” ಏನಾದರೂ ಮಾಡು ಆದರೆ ಯಶಸ್ವಿಯಾಗು “
( “Success at any cost ” )
ಮಾಧ್ಯಮಗಳು ಕರ್ನಾಟಕದ ಚುನಾವಣಾ ಫಲಿತಾಂಶವನ್ನು ಹೀಗಿಯೇ ವಿಶ್ಲೇಷಿಸುತ್ತವೆ……….
ಗೆದ್ದ ವ್ಯಕ್ತಿ ಮತ್ತು ಪಕ್ಷದ ಎಲ್ಲಾ Weakness ಮತ್ತು ಕೆಟ್ಟ ಗುಣಗಳನ್ನು ಅವರುಗಳ Strength ಎಂತಲೂ,
ಎಲ್ಲಾ ತಂತ್ರ ಮಂತ್ರ ಕುತಂತ್ರಗಳನ್ನು ಅವರ ಬಹುದೊಡ್ಡ ಸಾಮರ್ಥ್ಯ ಎಂತಲೂ ಚಿತ್ರಿಸುತ್ತವೆ.
ಗೆಲವು ಜವಾಬ್ದಾರಿಯ ಮೊದಲ ಮೆಟ್ಟಿಲು ಎಂಬುದನ್ನು ಮರೆತು, ಯಾರೋ ವ್ಯಕ್ತಿ ಅಥವಾ ಪಕ್ಷದ ಗೆಲುವೇ ಪ್ರಜಾಪ್ರಭುತ್ವ ಯಶಸ್ಸು ಎಂದು ಮೂರ್ಖತನದಿಂದ ವಿಶ್ಲೇಷಣೆ ಮಾಡುತ್ತಾರೆ.
ಹಾಗೆಯೇ ಸೋತ ವ್ಯಕ್ತಿ ಮತ್ತು ಪಕ್ಷದ Strength ಗಳನ್ನು, ಉತ್ತಮ ನಡೆಗಳನ್ನು ಅವರ ಅಸಾಮರ್ಥ್ಯ ಎಂದೇ ಬಿಂಬಿಸಲಾಗುತ್ತದೆ.
ಆತನನ್ನು ಅಪ್ರಯೋಜಕ ಎಂದು ಬಹಿರಂಗವಾಗಿಯೇ ಹೇಳಲಾಗುತ್ತದೆ.
ಅದಕ್ಕೆ ಅವರಿಗಿರುವ ಒಂದೇ ಕಾರಣ ಫಲಿತಾಂಶ.
ಅಂದರೆ ಫಲಿತಾಂಶದ ಆಧಾರದ ಮೇಲೆ ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸಲಾಗುತ್ತದೆ.
ಇದು ಕೇವಲ ರಾಜಕೀಯ ಸೋಲು ಗೆಲುವಿಗೆ ಮಾತ್ರವಲ್ಲ. ನಮ್ಮ ಇಡೀ ಸಮಾಜ ನಮ್ಮನ್ನು ಅಳೆಯುವುದು ಇದೇ ಆಧಾರದ ಮೇಲೆಯೇ.
ನಿಜವಾದ ಗುಣ ಮೌಲ್ಯಗಳನ್ನು ಬಹಳಷ್ಟು ಜನ ಗುರುತಿಸುವುದೇ ಇಲ್ಲ.
ಯಶಸ್ಸಿಗಾಗಿ ನೀವು ಅನುಸರಿಸುವ ಮಾರ್ಗವನ್ನು ಜನ ಗಮನಿಸುವುದಿಲ್ಲ. ಅದು ಎಷ್ಟೇ ಕೆಟ್ಟದ್ದಾಗಿದ್ದರೂ ಫಲಿತಾಂಶ ನಿಮ್ಮ ಪರವಾಗಿದ್ದರೆ ಹಾಡಿ ಹೊಗಳಲಾಗುತ್ತದೆ.
ಆ ಕಾರಣದಿಂದಾಗಿಯೇ ನಮ್ಮ ಸಮಾಜದಲ್ಲಿ ಯಶಸ್ಸಿಗಾಗಿ ಎಲ್ಲಾ ರೀತಿಯ ವಾಮ ಮಾರ್ಗಗಳನ್ನು ಅನುಸರಿಸುತ್ತಾರೆ. ಯಾವುದೇ ಎಗ್ಗಿಲ್ಲದೆ ಎಷ್ಟೇ ಅಸಹ್ಯವಾದರೂ ಅದನ್ನು ಮಾಡಿ ಯಶಸ್ವಿಯಾಗಲು ಪ್ರಯತ್ನಿಸುತ್ತಾರೆ.
ಅದು ಹಣವೋ ಅಧಿಕಾರವೋ ಜನಪ್ರಿಯತೆಯೋ ಏನೇ ಆಗಿರಬಹುದು. ಫಲಿತಾಂಶದ ಆಧಾರದ ಮೇಲೆಯೇ ನಿಮ್ಮ ಬೆಲೆ ನಿರ್ಧಾರವಾಗುತ್ತದೆ.
ಇದು ಖಂಡಿತ ಅಪಾಯಕಾರಿ.
ಸೋಲು ಗೆಲುವುಗಳು ಕ್ರಿಯೆ – ಪ್ರಕ್ರಿಯೆಗಳು ಮತ್ತು ಬಹುಮುಖ್ಯವಾಗಿ ಅವು ನಮ್ಮಗಳ ನಡುವೆಯೇ ನಡೆಯುವ ಬದುಕಿನ ಪಯಣದ ಒಂದು ಭಾಗ.
ಸೋತ ಮಾತ್ರಕ್ಕೆ ನಾವು ಅಸಮರ್ಥರು – ಕೆಟ್ಟವರು – ಕೆಲಸಕ್ಕೆ ಬಾರದವರು ಆಗುವುದಿಲ್ಲ. ಆ ಕ್ಷಣಕ್ಕೆ ಫಲಿತಾಂಶ – ಪರಿಸ್ಥಿತಿ ನಮಗೆ ಅನುಕೂಲಕರವಾಗಿರುವುದಿಲ್ಲ ಅಥವಾ ನಮ್ಮ ಶ್ರಮ ಸಾಕಾಗಿರುವುದಿಲ್ಲ.
ಅದೇ ರೀತಿ ಗೆದ್ದ ತಕ್ಷಣ ನಮ್ಮ ಎಲ್ಲಾ ನಡೆಗಳು ಸರ್ವಕಾಲಕ್ಕೂ ಸಂಪೂರ್ಣ ಸತ್ಯ ಎಂದು ಭಾವಿಸಬೇಕಿಲ್ಲ.
ಆದ್ದರಿಂದ,
ನಾವುಗಳು ಮನುಷ್ಯನ ವ್ಯಕ್ತಿತ್ವವನ್ನು ಸೋಲು ಗೆಲುವಿನ ಫಲಿತಾಂಶದ ಮೇಲೆ ಅಳೆಯದೆ ಅವರ ಗುಣಾವಗುಣಗಳ ನಿಜ ಮೌಲ್ಯಗಳನ್ನು ಗುರುತಿಸಿ ಒಳ್ಳೆಯವರನ್ನು ಪ್ರೋತ್ಸಾಹಿಸೋಣ ಕೆಟ್ಟವರನ್ನು ತಿರಸ್ಕರಿಸೋಣ.
ಗೆದ್ದವನು ಒಳ್ಳೆಯವನು ಆಗಿರಬಹುದು ಅಥವಾ ದುಷ್ಟನೂ ಆಗಿರಬಹುದು.
ಸೋತವನೂ ಕೆಟ್ಟವನೂ ಆಗಿರಬಹುದು ಅಥವಾ ಒಳ್ಳೆಯವನೂ ಆಗಿರಬಹುದು.
ಎಚ್ಚರ……….
” ಒಳ್ಳೆಯ ಮಾರ್ಗದಿಂದ ಮಾತ್ರ ಯಶಸ್ಸು ಪಡೆ. ಆ ಮಾರ್ಗದಲ್ಲಿ ಸೋಲಾದರೂ ಅದು ನಿನ್ನ ಮತ್ತು ಸಮಾಜದ ಯಶಸ್ಸೇ ಆಗುತ್ತದೆ ” ಎಂಬುದನ್ನು ನಮ್ಮ ಮಕ್ಕಳಿಗೆ ಹೇಳಿ ಕೊಡುವ ಪ್ರಯತ್ನ ಮಾಡೋಣ.
ಆಗ ಇಡೀ ಸಮಾಜದ ನೆಮ್ಮದಿಯ ಗುಣಮಟ್ಟ ಹೆಚ್ವುವುದರಲ್ಲಿ ಸಂದೇಹವೇ ಇಲ್ಲ. ಎಲ್ಲರ ಬದುಕಿನ ಒತ್ತಡ ಸಹಜವಾಗಿ ಕಡಿಮೆಯಾಗಿ ಜೀವನಮಟ್ಟ ಸುಧಾರಿಸುತ್ತದೆ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ.
9844013068……