Spread the love

ಮತದಾರರು ಬುದ್ದಿವಂತರೇ, ವಿವೇಚನೆಯುಳ್ಳವರೇ, ಸಂವೇದನಾಶೀಲರೇ, ಸೂಕ್ಷ್ಮಗ್ರಾಹಿಗಳೇ,
ಒಳ್ಳೆಯವರೇ,
ಯೋಚಿಸಿ ಮತ ಹಾಕುತ್ತಾರೆಯೇ,….
ಅಥವಾ,
ಮತದಾರರು ದಡ್ಡರೇ, ಸ್ವಾರ್ಥಿಗಳೇ, ಆಮಿಷಗಳಿಗೆ ಬಲಿಯಾಗುವವರೇ, ಮೂರ್ಖರೇ, ಮುಗ್ದರೇ, ಕ್ರಿಮಿನಲ್ ಗಳೇ,…….

ಮೇಲೆ ಹೇಳಿದ ಎಲ್ಲಾ ರೀತಿಯ ಜನರು ಇರುತ್ತಾರೆ. ಇದು ಬೃಹತ್ ವೈವಿಧ್ಯಮಯ ದೇಶ. ಹಾಗೆ ನಿರ್ದಿಷ್ಟವಾಗಿ ಹೇಳುವುದು ಸಾಧ್ಯವಿಲ್ಲ ಎಂಬ ವಾದಗಳಿಗಿಂತ ಕಳೆದ ಸುಮಾರು 40 ವರ್ಷಗಳ ಕೇಂದ್ರ ಮತ್ತು ರಾಜ್ಯಗಳ ಚುನಾವಣಾ ಫಲಿತಾಂಶಗಳು, ಆಯ್ಕೆಯಾದ ಪಕ್ಷಗಳು, ಅಭ್ಯರ್ಥಿಗಳು, ಅವರ ಹಿನ್ನೆಲೆ, ಅವರು ಚುನಾವಣೆ ಗೆಲ್ಲಲು ಅನುಸರಿಸಿದ ಮಾರ್ಗಗಳು ಎಲ್ಲವನ್ನೂ ಸರಾಸರಿಯಾಗಿ ಅನುಭವದ ಆಧಾರದ ಮೇಲೆ ವಿಮರ್ಶಿಸಿದಾಗ,…….

ರಾಜಕೀಯ ಪಕ್ಷಗಳ ನಾಯಕರು, ಪತ್ರಕರ್ತರು, ಸಿನೆಮಾ ನಟ ನಟಿಯರು, ಬಹುತೇಕ ಜನಪ್ರಿಯ ವ್ಯಕ್ತಿಗಳು ಮತದಾರರನ್ನು ಬುದ್ದಿವಂತರು, ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿ ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಅವರ ಪರವಾಗಿ ಮಾತನಾಡುತ್ತಾರೆ,…..

ಸಾಮಾಜಿಕ ಹೋರಾಟಗಾರರು, ಶೋಷಿತ ಸಮುದಾಯಗಳ ನಾಯಕರು, ಕೆಲವು ಚಿಂತಕರು,
ಜನ ತುಂಬಾ ದಡ್ಡರು ಮತ್ತು ಸ್ವಾರ್ಥಿಗಳು. ಅನೇಕ ರೀತಿಯ ಆಮಿಷಗಳಿಗೆ ಒಳಗಾಗಿ ಆ ತಕ್ಷಣದ ಲಾಭಗಳನ್ನು ಗಮನದಲ್ಲಿಟ್ಟುಕೊಂಡು ತಪ್ಪಾಗಿ ಮತ ಹಾಕುತ್ತಾರೆ ಎಂಬ ಅಭಿಪ್ರಾಯ ಪಡುತ್ತಾರೆ,…….

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ನಡೆದ ಎಲ್ಲಾ ರೀತಿಯ ಚುನಾವಣೆಗಳಲ್ಲಿ ಆಯ್ಕೆಯಾದ ಅಭ್ಯರ್ಥಿಗಳ ಸರಾಸರಿ ಗುಣಮಟ್ಟವನ್ನು ಮಾಧ್ಯಮಗಳ ವರದಿಯ ಆಧಾರದ ಮೇಲೆ ವಿಮರ್ಶೆಗೆ ಒಳಪಡಿಸಿದರೆ,……

ಶೇಕಡಾ 5% ರಿಂದ 10% ಜನ ಪ್ರತಿನಿಧಿಗಳು ಮಾತ್ರ ಒಟ್ಟಾರೆಯಾಗಿ ಉತ್ತಮ ಗುಣಮಟ್ಟವನ್ನು,
ಶೇಕಡಾ 25% ನಿಂದ 30% ಪ್ರತಿನಿಧಿಗಳು ಸಾಧಾರಣವಾದ ಗುಣಮಟ್ಟವನ್ನು,
ಶೇಕಡಾ 25% ರಿಂದ 30% ವರೆಗೆ ಕಳಪೆ ಗುಣಮಟ್ಟವನ್ನು,
ಉಳಿದ 25% ರಿಂದ 30% ಅಭ್ಯರ್ಥಿಗಳು ನಟೋರಿಯಸ್ ಕ್ರಿಮಿನಲ್ ಹಿನ್ನೆಲೆಯನ್ನು ಹೊಂದಿರುತ್ತಾರೆ,……

ಮುಖ್ಯವಾಗಿ, ಬಿಹಾರ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಅತಿಹೆಚ್ಚು ಕೊಲೆಗಡುಕರು, ಅತ್ಯಾಚಾರಿಗಳು, ಹಪ್ತಾ ವಸೂಲಿಗಾರರು, ವೃತ್ತಿ ನಿರತ ದರೋಡೆಕೋರರು ಪ್ರಜಾಪ್ರಭುತ್ವದ ಮಾದರಿಯ ಚುನಾವಣೆಯಲ್ಲಿ ಜನರ ವಿಶ್ವಾಸ ಗಳಿಸಿ ಗೆದ್ದು ಬರುತ್ತಾರೆ. ಅವಿಭಜಿತ ಆಂದ್ರಪ್ರದೇಶ, ಪಶ್ಚಿಮ ಬಂಗಾಳ, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳು ನಂತರದ ಸ್ಥಾನದಲ್ಲಿ ಬರುತ್ತದೆ. ಇತರ ರಾಜ್ಯಗಳಲ್ಲಿ ಸಹ ಇದು ಆಯಾ ರಾಜ್ಯಗಳ ಜನಸಂಖ್ಯೆಗೆ ಅನುಗುಣವಾಗಿ ಸ್ವಲ್ಪ ಪ್ರಮಾಣದಲ್ಲಿ ಇದೆ,…..

ಕರ್ನಾಟಕದಂತ ರಾಜ್ಯದಲ್ಲಿ ಸಹ ಕೆಲವು ಕ್ಷೇತ್ರಗಳಲ್ಲಿ ಎಲ್ಲಿಂದಲೋ ರಿಯಲ್ ಎಸ್ಟೇಟ್ ದಂಧೆಯಲ್ಲಿ ಮಾಡಿದ ಹಣವನ್ನು ತಂದು ಚುನಾವಣೆಯಲ್ಲಿ ಗೆಲ್ಲುವುದು, ಅಕ್ರಮವಾಗಿ ಭೂಮಿ ಅಗೆದು ಹಣ ಮಾಡಿ ಚುನಾವಣೆ ಗೆದ್ದವರು, ಜನರ ಧಾರ್ಮಿಕ ನಂಬಿಕೆಗಳನ್ನು ಮೋಸದಿಂದ ಶೋಷಣೆ ಮಾಡಿ ಆಯ್ಕೆಯಾದವರು, ಗೆದ್ದ ನಂತರ ತಮ್ಮನ್ನೇ ಹಣಕ್ಕಾಗಿ ಮಾರಿಕೊಂಡ ಪಕ್ಷಾಂತರಿಗಳನ್ನು ಗೆಲ್ಲಿಸುತ್ತಲೇ ಇದ್ದಾರೆ. ಅಪರೂಪದ ಕೆಲವು ಉದಾಹರಣೆ ಹೊರತುಪಡಿಸಿದರೆ ಬಹುತೇಕ ಭ್ರಷ್ಟರು, ದುಷ್ಟರೇ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಾರೆ. ಬಹುತೇಕ ಮತದಾರರಿಗೆ ತಾವು ಶೋಷಣೆಗೆ ಒಳಗಾಗುತ್ತಿದ್ದೇವೆ ಎಂಬ ಅರಿವೇ ಇಲ್ಲ. ನಮ್ಮ ಕ್ಷೇತ್ರದ ಸಂಪನ್ಮೂಲಗಳ ನಿರ್ವಹಣೆಯಲ್ಲಿ ನಮ್ಮ ಪಾಲು ಇದೆ ಎಂಬ ಜ್ಞಾನವೇ ಇಲ್ಲ,……..

ನೇರವಾಗಿ ಅನೇಕ ಕ್ರಿಮಿನಲ್ ಅಭ್ಯರ್ಥಿಗಳನ್ನು ಹೆಸರಿಸಬಹುದು. ಅತ್ಯಂತ ಕೆಟ್ಟವರ ಪಟ್ಟಿ ಮಾಡಬಹುದು. ಆದರೆ ಅದು ಈ ಚುನಾವಣಾ ಸಂದರ್ಭದಲ್ಲಿ ಉಚಿತವಲ್ಲ,…..

ವಾಸ್ತವವಾಗಿ ಮತದಾರರ ಗುಣಮಟ್ಟವೇ ಉತ್ತಮವಾಗಿಲ್ಲ. ಅವರನ್ನು ಸುಲಭವಾಗಿ ವಂಚಿಸಬಹುದು ಹಾಗೆಯೇ ಬಹಳಷ್ಟು ಮತದಾರರು ವಂಚಕರೇ ಆಗಿರುತ್ತಾರೆ.
ಬಹುತೇಕ ಮತದಾರರು ಜಾತಿ ಧರ್ಮ ಹಣ ಸಂಬಂಧಗಳು ವೈಯಕ್ತಿಕ ಹಿತಾಸಕ್ತಿಯನ್ನೇ ತಮ್ಮ ಮತದಾನದ ಹಕ್ಕಿನ ಮೂಲ ಮಾನದಂಡಗಳಾಗಿ ಪರಿಗಣಿಸುತ್ತಾರೆ. ಸಮಾಜದ, ದೇಶದ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಅವರ ಚಿಂತನೆ ಇರುವುದಿಲ್ಲ,…….

ಅದರ ಪರಿಣಾಮವೇ ಇಂದು ಪ್ರಜಾಪ್ರಭುತ್ವ ಚುನಾವಣಾ ಜನಪ್ರಿಯತೆಯ ಆಧಾರವೇ ಪ್ರಮುಖವಾಗಿ ಜನರ ಕಲ್ಯಾಣ ಹಿನ್ನೆಲೆಗೆ ಸರಿದಿದೆ. ಸಾಮಾಜಿಕ ಸಾಮರಸ್ಯ ಹಾಳಾದರು, ಟೋಲ್ ಸಂಗ್ರಹ ಕಿಲೋಮೀಟರ್ ಗಳಲ್ಲಿ ಹೆಚ್ಚಾದರು, ಬೆಲೆ ಏರಿಕೆ ಗಗನಕ್ಕೆ ತಲುಪಿದರು, ಶಿಕ್ಷಣ ಆರೋಗ್ಯ ದುಬಾರಿಯಾದರು, ಜೀವನ ನಿರ್ವಹಣೆ ಕಷ್ಟವಾದರು ಜನ ಮಾತ್ರ ವಿವೇಚನೆ ಇಲ್ಲದೆ ಹಣ ಹೆಂಡ ಕುಕ್ಕರ್ ಗಳಿಗೆ ತಮ್ಮನ್ನು ಮಾರಿ ಕೊಳ್ಳುತ್ತಾರೆ,…….

ಆದ್ದರಿಂದ ಭಾರತದ ಮತದಾರ ಇನ್ನೂ ನಿಜವಾದ ಪ್ರಜಾಪ್ರಭುತ್ವ ನಿರೀಕ್ಷಿಸುವ ಪ್ರಬುದ್ದತೆಯ ಮಟ್ಟ ತಲುಪಿಲ್ಲ ಎಂದು ನನಗನಿಸುತ್ತದೆ. ನಿಮ್ಮ ಅಭಿಪ್ರಾಯ ಇದಕ್ಕಿಂತ ಭಿನ್ನವಾಗಿದ್ದರೆ ಅದನ್ನೂ ಸ್ವಾಗತಿಸುತ್ತಾ,………

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್ ಕೆ.
9844013068……

error: No Copying!