ನವದೆಹಲಿ : ಉಗ್ರ ಸಂಘಟನೆಗಳು, ಗ್ಯಾಂಗ್ ಸ್ಟರ್ ಗಳು,ಹಾಗೂ ಮಾದಕವಸ್ತು ಮಾಫಿಯಾದ ಮಧ್ಯೆ ಇರುವ ಸಂಬಂಧಗಳ ಕುರಿತು ತನಿಖೆ ನಡೆಸಲು ರಾಷ್ಟ್ರೀಯ ತನಿಖಾ ದಳವು (ಎನ್‌ಐಎ) ಎಂಟು ರಾಜ್ಯಗಳ ಹಲವಡೆಗಳಲ್ಲಿ ಶೋಧ ಕಾರ್ಯ ನಡೆಸಿದೆ. ಪಂಜಾಬ್, ಮಹಾರಾಷ್ಟ್ರ, ದೆಹಲಿ, ಹರಿಯಾಣ, ಉತ್ತರ ಪ್ರದೇಶ, ರಾಜಸ್ತಾನ, ಗುಜರಾತ್ ಹಾಗೂ ಮಧ್ಯಪ್ರದೇಶಗಳಲ್ಲಿ ಶೋಧ ಕಾರ್ಯ, ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿ ಸೇರಿದಂತೆ ದೇಶದ ವಿವಿಧೆಡೆ ಉಗ್ರ ಚಟುವಟಿಕೆಗಳನ್ನು ನಡೆಸಲು, ದೇಶದ ಪ್ರಮುಖ ವ್ಯಕ್ತಿಗಳನ್ನು ಹತ್ಯೆ ಮಾಡಲು ಯುವಕರನ್ನು ನೇಮಿಸಿಕೊಳ್ಳುವ ಕೆಲವು ಗುಂಪುಗಳು ಭಾರತ ಹಾಗೂ ವಿದೇಶಗಳಲ್ಲಿ ಇವೆ. ಈ ಗುಂಪುಗಳು ತಮ್ಮ ಉಗ್ರ ಚಟುವಟಿಕೆಗಳಿಗಾಗಿ ಹಣ ಸಂಗ್ರಹಿಸುತ್ತಿವೆಯೇ ಎನ್ನುವ ಕುರಿತು ದೆಹಲಿ ಪೊಲೀಸರ ವಿಶೇಷ ತಂಡ ಕಳೆದ ವರ್ಷ ತನಿಖೆ ನಡೆಸಿತ್ತು. ಇವುಗಳ ಪೈಕಿ ಎರಡು ಪ್ರಕರಣಗಳನ್ನು ಎನ್‌ಐಎ ಮರು ತನಿಖೆಗೆ ಆಯ್ಕೆ ಮಾಡಿಕೊಂಡಿದೆ ಎನ್ನಲಾಗಿದೆ.