ಭಾನಿಗೊಂದು ಎಲ್ಲೆ ಎಲ್ಲಿದೇ…
ನಿನ್ನಾಸೆಗೆಲ್ಲಿ ಕೊನೆಯಿದೇ….
ಕನ್ನಡ ಸಿನಿಮಾ ಹಾಡು ನೆನಪಾಗುತ್ತಿದೆ…….
ಕೊರೋನಾ ವೈರಸ್ ರೋಗದ ನಂತರ ಮಧ್ಯ ವಯಸ್ಕರು ಮತ್ತು ಹಿರಿಯರು ಬದುಕಿರುವುದೇ ಒಂದು ಸಾಧನೆ. ಅದಕ್ಕಾಗಿ ಪ್ರಕೃತಿಗೆ ಕೃತಜ್ಞತೆಯನ್ನು ಹೇಳಬೇಕು.
ಸ್ವಾತಂತ್ರ್ಯ ನಂತರ ಕರ್ನಾಟಕದ ಮುಖ್ಯಮಂತ್ರಿಗಳಾದವರು ಒಟ್ಟು 23 ಜನ. ಕರ್ನಾಟಕದ ಜನಸಂಖ್ಯೆ ಈಗ 7 ಕೋಟಿಯಾದರು ಪ್ರಜಾಪ್ರಭುತ್ವ ಸ್ಥಾಪನೆಯಾಗಿ ಸುಮಾರು 75 ವರ್ಷಗಳಲ್ಲಿ ಕೋಟ್ಯಾಂತರ ಜನ ಹುಟ್ಟು ಸಾವುಗಳನ್ನು ಕಂಡಿದ್ದಾರೆ. ಅವರಲ್ಲಿ ಕೇವಲ 23 ಜನರಿಗೆ ಮಾತ್ರ ಮುಖ್ಯಮಂತ್ರಿಯಾಗುವ ಅವಕಾಶ ದೊರೆತಿದೆ. ಅದೊಂದು ರಾಜ್ಯದ ಅತ್ಯುನ್ನತ ಅಧಿಕಾರ ಸ್ಥಾನ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಈಗ 24 ನೆಯ ಮುಖ್ಯಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ನಡೆಯುತ್ತಿದೆ.
ಒಂದು ಆಸಕ್ತಿದಾಯಕ ವಿಷಯವೆಂದರೆ ಈಗ ಮುಖ್ಯಮಂತ್ರಿ ಮತ್ತು 34 ಮಂತ್ರಿಗಳ ಸ್ಥಾನಕ್ಕಾಗಿ ಪೈಪೋಟಿ ನಡೆಸುತ್ತಿರುವ ಬಹಳಷ್ಟು ವ್ಯಕ್ತಿಗಳ/ಶಾಸಕರ ವಯಸ್ಸು ಸುಮಾರು 60 ರಿಂದ 80 ರ ವರೆಗೂ ಇದೆ. ಜೊತೆಗೆ ಬಹಳಷ್ಟು ಜನ 4/5/6/7/8 ಬಾರಿ ಶಾಸಕರು, ಮಂತ್ರಿಗಳು ಆಗಿ ಅಧಿಕಾರ ಅನುಭವಿಸಿದ್ದಾರೆ. ಮಕ್ಕಳು – ಮೊಮ್ಮಕ್ಕಳಿಗೆ ಆಗುವಷ್ಟು ಹಣ ಆಸ್ತಿ ಹೆಸರು ಮಾಡಿದ್ದಾರೆ. ಆದರೂ…….
ಕರ್ನಾಟಕದ ಸುಮಾರು 7 ಕೋಟಿ ಜನರಲ್ಲಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಜನ 60 ವರ್ಷ ದಾಟುವ ಮುನ್ನವೇ ಹೃದಯಾಘಾತ, ಕ್ಯಾನ್ಸರ್, ಅಪಘಾತ ಮುಂತಾದ ಕಾರಣಗಳಿಂದ ಇಹಲೋಕ ತ್ಯಜಿಸಿದ್ದಾರೆ. ಪ್ರಾಕೃತಿಕ ವಿಕೋಪಗಳಿಂದ ಇನ್ನೊಂದಿಷ್ಟು ಜನ ಸಾಯುತ್ತಾರೆ.
ಬದುಕಿರುವವರಲ್ಲಿ ಅನೇಕ ಜನ ಇನ್ನೂ ವಿಮಾನ ಯಾನ ಮಾಡಿಲ್ಲ, ವಿದೇಶ ನೋಡಿಲ್ಲ, ಫೈವ್ ಸ್ಟಾರ್ ಹೋಟೆಲ್ ಪ್ರವೇಶ ಪಡೆದಿಲ್ಲ, ಸ್ವಂತ ಕಾರು ಹೊಂದಿಲ್ಲ, ಸ್ವಂತ ಮನೆ ಹೊಂದಿಲ್ಲ, ಕೆಲವರು ಬೆಂಗಳೂರನ್ನೂ ನೋಡಿಲ್ಲ.
ಈ ಎಲ್ಲಾ ಜನರು ಹುಟ್ಟಿರುವುದು ಇದೇ ಕರುನಾಡಿನಲ್ಲಿ. ಎಲ್ಲರಿಗೂ ತಿಳಿದಿರುವ ಈ ವಿಷಯವನ್ನು ಈಗ ಏಕೆ ನೆನಪಿಸಬೇಕಾಯಿತೆಂದರೆ….
ಸನ್ಮಾನ್ಯ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಎಂಬ ಇಬ್ಬರು ವ್ಯಕ್ತಿಗಳು ಮುಖ್ಯಮಂತ್ರಿ ಸ್ಥಾನಕ್ಕಾಗಿ ನಡೆಸುತ್ತಿರುವ ಹೋರಾಟ. ಇದು ಅಷ್ಟು ಸುಲಭವಾಗಿ ನಿಲ್ಲುವುದಿಲ್ಲ. ಅವಕಾಶ ಸಿಗದ ಮತ್ತೊಬ್ಬರು ಒಳಗೊಳಗೆ ಕಾರ್ಯತಂತ್ರ ರೂಪಿಸುತ್ತಾರೆ. ಅವರಿಗೆ ಜೊತೆಯಾಗಲು ಮಂತ್ರಿ ಸ್ಥಾನ ದೊರಕದ ಮತ್ತಷ್ಟು ಹಿರಿ ಕಿರಿ ತಲೆಗಳು ಜೊತೆಯಾಗುತ್ತವೆ. ಏಕೆಂದರೆ ಈ ಬಾರಿ 135 ರಷ್ಟು ದೊಡ್ಡ ಸಂಖ್ಯೆಯ ಶಾಸಕರು ಮತ್ತು ಅತ್ಯಂತ ಹಿರಿಯರು ಆಯ್ಕೆಯಾಗಿದ್ದಾರೆ. ಬಹುತೇಕ ಅವರೆಲ್ಲರೂ ಹಕ್ಕು ಮಂಡಿಸುತ್ತಾರೆ. ಮಂತ್ರಿಗಳಾದವರು ಒಳ್ಳೆಯ ಖಾತೆಗೆ ಕ್ಯಾತೆ ತೆಗೆಯುತ್ತಾರೆ. ಮತ್ತೆ ಅಲ್ಲಿ ವಂಚಿತರು ಸ್ಪೋಟಗೊಳ್ಳುತ್ತಾರೆ.
ಇದು ಇಷ್ಟಕ್ಕೆ ಮುಗಿಯುವುದಿಲ್ಲ. ಬಂಡಾಯವನ್ನು ತಮ್ಮ ಹಿತಾಸಕ್ತಿಗೆ ಬಳಸಿಕೊಳ್ಳುವುದರಲ್ಲಿ ಯಾವುದೇ ನೈತಿಕತೆ ಉಳಿಸಿಕೊಳ್ಳದ ಭಾರತೀಯ ಜನತಾ ಪಕ್ಷ ಬಕ ಪಕ್ಷಿಯಂತೆ ಕಾಯುತ್ತಿರುತ್ತದೆ. ಸ್ವಲ್ಪ ಅವಕಾಶ ಸಿಕ್ಕಿದರೂ ಅನೈತಿಕ ವ್ಯವಹಾರ ಕುದುರಿಸುತ್ತದೆ.
ಬಹುತೇಕ ರಾಜಕಾರಣಿಗಳ ಮನಸ್ಥಿತಿಯೇ ಹೀಗಿರುತ್ತದೆ. 5 ವರ್ಷದ ನಂತರ ಹಿಂದಿನ ಭ್ರಷ್ಟರು ದುಷ್ಟರು ಇಂದಿನ ದೇವ ಮಾನವರಂತೆ ಕಾಣುತ್ತಾರೆ.
ಇದು ಕೇವಲ ಒಂದು ಪಕ್ಷದ ರೋಗವಲ್ಲ. ಕರ್ನಾಟಕದ ಮೂರೂ ಪ್ರಮುಖ ಪಕ್ಷಗಳ ಸಾಂಕ್ರಾಮಿಕ ರೋಗ. ಬಹಳ ಹಿಂದಿನಿಂದಲೂ ನಡೆಯುತ್ತಾ ಬಂದಿದೆ.
ನಾವು ಮಾತ್ರ ಮತದಾನ ಪವಿತ್ರ ದಾನ, ನಿಮ್ಮ ಮತ ಮಾರಾಟ ಮಾಡಬೇಡಿ ಎಂದು ಕೇವಲ 1/2//3 ಸಾವಿರ ತೆಗೆದುಕೊಳ್ಳುವ ಅನಿವಾರ್ಯ ಅಮಾಯಕ ಮುಗ್ಧ ಮೂರ್ಖ ಜನರಿಗೆ ತಿಳಿವಳಿಕೆ ನೀಡುತ್ತೇವೆ. ದೊಡ್ಡ ಭ್ರಷ್ಟ ಕುಳಗಳನ್ನು ಆರಾಧಿಸುತ್ತೇವೆ.
ಎಲ್ಲವೂ ಸರಿ, ಆದರೆ ಸರಿ ಮಾಡುವುದು ಹೇಗೆ, ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎನ್ನುವ ಪ್ರಶ್ನೆಗಳೊಂದಿಗೆ ಚರ್ಚೆಗಳು ಮುಕ್ತಾಯವಾಗುತ್ತದೆ.
ನಿಜವಾಗಲೂ ರಾಜಕೀಯ ಎಂಬುದು ಒಂದು ಸೇವೆ. ಈ ಕ್ಷೇತ್ರ ಕೇವಲ ಪ್ರಾಮಾಣಿಕತೆ ಮತ್ತು ದಕ್ಷತೆಯನ್ನು ಮಾತ್ರ ಬಯಸುವುದಿಲ್ಲ. ತ್ಯಾಗ ಮನೋಭಾವ ಸಹ ಇರಬೇಕಾಗುತ್ತದೆ. ಆ ರೀತಿಯ ಜನ ಚಳವಳಿಯೊಂದು ಪರ್ಯಾಯವಾಗಿ ರೂಪಗೊಳ್ಳಲು ಪ್ರಯತ್ನಗಳು ನಡೆಯಬೇಕು. ಇಲ್ಲದಿದ್ದರೆ ಈ ಪಕ್ಷಗಳೇ 5 ವರ್ಷಗಳ ಸರದಿಯಲ್ಲಿ ಮತ್ತೆ ಮತ್ತೆ ಆಯ್ಕೆಯಾಗಿ ಜನರನ್ನು ವಂಚಿಸುತ್ತವೆ.
ಕರ್ನಾಟಕದ ಜನ ಅತ್ಯಂತ ಪ್ರೀತಿಯಿಂದ, ಅಭಿಮಾನದಿಂದ, ನಂಬಿಕೆಯಿಂದ ಕಾಂಗ್ರೇಸ್ ಪಕ್ಷವನ್ನು ಗೆಲ್ಲಿಸಿದ್ದಾರೆ. ಬಿಜೆಪಿಯನ್ನು ಅಬ್ಬರದ ಪ್ರಚಾರದ ನಡುವೆಯೂ ಧೂಳೀಪಟ ಮಾಡಿದ್ದಾರೆ. ಸನ್ಮಾನ್ಯ ಸಿದ್ದರಾಮಯ್ಯ ಅಥವಾ ಶಿವಕುಮಾರ್ ಅಥವಾ ಎಲ್ಲಾ ಶಾಸಕರೇ ಒಂದು ವೇಳೆ ನೀವು ಮುಖ್ಯಮಂತ್ರಿ ಅಥವಾ ಮಂತ್ರಿ ಆಗದಿದ್ದರೆ ಪ್ರಾಣವೇನು ಹೋಗುವುದಿಲ್ಲ. ಕರ್ನಾಟಕ ನಿಮ್ಮ ವಂಶದ ಆಸ್ತಿಯಲ್ಲ. ನೀವು ಇಷ್ಟು ದಿನ ಬದುಕಿರುವುದು ಮತ್ತು ಶಾಸಕರಾಗಿರುವುದೇ ಒಂದು ಬಹುದೊಡ್ಡ ಅದೃಷ್ಟ.
ನೀವು ಎಷ್ಟೇ ಜಗಳವಾಡಿದರೂ ಇರುವುದು ಒಂದೇ ಸ್ಥಾನ. ಸದ್ಯಕ್ಕೆ ಒಬ್ಬರಿಗೆ ಮಾತ್ರ ಸಿಗುತ್ತದೆ. ಕಿತ್ತಾಡಿ ರಾಜ್ಯದ ಜನರ ಮುಂದೆ ಬೆತ್ತಲಾಗದೇ ಹೇಗೋ ಹಂಚಿಕೊಂಡು ರಾಜ್ಯದ ಜನರ ಜೀವನಮಟ್ಟ ಸುಧಾರಿಸಲು ಪ್ರಯತ್ನಿಸಿ. ಇದು ಎಲ್ಲಾ ಶಾಸಕರಿಗೂ ಅನ್ವಯ.
ಎಚ್ಚರಿಕೆ : ಇತ್ತೀಚಿನ ವರ್ಷಗಳಲ್ಲಿ ಸಾವು ಎಲ್ಲರ ಬೆನ್ನ ಹಿಂದೆ ಹೊಂಚು ಹಾಕಿ ಕುಳಿತಿದೆ. ಅದು ನಮಗೆಲ್ಲ ಸ್ಪಷ್ಟವಾಗಿ ಕಾಣುತ್ತಿದೆ. ಆದ್ದರಿಂದ….
” ಒಳಿತು ಮಾಡು ಮನುಷ್ಯ,
ನೀನು ಇರುವುದು ಮೂರು ದಿವಸ “
ಎಂಬ ಸಿನಿಮಾ ಹಾಡನ್ನು ಮತ್ತೆ ನೆನಪಿಸುತ್ತಾ…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..