Spread the love

ನಾನು ಕೊನೆಯ ಬೆಂಚಿನ ವಿದ್ಯಾರ್ಥಿ.
ಬೆಳಗ್ಗೆ ಚೆನ್ನಾಗಿ ತಿಂದು ಶಾಲೆಗೆ ಹೋಗಿ ಅಲ್ಲಿ ನಿದ್ದೆ ಮಾಡುತ್ತಿದ್ದೆ.

ಮೇಷ್ಟ್ರು ಅದನ್ನು ಗಮನಿಸಿ ಪೆಟ್ಟು ಕೊಟ್ಟರೆ ಸ್ವಲ್ಪ ಎಚ್ಚರ,10 ನಿಮಿಷಕ್ಕೆ ಮತ್ತೆ ನಿದ್ದೆ ತಡೆಯಲಾಗುತ್ತಿರಲಿಲ್ಲ.

ಹತ್ತನೇ ತರಗತಿ ನಾಲ್ಕು ಸಲ ಬರೆದರು ಪಾಸಂತೂ ಆಗಲೇ ಇಲ್ಲ.

ನಮ್ಮಪ್ಪ ಕೊನೆಗೆ ಒಬ್ಬ ಕಾಂಟ್ರಾಕ್ಟರ್ ನ ಬಳಿ ಕೆಲಸಕ್ಕೆ ಸೇರಿಸಿದ.

ರಸ್ತೆ, ಮೋರಿ ಕಾಂಟ್ರಾಕ್ಟ್ ಮಾಡಿಸುತ್ತಿದ್ದ ಆತ ಮಹಾ ಭ್ರಷ್ಟ, ರಸಿಕ, ಉಡಾಫೆ ಸ್ವಭಾವದವನು.

ಅವನು ರಾತ್ರಿ ನನಗು ಜೊತೆಯಲ್ಲೇ ಡ್ರಿಂಕ್ಸ್,, ಮಾಂಸ ಎಲ್ಲಾ ಕೊಡಿಸುತ್ತಿದ್ದುದರಿಂದ ನಾನು ಅವನ ಹತ್ತಿರ Active ಆಗಿ ನಿಯತ್ತಿನಿಂದ ಕೆಲಸ ಮಾಡುತ್ತಿದ್ದೆ. Teenage ನ ನನಗೆ ಇದೆಲ್ಲಾ ತುಂಬಾ ಮಜಾ ಕೊಡುತ್ತಿತ್ತು.

ಕಳಪೆ ಕಾಮಗಾರಿ, ಸುಳ್ಳು ಬಿಲ್ಲು ಮಾಡಿ ಸಾಕಷ್ಟು ಹಣ ಮಾಡಿದ್ದ.
ಅಧಿಕಾರಿಗಳಿಗೆ ಲಂಚಕೊಟ್ಟು ಕೆಲಸ ಮಾಡಿಸಿಕೊಳ್ಳುವಲ್ಲಿ ಮಹಾ ನಿಸ್ಸೀಮ……..

ಒಮ್ಮೆ ಅವನಿಗೆ ಇದ್ದಕ್ಕಿದ್ದಂತೆ Heart Attack ಆಗಿ ಹಾಸಿಗೆ ಹಿಡಿದ.

ಗಂಡು ಮಕ್ಕಳಿಲ್ಲದ ಅವನು ಎಲ್ಲಾ ಕೆಲಸ ನನಗೆ ವಹಿಸಿದ.

ನಾನು ಅದೇ ಸಮಯ ಉಪಯೋಗಿಸಿಕೊಂಡು ಸುಳ್ಳು ಲೆಕ್ಕ, ಸರಿಯಾದ ಸಮಯಕ್ಕೆ ಅಧಿಕಾರಿಗಳಿಗೆ ಲಂಚ, ಸಂಜೆ ಭರ್ಜರಿ ಪಾರ್ಟಿಗಳನ್ನು ಕೊಟ್ಟುಕೊಂಡು ಸಖತ್ ದುಡ್ಡು ಮಾಡಿದೆ.

ಈ ಮಧ್ಯೆ ಅವನಿಗೆ ಇದ್ದ ಒಬ್ಬಳೇ ಮಗಳನ್ನು ಪಟಾಯಿಸಿ ಮದುವೆಯಾದೆ.

ನನ್ನ ಹತ್ತಿರ ದುಡ್ಡು, ಕಾರು ಇದ್ದದ್ದು ನೋಡಿ ಜನ ಸಹಾಯ ಕೇಳಿಕೊಂಡು ಬರುತ್ತಿದ್ದರು,

ಮದುವೆಗು ಬರೋರು, ಮುಂಜಿಗೂ ಬರೋರು, ಸತ್ತರು ಬರೋರು, ನಾಮಕರಣಕ್ಕೂ ಬರೋರು.

ನಾನು ಪ್ರತಿಷ್ಠೆ ಉಳಿಸಿಕೊಳ್ಳಲುಗೆ ದಿಲ್ ದಾರ್ ಆಗಿ ದುಡ್ಡು ಚೆಲ್ಲುತ್ತಿದ್ದೆ.

ಗಣೇಶ, ಅಣ್ಣಮ್ಮ, ಊರಹಬ್ಬ, ರಾಜ್ಯೋತ್ಸವದಲ್ಲಿ ನಾನೇ ಮುಖ್ಯ ಅತಿಥಿ.

ಇನ್ನೋವ ಕಾರು, ಬಿಳಿ ಬಟ್ಟೆ, 4 ಜನ ಆಳು ಇಟ್ಟುಕೊಂಡು ಎಲ್ಲರಿಗೂ ಧಣಿಯಾದೆ.

ಲಕ್ ನೋಡಿ,
ಅದೇ ಟೈಂಗೆ ಎಲೆಕ್ಷನ್ ಬಂತು.

ನಾನು ಒಂದು ಟ್ರೈ ಮಾಡೋಣ ಅಂತ ಪಕ್ಷಗಳ ಮುಖಂಡರನ್ನು ಭೇಟಿ ಮಾಡಿದೆ.

ಒಂದು ಪಾರ್ಟಿಯವರು ದುಡ್ಡು ತೆಗೆದುಕೊಂಡು ನನ್ನ ಜಾತಿ ನೋಡಿ ಟಿಕೆಟ್ ಕೊಟ್ರು.

ಹಗಲೂ ರಾತ್ರಿ ಬೆವರು ಸುರಿಸಿ, ನಿದ್ದೆ ಊಟ ಸರಿಯಾಗಿ ಮಾಡದೆ,
ಹಣ ಹೆಂಡ ಸೀರೆ ಕುಕ್ಕರ್ ಹಂಚಿ ನಮ್ಮ ಜಾತಿ ಜನರನ್ನು ಒಂದುಗೂಡಿಸಿ ಹೇಗೋ ಸರ್ಕಸ್ ಮಾಡಿ ಗೆದ್ದು ಬಿಟ್ಟೆ.

ಈಗ ನಾನು ಆ ಕ್ಷೇತ್ರದ ಜನಪ್ರಿಯ ಶಾಸಕ.

ಮೇಲೆ ಹೇಳೋದು ಮಾತ್ರ ನಾನು ಜನರ ಸೇವಕ.

ಆದ್ರೆ ವಾಸ್ತವ ಅರ್ಥಮಾಡಿಕೊಂಡರೇ ನಿಜವಾಗಿಯೂ ಜನರೇ ನನ್ನ ಸೇವಕರು. ನಾನೇ ಮತದಾರರ ಮಾಲೀಕ……..


ಜನ ನಿಜವಾಗಿಯೂ ದಡ್ಡರು, ಮುಗ್ದರು, ಸ್ವಾರ್ಥಿಗಳು, ಹಣ ದಾಹಿಗಳು, ವಿವೇಚನೆ ಇಲ್ಲದವರು ಎಂದು ಹೇಳಲು ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

ಆದರೂ ನಾವು ಜನರ ಒಳಿತಿಗಾಗಿಯೇ ಅವರನ್ನು ಎಚ್ಚರಿಸುವ ಕೆಲಸ ನಿರಂತರವಾಗಿ ಮಾಡಲೇ ಬೇಕು…….

ಗೆಳೆಯರೆ ಈಗಲಾದರೂ ಜಾಗೃತರಾಗೋಣ…

ಈ ವ್ಯವಸ್ಥೆಗೆ ಅಂತ್ಯ ಹಾಡೋಣ ನಿಜವಾದ ಪ್ರಜಾಪ್ರಭುತ್ವ ಉಳಿಸೋಣ……..

ಪ್ರಬುದ್ಧ ಮನಸ್ಸು ಪ್ರಬುದ್ಧ ‌ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..

error: No Copying!