ಸಾಧಕರೆಂದರೆ ಬಹುತೇಕ ಸಿನಿಮಾ ಮಂದಿ ಮಾತ್ರ ಎಂಬ ಅರ್ಥದಲ್ಲಿ ಮನರಂಜನಾ ವಾಹಿನಿಯೊಂದು ಕಾರ್ಯಕ್ರಮ ಬಿತ್ತರಿಸುತ್ತದೆ. ಅದು ಮನರಂಜನಾ ವಾಹಿನಿಯಾದ್ದರಿಂದ ಸಹಜವಾಗಿ ಗ್ಲಾಮರ್, ಜನಪ್ರಿಯತೆ, ಮನರಂಜನಾ ಆಕರ್ಷಣೆ, ಹಣಕಾಸಿನ ವ್ಯವಹಾರ ಎಲ್ಲವನ್ನೂ ಸಹಜವಾಗಿ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ರೂಪಿಸುತ್ತದೆ. ಕೆಲವೇ ಮಂದಿ ಇತರ ಕ್ಷೇತ್ರಗಳ ಸಾಧಕರು ಮಾತ್ರ ಅದರಲ್ಲಿ ಭಾಗವಹಿಸುತ್ತಾರೆ. ಇರಲಿ ಅದು ವಾಹಿನಿಯ ಸ್ವಾತಂತ್ರ್ಯ……
ಆದರೆ ಕಾರ್ಯಕ್ರಮದ ವೀಕ್ಷಕರು ಹೆಚ್ಚು ವಿವೇಚನೆಯಿಂದ ಭಾಗವಹಿಸಿದವರ ವ್ಯಕ್ತಿತ್ವ ಗ್ರಹಿಸಬೇಕು. ನಿರೂಪಕರ ಅತಿರಂಜಿತ ವರ್ಣನೆಯಲ್ಲಿ ವಾಸ್ತವ ಮರೆಯಬಾರದು. ಈ ಕಾರ್ಯಕ್ರಮ ಹೆಚ್ಚು ಜನಪ್ರಿಯತೆ ಪಡೆದಿರುವುದರಿಂದ ಒಂದು ವಿಮರ್ಶೆಯ ಅವಶ್ಯಕತೆ ಇದೆ ಎಂದು ಭಾವಿಸಿ……
ಕಾರ್ಯಕ್ರಮ ಮುಖ್ಯವಾಗಿ ಸಾಧಕರ ಈಗಿನ ಪರಿಸ್ಥಿತಿಯನ್ನು – ಸ್ಥಾನವನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಹಳೆಯ ನೆನಪುಗಳನ್ನು, ಅವರ ಒಡನಾಡಿಗಳ ಅಭಿಪ್ರಾಯವನ್ನು, ಸಾಧನೆಯ ವಿವರಣೆಯನ್ನು, ಕಷ್ಟ ಸುಖಗಳನ್ನು ಒಳಗೊಂಡಿರುತ್ತದೆ. ಕನ್ನಡದ ಜನಪ್ರಿಯ ನಟ ರಮೇಶ್ ಅರವಿಂದ್ ಇದರ ನಿರೂಪಕರು.
ಜನಪ್ರಿಯತೆ – ಸಾಧನೆ – ಶ್ರಮ – ಹುಟ್ಟಿನ ಹಿನ್ನೆಲೆ – ಯಶಸ್ಸು – ಅನುಸರಿಸಿದ ಮಾರ್ಗ – ಸಮಾಜ ಮತ್ತು ಜನರಿಗೆ ಆದ ಉಪಯೋಗ ಹಾಗು ತೊಂದರೆ – ಒಳ್ಳೆಯತನ – ಕೆಟ್ಟತನ – ತ್ಯಾಗ – ವಂಚನೆ – ಕಪಟತನ – ಹಿಂದಿನ ಮತ್ತು ಇಂದಿನ ಆರ್ಥಿಕ ಸಾಮಾಜಿಕ ಪರಿಸ್ಥಿತಿ – ಮುಖವಾಡ – TRP – ಅವರ ಈಗಿನ ನಡವಳಿಕೆ – ಆದರ್ಶ ಮತ್ತು ಎಚ್ಚರಿಕೆ…..
ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ನಾವು ಅವರ ವ್ಯಕ್ತಿತ್ವ ಅಳೆಯಬೇಕು ಮತ್ತು ಅದರ ಮುಖಾಂತರ ನಮ್ಮ ಅಭಿಪ್ರಾಯ ರೂಪಿಸಿಕೊಳ್ಳಬೇಕು.
ಕೇವಲ ನಿರೂಪಣೆಯ ಜಾಣ್ಮೆ, ದೃಶ್ಯ ಶ್ರೀಮಂತಿಕೆ, ಹತ್ತಿರದವರ ಅಭಿಪ್ರಾಯ, ಭಾವುಕ ಸನ್ನಿವೇಶಗಳ ಆಧಾರದ ಮೇಲೆ ನೀವು ಅವರನ್ನು ಗುರುತಿಸಬೇಡಿ. ಅಲ್ಲಿ ಎಲ್ಲವೂ ಒಳ್ಳೆಯದು ಮಾತ್ರ ಇರುತ್ತದೆ ಮತ್ತು ಬಹುತೇಕ ವೈಭವೀಕರಣದಿಂದ ತುಂಬಿರುತ್ತದೆ. ಆದರೆ ವಾಸ್ತವ ಬದುಕಿನಲ್ಲಿ ಅಷ್ಟು ಮಾತ್ರ ಇರುವುದಿಲ್ಲ. ಅದಕ್ಕೆ ವಿರುದ್ಧವಾದ ಅನೇಕ ಅಂಶಗಳು ನಡೆದಿರುತ್ತದೆ. ಸಾಧಕರ ದೃಷ್ಟಿಕೋನದಿಂದ ಮಾತ್ರ ಅಲ್ಲಿ ಗುರುತಿಸಲಾಗುತ್ತದೆ.
ಉದಾಹರಣೆಗೆ,
ಕೆಲವರ ಬಡತನ ವಾಸ್ತವವನ್ನು ಪರಿಚಯಿಸಿದರೆ ಅನೇಕರದು ತಾತ್ಕಾಲಿಕ ಅಥವಾ ಆಕಸ್ಮಿಕ ಅಥವಾ ಆ ಕ್ಷಣದ ಬಡತನವಾಗಿರುತ್ತದೆಯೇ ಹೊರತು ಭಾರತದ ನಿಜವಾದ ಹಸಿವಿನ ಮುಖ ಅವರಿಗೆ ಅನುಭವವಾಗಿರುವುದಿಲ್ಲ.
ಊಟವೇ ಇಲ್ಲದ, ಭಿಕ್ಷೆ ಬೇಡಿದಿರೂ ಊಟ ಸಿಗದ, ರಸ್ತೆ ಬದಿಯ ಹಳ್ಳದ ನೀರು ಕುಡಿದು ದಿನಗಳನ್ನು ಮತ್ತು ಊಟ ಮಾಡಿ ಬಿಸಾಕಿದ ಎಂಜಲು ಅನ್ನವನ್ನು ನಾಯಿಗಳ ಜೊತೆ ಗುದ್ದಾಡಿ ತಿಂದು ತಿಂಗಳು ವರ್ಷಗಳನ್ನು ಕಳೆದ ಅನೇಕ ಜನರನ್ನು ನಾನು ಕಣ್ಣಾರೆ ಕಂಡಿದ್ದೇನೆ. ಅವರ ಬಡತನದ ಮುಂದೆ ಇಲ್ಲಿನ ಅನೇಕರ ಬಡತನ ಏನೇನೂ ಇಲ್ಲ. ಜೊತೆಗೆ ಆ ಬಡತನ ಮರೆಸುವ ಶ್ರೀಮಂತಿಕೆಯ ಪರಿಸ್ಥಿತಿಯಲ್ಲಿ ಈ ಜನ ಈಗ ಇದ್ದಾರೆ. ಆದರೆ ಆ ಕರಾಳ ಬಡತನದ ಬಹುತೇಕರು ಈಗಲೂ ಬಡತನದಲ್ಲಿಯೇ ಜೀವಂತವಿದ್ದಾರೆ. ಅನಾರೋಗ್ಯದ ಕಾರಣಕ್ಕೆ ಆಸ್ಪತ್ರೆಗೆ ಹೋಗಲು ಹಣವಿಲ್ಲದ ಜನ ತುಂಬಾ ಇದ್ದಾರೆ.
ಜೊತೆಗೆ ಒಬ್ಬ ವ್ಯಕ್ತಿಯ ಬದುಕಿನಲ್ಲಿ ನಾವು ಅನೇಕರಿಗೆ ಸಹಾಯ ಮಾಡಿರಬಹುದು. ಹಾಗೆಯೇ ನಮ್ನಿಂದ ಕೆಲವರಿಗೆ ತೊಂದರೆಯೂ ಆಗಿರುತ್ತದೆ. ನಮಗೆ ಮಿತ್ರರಿದ್ದಂತೆ ಶತ್ರುಗಳು ಇರುತ್ತಾರೆ. ಆದರೆ ಈ ಕಾರ್ಯಕ್ರಮದಲ್ಲಿ ಕೇವಲ ಹಿತೈಷಿಗಳನ್ನು ಮಾತ್ರ ಪರಿಚಯಿಸಲಾಗುತ್ತದೆ ಎಂಬುದು ನೆನಪಿರಲಿ.
ಕಾರ್ಯಕ್ರಮದ ಭಾವುಕ ಸನ್ನಿವೇಶಕ್ಕಾಗಿ, ಕಣ್ಣೀರಿನ ದೃಶ್ಯಗಳಿಗಾಗಿ ಭ್ರಮಾತ್ಮಕ ಕಥೆ ಕಟ್ಟುವ ಬಗ್ಗೆ ಮಾಹಿತಿ ಇಲ್ಲದವರಿಗಾಗಿ ಇದನ್ನು ಹೇಳಬೇಕಾಗಿದೆ.
ಹಾಗೆಯೇ,
ಜನಪ್ರಿಯತೆ ಮತ್ತು ಸಾಧನೆ ಬೇರೆ ಬೇರೆ. ಈಗಿನ ಸಂಪರ್ಕ ಕ್ರಾಂತಿಯ ಸಂದರ್ಭದಲ್ಲಿ ಅನೇಕರು ವಿವಿಧ ಕಾರಣಗಳಿಗಾಗಿ ಮುಖವಾಡ ತೊಟ್ಟು ಹಣದಿಂದ, ವಂಚನೆಯಿಂದ, ಕೋತಿ ಚೇಷ್ಟೆಗಳಿಂದ, ವಿಕೃತಿಗಳಿಂದ, ಭ್ರಷ್ಟ ಮಾರ್ಗಗಳಿಂದ ಜನಪ್ರಿಯರಾಗಬಹುದು. ಮಾಧ್ಯಮಗಳಲ್ಲಿ ದೊಡ್ಡ ಹೆಸರು ಮಾಡಬಹುದು. ಆದರೆ ಅವರು ನಿಜವಾದ ಸಾಧಕರು, ಸಮಾಜಕ್ಕೆ ಆದರ್ಶ ವ್ಯಕ್ತಿಗಳು ಆಗಿರುವುದಿಲ್ಲ. ಶ್ರಮಪಟ್ಟು ಒಳ್ಳೆಯ ಮಾರ್ಗದಿಂದ ಮುಂದೆ ಬಂದಿರುವುದಿಲ್ಲ. ಅವರನ್ನು ನಾವು ಅನುಸರಿಸುವುದೇ ಅಪಾಯಕಾರಿ.
ಇದನ್ನು ವೀಕ್ಷಕ ವರ್ಗ ತುಂಬಾ ಎಚ್ಚರಿಕೆಯಿಂದ ಗಮನಿಸಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸಿದ ವ್ಯಕ್ತಿಯ ಇಡೀ ವ್ಯಕ್ತಿತ್ವ ಮತ್ತು ಕಾರ್ಯಕ್ರಮದ ಒಳಗಿನ ಹೇಳಲಾಗದ ಆಳದ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕು. ಕೇವಲ ಮೇಲ್ನೋಟದ ಆಧಾರದ ಮೇಲೆ ಯಾವುದೇ ತೀರ್ಮಾನ ಮಾಡಬಾರದು.
ಅಲ್ಲಿನ ಕೆಲವು ವ್ಯಕ್ತಿಗಳ ನಡೆ ನುಡಿಗಳಲ್ಲಿ ಬಹಳ ವ್ಯತ್ಯಾಸವಿರುತ್ತದೆ.
- ಮಾತುಗಳಲ್ಲಿ ಮಹಲುಗಳನ್ನು ಕಟ್ಟುವವರ ನಡುವೆ ನ್ಯಾಯ ನಿಷ್ಠೆ ಬೆವರಿನಿಂದ ಮನೆ ಕಟ್ಟುವವರು ಮರೆಯಾಗಬಾರದು *
- ಜನಪ್ರಿಯತೆ ಆ ವ್ಯಕ್ತಿಗೆ ಲಾಭ ತಂದುಕೊಡುತ್ತದೆ. ಸಾಧನೆ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತದೆ *
ಈ ವ್ಯತ್ಯಾಸಗಳನ್ನು ಗುರುತಿಸುವ ಮತ್ತು ನಿಜವಾದ ಸಾಧಕರನ್ನು ಪ್ರೋತ್ಸಾಹಿಸುವ, ಗೋಮುಖ ವ್ಯಾಘ್ರಗಳನ್ನು ತಿರಸ್ಕರಿಸುವ
ಬುದ್ಧಿವಂತಿಕೆಯನ್ನು ನಾವು ಪ್ರದರ್ಶಿಸಬೇಕಿದೆ. ಇಲ್ಲದಿದ್ದರೆ ಮುಖವಾಡಗಳೇ ಸಮಾಜದ ಆದರ್ಶಗಳಾಗಿ TRP ಗಳೇ ಮೌಲ್ಯಗಳಾಗುವ ಸಾಧ್ಯತೆ ಇದೆ.
ಒಳ್ಳೆಯ ಗುರಿ ಸಾಧನೆಗೆ ಒಳ್ಳೆಯ ಮಾರ್ಗವೂ ಅವಶ್ಯಕ. ಹೇಗೋ ಗುರಿ ಮುಟ್ಟಿದರೆ ಸಾಕು ಮಾರ್ಗ ಯಾವುದಾದರೇನು ಎಂಬುದು ಇಡೀ ದೇಶದ ಆರೋಗ್ಯಕ್ಕೆ ಅಪಾಯಕಾರಿ ಎಂದು ಎಚ್ಚರಿಸುತ್ತಾ..…
ಇದು ಕೇವಲ ಈ ಕಾರ್ಯಕ್ರಮಕ್ಕೆ ಮಾತ್ರವಲ್ಲ ಈ ರೀತಿಯ ಎಲ್ಲಾ ಲೇಖನ, ಬರಹ, ಸಾಕ್ಷ್ಯಚಿತ್ರಗಳಿಗೂ ಅನ್ವಯಿಸುತ್ತದೆ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ.
9844013068……