ಕಾಲ್ನಡಿಗೆಯ ಸಂದರ್ಭದ ಒಂದು ನೆನಪು……..
ಹೂವ ತರುವೆನೇ ಹೊರತು ಹುಲ್ಲ ತಾರೆನು…………
ಒಂದು ವರ್ಷ ಪ್ರಕೃತಿಯ ಮಡಿಲಲ್ಲಿ ಜನರ ಆಶ್ರಯದಲ್ಲಿ ರಸ್ತೆಗಳ ನೆರಳಿನಲ್ಲಿ ಬದುಕಿದ ಜೀವ ಇನ್ನೂ ಮುಂದೆ ಸಾಗುತ್ತಲೇ ಇದೆ……..
ಕಲ್ಲು ಮುಳ್ಳುಗಳ ಹಾದಿಯನ್ನು ಹೂವಿನ ಹಾದಿಯಾಗಿ ಪರಿವರ್ತಿಸಿ ನನಗೆ ನೀಡಿದ ಆತಿಥ್ಯ ಪ್ರೀತಿ ಸತ್ಕಾರ ಅಭಿಮಾನ ನನ್ನನ್ನು ಮತ್ತಷ್ಟು ಶುದ್ದೀಕರಿಸಿದೆ…….
ಮಾನವೀಯ ಮೌಲ್ಯಗಳ ಪುನರುತ್ಥಾನದ ಈ
” ಜ್ಞಾನ ಭಿಕ್ಷಾ ಪಾದಯಾತ್ರೆ ” ಬೀದರ್ ಜಿಲ್ಲೆಯ ಔರಾದ್ ತಾಲ್ಲೂಕಿನ ವನಮಾರ್ಪಳ್ಳಿ ಎಂಬ ಗ್ರಾಮದಲ್ಲಿ ದಿನಾಂಕ 1/11/2020 ರಂದು ಪ್ರಾರಂಭವಾಯಿತು. ಅಲ್ಲಿಂದ ಇಲ್ಲಿಯವರೆಗೆ 31/10/2021 ನಿರಂತರವಾಗಿ ಸಂಪೂರ್ಣ ಕಾಲ್ನಡಿಗೆಯಲ್ಲಿ ನಡೆದು ಸುಮಾರು 11000 ಸಾವಿರ ಕಿಲೋಮೀಟರ್ ಒಂದು ವರ್ಷದಲ್ಲಿ ಸಂಚರಿಸಿ ಈಗ ಬೆಂಗಳೂರಿನಲ್ಲಿ ಮುಂದುವರಿಯುತ್ತಿದೆ.
ಬರೆಯುತ್ತಾ, ನಡೆಯುತ್ತಾ, ಸಂವಾದ ಮಾಡುತ್ತಾ, ಸೈದ್ದಾಂತಿಕ ಭಿನ್ನಾಭಿಪ್ರಾಯಗಳನ್ನು ಎದುರಿಸುತ್ತಾ, ಪ್ರಾಕೃತಿಕ ಸವಾಲುಗಳನ್ನು ಸ್ವೀಕರಿಸುತ್ತಾ, ದೈಹಿಕ ಮಾನಸಿಕ ಸಮತೋಲನ ಕಾಪಾಡುತ್ತಾ, ಕೌಟುಂಬಿಕ ಸಮಸ್ಯೆಗಳನ್ನು ಬಿಡಿಸುತ್ತಾ, ಪ್ರತಿ ಕ್ಷಣ, ಪ್ರತಿ ಹೆಜ್ಜೆಯನ್ನು ಅನುಭವಿಸುತ್ತಾ, ಮುಂದೆ ಸಾಗುತ್ತಿದೆ ಕಾಲ್ನಡಿಗೆ….,
ಆಶ್ಚರ್ಯವೆಂದರೆ, ಸಾಮಾನ್ಯನೊಬ್ಬ ತನ್ನ ಅಕ್ಷರಗಳನ್ನು ನಂಬಿ, ನಶಿಸುತ್ತಿರುವ ಮಾನವೀಯ ಮೌಲ್ಯಗಳ ಬಗ್ಗೆ ಸಂವಾದಗಳ ಮೂಲಕ ಜಾಗೃತಿ ಮೂಡಿಸಲು ಹೊರಟಾಗ ರಾಜ್ಯದ ಇಲ್ಲಿಯವರೆಗಿನ 26/27 ಜಿಲ್ಲೆಗಳಲ್ಲಿ ಒಳ್ಳೆಯ ಮನಸ್ಸುಗಳು ಅತ್ಯಂತ ಪ್ರೀತಿಯ ಸ್ವಾಗತ ಕೋರಿದ್ದು……
ಎಲ್ಲಾ ನಿರಾಸೆಗಳ ನಡುವೆ ಒಂದಷ್ಟು ಭರವಸೆ ಮೂಡಲು ಇದೇ ಬಹುಮುಖ್ಯ ಕಾರಣವಾಗಿದೆ.
ಸಾಗಬೇಕಾದ ಹಾದಿ ಇನ್ನೂ ಬಹಳವಿದೆ. ಅನೇಕ ಅಗ್ನಿ ಪರೀಕ್ಷೆಗಳು ಎದುರಾಗುತ್ತದೆ, ಅಷ್ಟು ಸುಲಭವಾಗಿ ಸಾಮಾನ್ಯನ ಹೋರಾಟವನ್ನು ಸಾರ್ವಜನಿಕರು ಮತ್ತು ಮಾಧ್ಯಮಗಳು ಗುರುತಿಸುವುದಿಲ್ಲ ಮತ್ತು ಪ್ರೋತ್ಸಾಹಿಸುವುದಿಲ್ಲ. ಜನಪ್ರಿಯತೆ, ಹಣ ಅಧಿಕಾರ ಪ್ರಚಾರ ಪ್ರಶಸ್ತಿಗಳ ಅಮಲಿನಲ್ಲಿ, ಎಲ್ಲದರಲ್ಲೂ ಲಾಭದ ವಾಸನೆ ಗುರುತಿಸುವ ಸಾಕಷ್ಟು ಜನರು ಇರುವಾಗ ಯಾವುದೇ ಹೋರಾಟ ಅಷ್ಟು ಸುಲಭವಲ್ಲ.
ಆದರೆ ಪ್ರಾಮಾಣಿಕ ಶುದ್ದ ನಿರಂತರ ಹೋರಾಟಗಳು ಈ ನೆಲದಲ್ಲಿ ಯಶಸ್ಸು ಪಡೆಯುತ್ತವೆ ಎಂದು ಇತಿಹಾಸ ಸಾರಿ ಹೇಳುತ್ತದೆ. ಒಳ್ಳೆಯವರಂತೆ ಇರಬಾರದು ನಿಜವಾಗಿಯೂ ಒಳ್ಳೆಯವರಾಗಿರಬೇಕು, ಪ್ರಾಮಾಣಿಕರಂತೆ ನಟೆಸಬಾರದು ನಿಜವಾಗಿಯೂ ಪ್ರಾಮಾಣಿಕರಾಗಿರಬೇಕು ಆಗ ಸಮಾಜ ಗುರುತಿಸುವುದು ನಿಶ್ಚಿತ.
ಮುಖವಾಡಗಳ ಮರೆಯಲ್ಲಿ ಹೆಚ್ಚು ದಿನ ಬದುಕಲಾಗುವುದಿಲ್ಲ. ಇಂದಲ್ಲಾ ನಾಳೆ ಅದು ಕಳಚಿ ಬೀಳಲೇಬೇಕು. ಅದಕ್ಕೆ ನಾನು ಸಹ ಹೊರತಲ್ಲ…….
ಒಟ್ಟಿನಲ್ಲಿ……..
ಬೆಟ್ಟವನ್ನು ಏರಬೇಕಾಗಿದೆ,……
ಬಹುದೊಡ್ಡ ಬೆಟ್ಟವೊಂದನ್ನು,
ಬಹುದೂರದ ಅತ್ಯಂತ ಎತ್ತರದ ಬೆಟ್ಟವನ್ನು,
ಕಲ್ಲು ಮುಳ್ಳಿನ ಹಾದಿಯ ಬೆಟ್ಟವನ್ನು,….
ಬುದ್ದ ಯೇಸು ಪೈಗಂಬರ್ ಬಸವ ಗಾಂಧಿ ಅಂಬೇಡ್ಕರ್ ಸ್ವಾಮಿ ವಿವೇಕಾನಂದ ಮುಂತಾದ ಘಟಾನುಘಟಿಗಳು ಏರಲು ಪ್ರಯತ್ನಿಸಿದ ಬೆಟ್ಟವನ್ನು ಏರಬೇಕಾಗಿದೆ….
ಖುರಾನ್ ಬೈಬಲ್ ವೇದ ಉಪನಿಷತ್ತುಗಳು ಮಾರ್ಗ ತೋರುವಲ್ಲಿ ವಿಫಲವಾದ ಬೆಟ್ಟವನ್ನು……
ಅದಕ್ಕಾಗಿ….
ಜನರ ಮನಸ್ಸುಗಳ ಒಳಗೆ ಇಳಿಯಬೇಕಿದೆ….
ಅವರ ಹೃದಯದ ಬಾಗಿಲನ್ನು ತಟ್ಟಬೇಕಿದೆ…
ಅವರ ಪ್ರತಿರೋಧವನ್ನು ಎದುರಿಸಬೇಕಿದೆ….
ಅವರ ನಿಂದನೆಯನ್ನು ಸಹಿಸಬೇಕಿದೆ…..
ಆರೋಪಗಳನ್ನು ಕೇಳಿಸಿಕೊಳ್ಳಬೇಕಿದೆ….
ಅವರ ಅಜ್ಞಾನಕ್ಕೆ ಮರುಕಪಡಬೇಕಾಗಿದೆ….
ಉಡಾಫೆತನವನ್ನು ನಿರ್ಲಕ್ಷಿಸಬೇಕಾಗಿದೆ…..
ಮೌಢ್ಯವನ್ನು ಅರ್ಥಮಾಡಿಸಬೇಕಿದೆ…
ನಂಬಿಕೆಯನ್ನು ಪ್ರಶ್ನಿಸಬೇಕಿದೆ….
ನೋವನ್ನು ನುಂಗಬೇಕಿದೆ…
ಪ್ರೀತಿಯನ್ನು ಹಂಚಬೇಕಿದೆ…….
ಅದಕ್ಕಾಗಿ…….
ವಿಶ್ರಾಂತಿ ಪಡೆಯುವಂತಿಲ್ಲ,…
ಸುಖ ಬಯಸುವಂತಿಲ್ಲ…
ತಾಳ್ಮೆಗೆಡುವಂತಿಲ್ಲ…..
ಪ್ರಶಸ್ತಿ ಸ್ವೀಕರಿಸುವಂತಿಲ್ಲ…
ಸನ್ಮಾನಕ್ಕೆ ಹಾತೊರೆಯುವಂತಿಲ್ಲ…
ಅಧಿಕಾರಕ್ಕಾಗಿ ಹೊಡೆದಾಡುವಂತಿಲ್ಲ…..
ಪ್ರಚಾರಕ್ಕೆ ಹಲ್ಲುಗಿಂಜುವಂತಿಲ್ಲ…..
ಆ ಮಾರ್ಗದಲ್ಲಿ……..
ಬ್ರಾಹ್ಮಣರನ್ನು ಟೀಕಿಸಬೇಕಾಗುತ್ತದೆ…..
ದಲಿತರನ್ನು ಪ್ರಶ್ನಿಸಬೇಕಾಗುತ್ತದೆ……
ಒಕ್ಕಲಿಗರನ್ನು ನಿಂದಿಸಬೇಕಾಗುತ್ತದೆ…
ಲಿಂಗಾಯಿತರನ್ನು ಎಚ್ಚರಿಸಬೇಕಾಗುತ್ತದೆ…..
ಕುರುಬರನ್ನು ಕುಟುಕಬೇಕಾಗುತ್ತದೆ….
ಎಲ್ಲಾ ಜಾತಿಗಳವರನ್ನು ಹೀಗಳೆಯಬೇಕಾಗುತ್ತದೆ….
ಮಹಿಳೆಯರಿಗೂ ಬುದ್ದಿ ಹೇಳಬೇಕಾಗುತ್ತದೆ….
ಪುರುಷರಿಗೆ ಗದರಿಸಬೇಕಾಗುತ್ತದೆ…..
ಮಕ್ಕಳಿಗೆ ಕಲಿಸಬೇಕಾಗುತ್ತದೆ…..
ರೈತರನ್ನು ದಡ್ಡರೆನ್ನಬೇಕಾಗುತ್ತದೆ….
ಕಾರ್ಮಿಕರನ್ನು ಜಗಳಗಂಟರು ಎಂದು ದೂರಬೇಕಾಗುತ್ತದೆ….
ಹಿಂದು ಮುಸ್ಲಿಂ ಕ್ರಿಶ್ಚಿಯನ್ ಮುಂತಾದ ಎಲ್ಲಾ ಧಾರ್ಮಿಕ ನಾಯಕರ ಮುಖವಾಡ ಕಳಚಬೇಕಾಗುತ್ತದೆ….
ಸಿನಿಮಾ ನಟನಟಿಯರ ಬಣ್ಣ ಬಯಲುಮಾಡಬೇಕಾಗುತ್ತದೆ…..
ರಾಜಕಾರಣಿಗಳ ಭ್ರಷ್ಟತೆ ಎತ್ತಿ ತೋರಿಸಬೇಕಾಗುತ್ತದೆ….
ಅಧಿಕಾರಿಗಳ ಹಣದ ಮೋಹ ಖಂಡಿಸಬೇಕಾಗುತ್ತದೆ….
ಸಮಾಜ ಸೇವಕರ ಗೋಮುಖ ವ್ಯಾಘ್ರತನ ವರ್ಣಿಸಬೇಕಾಗುತ್ತದೆ…
ಮತದಾರರ ಸ್ವಾರ್ಥ ಹೇಳಲೇಬೇಕಾಗುತ್ತದೆ…
ಇದರ ನಡುವೆ………..
ಎಡಬಿಡಂಗಿ ಎನ್ನುವರು,
ದೇಶದ್ರೋಹಿ ಎನ್ನುವರು,
ಧರ್ಮ ವಿರೋಧಿ ಎನ್ನುವರು,
ಮುಭಕ್ತನೆನ್ನುವರು,
ಗಂಜಿಗಿರಾಕಿ ಎನ್ನುವರು,
ತಟ್ಟೆ ಕಾಸಿನ ಭಿಕ್ಷುಕ ಎನ್ನುವರು,
ಹಿಜಡಾ ಎನ್ನುವರು,
ಎಡಪಂಥೀಯ ಎನ್ನುವರು,
ಬಲಪಂಥೀಯ ಎನ್ನುವರು,
ತೆವಲು ಬರಹಗಾರ ಎನ್ನುವರು,
ಪಲಾಯನವಾದಿ ಎನ್ನುವರು,
ಪ್ರಚೋದಿಸುವರು,
ಹುಚ್ಚನೆನ್ನುವರು,
ವೈಯಕ್ತಿಕವಾಗಿ ನಿಂದಿಸುವರು…….
ಆಗಲೂ…..
ತುಂಬು ಹೃದಯದಿಂದ ಸ್ವಾಗತಿಸುವವರು,
ಪ್ರೋತ್ಸಾಹಿಸುವವರು,
ಬೆನ್ನು ತಟ್ಟುವವರು,
ಜೊತೆಯಲ್ಲಿ ಬರುವವರು ಇದ್ದೇ ಇರುತ್ತಾರೆ…..
ಜೊತೆಗೆ
ಬೆಟ್ಟವನ್ನು ಹತ್ತಲು ಬಿಡದೆ….
ನಿರ್ಲಿಪ್ತರು,
ನಿರ್ಲಕ್ಷಿಸುವವರು,
ಗಮನಿಸುವವರು,
ಕುತೂಹಲಿಗಳು,
ಎಚ್ಚರಿಸುವವರು,
ಉದಾಸೀನ ಮಾಡುವವರು,
ಇರುತ್ತಾರೆ…..
ಏಕೆಂದರೆ….
ಅದು ಅಂತಿಂತ ಬೆಟ್ಟವಲ್ಲ…
ಮಾನವೀಯತೆಯ ಬೆಟ್ಟ,
ಜೀವಪರ ಬೆಟ್ಟ,
ಮಾನವ ಧರ್ಮದ ಬೆಟ್ಟ,
ಪ್ರಕೃತಿ ಸಹಜ ಸೃಷ್ಟಿಯ ಬೆಟ್ಟ,
ಅಲ್ಲಿಗೆ ತಲುಪಿದ್ದೇ ಆದರೆ,……
ಕಾಲೆಳೆಯುವವರು,
ಕಲ್ಲು ಎಸೆಯುವವರು,
ಬಾಣ ಬಿಡುವವರು,
ಹಿತಶತ್ರುಗಳು,
ಮಜಾ ನೋಡುವವರು,
ನಾಶ ಮಾಡಲು ಯತ್ನಿಸುವವರು,
ಕೊಂದೇ ಬಿಡುವವರು,
ಇರುತ್ತಾರೆ…….
ಈ ಪಟ್ಟಭದ್ರ ಹಿತಾಸಕ್ತಿಗಳ ಮಾನವ ನಿರ್ಮಿತ ಚಿಕ್ಕ ಚಿಕ್ಕ ಬೆಟ್ಟಗಳು ಕುಸಿಯುತ್ತವೆ,
ಕೃತಕ ಗೋಡೆಗಳು ಉದುರಿ ಬೀಳುತ್ತವೆ.
ಅಸ್ತಿತ್ವವೇ ಇಲ್ಲವಾಗುತ್ತದೆ.
ಆದರೂ……
ಹತ್ತಲೇ ಬೇಕಿದೆ ಆ ಬೆಟ್ಟವನ್ನು,
ಆ ಕನಸಿನಾ ಬೆಟ್ಟವನ್ನು,
ಬನ್ನಿ ನನ್ನೊಂದಿಗೆ…..
ನಾನು ನಿಮ್ಮೊಂದಿಗೆ…..
ಪ್ರಯತ್ನಿಸುತ್ತಲೇ ಇರೋಣ….
ನಿರಂತರವಾಗಿ….
ಬೆಟ್ಟದ ತುದಿ ತಲುಪುವವರೆಗೂ……
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..