Spread the love

ಇಷ್ಟು ದೂರ ಇಷ್ಟು ದೀರ್ಘ ಮತ್ತು ಇಷ್ಟು ನಿರ್ಲಕ್ಷ್ಯಕ್ಕೆ ಒಳಗಾಗಬಾರದಿತ್ತು ದೆಹಲಿಯಲ್ಲಿ ನಡೆಯುತ್ತಿರುವ ಕುಸ್ತಿಪಟುಗಳ ” ಲೈಂಗಿಕ ದೌರ್ಜನ್ಯ ವಿರುದ್ಧದ ಹೋರಾಟ ಪ್ರಕರಣದ ಘಟನೆ “……..

ಅವರು ಒಲಂಪಿಯನ್ಗಳು, ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಶ್ವ ಚಾಂಪಿಯನ್ ಗಳಾಗಿ ಪ್ರಶಸ್ತಿ ಪಡೆದವರು ಮತ್ತು ಪ್ರಖ್ಯಾತರಾದವರು. ಈ ಸುದ್ದಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ಕುಂದು ಉಂಟುಮಾಡುತ್ತಿದೆ. ಆರೋಪ ಕೂಡ ಭಾರತದ ಮಟ್ಟಿಗೆ ಅತ್ಯಂತ ಗಂಭೀರವಾದುದಾಗಿದೆ.

ಕುಸ್ತಿ ಫೆಡರೇಶನ್ ಅಧ್ಯಕ್ಷನ ಮೇಲೆ ಬಂದಿರುವ ಆರೋಪವನ್ನು ಪೋಲೀಸ್, ನ್ಯಾಯಾಂಗ ಮತ್ತು ದೆಹಲಿಯಲ್ಲೇ ಇರುವ ಪ್ರಧಾನಿ ಕಾರ್ಯಾಲಯ ವಿಶೇಷ ತನಿಖಾ ತಂಡ ರಚಿಸಿ, ಇಷ್ಟು ಹೊತ್ತಿಗಾಗಲೇ ಒಂದು ಕ್ರಮ ಜರುಗಿಸಬೇಕಾಗಿತ್ತು.

ಈಗ ಅವರುಗಳು ಮುಷ್ಕರ ಹೂಡಿ, ಅವರ ಮೇಲೆ ಮತ್ತಷ್ಟು ಪೋಲೀಸ್ ದೌರ್ಜನ್ಯ ನಡೆಸಿ, ಇತರೆ ಪಕ್ಷಗಳು ಅವರಿಗೆ ಬೆಂಬಲ ಸೂಚಿಸಿ, ಅದನ್ನು ರಾಜಕೀಕರಣಗೊಳಿಸಿ ದೇಶದ ಆಡಳಿತ ವ್ಯವಸ್ಥೆಗೆ ಒಂದು ಕ್ರೀಡಾ ಲೈಂಗಿಕ ಹಗರಣದ ಪ್ರಕರಣವನ್ನು ಸರಿಯಾಗಿ ನಿರ್ವಹಿಸಲು ಸಹ ಸಾಧ್ಯವಾಗುತ್ತಿಲ್ಲ ಎಂಬ ಅಭಿಪ್ರಾಯ ಮೂಡಲು ಕಾರಣವಾಗಬಾರದಿತ್ತು.

ಈ ದೇಶದ ಕಾನೂನು ಮತ್ತು ಮೂಲಭೂತ ಹಕ್ಕುಗಳ ಅಡಿಯಲ್ಲಿ ಯಾರು ಯಾರ ಮೇಲಾದರೂ ಯಾವ ಕಾರಣಕ್ಕಾಗಿಯಾದರೂ ದೂರು ನೀಡಬಹುದು. ಅದರಲ್ಲೂ ಲೈಂಗಿಕ ದೂರುಗಳನ್ನು ತಕ್ಷಣ ದಾಖಲಿಸಿಕೊಂಡು ಶೀಘ್ರವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಆರೋಪಿ ಹಾಲಿ ಸಂಸತ್ ಸದಸ್ಯರು ಮತ್ತು ಪ್ರಭಾವಿಯಾಗಿರುವುದರಿಂದ ಸಹಜ ನ್ಯಾಯವನ್ನು ನಿರಾಕರಿಸಲಾಗಿದೆ. ಇದು ಸಮಸ್ಯೆ ಉಲ್ಬಣಗೊಳ್ಳಲು ಮೂಲ ಕಾರಣ. ತದನಂತರ ಅದು ಬೇರೆ ಬೇರೆ ರೂಪ ಪಡೆಯುತ್ತಿದೆ.

ಸಾಮಾನ್ಯವಾಗಿ ಭಾರತದ ಕಾನೂನು ಪ್ರಕ್ರಿಯೆಗಳು ವಾಸ್ತವದ ನೆಲೆಯಲ್ಲಿ ಅಪರಾಧಿಗಳಿಗೇ ಹೆಚ್ಚು ಅನುಕೂಲಕರವಾಗಿದೆ. ಪ್ರಕ್ರಿಯೆ ನಿಧಾನಗೊಳಿಸಲು, ದಾರಿ ತಪ್ಪಿಸಲು, ಸಾಕ್ಷ್ಯ ನಾಶಪಡಿಸಲು ಸಹಕರಿಸುವ ಸಾಧ್ಯತೆಗಳು ಹೆಚ್ಚಾಗಿದೆ. ಈ ವ್ಯವಸ್ಥೆಯಲ್ಲಿ ಇದು ಬಹಿರಂಗ ಸತ್ಯ

ಇಂತಹ ಸೂಕ್ಷ್ಮ ವಿಷಯವನ್ನು ಹೆಚ್ಚು ಜವಾಬ್ದಾರಿಯಿಂದ ನಿರ್ವಹಿಸಬೇಕಾಗುತ್ತದೆ. ಆರೋಪ ಪ್ರತ್ಯಾರೋಪ ಮಾಡುತ್ತಾ ಪರ ವಿರೋಧ ಚರ್ಚೆಗಳಿಗೆ ಆಸ್ಪದ ಕೊಡುತ್ತಾ ಎಳೆದಾಡಿದರೆ ಆಡಳಿತ ವ್ಯವಸ್ಥೆ ಮತ್ತು ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆ ಕುಸಿಯುತ್ತದೆ. ‌

ಆಶ್ಚರ್ಯವೆಂದರೆ ಇತಿಹಾಸದ ಅನ್ಯಾಯಗಳನ್ನು ಹೊಸ ಹೊಸ ಪುಸ್ತಕ, ಭಾಷಣ, ಸಿನಿಮಾಗಳಲ್ಲಿ ಪುಂಖಾನುಪುಂಖವಾಗಿ ಮಾತನಾಡುವ ವ್ಯವಸ್ಥೆ ವರ್ತಮಾನದ ಅನ್ಯಾಯಗಳನ್ನು ನಿರ್ಲಕ್ಷಿಸುತ್ತಿರುವುದು. ಆಗ ಹಾಗೆ ನೆಡೆಯಬಾರದಿತ್ತು ಎನ್ನುವವರು ಈಗ ಹಾಗೆಯೇ ವರ್ತಿಸುತ್ತಿರುವುದು ಒಂದು ವ್ಯಂಗ್ಯ……

ಆ ಲೈಂಗಿಕ ದೌರ್ಜನ್ಯದ ಪ್ರಕರಣದಲ್ಲಿ ಏನು ನಡೆದಿದೆಯೋ ಎಂಬುದನ್ನು ಇಷ್ಟು ದೂರದಿಂದ ಹೇಳುವುದು ಸಾಧ್ಯವಿಲ್ಲ. ಆದರೆ ತನಿಖೆ ಮತ್ತು ಪ್ರಕರಣವನ್ನು ನಿರ್ವಹಿಸುತ್ತಿರುವ ರೀತಿ ಮಾತ್ರ ಅತ್ಯಂತ ಕಳಪೆ ಗುಣಮಟ್ಟವನ್ನು ಹೊಂದಿದೆ. ಇದು ಇನ್ನಷ್ಟು ದೊಡ್ಡದಾಗುವ ಮುನ್ನ ಅದಕ್ಕೆ ಹೆಚ್ಚು ಗಮನಹರಿಸಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ. ಆ ಕ್ರೀಡಾಪಟುಗಳು ಮುಂದಿನ ಒಲಿಂಪಿಕ್ ಸ್ಪರ್ಧೆಗೆ ಬೇಗ ಅಭ್ಯಾಸ ಪ್ರಾರಂಭಿಸಲಿ. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಸಾಧ್ಯವಾದಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಿ ಎಂದು ಆಗ್ರಹಿಸುತ್ತಾ…….

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..

error: No Copying!