Spread the love

ರೋಡ್ ಶೋ ಜಾಗದಲ್ಲಿ ಸಾಧನೆಯ ಶೋ ಇರಬೇಕಾಗಿತ್ತು………

ಗ್ಯಾರಂಟಿ ಕಾರ್ಡ್ ಜಾಗದಲ್ಲಿ ಜನರ ನಂಬಿಕೆಯ ಕಾರ್ಡ್ ಗಳಿಸಬೇಕಾಗಿತ್ತು………

ಎರಡರಲ್ಲೂ ವಿಫಲರಾಗಿ ಈಗ ಜನರ ಮುಂದೆ ಮತಕ್ಕಾಗಿ ಅಂಗಲಾಚಬೇಕಾದ ಪರಿಸ್ಥಿತಿ ನಿರ್ಮಿಸಿಕೊಂಡಿದ್ದಾರೆ……

ರಾಜಕೀಯ ಪಕ್ಷಗಳ ನಾಯಕರುಗಳಿಗೆ ರೋಡ್ ಶೋ ಎಂಬ ಫ್ಯಾಷನ್ ಗೀಳು ಹೆಚ್ಚಾದಂತೆ ಕಾಣುತ್ತಿದೆ….

ವೈದ್ಯರು ಶಿಕ್ಷಕರು ವಕೀಲರು ಪತ್ರಕರ್ತರು ಚಾಲಕರು ಮನೆ ಕಟ್ಟುವವರು ಹೀಗೆ ಎಲ್ಲಾ ವೃತ್ತಿಯವರು ತಮ್ಮ ಬೇಡಿಕೆ ಹೆಚ್ಚಿಸಿಕೊಳ್ಳಲು ಈ ರೀತಿಯ ರೋಡ್ ಶೋ ಮಾಡುತ್ತಾರೆಯೇ ಅಥವಾ ತಾವು ಗ್ರಾಹಕರಿಗೆ ತೃಪ್ತಿ ಪಡಿಸಿ ಆ ಮೂಲಕ ತಮ್ಮ ಜನಪ್ರಿಯತೆ ಮತ್ತು ಬೇಡಿಕೆ ಹೆಚ್ಚಿಸಿಕೊಳ್ಳುತ್ತಾರೆಯೇ ಒಮ್ಮೆ ಯೋಚಿಸಿ ನೋಡಿ…..

ತಾವು ಹೇಳಿದ ಮಾತುಗಳು ಜನರಲ್ಲಿ ವಿಶ್ವಾಸ ಗಳಿಸುವುದಿಲ್ಲ ಎಂದು ವಸ್ತುಗಳಿಗೆ ನೀಡುವ ಗ್ಯಾರಂಟಿ ಕಾರ್ಡ್ ಕೊಡಬೇಕಾದ ಅಪನಂಬಿಕೆಯನ್ನು ರಾಜಕಾರಣಿಗಳು ಸೃಷ್ಟಿಸಿಕೊಂಡಿದ್ದಾರೆ…….

ಒಂದು ಕಡೆ,…..,
ಬೆಲೆ ಏರಿಕೆಯ ಶೋ,
ಭ್ರಷ್ಟಾಚಾರದ ಶೋ,
ನೀರು ಗಾಳಿ ಆಹಾರ ಮಲಿನವಾಗಿರುವ ಶೋ,
ಅನಾರೋಗ್ಯದ ಹೆಚ್ಚಳದ ಶೋ,
ನಿರುದ್ಯೋಗದ ಶೋ,…..

ಮತ್ತೊಂದು ಕಡೆ,…..,
ಬಡತನದ ಗ್ಯಾರಂಟಿ,
ಜಾತಿ ಪದ್ದತಿಯ ಗ್ಯಾರಂಟಿ,
ಅಸಮಾನತೆಯ ಗ್ಯಾರಂಟಿ,
ಶೋಷಣೆಯ ಗ್ಯಾರಂಟಿ,
ಅಪೌಷ್ಟಿಕತೆಯ ಗ್ಯಾರಂಟಿ,…..

ಅಸಹ್ಯ ಹುಟ್ಟಿಸುತ್ತಿದೆ ಈ‌ ಶೋಗಳು ಮತ್ತು ಗ್ಯಾರಂಟಿಗಳು – ಅವರ ಮಾತುಗಳು…….

ಈ ಹುಚ್ಚರ ಸಂತೆಯಲ್ಲಿ ವ್ಯಾಪಾರ ಮಾಡಲು ಪ್ರಜ್ಞೆ ಕಳೆದುಕೊಂಡ ಮತಿಹೀನರಾದ ನಾವು ಕಾಯುತ್ತಿದ್ದೇವೆ…

ಇದು ಹೇಗಿದೆ ಎಂದರೆ,….,

ಒಮ್ಮೆ ಸಂತೆಯಲ್ಲಿ ಬೆತ್ತಲಾದ ಸಂತ……..

ಮುಖವಾಡದ ಮನಸ್ಸಿನ ನೆರಳಿನಲ್ಲಿ
ನಿಂತು ಬೆಚ್ಚಿಬಿದ್ದರು ಜನ……….

ಬೆಲೆ ಕಟ್ಟುತ್ತಿದ್ದರು ವ್ಯಾಪಾರಿಗಳು…….

ಪ್ರೀತಿಗಿಷ್ಟು – ಕರುಣೆಗಿಷ್ಟು – ಗೆಳೆತನಕ್ಕಿಷ್ಟು – ಮನುಷ್ಯತ್ವಕ್ಕಿಷ್ಟು ರೂಪಾಯಿಗಳು…..‌‌..‌

ಕೊಳ್ಳುತ್ತಿದ್ದರು ಜನಗಳು ಚೌಕಾಸಿ ಮಾಡಿ ತಮಗೆಟುಕಿದ ಬೆಲೆಕೊಟ್ಟು……..

ಸಂಬಂಧಗಳು ಕೂಡ ಮಾರಾಟವಾಗುತ್ತಿದ್ದವು ಹರಾಜಿನಲ್ಲಿ……

ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ
ಬೆತ್ತಲೆ ದೇಹ ಕಂಡು ದಂಗಾದರು ನೆರೆದವರು…………

ಸಂತ ಜೋರು ಧ್ವನಿಯಲ್ಲಿ ಹಾಡುತ್ತಿದ್ದ……..

ಇವು ಮಾರಾಟದ ಸರಕುಗಳಲ್ಲ – ನಿಮ್ಮೊಳಗಡಗಿರುವ ಭಾವಗಳು ……

ವ್ಯಾಪಾರ ಮಾಡಬೇಡಿ ಹಣಕೊಟ್ಟು ಕೊಳ್ಳಬೇಡಿ………….

ಜನರು ಗೊಂದಲಕ್ಕೊಳಗಾದರು,
ವ್ಯಾಪಾರಿಗಳು ಆಕ್ರೋಶಗೊಂಡರು……

ಸಂತೆಯ ಸುಂಕದವನಿಗೆ ಬದುಕೇ ಕುಸಿದಂತಾಯಿತು……..

ಅಲ್ಲಿಯೇ ಇದ್ದ ಕುಲುಮೆಯಿಂದ ಮಚ್ಚನ್ನು ಎತ್ತಿಕೊಂಡು ಸಂತನೆಡೆಗೆ ಬೀಸಿದ……..

ಆಕಾಶ ನೋಡಿ ಹಾಡುತ್ತಿದ್ದ ಸಂತನ ತಲೆ ಸೀಳಿ ಸ್ಥಳದಲ್ಲೇ ಕುಸಿದು ಸತ್ತ………….

ವ್ಯಾಪಾರಿಗಳು ಗಹಗಹಿಸಿ ನಗುತ್ತಾ ಕುಣಿದು ಕುಪ್ಪಳಿಸಿದರು………

ಸುಧಾರಿಸಿಕೊಂಡ ಜನರು ಮತ್ತೆ ವ್ಯಾಪಾರದಲ್ಲಿ ತೊಡಗಿದರು…….

ಈಗ ಅವುಗಳ ಬೆಲೆಯನ್ನು ದುಪ್ಪಟ್ಟು ಮಾಡಿದರು ದಲ್ಲಾಳಿಗಳು………

ಸಂತೆ ಮತ್ತೆ ಭರ್ಜರಿಯಾಗಿ ನಡೆಯತೊಡಗಿತು…….

ಬೆತ್ತಲಾದ ಸಂತನ ದೇಹ ಹೆಪ್ಪುಗಟ್ಟಿದ ರಕ್ತದ ಮಡುವಿನಲ್ಲಿ ಅನಾಥ ಶವವಾಗಿತ್ತು…….

ನಾಯಿಗಳು ಇರುವೆಗಳು ಮುತ್ತತೊಡಗಿದವು……

ಮೇಲೆ ರಣ ಹದ್ದುಗಳು ಹಾರಾಡತೊಡಗಿದವು……

ಮುಖವಾಡದ ಸಂತೆಯಲ್ಲಿ
ಬೆತ್ತಲಾಗುವ ಮುನ್ನ ಎಚ್ಚರ…………

ಮುಖವಾಡವೇ ಸಹಜವಾಗಿ,
ಸ್ವಾಭಾವಿಕ ಸಹಜ ಬೆತ್ತಲೆಯೇ
ಅಪರಿಚಿತವಾಗಿರುವ ಕಾಲಘಟ್ಟದಲ್ಲಿ ನಾವು ನೀವು……………

ಮತ ಹಾಕುವ ಮುನ್ನ ದಯವಿಟ್ಟು ಯೋಚಿಸಿ….

ಸತ್ಯ ಹೇಳಲು ಸಾಧ್ಯವಾಗದ ದೈನೇಸಿ – ಅಸಹಾಯಕ ಸ್ಥಿತಿಯಲ್ಲಿ ನಾನು……

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068……

error: No Copying!