ಈ ರಾಜ್ಯವನ್ನು ಲಿಂಗಾಯಿತನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಒಕ್ಕಲಿಗನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ದಲಿತನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಬ್ರಾಹ್ಮಣನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಕುರುಬನೊಬ್ಬ ಮುನ್ನಡೆಸಬಾರದು,
ಈ ರಾಜ್ಯವನ್ನು ಇತರೆ ಯಾವ ಜಾತಿಯವನೂ ಮುನ್ನಡೆಸಬಾರದು……
ಈ ರಾಜ್ಯವನ್ನು ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಮುಂತಾದ ಯಾವ ಧರ್ಮದವನೂ ಮುನ್ನಡೆಸಬಾರದು…..
ಈ ರಾಜ್ಯವನ್ನು ಕನ್ನಡಿಗ ತಮಿಳಿನವ ತೆಲುಗಿನವ ಹಿಂದಿಯವ ಇಂಗ್ಲೀಷಿನವ ಮುಂತಾದ ಯಾವ ಭಾಷೆಯವನೂ ಮುನ್ನಡೆಸಬಾರದು…..
ಈ ರಾಜ್ಯವನ್ನು ರೈತ ಕಾರ್ಮಿಕ ವಿಜ್ಞಾನಿ ಸಮಾಜ ಸೇವಕ ಧಾರ್ಮಿಕ ಮುಖಂಡ ಮುಂತಾದ ಯಾರೂ ಮುನ್ನಡೆಸಬಾರದು……
ಏಕೆಂದರೆ ಇವರು ಯಾರೂ ಪರಿಪೂರ್ಣರಲ್ಲ. ಎಲ್ಲರೂ ತಮ್ಮ ಹಿತದ ಪಕ್ಷಪಾತಿಗಳಾಗುತ್ತಾರೆ. ಅದು ಅವರವರದೇ ಆಡಳಿತವಾಗುತ್ತದೆ…..
ಸುಮಾರು ಏಳು ಕೋಟಿ ಜನಸಂಖ್ಯೆಯ ಹೆಚ್ಚು ಕಡಿಮೆ ಜಪಾನ್ ದೇಶದಷ್ಟು ವಿಸ್ತೀರ್ಣದ ವಿಶ್ದದ ಅತ್ಯಂತ ಸುರಕ್ಷಿತ ಪ್ರದೇಶಗಳಲ್ಲಿ ಒಂದಾದ ಉದಾರ ಮನಸ್ಸಿನ ಈ ನಮ್ಮ ಕರ್ನಾಟಕ ರಾಜ್ಯವನ್ನು ಆಳುವವನು ಮುನ್ನಡೆಸುವವನು ಮೂಲಭೂತವಾಗಿ ಒಬ್ಬ ಮನುಷ್ಯನಾಗಿರಬೇಕು………
ಹೌದು, ಇದನ್ನು ಕಲ್ಪಿಸಿಕೊಳ್ಳಲು ಬಹಳ ಜನರಿಗೆ ಸಾಧ್ಯವಾಗುವುದಿಲ್ಲ.
ಏಕೆಂದರೆ ಅವರಿಗೆ ಮನುಷ್ಯರೇ ಕಾಣುತ್ತಿಲ್ಲ. ಎಲ್ಲರೂ ಹುಟ್ಟಿನಿಂದಲೇ ಬಂದ ಟೈಟಲ್ ಗಳಿಂದಲೇ ಗುರುತಿಸಲ್ಪಡುತ್ತಾರೆ. ತಾವು ಸೃಷ್ಟಿಯ ಸ್ವತಂತ್ರ ಜೀವಿಗಳು ಎಂದು ಮರೆತು ಬಿಟ್ಟಿದ್ದಾರೆ. ಹುಟ್ಟಿದ ಕ್ಷಣವೇ ಅನೇಕ ಬಂಧನಗಳಿಂದ ಬಂಧಿಗಳಾಗುತ್ತಾರೆ………..
ಅದರೆ ಈಗಲೂ ಕೆಲವು ಮನುಷ್ಯರಿದ್ದಾರೆ. ಈ ಎಲ್ಲವನ್ನೂ ಮೀರಿದವರಿದ್ದಾರೆ. ಅವರನ್ನು ಗುರುತಿಸಬೇಕಿದೆ. ಅವರಿಗೆ ಈ ಸುಂದರ ಪ್ರದೇಶವನ್ನು ಮುನ್ನಡೆಸುವ ಅವಕಾಶ ಕೊಡಬೇಕಾಗಿದೆ……
ಮತಭಿಕ್ಷೆಬೇಡಿ ಜನರ ಭಾವನೆಗಳನ್ನು ಕೆರಳಿಸಿ ಸುಳ್ಳುಭರವಸೆ ನೀಡುವವರಿಗಿಂತ ನಾವೇ ಖುದ್ದಾಗಿ ಅವರನ್ನು ಗುರುತಿಸಿ ಮುಖ್ಯವಾಹಿನಿಗೆ ತರಬೇಕಿದೆ……….
ಆಗ ರಾಮರಾಜ್ಯ – ಭೀಮರಾಜ್ಯ – ಕಲ್ಯಾಣ ರಾಜ್ಯ ಖಂಡಿತ ಸಾಧ್ಯವಿದೆ……
ಕಳ್ಳರಿಲ್ಲದ ವಂಚಕರಿಲ್ಲದ ಭ್ರಷ್ಟರಿಲ್ಲದ ದುರಹಂಕಾರಿಗಳಿಲ್ಲದ ನೆಮ್ಮದಿಯ ಕ್ರಿಯಾತ್ಮಕ ಚಟುವಟಿಕೆಗಳ ಸಾಧಕರ ನಾಡು ಇದಾಗುತ್ತದೆ……..
ಅಹಹಹಹಾ………ನಿಮ್ಮ ಮನಸ್ಸಿನಾಳದ ಮುಸುನಗೆ ನಿಮ್ಮ ಮುಖದಲ್ಲಿ ನನಗೆ ಕಾಣುತ್ತಿದೆ. ಇದೊಂದು ಹಗಲುಗನಸು ಎಂಬದು ನಿಮ್ಮ ಅನಿಸಿಕೆ……..
ಏಕೆ…….
ಕೋಟ್ಯಾಂತರ ಮೈಲಿಗಳ ಮಂಗಳನಲ್ಲಿಗೆ ಮುನ್ನುಗ್ಗುತ್ತಿಲ್ಲವೇ,
ಸಾಗರದ ತಳವನ್ನು ಸ್ಪರ್ಶಿಸಿಲ್ಲವೇ – ಸಾವಿರಾರು ಕಿಲೋಮೀಟರ್ ವೇಗದಲ್ಲಿ ಶಬ್ದದ ವೇಗವನ್ನು ಮೀರಿ ಹಾರಾಡುವ ವಿಮಾನವನ್ನು ಕಂಡುಹಿಡಿದಿಲ್ಲವೇ,…..
ವಿಶ್ವವನ್ನೇ ಏಕಕಾಲದಲ್ಲಿ ಸಂಪರ್ಕಿಸುವ ಸಾಧನ ಸಂಶೋದಿಸಿಲ್ಲವೇ,
ಇಡೀ ಭೂಮಂಡಲವನ್ನೇ ಕ್ಷಣಾರ್ಧದಲ್ಲಿ ನಾಶ ಮಾಡುವ ಬಾಂಬ್ ಗಳನ್ನು ಸೃಷ್ಡಿಸಿಲ್ಲವೇ…….
ಇದೇ ಸಾಧ್ಯವಾಗಿರಬೇಕಾದರೆ ಕೇವಲ ನಮ್ಮದೇ ಮನಸ್ಸುಗಳನ್ನು ನಿಯಂತ್ರಿಸಿ ಸಾಧಿಸಬಹುದಾದ ಆಡಳಿತ ರೂಪಿಸಲು ಸಾಧ್ಯವಿಲ್ಲವೇ…….
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಯಾದರೆ ಇದು ಸಾಧ್ಯ………..
ಆ ನಿರೀಕ್ಷೆಯಲ್ಲಿ ……..
ನಿನ್ನೆ 1/5/2023 ಸೋಮವಾರ ವಿಶ್ವ ಕಾರ್ಮಿಕರ ದಿನದಂದು ದಾವಣಗೆರೆಯಲ್ಲಿ ಅನ್ವೇಷಕರು ಆರ್ಟ್ ಫೌಂಡೇಶನ್ ನ ಆತ್ಮೀಯ ಗೆಳೆಯರು ಮತ್ತು ರಂಗಕರ್ಮಿಗಳು ಆದ ಶ್ರೀ ಸಿದ್ದರಾಜು ಎಸ್ ಎಸ್ ಅವರ ನೇತೃತ್ವದಲ್ಲಿ ಕಳೆದ 29 ದಿನಗಳಿಂದ ನಡೆಯುತ್ತಿದ್ದ ರಂಗ ಕಲಾ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಕ್ಕಳು ಮತ್ತು ಅವರ ಪೋಷಕರಿಗೆ ಮಾನವೀಯ ಮೌಲ್ಯಗಳ ನಡವಳಿಕೆಯನ್ನು ಅಳವಡಿಸಿಕೊಳ್ಳುವ ಬಗ್ಗೆ ಒಂದಷ್ಟು ಮಾತನಾಡಿದೆ. ವಿವಿಧ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..