ಮತ್ತೆ ಶಿವರಾತ್ರಿ…….
ಶಿವ ಶಿವ ಶಿವ ಶಿವ ಶಿವ……..
( ಅಲ್ಲಾ – ಯೇಸು – ರಾಮ ಮುಂತಾದ ಎಲ್ಲಾ ರೂಪಗಳಿಗೂ ಅನ್ವಯಿಸಿ……..)
ನೆನಪಾಗುವೆ ನೀನು ಪ್ರತಿಕ್ಷಣವೂ……..
ಶಿವ ಮುಂಜಾನೆ – ಶಿವ ಮಧ್ಯಾಹ್ನ – ಶಿವ ಸಂಜೆ – ಶಿವರಾತ್ರಿ…….
ರೈತನೊಬ್ಬ ಸಾಲದ ಸುಳಿಗೆ ಸಿಲುಕಿ ಉರುಳಿಗೆ ತಲೆಕೊಟ್ಟಾಗ…….,
ಗೃಹಿಣಿಯೊಬ್ಬಳು ವರದಕ್ಷಿಣೆಯ ಬೆಂಕಿಗೆ ಆಹುತಿಯಾದಾಗ………,
ಹಸುಳೆಯೊಂದು ಅತ್ಯಾಚಾರಕ್ಕೆ ಒಳಗಾದಾಗ………,
ಜಾತಿ ವ್ಯವಸ್ಥೆಯ ಸುಳಿಗೆ ಸಿಲುಕಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಾಗ……….,
ಶಾಲಾ ಮಕ್ಕಳು ಅಪಘಾತಕ್ಕೆ ಒಳಗಾಗಿ ತೀರಿಕೊಂಡಾಗ…………,
ವೃದ್ಧರನ್ನು ಅನಾಥಾಶ್ರಮದಲ್ಲಿ ಕಂಡಾಗ………………,
ವಂಚಕರು ವಿಧಾನಸೌಧ – ಪಾರ್ಲಿಮೆಂಟಿನಲ್ಲಿ ಕುಳಿತಿರುವಾಗ…………,
ಸುಳ್ಳುಗಾರರು ಟಿವಿಯಲ್ಲಿ ಮಾತನಾಡುವಾಗ……..,
ಭ್ರಷ್ಟ ರು ಅಧಿಕಾರ ನಡೆಸುವಾಗ……….,
ಕಾಮಿಗಳು ಕಾವಿ ತೊಟ್ಟಿರುವಾಗ……….,
ಈ ನೆಲದ ಅನ್ನ ತಿಂದು ನೀರು ಕುಡಿದು ದೇಶದ್ರೋಹಿಗಳಾದಾಗ…….…,
ಅಸ್ಪೃಶ್ಯತೆಯ ಆಚರಣೆಯ ಭಾಗವಾಗಿ ಮನುಷ್ಯನನ್ನು ಮುಟ್ಟಿಸಿಕೊಳ್ಳಲೇ ಅಸಹ್ಯ ಪಡುವವರಿರುವಾಗ………,
ಕುಡಿಯುವ ನೀರಿಗೆ ಹೊಡೆದಾಡುತ್ತಿರುವಾಗ…………,
ತಿನ್ನುವ ಆಹಾರವನ್ನು ಕಲಬೆರಕೆ ಮಾಡುತ್ತಿರುವಾಗ……..,
ಸೈನಿಕರ ಪತ್ನಿಯರು ವಿಧವೆಯರಾಗುತ್ತಿರುವಾಗ…………,
ಮೋಸಗಾರರು ಜ್ಯೋತಿರ್ಲಿಂಗಗಳನ್ನು ಸುತ್ತುತ್ತಿರುವಾಗ……..,
ಕಪಟಿಗಳು ನಿನ್ನ ಹೆಸರಲ್ಲಿ ಉಪವಾಸ – ಜಾಗರಣೆ ಮಾಡುತ್ತಿರುವಾಗ…..,
ನೆನಪಾಗುವೆ ನೀನು ಶಿವ…….
ಆದರೆ,………….
ಶತಶತಮಾನಗಳಿಂದ ಬರುವೆಯೆಂದು ನಂಬಿಸಿ ಎಂದಿಗೂ ಬಾರದ ಮೋಸಗಾರ ನೀನೋ…..
ಅಥವಾ,
ನೀನು ಬರುವೆಯೆಂದು ಶತಶತಮಾನಗಳಿಂದ ಕಾಯುತ್ತಿರುವ ಮೂರ್ಖ ನಾನೋ……….
ಒಳ್ಳೆಯವರು ಒಳ್ಳೆಯವರಾಗಿ ಬದುಕುವುದೇ ಕಷ್ಟವಾಗುತ್ತಿರುವ ಸಂದರ್ಭದಲ್ಲಿ…….
ಒಂದಂತು ನಿಜ……..
ನೀನು ಪ್ರತ್ಯಕ್ಷವಾಗುವವರೆಗೂ,
ನಿನ್ನನ್ನು ನಂಬುವುದಿಲ್ಲ.
ನೀನು ಎಷ್ಟೇ ದೊಡ್ಡವನಾಗಿರು,
ನೀನು ಎಷ್ಟೇ ಎತ್ತರದಲ್ಲಿರು,
ನೀನು ಎಷ್ಟೇ ಶಕ್ತಿವಂತನಾಗಿರು,
ನೀನು ಎಷ್ಟೇ ಬುದ್ದಿವಂತನಾಗಿರು,
ನನ್ನಂತ ಸಾಮಾನ್ಯನ ಕಷ್ಟ ಸುಖ ನೋವು ನಲಿವುಗಳಿಗೆ ಸ್ಪಂದಿಸಿ ಸರಳವಾಗಿ ಸಹಜವಾಗಿ ಮಾರ್ಗದರ್ಶನ ಮಾಡುವವರೆಗೂ ,
ನೀನೊಂದು ಭ್ರಮೆ,
ನೀನೊಂದು ಕಲ್ಪನೆ,
ನೀನೊಂದು ಶಿಲೆ,
ನೀನೊಂದು ಗೊಂಬೆ,
ನೀನೊಂದು ಭಾವ,
ನೀನೊಂದು ತರ್ಕ,
ನೀನೊಂದು ಸಂಕೇತ,
ನೀನೆಂದಿಗೂ ವಾಸ್ತವವಾಗಲಾರೆ.
ಎಚ್ಚರಿಕೆ………..
( ಇದು ಕೇವಲ ಶಿವನಿಗೆ ಮಾತ್ರವಲ್ಲ. ಎಲ್ಲಾ ಧರ್ಮಗಳ ಎಲ್ಲಾ ದೇವರೆಂಬ ಭಾವಗಳಿಗೂ ಅನ್ವಯ.)
ಆಸ್ತಿಕ – ನಾಸ್ತಿಕತ್ವದ
ಪ್ರಯೋಗ – ಪ್ರಯೋಜನ…….
ಯೋಚಿಸಿ ನೋಡಿ………
ದೇವರು ಭಕ್ತಿ ನಂಬಿಕೆ ಜ್ಯೋತಿಷ್ಯ ಪ್ರಾರ್ಥನೆ ನಮಾಜು ವಿಧ ವಿಧದ ಪೂಜೆ ಹೋಮ ಹವನ ತೀರ್ಥಯಾತ್ರೆ, ಮೆಕ್ಕಾ ಪ್ರವಾಸ, ವ್ಯಾಟಿಕನ್ ಭೇಟಿ, ಕಾಶಿ ಯಾತ್ರೆ ಇತ್ಯಾದಿಗಳನ್ನು ಅತ್ಯಂತ ಶ್ರದ್ದೆ ಪ್ರಾಮಾಣಿಕತೆ ನಿಷ್ಠೆಯಿಂದ ನೀವು ನೆರವೇರಿಸಿದರೆ ನಿಮಗೆ ಒಂದಷ್ಟು ಮಾನಸಿಕ ನೆಮ್ಮದಿ ಆತ್ಮವಿಶ್ವಾಸ ಮತ್ತು ಸಂಕಷ್ಟ ಸಮಯದಲ್ಲಿ ಸ್ವಲ್ಪ ಧೈರ್ಯ ದೊರೆಯಬಹುದು ಅಥವಾ ದೊರೆಯುತ್ತದೆ.
ಇದು ಸಾರ್ವತ್ರಿಕವಲ್ಲ. ಅವರವರ ದೃಷ್ಟಿಕೋನ, ಸಂದರ್ಭ, ಕಾಕಾತಳೀಯ, ಆಯಾ ದೇಶದ ಪರಿಸ್ಥಿತಿ ಅವಲಂಬಿಸಿರುತ್ತದೆ…..
ಆದರೆ ಇದಕ್ಕೆ ಭಿನ್ನವಾಗಿ………..
ದೇವರು ಎಂಬ ಯಾವ ವ್ಯಕ್ತಿ ಅಥವಾ ಶಕ್ತಿಯೂ ಇಲ್ಲ, ಯಾವುದೇ ಅತಿಮಾನುಷ ಪ್ರಭಾವ ಅಸ್ತಿತ್ವದಲ್ಲಿ ಇಲ್ಲ. ಇರುವುದು ಸ್ವಾಭಾವಿಕ ಸೃಷ್ಟಿ ಮಾತ್ರ. ಗಾಳಿ ನೀರು ಬೆಳಕು ಭೂಮಿ ಆಹಾರ ಪರಿಸರ ಜೀವಿಗಳು ಸಂವಿಧಾನಗಳು ಇತ್ಯಾದಿ…,
ನಮ್ಮ ಎಲ್ಲಾ ಒಳಿತು ಕೆಡಕುಗಳು ನಾವು ಹುಟ್ಟಿದ ಪ್ರದೇಶ, ಅಲ್ಲಿನ ಒಟ್ಟು ವಾತಾವರಣ, ರಾಜಕೀಯ ಸಾಮಾಜಿಕ ವ್ಯವಸ್ಥೆ, ತಂದೆ ತಾಯಿಗಳ ಗುಣಮಟ್ಟ, ನಮ್ಮ ದೇಹ ಮತ್ತು ಮನಸ್ಸಿನ ಸಾಮರ್ಥ್ಯ ಇವುಗಳನ್ನೇ ಅವಲಂಬಿಸಿರುತ್ತದೆ. ಯಾವುದೇ ಹೊರಗಿನ ದೈವತ್ವದ ಶಕ್ತಿ ನಮ್ಮ ಮೇಲೆ ನಿಯಂತ್ರಣ ಹೊಂದಿಲ್ಲ…..,
ನಮ್ಮ ಎಲ್ಲಾ ಕಷ್ಟಗಳು ಅಂದರೆ ಮುಖ್ಯವಾಗಿ ಬಡತನ ನಿರುದ್ಯೋಗ ವಿವಾಹ ಆಗದಿರುವುದು ಅನಾರೋಗ್ಯ ಅಪಘಾತ ಅನಕ್ಷರತೆ, ಅಕಾಲಿಕತೆ, ಕೌಟುಂಬಿಕ ಕಲಹ, ಸೋಲು, ನಷ್ಟ…..,
ಹಾಗೆಯೇ,
ಅಧಿಕಾರ, ಶ್ರೀಮಂತಿಕೆ, ಜನಪ್ರಿಯತೆ, ಸಾಧನೆ, ಯಶಸ್ಸು ಎಲ್ಲವೂ ನಮ್ಮ ಒಟ್ಟು ಸಾಮಾಜಿಕ ವ್ಯವಸ್ಥೆಯ ಮತ್ತು ನಮ್ಮ ಸಾಮರ್ಥ್ಯದ ಪ್ರತಿಫಲನ,
ಅದನ್ನು ಅಗೋಚರ ಶಕ್ತಿ ನಿಯಂತ್ರಿಸುತ್ತಿಲ್ಲ. ನಾವೇ ಸ್ವತಃ ನಮ್ಮ ಸಂಪೂರ್ಣ ಶಕ್ತಿ ಸಾಮರ್ಥ್ಯ ವಿವೇಚನೆ ಬಳಸಿ ಇದನ್ನು ನಿರ್ವಹಿಸಬೇಕು. ಕೆಲವೊಮ್ಮೆ ಯಶಸ್ಸು, ಹಲವೊಮ್ಮೆ ಸೋಲು ಎಂಬ ಫಲಿತಾಂಶ ಸಹಜ ಅದನ್ನು ಹಾಗೆಯೇ ಅನುಭವ ಎಂದು ಸ್ವೀಕರಿಸಬೇಕು…..,
ಜ್ಞಾನ ಮತ್ತು ಅರಿವಿನ ಬೆಳಕಲ್ಲಿ ನಮ್ಮ ಪರಿಸ್ಥಿತಿಯನ್ನು ನಿಭಾಯಿಸಬೇಕು ಮತ್ತು ಬಂದದ್ದನ್ನು ಸ್ವೀಕರಿಸಿ ಅದು ಒಪ್ಪಿಗೆಯಾಗದಿದ್ದಲ್ಲಿ ಅದರ ಬದಲಾವಣೆಗೆ ಪ್ರಯತ್ನಿಸಬೇಕು ಎಂಬ ತಿಳಿವಳಿಕೆ ನಿಮಗೆ ಮೂಡಿದ್ದೇ ಆದರೆ, ಈ ಭಕ್ರಿ ನಂಬಿಕೆ ಮುಂತಾದ ಭಾವನೆಗಳಿಗಿಂತ ಹತ್ತು ಪಟ್ಟು ಹೆಚ್ಚು ಮಾನಸಿಕ ಧೈರ್ಯ ಸಮತೋಲನ ಆತ್ಮವಿಶ್ವಾಸ ನಿಮ್ಮದಾಗುತ್ತದೆ.
ಇದು ಸ್ವಲ್ಪ ಕಷ್ಟ. ಆದ್ದರಿಂದಲೇ ಬಹಳಷ್ಟು ಜನ ಪೂಜೆ ಹವನ ನಮಾಜು ಪ್ರಾರ್ಥನೆಗಳ ಮೊರೆ ಹೋಗಿ ಸುಲಭದಲ್ಲಿ ದೇವರ ಮೇಲೆ ಭಾರ ಹಾಕಿ ಪಲಾಯನ ಮಾಡುತ್ತಾರೆ.
ಅದಕ್ಕೆ ಬದಲು ಇಡೀ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸಿ ಹೆಚ್ಚಿನ ನಿರೀಕ್ಷೆಗಳಿಲ್ಲದೆ, ಭಾವನಾತ್ಮಕ ಮೂರ್ಖತನಕ್ಕೆ ಒಳಗಾಗದೆ, ಫಲಿತಾಂಶ ಆಧರಿಸಿ ತೀರ್ಮಾನಕ್ಕೆ ಬರದೆ ವಿವೇಚನೆ ಬಳಸಿ ವರ್ತಿಸಿದರೆ ದೇವರ ಮತ್ತು ದೇವಸ್ಥಾನದ ನಂಬಿಕೆ ಮತ್ತು ಪೂಜೆಗಿಂತ ಉತ್ತಮ ಜೀವನಮಟ್ಟ ನಿಮ್ಮದಾಗುತ್ತದೆ.
ಒಂದು ವೇಳೆ ದೇವರು ಇದ್ದೇ ಇರುವನು ಎಂಬ ನಂಬಿಕೆ ನಿಮ್ಮದಾಗಿದ್ದರೂ ಅದನ್ನು ಮನಸ್ಸಿನ ಮೂಲೆಯಲ್ಲಿ ಅಥವಾ ಅಂತರಂಗದಲ್ಲಿ ಗುಪ್ತವಾಗಿ ಇಟ್ಟುಕೊಂಡು ಎರಡನೇ ಮಾರ್ಗ ಅನುಸರಿಸಿ. ನಿಮ್ಮ ವ್ಯಕ್ತಿತ್ವ ನಿಮಗರಿವಿಲ್ಲದೇ ಮೇಲ್ದರ್ಜೆಗೆ ಏರುತ್ತದೆ……
ದೇವರೇ ಇದ್ದರು ಶ್ರಮಜೀವಿಗಳಿಗೆ ಒಳ್ಳೆಯವರಿಗೆ ಯಾವುದೇ ಪೂಜೆ ಪುನಸ್ಕಾರ ಮಾಡದಿದ್ದರೂ ದೇವರೇನು ಕೆಟ್ಟದ್ದು ಮಾಡುವುದಿಲ್ಲ.
ಆದ್ದರಿಂದ ನಮ್ಮ ಎಲ್ಲಾ ಸ್ಥಿತಿ ಗತಿಗಳಿಗೆ ನಾವೇ ಕಾರಣ.
ದೇವರ ಮೇಲಿನ ನಂಬಿಕೆಯಿಂದ ಒಂದಷ್ಟು ಲಾಭಗಳು ಇರುವುದು ನಿಜ.
ನಮಗಿಂತ ಮೇಲೆ ಯಾರೋ ಒಬ್ಬ ಶಕ್ತಿಯುತ ವ್ಯಕ್ತಿ ಇದ್ದಾನೆ ಎಂಬ ನಂಬಿಕೆ ಒಂದಷ್ಟು ಮಾನಸಿಕ ನೆಮ್ಮದಿ ನೀಡಬಹುದು.
ಸಂಕಷ್ಟದ ಸಮಯದಲ್ಲಿ ಮನುಷ್ಯ ಪ್ರಯತ್ನ ವಿಫಲವಾದಾಗ ಅಗೋಚರ ಶಕ್ತಿ ಕಾಪಾಡಬಹುದು ಎಂಬ ದೂರದ ಆಸೆ ಸ್ವಲ್ಪ ಸಮಾಧಾನ ನೀಡಬಹುದು.
ದೇವಸ್ಥಾನದ ಪ್ರಯಾಣ ಮತ್ತು ದೇವ ಮಂದಿರದ ಪ್ರಶಾಂತತೆ ಒಂದಷ್ಟು ಭರವಸೆ ಕೊಡಬಹುದು.
ದೇವರ ಬಗೆಗಿನ ಹಾಡುಗಳು ಭಜನೆಗಳು ಕಥೆಗಳು ಪುಸ್ತಕಗಳು ಮನಸ್ಸಿನ ಆತ್ಮವಿಶ್ವಾಸ ಹೆಚ್ಚಿಸಬಹುದು.
ದೇವರ ಬಗೆಗಿನ ಭಯ,
ವ್ಯಕ್ತಿಗಳು ತಪ್ಪು ಮಾಡುವುದನ್ನು ಕಡಿಮೆ ಮಾಡಿ ಸಮಾಜದ ಶಾಂತಿಗೆ ಒಂದಷ್ಟು ಕೊಡುಗೆ ನೀಡಬಹುದು.
ಮಂದಿರ ಮಸೀದಿ ಚರ್ಚು ಗುರುದ್ವಾರಗಳು ಮತ್ತು ಅದಕ್ಕೆ ಸಂಬಂಧಿಸಿದ ಆಚರಣೆಗಳು ಹಲವು ಜನರಿಗೆ ಉದ್ಯೋಗ ನೀಡಬಹುದು.
ದೇವರ ನಂಬಿಕೆ ಹಬ್ಬದ ಸಂಭ್ರಮ ಆಚರಿಸಲು ಸಹಕಾರಿಯಾಗಬಹುದು.
ಕೆಲವು ಆಕಸ್ಮಿಕಗಳು ಕೆಲವರಿಗೆ ಅದೃಷ್ಟವಾಗಿಯೂ ಕೆಲವರಿಗೆ ದುರಾದೃಷ್ಟವಾಗಿಯೂ ಕಾಡಬಹುದು. ಅದನ್ನು ದೇವರ ಕೃಪೆಯೆಂದು ಭಾವಿಸಲಾಗುತ್ತದೆ.
ಹೀಗೆ ಕೆಲವು ನಂಬಿಕೆ ಆಧಾರಿತ ಗಾಳಿ ಗೋಪುರವು ದೇವರ ಅಸ್ತಿತ್ವವನ್ನು ಸಮರ್ಥಿಸಬಹುದು.
ಆದರೆ ಈ ಎಲ್ಲವೂ ನಂಬಿಕೆಯೇ ಹೊರತು ವಾಸ್ತವವಲ್ಲ.
ನೀವು ಅನಾದಿ ಕಾಲದಿಂದ ಈ ಕ್ಷಣದವರೆಗೆ ಆದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿ.
ಬೆತ್ತಲೆಯಿಂದ ಜೀನ್ಸ್ ವರೆಗೆ, ಕಾಲ್ನಡಿಗೆಯಿಂದ ವಿಮಾನದವರೆಗೆ,
ಗೆಡ್ಡೆ ಗೆಣಸುಗಳಿಂದ ಕಬಾಬ್ ವರೆಗೆ, ಔಷಧೀಯ ಸಸ್ಯಗಳಿಂದ ಆಸ್ಪತ್ರೆಯ ವೆಂಟಿಲೇಟರ್ ವರೆಗೆ,
ಗುಂಪು ಆಡಳಿತದಿಂದ ಪ್ರಜಾಪ್ರಭುತ್ವದವರೆಗೆ,
ಪಾರಿವಾಳಗಳಿಂದ ಇಂಟರ್ ನೆಟ್ ವರೆಗೆ ಎಲ್ಲವೂ ಸೃಷ್ಟಿಯ ಪ್ರಾರಂಭದಲ್ಲೇ ಆಗದೆ ಮನುಷ್ಯನ ಅಗಾಧ ಅನುಭವದಿಂದ ಹಂತ ಹಂತವಾಗಿ ಬೆಳವಣಿಗೆ ಹೊಂದಿದೆ. ದೇವರ ಸೃಷ್ಟಿಯೇ ಆಗಿದ್ದರೆ ಎಲ್ಲವನ್ನೂ ಸ್ಮಾರ್ಟ್ ಆಗಿ ಮೊದಲೇ ಪ್ಲಾನ್ ಮಾಡಬೇಕಿತ್ತು.
ಅನಾದಿ ಕಾಲದಲ್ಲಿ ಒಬ್ಬರಿಗೊಬ್ಬರು ಕೊಂದು ಬಲಿಷ್ಠರು ಮಾತ್ರ ಬದುಕುವ ವ್ಯವಸ್ಥೆಯಿಂದ ಅನೇಕ ಯುದ್ಧಗಳನ್ನು ಮಾಡಿ ಕೋಟಿ ಕೋಟಿ ಜನರ ಹತ್ಯೆಗಳು ನಡೆದು ಈಗ ಒಂದಷ್ಟು ರಕ್ಷಣೆಯ ವ್ಯವಸ್ಥೆಯಲ್ಲಿ ನಾವಿದ್ದೇವೆ.
ಇಲ್ಲಿಯೂ ದೇವರ ಪಾತ್ರ ಕಾಣುವುದಿಲ್ಲ.
ದೇವರ ಶಕ್ತಿಯಿಲ್ಲದೆ ಒಂದು ಹುಲ್ಲು ಕಡ್ಡಿಯೂ ಚಲಿಸುವುದಿಲ್ಲ ಎಂದು ಭಕ್ತರು ಹೇಳಿದರೆ, ದೇವರಿಗೆ ಒಂದು ಹುಲ್ಲು ಕಡ್ಡಿಯನ್ನು ಕದಲಿಸುವ ಶಕ್ತಿ ಇಲ್ಲ ಎಂದು ಕೆಲವರು ಹೇಳುತ್ತಾರೆ. ಏಕೆಂದರೆ ದೇವರೇ ಇಲ್ಲ.
ಜ್ಞಾನದಿಂದ ಕುತೂಹಲಕ್ಕಾಗಿ ಹುಡುಕಾಟ ನಡೆಸಿದಾಗ ಬೇರೆ ಬೇರೆ ರೂಪದ ಶಕ್ತಿಗಳು ಸಿಗುತ್ತವೆಯೇ ಹೊರತು ಸಾಮಾನ್ಯ ಜನ ನಂಬಿರುವ ಕೇಂದ್ರೀಕೃತ ಮತ್ತು ಸಮಸ್ತ ಸೃಷ್ಟಿಯ ಮೇಲೆ ನಿಯಂತ್ರಣ ಇರುವ ಶಕ್ತಿ ಗೋಚರಿಸುವುದಿಲ್ಲ.
ಕುರಾನ್ ಬೈಬಲ್ ವೇದ ಉಪನಿಷತ್ತುಗಳು ಮತ್ತು ಇತರ ಧರ್ಮ ಗ್ರಂಥಗಳು ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತವೆ. ಆದರೆ ಆ ಯಾವ ಉತ್ತರವೂ ಸರಳವಾಗಿ ಸಹಜವಾಗಿ ನೇರವಾಗಿ ಸಾಮಾನ್ಯ ತಿಳುವಳಿಕೆಗೆ ನಿಲುಕದೆ ಬಹುತೇಕ ಕಾಲ್ಪನಿಕ ಪಲಾಯನವಾದವೇ ಆಗಿರುತ್ತದೆ. ದೇವರನ್ನು ತೋರಿಸುವ ಪ್ರಯತ್ನ ಮಾತ್ರ ಸಫಲವಾಗಿಲ್ಲ.
ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲೆ ಎನ್ನುವ ಗ್ರಂಥಗಳು, ಅದರ ರಚನಾಕಾರರು ಮತ್ತು ಅದನ್ನು ಇಂದಿಗೂ ಪ್ರತಿಪಾದಿಸುತ್ತಿರುವ ಧಾರ್ಮಿಕ ಪ್ರತಿನಿಧಿಗಳು ಖಂಡಿತ ಭ್ರಮಾಧೀನರಾಗಿರುತ್ತಾರೆ.
ಅವರಿಗೆ ಕೇಳಿ, ಅಪಘಾತ ಅನಾರೋಗ್ಯ ಕುಟುಂಬ ಕಲಹ ಅಧಿಕಾರ ಬಡತನ ದೌರ್ಭಾಗ್ಯ ಮದುವೆ ನಿರುದ್ಯೋಗ ಎಲ್ಲಕ್ಕೂ ಕಾರಣಗಳನ್ನು ಮತ್ತು ಅದಕ್ಕೆ ಪರಿಹಾರವನ್ನು ಸೂಚಿಸುತ್ತಾರೆ. ನಮಗೆ ಗೊತ್ತಿಲ್ಲ ಎಂದು ಹೇಳುವುದೇ ಇಲ್ಲ.
ಹಾಗಾದರೆ ಇದು ಸಾಧ್ಯವೇ. ಇದು ಸಾಧ್ಯವಾಗಿದಿದ್ದರೆ ಇಡೀ ವಿಶ್ವವೇ ಸ್ವರ್ಗವಾಗುತ್ತಿತ್ತು.
ಇದನ್ನು ಮರೆಮಾಚಲು ವಿಧಿ ಲಿಖಿತ – ಹಣೆ ಬರಹ ಎಂಬ ಮತ್ತೊಂದು ಪಲಾಯನವಾದದ ಸೂತ್ರ ಮುಂದಿಡುತ್ತಾರೆ.
ಹುಟ್ಟುವ ಪ್ರತಿ ಜೀವಿಗೂ ಹಣೆ ಬರಹ ಬರೆಯುತ್ತಾ ಇರಲು ದೇವರಿಗೆ ಸಾಧ್ಯವೇ ?
ವಿಶ್ವದ ಪ್ರತಿ ನಾಗರಿಕತೆಯು ಒಂದೊಂದು ದೇವರನ್ನು ಸೃಷ್ಟಿಸಿರುವುದು ಮನುಷ್ಯನೇ ದೇವರ ಸೃಷ್ಟಿಕರ್ತ ಎಂಬುದನ್ನು ಸೂಚಿಸುತ್ತದೆಯಲ್ಲವೇ.
ಜ್ಞಾನವೆಂಬುದು ನಿಂತ ನೀರಲ್ಲ ಅದು ಹರಿಯುವ ಪ್ರವಾಹ ಎಂಬ ಸೂಕ್ಷ್ಮ ತಿಳಿವಳಿಕೆ ಅವರಿಗೆ ಇರುವುದಿಲ್ಲ. ಇದ್ದರೂ ಅದನ್ನು ಒಪ್ಪಿಕೊಂಡರೆ ಅವರ ಅಸ್ತಿತ್ವವೇ ಕುಸಿಯುತ್ತದೆ.
ಸಾವಿನ ಭಯ, ಹಣ ಅಧಿಕಾರ ಸಿಗುವ ದುರಾಸೆ, ದಾರಿದ್ರ್ಯ ಸ್ಥಿತಿಗೆ ತಲುಪುವ ಆತಂಕ, ಸಂಕೀರ್ಣ ಜೀವನ ಶೈಲಿ, ಯಶಸ್ಸನ್ನು ತಪ್ಪಾಗಿ ಅರ್ಥೈಸಿರುವುದು, ಪ್ರಬುದ್ದತೆಯ ಮಟ್ಟ ಕುಸಿದು ಸ್ವತಂತ್ರ ಕ್ರಿಯಾತ್ಮಕ ಚಿಂತನೆಯ ಕೊರತೆ ದೇವರ ಬಗ್ಗೆ ನಾವು ನಿಷ್ಪಕ್ಷಪಾತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗತ್ತಿಲ್ಲ.
ಇದನ್ನೆಲ್ಲಾ ಮೀರಿ ಯೋಚಿಸಿದರೆ ದೇವರ ಇರುವಿಕೆ ಮತ್ತು ಇಲ್ಲದಿರುವಿಕೆಯ ಸ್ಪಷ್ಟ ಚಿತ್ರಣ ಸಿಗುತ್ತದೆ.
ನಿಮ್ಮ ನಂಬಿಕೆ ಮತ್ತು ಅಭಿಪ್ರಾಯ ಗೌರವಿಸುತ್ತಾ…….
ಇದು ದೇವರ ಬಗೆಗಿನ ಟೀಕೆಯಲ್ಲ. ಮನುಷ್ಯನ ವ್ಯಕ್ತಿತ್ವದ ಅವಲೋಕನ ಮತ್ತು ವಿಕಾಸ ವಾದದ ವಿಮರ್ಶೆ ಹಾಗು ಅನುಭವ ಅನುಭಾವಗಳ ಅಭಿಪ್ರಾಯ………
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ ಪರಿವರ್ತನೆಗಾಗಿ…….
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
9844013068…………..