ರೀತಿಯನ್ನು ದ್ವೇಷಿಸುವ – ಪ್ರೀತಿಯನ್ನು ಕೊಲ್ಲುವ,
ಯಾವ ಮೌಲ್ಯಗಳೂ ಒಳ್ಳೆಯದಲ್ಲ.
ಪ್ರೀತಿ ಮುಖ್ಯವೋ – ದ್ವೇಷ ಮುಖ್ಯವೋ.
ಯೋಚಿಸಿ ನಿರ್ಧರಿಸಿ.

ಗಂಡು ಹೆಣ್ಣಿನ ಪ್ರೇಮವೆಂದರೆ,
ಪ್ರೀತಿ – ಯೌವ್ವನ – ಕಾಮ – ಆಕರ್ಷಣೆ – ಸೌಂದರ್ಯ – ಕುತೂಹಲ – ಆತ್ಮವಿಶ್ವಾಸ – ಹೆಮ್ಮೆ – ಅನನುಭವ – ಮುಗ್ಧತೆ – ಕನಸುಗಳ ಒಟ್ಟು ಮೊತ್ತ.

ಪ್ರತಿ ನಿಮಿಷಕ್ಕೊಮ್ಮೆ ವಾಟ್ಸಾಪ್ ಸಂದೇಶ ನೋಡಬೇಕೆನ್ನುವ ಗೀಳು ಪ್ರಾರಂಭವಾಗಿದೆ,
ಆಗೆಲ್ಲಾ ಒಂಟಿತನ ಎಂದರೆ ಹಿಂಸೆಯಾಗುತ್ತಿತ್ತು. ಎಲ್ಲಿಗೆ ಹೋದರೂ ಸ್ನೇಹಿತರು ಜೊತೆಯಲ್ಲಿ ಇರಲೇಬೇಕಿತ್ತು.
ಈಗ ಗೆಳೆಯರೆಂದರೆ ಕಿರಿಕಿರಿಯಾಗುತ್ತಿದೆ, ಮನಸ್ಸು ಏಕಾಂತ ಬಯಸುತ್ತದೆ. ಆ ಮೌನದಲ್ಲಿ ಸಿಹಿಗನಸು ಕಾಣುವ ಆಸೆಯಾಗುತ್ತಿದೆ.

ಎಳೆಯ ಜೀವಗಳಿಗೆ ಅವುಗಳ ನಡುವೆ ಹೊಂದಾಣಿಕೆಯ ಅರಿವಿನ
ಕೊರತೆ ಇರಬಹುದಾದರೂ,
ಪೋಷಕರ ದ್ವೇಷ ಅಸೂಯೆಗಳಿಗಿಂತ ಆತ್ಮೀಯ ಆಲಿಂಗನ ಅವರಿಗೆ ಸಂಜೀವಿನಿಯಾಗುತ್ತದೆ.
ಅವರಿಗೆ ಸ್ವಾತಂತ್ರ್ಯ ನೀಡಿ.
ಕಷ್ಟ ನಷ್ಟಗಳಿಗೆ ಅವರನ್ನೇ ಹೊಣೆಮಾಡಿ.

ಕಾಮ ಶೀಲಗಳನ್ನು ಅತಿರಂಜಿಸದಿರಿ.
ನಿಮ್ಮ ಅನುಭವಗಳ ಒತ್ತಡ ಅವರ ಮೇಲೆ ಹೇರದಿರಿ. ತಪ್ಪಿದ ಹೆಜ್ಜೆ ಬದುಕಿಗೆ ಮಾರಕ ಎಂದು ಎಳೆಯ ಜೀವಗಳಿಗೆ ಬೆದರಿಸದಿರಿ.
ಬದಲಾಗಿ ಅವರಿಗೆ ತಪ್ಪಿನ ಅರಿವಾಗಿಸಿ.
ಅದು ಬದುಕಿನ ಸಹಜ ಪಾಠವೆಂದು ತಿಳಿಹೇಳಿ,
ಅವರ ತಪ್ಪು ಕ್ಷಮಿಸಿ ಆಲಂಗಿಸಿಕೊಳ್ಳಲು ನಾವಲ್ಲದೆ ಬೇರಾರಿದ್ದಾರೆ.

ಪ್ರೀತಿ ಕೆಲವು ಎಳೆಯ ಮನಸ್ಸುಗಳ ಸಂಭ್ರಮವಷ್ಟೆ.
ಖಾಸಗಿಯಾದದ್ದು ಮತ್ತು ವೈಯಕ್ತಿಕವಾದದ್ದು.
ಅದು ವಿದೇಶಿ ಸಂಸ್ಕೃತಿಯಲ್ಲ.
ಪ್ರತಿ ಜೀವಿಯ ಹರೆಯದ ಭಾವವಷ್ಟೆ.

ನಾವು ನಾಗರಿಕರಾದರೆ ಸಮಾಜವೂ ನಾಗರಿಕವಾಗುತ್ತದೆ.
ಸಮಾಜ ನಾಗರಿಕವಾದರೆ ನಮ್ಮ ಮಕ್ಕಳೂ ಪ್ರಬುಧ್ಧರಾಗುತ್ತಾರೆ, ಸಂಸ್ಕಾರವಂತರಾಗುತ್ತಾರೆ.


ಧರ್ಮಗಳ ಹೊಡೆತಕ್ಕೆ ನಲುಗಿದ ಹೂವುಗಳು,

ನಾಗರಿಕತೆಯ ಭ್ರಮೆಗೆ ಕನಲಿದ ಚಿಗುರುಗಳು,

ಮನುಷ್ಯನ ಕ್ರೌರ್ಯಕ್ಕೆ ಬಲಿಯಾದ ಭಾವನೆಗಳು,

ಮುಖವಾಡಗಳಿಗೆ ಆಹುತಿಯಾದ ಪ್ರೇಮ ಕುಸುಮಗಳು,

ಸಮಾಜದ ತಿಕ್ಕಲುತನಕ್ಕೆ ಬಸವಳಿದ ನಮ್ಮ ಕಂದಮ್ಮಗಳು……….

ಅಯ್ಯೋ ಮಾನವರೆ,
ಯಾವುದರಲ್ಲೂ ಶುಧ್ಧತೆಯನ್ನೇ ಉಳಿಸಿಲ್ಲವಲ್ಲ ನಾವು,

ಪ್ರೀತಿ ಎಂದರೆ ನಾಟಕವೆನ್ನುವಿರಿ,
ಪ್ರೇಮವೆಂದರೆ ಕಾಮವೆನ್ನುವಿರಿ,
ಯಶಸ್ಸೆಂದರೆ ದುಡ್ಡೆನ್ನುವಿರಿ,
ಸಾಧನೆಯೆಂದರೆ ಅಧಿಕಾರವೆನ್ನುವಿರಿ….

ಆ ಪದಗಳ ಅರ್ಥಗಳನ್ನೇ ಕೆಡಿಸಿರುವಿರಿ……

ಪ್ರೀತಿ ನಮ್ಮ ಸಂಸ್ಕತಿ,
ಪ್ರೇಮ ನಮ್ಮ ಸಂಪ್ರದಾಯ,
ಕಾಮ ನಮ್ಮ ಧರ್ಮ,
ಸಂತೋಷ ನಮ್ಮ ಸ್ವಾತಂತ್ರ್ಯ,
ನೆನಪಿರಲಿ…..

ಹೌದು,
ಪ್ರೀತಿಗೂ – ಪ್ರೇಮಕ್ಕೂ – ಪ್ರಣಯಕ್ಕೂ ಒಂದು ಮಿತಿ ಇದೆ. ಅದು ನಮ್ಮ ಅಕ್ಕ ತಂಗಿ ಅಣ್ಣ ತಮ್ಮ ಮಗ ಮಗಳು ಕುಟುಂಬ ಸಮಾಜ ಎಲ್ಲಕ್ಕೂ ಅನ್ವಯ…….

ಆದರೆ,
ಕೆಲವೊಮ್ಮೆ ಯೌವ್ವನದಲ್ಲಿ ಆಗುವ ಮಾನಸಿಕ – ದೈಹಿಕ ಬೆಳವಣಿಗೆಗಳು ಒಂದಷ್ಟು ಚೌಕಟ್ಟು ಮೀರುವ ಪ್ರಯತ್ನ ಮಾಡುತ್ತವೆ. ಅದಕ್ಕೆ ಅಸಹ್ಯ ಅನೈತಿಕ ಎಂದು ಬರ್ಬರ ಕೊಲೆಯಂತ ಶಿಕ್ಷೆ ನೀಡುವಿರಿ.
ನೀವು ನಿಜಕ್ಕೂ ಮನುಷ್ಯರೇ ?????

ಕಣ್ಣ ಮುಂದೆಯೇ ಲಂಚಕ್ಕೆ ಕೈ ಹಾಕುವಿರಿ,
ಬೆನ್ನ ಹಿಂದೆಯೇ ಕಳ್ಳತನ ಮಾಡುವಿರಿ,
ಬಾಯಿ ಬಿಟ್ಟರೆ ಹೊಲಸು ಮಾತನಾಡುವಿರಿ,
ಅಧಿಕಾರಕ್ಕಾಗಿ ಬೂಟು ನೆಕ್ಕುವಿರಿ,
ಹಣಕ್ಕಾಗಿ ತಲೆಹಿಡಿಯುವಿರಿ,
ನಿಮ್ಮ ಸ್ವಾರ್ಥಕ್ಕಾಗಿ ಹೇಳಲಾಗದ ಬರೆಯಲಾಗದ ಎಲ್ಲವನ್ನೂ ಮಾಡುವಿರಿ.

ಹಾಗಾದರೆ ನಿಮಗ್ಯಾವ ಶಿಕ್ಷೆ ನೀಡಬೇಕು.

ಎಳೆ ಮಕ್ಕಳ ಮುಗ್ಧ ಪ್ರೀತಿಯನ್ನು ಅದು ಯಾರಿಗೂ ಅಪಾಯಕಾರಿಯಲ್ಲದಿದ್ದರೂ ನೀವು ಸಹಿಸುವುದಿಲ್ಲ.

ಇನ್ನು ದೇಶ ದ್ರೋಹದ,
ಧರ್ಮ ದ್ರೋಹದ ನಿಮ್ಮ ಕೆಲಸಗಳು ಬಹಿರಂಗವಾಗಿ ನಡೆದರೂ ನಾವು ಸಹಿಸಬೇಕಿದೆ.

ದಯವಿಟ್ಟು ಒಂದು ನೆನಪಿಡಿ.

ಎಳೆ ಯುವಕ ಯುವತಿಯರ ಪ್ರೀತಿ ಪ್ರೇಮ ಪ್ರಣಯ ಪ್ರೋತ್ಸಾಹದಾಯಕವಲ್ಲ.
ಆದರೆ ಅದು ಶಿಕ್ಷಾರ್ಹ ಅಪರಾಧವೂ ಅಲ್ಲ.

ಇದನ್ನು ಹೆಚ್ಚು ನಾಗರಿಕ ಪ್ರಜ್ಞೆಯಿಂದ,
ಪ್ರೀತಿಯಿಂದ, ಸಹನೆಯಿಂದ, ಸಭ್ಯತೆಯಿಂದ,
ವಾಸ್ತವತೆಯಿಂದ ನಿರ್ವಹಿಸಿ.

ಮನವೆಂಬ ಮರ್ಕಟದ ಕೈಗೆ ಮನಸ್ಸುಗಳನ್ನು ಕೊಟ್ಟು,
ಹುಚ್ಚು ಭಾವನೆಗಳಿಗೆ ಸಂಪ್ರದಾಯದ ಮುಖವಾಡ ತೊಡಿಸಿ ಪ್ರೇಮಿಗಳನ್ನು ದ್ವೇಷಿಸುವ ಮತ್ತು ಹತ್ಯೆಗೈಯುವ ಕೆಲಸಕ್ಕೆ ಕೈ ಹಾಕಬೇಡಿ.

ಊಟ ಸರಿಯಾಗಿ ಸೇರುತ್ತಿಲ್ಲ,
ನನ್ನ ಅಚ್ಚುಮೆಚ್ಚಿನ ಹಣ್ಣು ಸಹ ರುಚಿಸುತ್ತಿಲ್ಲ,
ಕಾಫಿ ಟೀ ಮಾತ್ರ ಅತ್ಯಂತ ರುಚಿಕರವಾಗಿದೆ,
ಅಪರೂಪಕ್ಕೆ ಕಾಫಿ ಕುಡಿಯುತ್ತಿದ್ದವನು ಈಗ ದಿನಕ್ಕೆ ಹಲವಾರು ಬಾರಿ ಕುಡಿಯುತ್ತಿದ್ದೇನೆ,
ಕುಂಬ ಕರ್ಣನಂತೆ ನಿದ್ದೆ ಮಾಡುತ್ತಿದ್ದ ನನಗೆ ಈಗ ಕೋಳಿ ನಿದ್ದೆ ಸಾಕಾಗುತ್ತಿದೆ.

ನೀವೂ ನಾಶವಾಗಿ,
ಅವರನ್ನೂ ನಾಶಮಾಡಿ,
ಸಮಾಜವನ್ನು ನಾಶಮಾಡಬೇಡಿ…..

ಪ್ರೀತಿ ಅಜರಾಮರ…….

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..

error: No Copying!