ಸಣ್ಣ ಮುಳ್ಳು ಕಂತಿದ ನೋವು
ಮತ್ತೆ ಏರಿದ ಜ್ವರ ಹಾಗೇ ಇಳಿಯಿತು
ಕಳೆದವು ತಿಂಗಳುಗಳು, ಮರೆಯಿತು ನೋವು
ಆದರೆ ಈಗ ನ್ಯಾಯವೇ ಈ ಸಾವು?
ಸಹಸ್ರದ ಇತಿಹಾಸವಿದೆ ಈ ಹೃದಯ ಮಿಡಿತಕ್ಕೆ
ಈ ದೇಹಕ್ಕಿರಬಹುದಿದು ಚೊಚ್ಚಲ ಹೃದಯ
ಆದರೂ ಕಾಲ,ಎಲ್ಲೆ ಮೀರಿದ್ದದರ ಬಾಂಧವ್ಯ
ಎಲ್ಲ ನೋವು, ಕಷ್ಟ ಸಹಿಸಿತ್ತು ಈ ಗಟ್ಟಿ ಹೃದಯ
ಅಯ್ಯೋ! ಯಾಕೆ ಈ ಆಘಾತ?
ಹೆದರಿತೇ ಬಂಡೆಯಂತಿದ್ದ ಹೃದಯ ಆ ಮುಳ್ಳ ನೋವಿಗೆ?
ಇನ್ನೆಷ್ಟು ಕಾಲ ಬಡಿಯಬೇಕಿತ್ತು, ತನ್ನವರಿಗಾಗಿ ಅದೆಷ್ಟು ದುಡಿಯಬೇಕಿತ್ತು
ಅವಕಾಶವೇ ನೀಡದೆ ಒತ್ತಾಯದಂತೆ ಕಂತಿದ ಮುಳ್ಳಿಗೆ ದೂರೋಣವೇ?
ಈಗ ಉಳಿದಿಲ್ಲವಲ್ಲ ಬಡ ಹೃದಯದ ಪರ ಸಾಕ್ಷಿ, ಆಧಾರ.
ಹಾಗಾದರೆ ಮುಳ್ಳು ಕಂತಿಸಿದರೇ? ಚಿಂತಿಸಬೇಕಾಗಿದೆ….
ನಾವು ನಂಬಿದವರೇ ನಮ್ಮ ಹಾದಿಗೆ ಮುಳ್ಳಾದರೇ?
ಯೋಚಿಸಿ ಫಲವಿಲ್ಲ, ಹಾಗೆಯೇ ಇದೆ ವ್ಯವಸ್ಥೆ
ಕಂತಿಸಿದವರ ಕಟ್ಟಾಳುಗಳೂ ಕಂತಿಸಿಕೊಂಡಿದ್ದಾರಲ್ಲಾ ಈ ಕಪಟ ಅರಿಯದೆ;
ಅವರಿಗಾಗಿ ಘಾಸಿಗೊಂಡ ಈ ಹೃದಯ ಮರುಗಿದೆ..
-ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ