ದಯವಿಟ್ಟು ಗಮನಿಸಿ……
ಯಾರು ಉತ್ತಮ ಅಭ್ಯರ್ಥಿ.
ನಮ್ಮ ಮತ ಯಾರಿಗೆ….
ಅಭ್ಯರ್ಥಿಯ ಆಯ್ಕೆಯ ಮಾನದಂಡಗಳು……
ಮತ ಚಲಾವಣೆಯ ಮುನ್ನ ಮಾಡಿಕೊಳ್ಳಬೇಕಾದ ಹೋಂ ವರ್ಕ್.
ನಾವು ಯಾರಿಗೆ ಮತ ಹಾಕಬೇಕು ಮತ್ತು ಏಕೆ ಹಾಕಬೇಕು ಅದಕ್ಕೆ ಇರುವ ಮಾನದಂಡಗಳು ಯಾವುವು ಎಂಬ ಬಗ್ಗೆ ಒಂದು ಅವಲೋಕನ……..
ಮೇ 10 ಬುಧವಾರ 2023 ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ………
ಕೆಳಗೆ ನೀಡಿರುವ ಎಲ್ಲಾ ಪ್ರಶ್ನೆಗಳಿಗೆ 10 ಅಂಕಗಳು. ಅತಿಹೆಚ್ಚು ಅಂಕ ಗಳಿಸುವ ಅಭ್ಯರ್ಥಿಗೆ ನಿಮ್ಮ ಮತ ಚಲಾಯಿಸಿ ಎಂಬ ಮನವಿ.
ಇದು ಉತ್ತರ ರೂಪದಲ್ಲಿ ಉತ್ತಮ ಅಭ್ಯರ್ಥಿ ಆಯ್ಕೆ ಮಾಡುವ ಸ್ವಯಂ ವಿವೇಚನೆಯ ಒಂದು ಸರಳ ಪ್ರಕ್ರಿಯೆ…….
1) ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳಲ್ಲಿ ಯಾರು ಆ ಕ್ಷೇತ್ರದ ಸ್ಥಳೀಯ ಮೂಲ ನಿವಾಸಿ ಮತ್ತು ಈಗಲೂ ಅದೇ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದಾರೆ ಎಂಬುವವರಿಗೆ ಮೊದಲ ಆದ್ಯತೆ. ಹೊರಗಿನವರಿಗೆ ನಂತರದ ಸ್ಥಾನ…..
2) ಹೊಸ ಅಭ್ಯರ್ಥಿಯೇ ಆಗಿರಲಿ ಅಥವಾ ಹಳೆಯ ಶಾಸಕರೇ ಆಗಿರಲಿ ನೀವು ಯಾವ ಅಭ್ಯರ್ಥಿಯನ್ನು ಹೆಚ್ಚು ಸುಲಭವಾಗಿ ಭೇಟಿ ಮಾಡಲು ಸಾಧ್ಯವೋ ಅವರಿಗೆ ಮೊದಲ ಆಧ್ಯತೆ ಇರಲಿ. ಭೇಟಿ ಮಾಡಲು ಕಷ್ಟ ಎನ್ನುವವರಿಗೆ ನಂತರದ ಸ್ಥಾನ….
3) ಅಭ್ಯರ್ಥಿಯ ಮಾತು, ನಡವಳಿಕೆ, ಸರಳ ಸಹಜ ಮತ್ತು ಆತ್ಮೀಯವಾಗಿದೆಯೇ ಅಥವಾ ಅಹಂಕಾರಿ ಮತ್ತು ಕೃತವಾಗಿದೆಯೇ ಎಂಬುದನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿ ಸರಳ ವ್ಯಕ್ತಿಗೆ ಮೊದಲ ಆದ್ಯತೆ ನೀಡಬೇಕು….
4) ಕನಿಷ್ಠ ಕಳೆದ 15/20 ವರ್ಷಗಳಲ್ಲಿ ಅಭ್ಯರ್ಥಿ ಹಣಕಾಸು ಮತ್ತು ಸಂಪತ್ತಿನ ವಿಷಯದಲ್ಲಿ ಮೂಲ ಆಸ್ತಿಗಿಂತ ಎಷ್ಟು ಪಟ್ಟು ಹೆಚ್ಚು ಮಾಡಿಕೊಂಡಿದ್ದಾರೆ. ಯಾವ ಮಾರ್ಗದಲ್ಲಿ ಬೆಳೆದಿದ್ದಾರೆ. ಅವರ ಬಗ್ಗೆ ಇರುವ ಪ್ರಾಮಾಣಿಕತೆ ಅಥವಾ ಭ್ರಷ್ಟಾಚಾರದ ಬಗ್ಗೆ ನಿಮ್ಮ ಪರಿಚಿತರಿಗೆ ಇರುವ ಅಭಿಪ್ರಾಯಗಳನ್ನು ಸಹಜವಾಗಿ ಮಾತುಗಳು ಮುಖಾಂತರ ಕ್ರೋಡೀಕರಿಸಿ ಪ್ರಾಮಾಣಿಕರಿಗೆ ಮೊದಲ ಆದ್ಯತೆ. ನಂತರ ಇತರರು….
5) ಅಭ್ಯರ್ಥಿ ರಾಜಕೀಯ ಜೀವನದ ಪ್ರಾರಂಭದಿಂದಲೂ ಒಂದೇ ಪಕ್ಷದಲ್ಲಿ ಇದ್ದಾನೆಯೇ ಅಥವಾ ಅಧಿಕಾರಕ್ಕಾಗಿ ಪಕ್ಷಾಂತರ ಮಾಡಿದ್ದಾನೆಯೇ ಎಂಬುದನ್ನು ತಿಳಿದುಕೊಂಡು ಮೂಲ ಪಕ್ಷ ನಿಷ್ಠೆಗೆ ಮೊದಲ ಆದ್ಯತೆ ಕೊಡಬೇಕು….
6) ಅಭ್ಯರ್ಥಿಯ ಕುಟುಂಬದ ಹಿನ್ನೆಲೆ, ಆತನ ಸಂಬಂಧಿಗಳ ಸಾರ್ವಜನಿಕ ನಡವಳಿಕೆ, ಕುಟುಂಬದೊಂದಿಗೆ ಅಭ್ಯರ್ಥಿಯ ಒಡನಾಟ, ಯಾವುದಾದರೂ ಸಾರ್ವಜನಿಕ ಸೇವೆ ಇತ್ಯಾದಿಗಳನ್ನು ಗಮನಿಸಿ ಉತ್ತಮ ವ್ಯಕ್ತಿಗೆ ಮೊದಲ ಆದ್ಯತೆ ನೀಡಬೇಕು.
7) ಅಭ್ಯರ್ಥಿಯ ಗೆಳೆಯರ ತಂಡ, ಆತನ ಹವ್ಯಾಸಗಳು, ಹಿರಿಯ ಕಿರಿಯರೊಂದಿಗೆ ಆತನ ವರ್ತನೆ ಗಮನಿಸಿ ಉತ್ತಮ ಎನಿಸಿದರೆ ನಮ್ಮ ಮೊದಲ ಆದ್ಯತೆ ಆತನೇ ಆಗಿರಬೇಕು.
8) ಅಭ್ಯರ್ಥಿಯು ಚುನಾವಣಾ ಪ್ರಚಾರದ ವೈಖರಿಯನ್ನು ಸಹ ಸೂಕ್ಷ್ಮವಾಗಿ ಗಮನಿಸಬೇಕು. ಗೆಲ್ಲಲೇಬೇಕು ಎಂಬ ಹಠದಿಂದ ಅತಿಯಾದ ಹಣ ಖರ್ಚು ಮಾಡುವುದು, ಅತಿ ವಿನಯ ತೋರುವುದು ಮುಂತಾದ ಗುಣಗಳು ಆತನಿಗೆ ಮತ ನಿರಾಕರಿಸಲು ಬಲವಾದ ಕಾರಣವಾಗಬೇಕು. ಅದಕ್ಕೆ ವಿರುದ್ಧವಾಗಿ ಸರಳ ಮತ್ತು ನೇರ ಪ್ರಚಾರ ಮಾಡುವ ಅಭ್ಯರ್ಥಿಗೆ ಮೊದಲ ಆದ್ಯತೆ ನೀಡಬೇಕು.
9) ಅಭ್ಯರ್ಥಿ ಪ್ರತಿನಿಧಿಸುವ ಪಕ್ಷವು ಸಹ ಮುಖ್ಯವಾಗಬೇಕು. ಯಾವ ಪಕ್ಷ ದೂರ ದೃಷ್ಟಿಯಿಂದ ಯೋಚಿಸುತ್ತದೆ, ಜಾತಿ ಮತ ಧರ್ಮದ ಆಧಾರದ ಮೇಲೆ ಸಮಾಜವನ್ನು ವಿಭಜಿಸುವುದಿಲ್ಲ, ಹಣ ಹೆಂಡ ಕುಕ್ಕರ್ ಮುಂತಾದ ಆಮಿಷಗಳಿಗೆ ಆದ್ಯತೆ ನೀಡುತ್ತದೆ, ಯಾವ ಪಕ್ಷ ಇಡೀ ಚುನಾವಣೆಯಲ್ಲಿ ಉತ್ತಮ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ, ಇದುವರೆಗಿನ ಇತಿಹಾಸದಲ್ಲಿ ಉತ್ತಮ ಕೆಲಸ ಮಾಡಿದೆ ಮುಂತಾದ ಎಲ್ಲಾ ಅಂಶಗಳನ್ನು ಪರಿಶೀಲಿಸಿ ಇರುವ ಆಯ್ಕೆಗಳಲ್ಲಿ ಉತ್ತಮ ಪಕ್ಷಕ್ಕೆ ಮೊದಲ ಆದ್ಯತೆಯಾಗಿ ಮತ ನೀಡಬೇಕು.
10) ಈಗ ಕರ್ನಾಟಕದಲ್ಲಿ ಸ್ಪರ್ಧಿಸಿರುವ ಪಕ್ಷಗಳ ಇತಿಹಾಸದ ಒಂದು ಕಿರುನೋಟ…..
ಭ್ರಷ್ಟಾಚಾರ ಇತಿಹಾಸ ಹೊಂದಿರುವ ಒಂದು ಪಕ್ಷ, ಕೋಮು ದ್ವೇಷದ ಅಲೆಯಲ್ಲಿ ವರ್ತಮಾನದ ಆಡಳಿತ ನಡೆಸುತ್ತಿರುವ ಮತ್ತೊಂದು ಪಕ್ಷ, ಕುಟುಂಬ ಮತ್ತು ಜಾತಿಯ ಆಧಾರದ ಮೇಲೆ ಭವಿಷ್ಯ ನಿರ್ಮಿಸಿಕೊಳ್ಳಲು ಹವಣಿಸುತ್ತಿರುವ ಮಗದೊಂದು ಪಕ್ಷ, ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಭರವಸೆ ನೀಡುವ ಭ್ರೂಣಾವಸ್ಥೆಯ ಕೆಲವು ಹೊಸ ಪಕ್ಷಗಳು ಇವುಗಳ ನಡುವೆ ನಮ್ಮ ಮೊದಲ ಆದ್ಯತೆಯ ಸವಾಲು ಮುಂದಿದೆ.
11) ಅತಿರೇಕದ ಉಚಿತ ಕೊಡುಗೆಗಳ ಒಂದು ಪಕ್ಷ, ಸರ್ವಾಧಿಕಾರಿ ಧೋರಣೆಯ ಇನ್ನೊಂದು ಪಕ್ಷ, ಅವಕಾಶವಾದಿ ಮತ್ತೊಂದು ಪಕ್ಷ, ಸಂಪೂರ್ಣ ಪಾರದರ್ಶಕ ಆಡಳಿತದ ಭರವಸೆ ನೀಡುವ ಕೆಲವು ಸಣ್ಣ ಪಕ್ಷಗಳು ಇವುಗಳ ನಡುವೆ ನಿಮ್ಮ ಆಯ್ಕೆ ಯಾವುದು. ಇದರಲ್ಲಿ ಕೆಲವು ಪಕ್ಷಗಳು ಉತ್ತಮ ಕೆಲಸಗಳನ್ನು ಮಾಡಿವೆ. ಇವೆರಡು ( 10/11 ) ವಿಷಯಗಳಲ್ಲಿ ನಿಮ್ಮ ಪರಿಚಯದ – ಹಿತೈಷಿಗಳ – ಒಳ್ಳೆಯವರ ಅಥವಾ ನೀವು ಹೆಚ್ಚು ನಂಬಿಕೆ ಇಟ್ಟಿರುವ ರಾಜಕೀಯ ಆಸಕ್ತರ ಸಲಹೆ ಪಡೆದು ನಿರ್ಧರಿಸಿದರೆ ಉತ್ತಮ..
12) ಒಬ್ಬ ಅಭ್ಯರ್ಥಿ ಎರಡು ಅಥವಾ ಮೂರು ಬಾರಿಗಿಂತ ಹೆಚ್ಚು ಸ್ಪರ್ಧಿಸಿದ್ದರೆ ಅಥವಾ ಆತನ ಕುಟುಂಬವೇ ಆ ಕ್ಷೇತ್ರವನ್ನು ಮತ್ತೆ ಮತ್ತೆ ಪ್ರತಿನಿಧಿಸುತ್ತಿದ್ದರೆ ಆಗ ಹೊಸ ಅಭ್ಯರ್ಥಿಯೇ ನಿಮ್ಮ ಮೊದಲ ಆದ್ಯತೆಯಾಗಬೇಕು.
13) ಚುನಾವಣಾ ಸಮಯದಲ್ಲಿ ಯಾವ ಅಭ್ಯರ್ಥಿ ನಮ್ಮ ಮನೆಗೆ ಅತಿಹೆಚ್ಚು ಹಣ ಅಥವಾ ಬೆಲೆ ಬಾಳುವ ವಸ್ತುಗಳನ್ನು ಕೊಡುತ್ತಾನೋ ಅವನು ದೊಡ್ಡ ಭ್ರಷ್ಟ ಮತ್ತು ನಮ್ಮನ್ನು ( ಹೆಣ್ಣು – ಗಂಡು ಇಬ್ಬರಿಗೂ ಅನ್ವಯ ) ವೇಶ್ಯಯರೆಂದು ತಿಳಿದು ಕೊಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ ಎಂದು ಮನಸ್ಸಿನಲ್ಲಿಯೇ ಭಾವಿಸಿ ಯಾವ ಕಾರಣಕ್ಕೂ ಅವನಿಗೆ ಮತ ನೀಡಬಾರದು. ಮೇಲ್ನೋಟಕ್ಕೆ ಅವನಿಗೆ ತಿಳಿಯದಂತೆ ಮತ ಚಲಾಯಿಸುವ ಸಮಯದಲ್ಲಿ ನಮ್ಮ ನಿಯತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಪರವಾಗಿ ಪ್ರಕಟವಾಗಬೇಕು.
14) ಯಾವ ಅಭ್ಯರ್ಥಿ ಬಹಿರಂಗವಾಗಿ ಜಾತಿ ಧರ್ಮದ ಹೆಸರೇಳಿ ಕೋಮು ದ್ವೇಷ ಕೆರಳಿಸಿ ಉದ್ರೇಕಕಾರಿ ಹೇಳಿಕೆ ನೀಡಿ ಜನರನ್ನು ರೊಚ್ಚಿಗೆಬ್ಬಿಸುವ ಅಸಹ್ಯಕರ ಭಾಷಣಗಳನ್ನು ಮಾಡುತ್ತಾನೋ ಅವನನ್ನು ತಿರಸ್ಕರಿಸಿ ಎಲ್ಲರನ್ನೂ ಒಳಗೊಳ್ಳುವ ಸೌಮ್ಯ ಸ್ವಭಾವದವನಿಗೆ ನಿಮ್ಮ ಮೊದಲ ಆದ್ಯತೆ ನೀಡಬೇಕು.
15) ಗೆಲ್ಲುವ ಅಭ್ಯರ್ಥಿ ಎಂದು ಮತ ನೀಡಬೇಕೆ ಅಥವಾ ಸೋಲುವ ಸಾಧ್ಯತೆ ಇದ್ದರೂ ಒಳ್ಳೆಯ ಅಭ್ಯರ್ಥಿಗೆ ಮತ ನೀಡಬೇಕೆ, ಏಕೆಂದರೆ ನಮ್ಮ ಮತ ವ್ಯರ್ಥ ಆಗಬಾರದು ಎಂಬ ಯೋಚನೆ ನಿಮ್ಮದಾಗಿದ್ದರೆ ಭವಿಷ್ಯದ ದೃಷ್ಟಿಯಿಂದ ಒಳ್ಳೆಯ ಪ್ರಾಮಾಣಿಕ ಅಭ್ಯರ್ಥಿ ಗೆಲ್ಲುವ ಸಾಧ್ಯತೆ ಇಲ್ಲದಿದ್ದರೂ ನಮ್ಮ ಆತ್ಮ ತೃಪ್ತಿಗಾಗಿ ಒಳ್ಳೆಯ ಅಭ್ಯರ್ಥಿಗೇ ಮತ ನೀಡಬೇಕು. ಆಗ ಮುಂದಿನ ಚುನಾವಣೆಯಲ್ಲಿ ಒಳ್ಳೆಯ ವ್ಯಕ್ತಿಗಳು ಅಭ್ಯರ್ಥಿಗಳಾಗುವ ಸಾಧ್ಯತೆ ಇರುತ್ತದೆ. ಆಗ ನಮಗೆ ಒಳ್ಳೆಯ ಆಯ್ಕೆಗಳು ಸಿಗುತ್ತವೆ.
16) ಒಬ್ಬ ಅಭ್ಯರ್ಥಿ ಹೊಸಬನೇ ಆಗಿರಲಿ ಅಥವಾ ಹಾಲಿ ಶಾಸಕನೇ ಆಗಿರಲಿ ಒಂದಷ್ಟು ಸಮಾಜ ಸೇವೆ ಅಥವಾ ವೈಯಕ್ತಿಕ ಸೇವೆ ಮಾಡಿದ್ದರೂ ಅಭಿವೃದ್ಧಿಯ ಹೆಸರಿನಲ್ಲಿ ಭ್ರಷ್ಟಾಚಾರ ಮಾಡಿ ದೊಡ್ಡ ಸಾಧನೆ ಮಾಡಿದಂತೆ ಮಾತನಾಡುತ್ತಿದ್ದರೆ ಆತನಿಗೆ ಪರ್ಯಾಯವಾಗಿ ಇತರ ಸ್ವಾಭಿಮಾನಿ ಅಭ್ಯರ್ಥಿಯೇ ನಿಮ್ಮ ಮೊದಲ ಆಯ್ಕೆಯಾಗಲಿ.
17) ಅಭ್ಯರ್ಥಿ ಹೃದಯವಂತನೇ ಅಥವಾ ಬುದ್ದಿವಂತನೇ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ನನ್ನ ಪ್ರಕಾರ ಹೃದಯವಂತ ಮೊದಲ ಆಯ್ಕೆಯಾಗಲಿ. ಎರಡೂ ಇದ್ದರೆ ಇನ್ನೂ ಅತ್ಯುತ್ತಮ.
18) ಇಷ್ಟೆಲ್ಲಾ ಯೋಚಿಸುವುದು – ಗುರುತಿಸುವುದು ಹೇಗೆ ಎಂಬ ಗೊಂದಲ ಬೇಡ. ಉದಾಹರಣೆಗೆ ಒಂದು ಒಳ್ಳೆಯ ಸಿನಿಮಾ ಸಾಹಿತ್ಯ ಸಂಗೀತ ಹಾಡು ಹೇಗೆ ಒಬ್ಬರ ಬಾಯಿ ಮಾತಿನಿಂದ ಇಡೀ ರಾಜ್ಯಾದ್ಯಂತ ಹರಡುತ್ತದೋ, ಒಂದು ಒಳ್ಳೆಯ ದಿನ ಉಪಯೋಗಿ ವಸ್ತು ಹೇಗೆ ಬಾಯಿ ಮಾತಿನ ಮುಖಾಂತರ ಜನಪ್ರಿಯವಾಗುತ್ತದೋ, ಹೇಗೆ ಒಂದು ಶಾಲೆ ಆಸ್ಪತ್ರೆ ಮಾಲ್ ಗಳು ಜನಾಕರ್ಷಣೆ ಕೇಂದ್ರಗಳಾಗುತ್ತವೋ ಹಾಗೆಯೇ ಇಂದಿನ ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ಸ್ವಲ್ಪ ಆಸಕ್ತಿ ವಹಿಸಿ ಶ್ರಮ ಪಟ್ಟರೆ ಒಂದಷ್ಟು ಮಾಹಿತಿ ಖಂಡಿತ ಕಲೆಹಾಕಬಹುದು. ನಮ್ಮ ಜನಪ್ರತಿನಿಧಿಗಳ ಆಯ್ಕೆಗೆ ಅಷ್ಟಾದರೂ ಶ್ರಮ ಪಡಬೇಕಲ್ಲವೇ. ಅದರಿಂದ ನಮ್ಮ ಮತ್ತು ನಮ್ಮ ಮಕ್ಕಳ ಹಾಗು ರಾಜ್ಯ ಮತ್ತು ದೇಶದ ಭವಿಷ್ಯ ಖಂಡಿತ ಉತ್ತಮವಾಗುತ್ತದೆ. ಕಷ್ಟ ಪಟ್ಟರೆ ಮಾತ್ರ ಸುಖ ಎಂಬ ಹಿರಿಯರ ಮಾತು ಸದಾ ನೆನಪಿರಲಿ.
19) ಇದು ಈ ಕ್ಷಣದಲ್ಲಿ ನನಗೆ ಹೊಳೆದ ಕೆಲವು ಅಂಶಗಳು. ಹಾಗೆಯೇ ಇದರ ಜೊತೆಗೆ ನಿಮಗೆ ಮತ್ತಷ್ಟು ಒಳ್ಳೆಯ ಅಂಶಗಳು ಮನದಲ್ಲಿ ಮೂಡಿದರೆ ಅದನ್ನು ಇದರಲ್ಲಿ ಸೇರಿಸಿ ಮತದಾರರಿಗೆ ತಲುಪಿಸಬಹುದು…
20) ವಿಶೇಷ ಸೂಚನೆ……
ಇದು ನನ್ನ ಸ್ವಂತ ಅಭಿಪ್ರಾಯ. ಇದಕ್ಕೆ ಯಾವುದೇ ಹಕ್ಕುಸ್ವಾಮ್ಯ ಇರುವುದಿಲ್ಲ ಅಥವಾ ಅನುಮತಿಯ ಅವಶ್ಯಕತೆಯೂ ಇಲ್ಲ. ಯಾರು ಬೇಕಾದರೂ ಯಾರ ಹೆಸರಿನಲ್ಲಿ ಬೇಕಾದರೂ ಮುದ್ರಿಸಿ ಪ್ರಕಟಿಸಿ ಜನರಿಗೆ ಹಂಚಬಹುದು.
ಹಾಗೆಯೇ ಇದನ್ನು ಯಾರು ಬೇಕಾದರೂ ಧ್ವನಿ ಮುದ್ರಣ ಮೂಲಕ ಅಥವಾ ದೃಶ್ಯ ಮಾಧ್ಯಮದ ಮೂಲಕ ಜನರಿಗೆ ತಲುಪಿಸಲು ಸಂಪೂರ್ಣ ಸ್ವಾತಂತ್ರ್ಯ ಹೊಂದಿದ್ದಾರೆ.
ಹೆಸರು ಮುಖ್ಯವಲ್ಲ. ವಿಷಯ ಮತದಾರರಿಗೆ ತಲುಪಿ ಒಂದಷ್ಟು ಒಳ್ಳೆಯ ಪರಿವರ್ತನೆ ಆದರೆ ಅದೇ ಒಂದು ಸಾರ್ಥಕತೆ…. ದಯವಿಟ್ಟು ಸಾಧ್ಯವಿರುವವರು, ಆಸಕ್ತಿ ಇರುವವರು ನಿರ್ಲಕ್ಷಿಸದೆ ಇನ್ನು ಸುಮಾರು 10 ದಿನಗಳ ಸಮಯದಲ್ಲಿ ಹೆಚ್ಚು ಹೆಚ್ಚು ಜನರಿಗೆ ತಲುಪಿಸಲು ಪ್ರಯತ್ನಿಸೋಣ. ಒಂದು ಸಣ್ಣ ಬದಲಾವಣೆಗೆ ಕಾರಣವಾಗೋಣ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..