ಉಡುಪಿ: ದಿನಾಂಕ: 05-05-2023 (ಹಾಯ್ ಉಡುಪಿ ನ್ಯೂಸ್) ನ್ಯಾಯಾಲಯದಲ್ಲಿ ಸಾಕ್ಷಿ ನುಡಿದನೆಂಬ ಕಾರಣಕ್ಕೆ ನಿಟ್ಟೆ ನಿವಾಸಿಯೋರ್ವರಿಗೆ ಉಡುಪಿಯಲ್ಲಿ ಅಡ್ಡ ಗಟ್ಟಿ ಅಪಹರಿಸಿ ಹಲ್ಲೆ ನಡೆಸಿ ಹಿಂಸೆ ನೀಡಿ ಪೊದೆಯೊಂದರಲ್ಲಿ ಎಸೆದು ಹೋಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಬ್ದುಲ್ ಜಬ್ಬಾರ್ (38) ಎಂಬವರು ಹಾಜಿ ಹಸನಬ್ಬ ಮಂಜಿಲ್, ಲೆಮಿನಾ ಕ್ರಾಸ್, ಸಂತೋಷ ಫ್ಯಾಕ್ಟರಿ ಬಳಿ, ನಿಟ್ಟೆ, ಕಾರ್ಕಳ ತಾಲೂಕು ಎಂಬಲ್ಲಿಯ ನಿವಾಸಿಯಾಗಿದ್ದು, ಇವರು ದಿನಾಂಕ 03/05/2023 ರಂದು ಉಡುಪಿ ಪೋಕ್ಸೊ ನ್ಯಾಯಾಲಯದ ಸ್ಪೇಶಲ್ ಕೇಸ್ ಒಂದಕ್ಕೆ ಸಾಕ್ಷಿ ನುಡಿಯಲು ಉಡುಪಿಗೆ ಬಂದಿದ್ದು, ನ್ಯಾಯಾಲಯದಲ್ಲಿ ಸಾಕ್ಷಿ ನುಡಿದು ಸಂಬಂಧಿಕರ ಮನೆಗೆ ಒಂದು ಆಟೋದಲ್ಲಿ ಹೋಗುತ್ತಿರುವಾಗ ಉಡುಪಿ ತಾಲೂಕು ಗುಂಡಿಬೈಲು ರಸಿಕಾ ಬಾರ್ ಬಳಿ ಆಪಾದಿತರಾಧ 1) ಫಾರೂಕ್, 2) ಶಾರೂಕ್, 3) ಅನಿಲ್, 4) ಇಕ್ಬಾಲ್ ಸಾಣೂರ್, ಹಾಗೂ ಇನ್ನಿತರರು ಒಂದು ಕ್ರೇಟಾ ಕಾರು, ಒಂದು ಸ್ವೀಫ್ಟ್ ಡಿಸೈರ್ ಕಾರು ಮತ್ತು ಒಂದು ಸ್ಕೂಟಿಯಲ್ಲಿ ಬಂದು ರಿಕ್ಷಾ ಅಡ್ಡಗಟ್ಟಿ ರಿಕ್ಷಾದ ಒಳಗೆ ಕುಳಿತುಕೊಂಡಲ್ಲೇ ಅಬ್ದುಲ್ ಜಬ್ಬಾರ್ ರವರ ಬಟ್ಟೆಯನ್ನು ಕಳಚಿ ಹಲ್ಲೆ ಮಾಡಿದ್ದು, ಆಟೋ ರಿಕ್ಷಾದಿಂದ ಹೊರಗೆ ಎಳೆದು ಪುನಃ ಹಲ್ಲೆ ಮಾಡಿ, ಅವರು ಬಂದಿದ್ದ ಸ್ವೀಫ್ಟ್ ಡಿಸೈರ್ ಕಾರಿನೊಳಗೆ ಬಲಾತ್ಕಾರವಾಗಿ ದೂಡಿ ಕಾರಿನೊಳಗೆ ಕೂರಿಸಿಕೊಂಡು ಯಾವುದೋ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಒಂದು ಮರಕ್ಕೆ ಕಟ್ಟಿ ಹಾಕಿ ಪುನಃ ಹಲ್ಲೆ ಮಾಡಿ, ಅನ್ನ-ನೀರು ನೀಡದೇ ಹಿಂಸೆ ನೀಡಿ, ದಿನಾಂಕ 04/05/2023 ರಂದು ಬೆಳಿಗ್ಗೆ 10:00 ಗಂಟೆಗೆ ಬಂಟಕಲ್ ಬಿ.ಸಿ ರೋಡ್ ಪಂಜಿಮಾರು ಬಳಿ ಕರೆದುಕೊಂಡು ಬಂದು ಪೊದೆಯೊಳಗೆ ದೂಡಿ ಹಾಕಿ ಹೋಗಿರುತ್ತಾರೆ ಎಂದು ಅಬ್ದುಲ್ ಜಬ್ಬಾರ್ ರವರು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ . ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.