ಉಡುಪಿಯ ಪ್ರೊ. ಕೆ. ರಾಘವ ನಂಬಿಯಾರ್, ಮಲ್ಪೆಯ ಪ್ರೊ. ಎಂ. ಎಲ್. ಸಾಮಗ, ಕಿನ್ನಿಗೋಳಿಯ ಡಿ. ಎಸ್. ಶ್ರೀಧರ್, ಮಂಗಳೂರಿನ ಡಾ. ಎಂ. ಪ್ರಭಾಕರ ಜೋಷಿ, ಮೂಲ್ಕಿಯ ಗಣೇಶ ಕೊಲೆಕಾಡಿ, ಕನ್ಯಾನದ ರಾಜಗೋಪಾಲ ಭಟ್, ವರ್ಕಾಡಿಯ ತಾರಾನಾಥ ಬಲ್ಯಾಯ, ಡಾ. ಮನೋರಮಾ ಬಿ. ಎನ್., ಶಿವರಾಮ ಪಣಂಬೂರು, ಮುನಿರಾಜ ರೆಂಜಾಳ, ಕಾರ್ಕಳದ ಅಜಿತ್ ಕುಮಾರ್ ಜೈನ್, ಪಾಂಡುರಂಗ ಠಾಕೂರ್, ಪ್ರೊ. ಪ್ರಭಾಕರ ಶಿಶಿಲ, ಪ್ರೊ. ಕೇಶವ ಬಂಗೇರ, ಪ್ರೊ. ನಾಗವೇಣಿ ಮಂಚಿ, ಕಾಸರಗೋಡಿನ ನಾರಾಯಣ ಮಣಿಯಾಣಿ ಬೆಳ್ಳಿಗೆ, ಪ್ರೊ. ಪದ್ಮನಾಭ ಪೂಜಾರಿ, ಪ್ರೊ. ಪ್ರಕಾಶ್ಚಂದ್ರ ಶಿಶಿಲ, ಅಂಡಾಲ ದೇವಿಪ್ರಸಾದ್ ಶೆಟ್ಟಿ, ಪ್ರೊ. ಪುರುಷೋತ್ತಮ ಬಿಳಿಮಲೆ, ಪ್ರೊ. ರಾಜೇಶ್ ಬೆಜ್ಜಂಗಳ, ಪ್ರೊ. ಮೋಹನ ಕುಂಟಾರು, ಪ್ರೊ. ಮಾಧವ ಪೆರಾಜೆ… ಇವರೆಲ್ಲ ನಮ್ಮ ನಾಡಿನ ಹೆಮ್ಮೆಯ, ಅಭಿಮಾನದ ಯಕ್ಷಗಾನದ ಘನ ವಿದ್ವಾಂಸರು. ಈ ಪಟ್ಟಿ ಹೀಗೆಯೇ ಇನ್ನೂ ಉದ್ದ ಬೆಳೆಯುತ್ತದೆ. ನಮ್ಮ ನಡುವೆಯೇ ಇಷ್ಟೆಲ್ಲಾ ಮಂದಿ ಯಕ್ಷಗಾನದ ಹಿರಿಯ, ಘನ ವಿದ್ವಾಂಸರಿರುವಾಗ ಆರೆಸ್ಸೆಸ್ ಕಾರ್ಯಕರ್ತ ಎಂಬ ಏಕೈಕ ಕಾರಣಕ್ಕೆ ರೋಹಿತ್ ಚಕ್ರತೀರ್ಥರಂಥವರನ್ನು ಯಕ್ಷಗಾನ ಸಮ್ಮೇಳನಕ್ಕೆ ದಿಕ್ಸೂಚಿ ಭಾಷಣ ಮಾಡಲು ಆಯ್ಕೆ ಮಾಡಿರುವುದು ಅಸಮರ್ಥನೀಯ ಮತ್ತು ದುರದೃಷ್ಟಕರವಾಗಿದೆ.
ಧ್ವೇಷವನ್ನೇ ಉಸಿರಾಡುವುದು, ಸುಳ್ಳುಗಳನ್ನೇ ಹೇಳುವುದು, ತಮಗಾಗದ ಮಹಾತ್ಮರ, ಧೀಮಂತರ ಚಾರಿತ್ರ್ಯಹರಣ ಮಾಡುವುದು, ನಿಜವಾದ ಇತಿಹಾಸವನ್ನು ತಮಗೆ ಬೇಕಾದಂತೆ ತಿರುಚುವುದು ಮತ್ತು ಅಸಹ್ಯ ರಾಜಕಾರಣ ಮಾಡುವುದು ಯೋಗ್ಯತೆಯಾಗಲೀ, ಅರ್ಹತೆಯಾಗಲಿ ಅಲ್ಲ, ಆಗಬಾರದು.
ಕಲೆ, ಸಾಹಿತ್ಯ ಇತ್ಯಾದಿ ಕ್ಷೇತ್ರಗಳನ್ನೂ ಆರೆಸ್ಸೆಸ್ ಪರಿವಾರದ ಕೊಳಕು ರಾಜಕೀಯ ಗುರಿ ಸಾಧನೆಗೆ ದುರ್ಬಳಕೆ ಮಾಡುವುದು ಅತ್ಯಂತ ಖಂಡನೀಯ.
ಯಕ್ಷಗಾನ ಕ್ಷೇತ್ರದಲ್ಲಿ ಅಧ್ಯಯನ, ಸಂಶೋಧನ ನಡೆಸಿರುವ ಹಲವಾರು ಮಂದಿ ವಿದ್ವಾಂಸರು ತೆಂಕು ಮತ್ತು ಬಡಗಿನಲ್ಲಿ ಇರುವಾಗ, ರೋಹಿತ್ ಚಕ್ರತೀರ್ಥರಂಥವರನ್ನು ಯಕ್ಷಗಾನ ಸಮ್ಮೇಳನಕ್ಕೆ ದಿಕ್ಸೂಚಿ ಭಾಷಣ ಮಾಡಲು ಆಯ್ಕೆಮಾಡಿ ಆಮಂತ್ರಿಸಿರುವುದು ಬಿಜೆಪಿ ಸರಕಾರ ಇಡೀ ಯಕ್ಷಗಾನ ಕ್ಷೇತ್ರಕ್ಕೆ ಮಾಡಿದ, ಮಾಡುವ ಅಪಮಾನವಾಗಿದೆ, ಅಕ್ಷಮ್ಯವಾಗಿದೆ ಎಂದು ಜನಪರ ಕಾರ್ಯಕರ್ತ ಶ್ರೀರಾಮ ದಿವಾಣ ಉಡುಪಿ ಇವರು ಆರೋಪಿಸಿದ್ದಾರೆ