ಬಸವಣ್ಣ ಹುಟ್ಟಿ 890 ವರ್ಷಗಳ ನಂತರ ಆಚರಿಸಬೇಕಾಗಿರುವುದು ಹುಟ್ಟು ಹಬ್ಬವಲ್ಲ ವಾಸ್ತವದಲ್ಲಿ ಬಸವ ತತ್ವಗಳ ಸಮಾಧಿಯ ವಿಷಾಧನೀಯ ಮೂಕ ರೋಧನಾ ಆಚರಣೆ ಎನಿಸುತ್ತದೆ…..
ಅನುಭವದ ಅನುಭಾವ ಸಾಹಿತ್ಯವೊಂದು ಸಮುದಾಯದ ಸಂಸ್ಕೃತಿಯಾಗಿ ಪರಿವರ್ತನೆ ಹೊಂದಿ ಸುಮಾರು 800 ವರ್ಷಗಳ ನಂತರವೂ ಜೀವಂತವಾಗಿದ್ದು ಈಗಲೂ ಅಲ್ಪ ಸ್ವಲ್ಪ ಕ್ರಿಯಾಶೀಲವಾಗಿರುವುದಕ್ಕೆ ಸಾಕ್ಷಿಯಾಗಿದೆ ಈ ನೆಲ ಅದೇ ವಚನ ಸಾಹಿತ್ಯ…
” ಈಸಕ್ಕಿಯಾಸೆ ನಿನಗೇಕೆ ? ಈಶ್ವರನೊಪ್ಪ.
ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ
ದೂರ ಮಾರಯ್ಯ ” ಎಂಬ ಆಯ್ದಕ್ಕಿ ಲಕ್ಕಮ್ಮ……..
” ಶಬ್ದವೆಂಬೆನೆ ಶ್ರೋತೃದೆಂಜಲು
ಸ್ಪರ್ಶವೆಂಬೆನೆ ತ್ವಕ್ಕಿನೆಂಜಲು
ರೂಪೆಂಬೆನೆ ನೇತ್ರದೆಂಜಲು. ರುಚಿಯೆಂಬೆನೆ ಜಿಹ್ವೆಯೆಂಜಲು
ಪರಿಮಳವೆಂಬೆನೆ ಘ್ರಾಣದೆಂಜಲು
ನಾನೆಂಬೆನೆ ಅರಿವಿನೆಂಜಲು
ಎಂಜಲೆಂಬಾ ಭಿನ್ನವಳಿದಾ
ಬೆಳಗಿನೊಳಗಣ ಬೆಳಗು
ಗುಹೇಶ್ವರ ಲಿಂಗವು….. “
ಮತ್ತು
” ಸತ್ಯವು ಇಲ್ಲ, ಅಸತ್ಯವು ಇಲ್ಲ
ಸಹಜವು ಇಲ್ಲ, ಅಸಹಜವು ಇಲ್ಲ,
ನಾನು ಇಲ್ಲ, ಇಲ್ಲ,
ಇಲ್ಲ ಇಲ್ಲ ಎಂಬುದು ತಾನಿಲ್ಲ,
ಗುಹೇಶ್ವರನೆಂಬುದು ತಾ ಬಯಲು….”
ಅಲ್ಲಮಪ್ರಭು…….
ಇಂತಹ ನಾಡಿನಲ್ಲಿ ಒಂದಷ್ಟು ಚುನಾವಣಾ ಕ್ಷೇತ್ರಗಳ ಅಭ್ಯರ್ಥಿಗಳು ಘೋಷಿಸಿರುವ ಸಾವಿರಾರು ಕೋಟಿ ಆಸ್ತಿಯ ವಿವರಗಳು ಇವರು ಜನಸೇವೆ ಎಂಬ ರಾಜಕೀಯ ಕ್ಷೇತ್ರವನ್ನೇ ಅಣಕಿಸುವಂತಿದೆ. ಅವರು ರಾಜಕೀಯ ಕ್ಷೇತ್ರದಲ್ಲಿ ಇದ್ದರೂ ವರ್ಷ ವರ್ಷ ಅವರ ಹಣ ದ್ವಿಗುಣ ತ್ರಿಗುಣ ಆಗುತ್ತಲೇ ಇದೆ. ಇವರು ವ್ಯಾಪಾರ ವ್ಯವಹಾರ ಮಾಡಬಾರದು ಎಂದಲ್ಲ. ಆದರೆ ಇಷ್ಟು ದೊಡ್ಡ ಶ್ರೀಮಂತರು ಸಾರ್ವಜನಿಕ ಸೇವೆಯನ್ನು ಅತ್ಯಂತ ಬಡವರ ಬೇಡಿಕೆಗಳನ್ನು ಪೂರೈಸಲು ಸಾಧ್ಯವೇ ಎಂಬ ಪ್ರಶ್ನೆ ಮತ್ತು ಅನುಮಾನ ಕಾಡುತ್ತದೆ. ಜೊತೆಗೆ ಹಣದಿಂದ ಗೆಲ್ಲಬಹುದು ಎಂಬ ಮನಸ್ಥಿತಿ ಉಂಟಾದರೆ ಸೇವೆ ಹಿನ್ನೆಲೆಗೆ ಸರಿಯುತ್ತದೆ……
ಇಂತಹ ಸನ್ನಿವೇಶದಲ್ಲಿ ಚುನಾವಣೆ ಎಂಬ ಪ್ರಜಾಪ್ರಭುತ್ವದ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿ…..
” ಮತ ಮಾರಾಟಕ್ಕಿಲ್ಲ ಎಂದು ಬಹುತೇಕ ಮಾಧ್ಯಮಗಳು ಸಾಮಾಜಿಕ ಜವಾಬ್ದಾರಿಯ ಜಾಹೀರಾತು ಪ್ರಸಾರ ಮಾಡುತ್ತಿವೆ. ತುಂಬಾ ಸಂತೋಷ. ಜೊತೆಗೆ ಮಾಧ್ಯಮಗಳು ಸಹ ಮಾರಾಟಕ್ಕಿಲ್ಲ ಎಂದು ಎಲ್ಲಾ ಪ್ರಬುದ್ಧ ಮನಸ್ಸುಗಳು ಸಹ ನಮ್ಮ ನಮ್ಮ ನೆಲೆಯಲ್ಲಿ ಪ್ರಚಾರ ಮಾಡಬಹುದಲ್ಲವೇ….”
” ಶಾಸಕರು – ಪಕ್ಷಗಳ ಕಾರ್ಯಕರ್ತರು ಮಾರಾಟಕ್ಕಿಲ್ಲ ಎಂದು ಏಕೆ ಜಾಹೀರಾತು ಪ್ರಕಟಿಸಬಾರದು…..”
” ಧಾರ್ಮಿಕ ಸಂಸ್ಥೆಗಳು ಮತ್ತು ಮುಖ್ಯಸ್ಥರು ಮಾರಾಟಕ್ಕಿಲ್ಲ ಎಂದರೆ ತಪ್ಪಾಗುತ್ತದೆಯೇ….”
” ಸರ್ಕಾರಿ ಅಧಿಕಾರಿಗಳು ಸಂಬಳದ ಹೊರತು ಬೇರೆ ಹಣಕ್ಕೆ ಮಾರಾಟವಾಗುವುದಿಲ್ಲ ಎಂದು ಆತ್ಮಸಾಕ್ಷಿಯಾಗಿ ಬಹಿರಂಗ ಜಾಹೀರಾತು ಪ್ರಕಟಿಸಿಬಹುದೇ…..”
” ಶಿಕ್ಷಣ ಸಂಸ್ಥೆಗಳು – ಆಸ್ಪತ್ರೆಗಳು ಮಾರಾಟಕ್ಕಲ್ಲ ಸೇವೆಗಾಗಿ ಮಾತ್ರ ಎಂದು ಹೇಳುವುದು ಹಾಸ್ಯಾಸ್ಪದವೇ…….”
ಬಡಪಾಯಿ ಪ್ರಜೆಗಳು ತೆಗೆದುಕೊಳ್ಳುವ 2/3 ಸಾವಿರ ರೂಪಾಯಿಗಳ ಮೇಲೆ ಹಕ್ಕು ಚಲಾಯಿಸಿ ಅವರ ಕರ್ತವ್ಯಗಳನ್ನು ನೆನಪಿಸುವ ಜವಾಬ್ದಾರಿ ಇರುವವರಿಗೆ ಅದಕ್ಕಿಂತ ದೊಡ್ಡ ಭ್ರಷ್ಟಾಚಾರದ ಕೂಪಗಳ ಬಗ್ಗೆಯೂ ಹೆಚ್ಚು ಗಮನಹರಿಸಬಹುದಲ್ಲವೇ…
ಇದು ಪ್ರಜಾಪ್ರಭುತ್ವ ಪ್ರಜೆಗಳೇ ಪ್ರಭುಗಳು. ಆದ್ದರಿಂದ ಏನೋ ಪ್ರಭುಗಳು ಭ್ರಷ್ಟರಿಗೆ ಮತ ಹಾಕಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ತಪ್ಪು ಮಾಡಿದರು ಎಂದೇ ಇಟ್ಟುಕೊಳ್ಳಿ. ಅವರು ಪ್ರಭುಗಳು ಮತ್ತು ಅಪಾರ ಸಂಖ್ಯೆಯಲ್ಲಿ ಇದ್ದಾರೆ. ಆದ್ದರಿಂದ ಅವರನ್ನು ಸ್ವಲ್ಪ ಕ್ಷಮಿಸೋಣ. ಆದರೆ ಆಯ್ಕೆಯಾಗುತ್ತಾರಲ್ಲ ಕೆಲವೇ ಶಾಸಕರು ಅವರು ಭ್ರಷ್ಟರಾದರೆ ಅವರನ್ನು ಶಿಕ್ಷಿಸಬಹುದಲ್ಲ. ಗರಿಷ್ಠ 224 ಜನರ ಭ್ರಷ್ಟಾಚಾರ ನಿಯಂತ್ರಣ ಮಾಡಲು ನಮ್ಮ ವ್ಯವಸ್ಥೆಗೆ ಸಾಧ್ಯವಾಗದಿದ್ದರೆ ಇನ್ನು 5 ಕೋಟಿ ಜನರನ್ನು ಹೇಗೆ ತಡೆಯುವುದು.
ಸುಮಾರು 10 ಕೋಟೆಯಿಂದ 50 ಕೋಟಿಯವರೆಗೆ ಬಹುತೇಕ ನಗದು ರೂಪದಲ್ಲಿ ಕಪ್ಪು ಹಣವನ್ನು ಸಾಧ್ಯವಾದಷ್ಟು ಮನೆಗಳಿಗೆ ತಲುಪಿಸುವ ಪಕ್ಷಗಳ ಕೆಲವೇ ಅಭ್ಯರ್ಥಿಗಳನ್ನು ನಿಯಂತ್ರಿಸಲಾಗದ, ಪರಿವರ್ತಿಸಲಾಗದ, ಶಿಕ್ಷಿಸಲಾಗದ ವ್ಯವಸ್ಥೆ ಕೋಟ್ಯಾಂತರ ಮತದಾರ ಕದ್ದು ಮುಚ್ಚಿ ಹಣ ಪಡೆಯುವುದನ್ನು ತಡೆಯಲು ಸಾಧ್ಯವಾಗುವುದೇ….
ಹಣ ಪಡೆದು ಮಾರಾಟವಾಗುವ ಮತದಾರ ಅಪಾಯಕಾರಿ ಏನು ಅಲ್ಲ. ಆ ಹಣದಿಂದ ಆತ ಶ್ರೀಮಂತನೇನು ಆಗುವುದಿಲ್ಲ. ಒಂದು ರೀತಿಯಲ್ಲಿ ಕೆಲವು ದಿನಗಳ ಹೊಟ್ಟೆ ಪಾಡು ಮಾತ್ರ.
ಆದರೆ ಹಣ ಕೊಡುವ ಅಭ್ಯರ್ಥಿಗಳು ಗೆದ್ದರೆ 7 ಕೋಟಿ ಜನಗಳ ಪ್ರತಿನಿಧಿಗಳಾಗಿ, ಶಾಸನ ರಚಿಸಿ ಬೃಹತ್ ರಾಜ್ಯದ ಸಂಪೂರ್ಣ ಸಂಪನ್ಮೂಲಗಳ ಮೇಲೆ ಅಧಿಕಾರ ಸ್ಥಾಪಿಸಿ ಆಡಳಿತ ನಡೆಸುತ್ತಾರೆ. ಸೂಕ್ಷ್ಮವಾಗಿ ಯೋಚಿಸಿ ಇಲ್ಲಿ ಮುಖ್ಯವಾಗಿ ಪ್ರಾಮಾಣಿಕರಾಗಿರಬೇಕಾದವರು ಶಾಸಕರೋ ಮತದಾರರೋ…..
ಜೊತೆಗೆ ಮತದಾರ ಎಂಬುದು ಒಂದು ಸಮೂಹ. ಸಮೂಹ ಪ್ರಜ್ಞೆ ಸಾಮಾನ್ಯವಾಗಿ ಏಕ ಪ್ರಕಾರವಾಗಿ, ವಿವೇಚನಾಯುಕ್ತವಾಗಿ ಇರುವುದಿಲ್ಲ. ಸ್ವಲ್ಪ ಮಟ್ಟಿಗೆ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿ ಹೊಂದಿರುತ್ತದೆ. ಆದರೆ ಶಾಸಕ ಎಂಬುದು ಏಕ ವ್ಯಕ್ತಿ.
ಆತ ತನ್ನ ಮೇಲೆ ಸುಲಭವಾಗಿ ನಿಯಂತ್ರಣ ಸಾಧಿಸಬಹುದು.
ನಿಜವಾಗಿಯೂ ಪ್ರಜಾಪ್ರಭುತ್ವ ಯಶಸ್ವಿಯಾಗಬೇಕಾದರೆ ಮತದಾರರ ಪ್ರಾಮಾಣಿಕತೆಗಿಂತ ಗೆದ್ದ ಅಭ್ಯರ್ಥಿಗಳ ಪ್ರಾಮಾಣಿಕತೆಯೇ ಬಹುಮುಖ್ಯ ಎಂಬುದು ವಾಸ್ತವ. ಅದನ್ನು ನೆನಪಿಟ್ಟುಕೊಂಡು ಆ ನಿಟ್ಟಿನಲ್ಲಿ ಹೆಚ್ಚು ಯೋಚನೆ ಮತ್ತು ಕಾರ್ಯೋನ್ಮಖರಾಗಬೇಕು ಎಂದು ಮನವಿ ಮಾಡಿಕೊಳ್ಳುತ್ತಾ……..
ಎಲ್ಲರಿಗೂ ಕಾಯಕಯೋಗಿ ಬಸವಣ್ಣನವರ ಹುಟ್ಟುಹಬ್ಬದ ಶುಭಾಶಯಗಳು……
ನಿನ್ನೆ ದಿನಾಂಕ 22/04/2023 ಶನಿವಾರ ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನಲ್ಲಿ ಬಸವಣ್ಣನವರ 890 ನೇ ಜಯಂತಿಯ ಪ್ರಯುಕ್ತ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದ ಜನರಿಗೆ ಬಸವ ತತ್ವಗಳ ನುಡಿಗಳು ಮತ್ತು ತಿಳಿವಳಿಕೆಗಳನ್ನು ನಡವಳಿಕೆಗಳಾಗಿ ಮಾರ್ಪಡಿಸಿಕೊಳ್ಳು ಪ್ರೀತಿ ಪೂರ್ವಕವಾಗಿ ಮನವಿ ಮಾಡಿಕೊಳ್ಳಲಾಯಿತು.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068…..