ಪ್ರಾಕೃತಿಕ ಸೌಂದರ್ಯ…….
ಭೂ ಮಂಡಲದಲ್ಲಿ ಭೇದಿಸಲಾಗದ ಅತ್ಯಂತ ಸುಂದರ ನಿಗೂಢ ಪ್ರದೇಶಗಳು ಈಗಲೂ ಎಷ್ಟೋ ಇವೆ. ಆದರೆ ಆಧುನಿಕ ಕಾಲದ ನಗರಗಳು ನಿರ್ಮಾಣವಾದ ನಂತರವೂ ಯಾವ ದೇಶದ ಯಾವ ನಗರ ಈಗಲೂ ಅತ್ಯಂತ ಸುಂದರವಾಗಿದೆ ಎಂಬ ಕುತೂಹಲ ಎಲ್ಲರಿಗೂ ಇರುತ್ತದೆ.
ಜಗತ್ತಿನ ಅತ್ಯಂತ ಸುಂದರ ನಗರ ಯಾವುದಿರಬಹುದು……..
ಕೃತಕವಲ್ಲದ, ಶ್ರೀಮಂತಿಕೆಯ ಪ್ರದರ್ಶನವಿಲ್ಲದ, ತುಂಬಾ ಆಧುನಿಕತೆಯ ಸ್ಪರ್ಶವಿಲ್ಲದ, ಸ್ವಾಭಾವಿಕ ಸೌಂದರ್ಯದ ಆಧಾರದಲ್ಲಿ ಯಾವ ನಗರ ಹೆಚ್ಚು ಮನಮೋಹಕವಾಗಿರಬಹುದು………..
ಸ್ವಿಟ್ಜರ್ಲೆಂಡ್, ಆಸ್ಟ್ರಿಯಾ, ಫ್ರಾನ್ಸ್, ವೆನಿಸ್, ನ್ಯೂಜಿಲೆಂಡ್, ಆಸ್ಟ್ರೇಲಿಯಾ, ಕಾಶ್ಮೀರ, ಭೂತಾನ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಅಮೆರಿಕಾದ ಕೆಲ ರಾಜ್ಯಗಳು, ಐರ್ಲೆಂಡ್, ನಾರ್ವೆ ಹೀಗೆ ಅನೇಕ ಹೆಸರುಗಳಿರಬಹುದೇ……..!!
ಸೌಂದರ್ಯ ಮೂಲಭೂತವಾಗಿ ಅವರವರ ಆಯ್ಕೆಗಳಿಗೆ ಮತ್ತು ಮನೋಭಾವಕ್ಕೆ ಸಂಬಂಧಿಸಿದ್ದು. ತಮ್ಮ ಊರಿನಿಂದ ಪ್ರಾರಂಭವಾಗಿ,
ಹಚ್ಚ ಹಸುರಿನ, ದಟ್ಟ ಮಳೆಯ, ಹಿಮಾಚ್ಛಾದಿತ ಪ್ರದೇಶದ, ಮರಳುಗಾಡಿನ, ಬಯಲು ಪ್ರದೇಶದ, ಬೆಟ್ಟ ಗುಡ್ಡಗಳ ಯಾವುದೋ ಪ್ರಕಾರದ ಸ್ಥಳ ಕೆಲವರಿಗೆ ಇಷ್ಟವಾಗಬಹುದು. ಅದಕ್ಕೆ ನಿರ್ಧಿಷ್ಟ ಕಾರಣವೇನೂ ಇಲ್ಲ.
ಆದರೂ ಒಂದು ಮಗುವಿನ ಮುಗ್ಧತೆಯಿಂದ ಈ ಬಗ್ಗೆ ಸ್ವಲ್ಪ ವಿಚಾರಣೆ ಮಾಡಿದಾಗ ತಿಳಿದು ಬಂದ ಮಾಹಿತಿಯ ಪ್ರಕಾರ…….
ವಿಶ್ವದ ಬಹುತೇಕ ನಗರಗಳನ್ನು,
ಒಂದು ಪ್ರತಿಷ್ಠಿತ ಕಂಪನಿಯ ಟೂರ್ ಮ್ಯಾನೇಜರ್ ಆಗಿ ಬಹಳಷ್ಟು ಸಲ ಸುತ್ತಿರುವ ಮತ್ತು ಈಗಲೂ ವರ್ಷದ ಸುಮಾರು 8 ತಿಂಗಳು ಸರದಿಯ ಮೇಲೆ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡುತ್ತಿರುವ ಪರಿಚಯದವರನ್ನು ಕೇಳಿದೆ.
ಅವರ ಮಾತಿನಂತೆ…..
” ರಷ್ಯಾದ ಲೆನಿನ್ ಗ್ರಾಡ್ ಎಂದು ಕರೆಯಲ್ಪಡುತ್ತಿದ್ದ ಸೆಂಟ್ ಪೀಟರ್ಸ್‌ಬರ್ಗ್ ( Saint Peters burg ) ಎಂಬ ನಗರವೇ ನಾನು ವಿಶ್ವ ಪರ್ಯಟನೆಯಲ್ಲಿ ಕಂಡ ಅತ್ಯಂತ ಸುಂದರ, ಮನಮೋಹಕ ಮತ್ತು ಆಹ್ಲಾದಕರ ನಗರ.
ಹೌದು,
ಸ್ವಿಸ್, ಆಸ್ಟ್ರಿಯಾ, ನ್ಯೂಜಿಲೆಂಡ್ ಕೂಡ ಅತ್ಯಂತ ಸುಂದರವೇ. ಆದರೆ ಪ್ರಾಕೃತಿಕ ಸೌಂದರ್ಯದ ಗುಣಮಟ್ಟವನ್ನು ದೈವಿಕ ಪ್ರಜ್ಞೆಯ ಹಂತಕ್ಕೆ ಕೊಂಡೊಯ್ಯುವ ವಾತಾವರಣ ಆ ನಗರದಲ್ಲಿ ಕಂಡೆ.
ಭಾರತೀಯ ಸಿನಿಮಾಗಳಲ್ಲಿ ಕಾಣುವ ಸ್ವರ್ಗ ಲೋಕದ ಚಿತ್ರಣ ಆ ನಗರದಲ್ಲಿ ನನ್ನ ಅನುಭವಕ್ಕೆ ಬಂದಿತು.
ಹಿಮಾಚ್ಛಾದಿತ ಗಿರಿ ಶಿಖರಗಳ ಮಧ್ಯೆ, ಅತ್ಯಂತ ತಣ್ಣನೆಯ ವಾತಾವರಣದಲ್ಲಿ, ತುಂತುರು ಹಿಮ ಹನಿಗಳ ಸ್ಪರ್ಶದಲ್ಲಿ, ಬಾಲ್ಟಿಕ್ ಸಮುದ್ರದ ಅಂಚಿನಲ್ಲಿ ನಡೆದಾಡುತ್ತಿರುವಾಗ ನಿಜಕ್ಕೂ ಕಲ್ಪನೆಯ ಸ್ವರ್ಗವೇ ನೆನಪಾಯಿತು.
ಭೂಮಿಯಿಂದ ಬಹಳ ಎತ್ತರದಲ್ಲಿ, ಆಕಾಶದ ಮೇಲೆ ಓಡಾಡುತ್ತಿರುವ ಭಾವನೆ ಮೂಡಿತು.
ಸುಮಾರು 5/6 ಬಾರಿ ಹೋದಾಗಲೂ ಇದೇ ಅನುಭವವಾಯಿತು…
ಅಲ್ಲದೆ, ಒಮ್ಮೆ ನಮ್ಮ ಕಂಪನಿಯ ಟೂರ್ ಮ್ಯಾನೇಜರ್ ಗಳ ವಿಚಾರ ವಿನಿಮಯ ನಡೆದಾಗ ಈ ವಿಷಯದಲ್ಲಿ ಹಲವರ ಅಭಿಪ್ರಾಯ ಇದೇ ಆಗಿದ್ದಿತ್ತು “
ಸೆಂಟ್ ಪೀಟರ್ಸ್‌ಬರ್ಗ್ ವಿಶ್ವವಿಖ್ಯಾತ ಲೇಖಕರಾದ ಟಾಲ್ಸ್ಟಾಯ್ ಮತ್ತು ದಾಸ್ತೊವೋಸ್ಕಿ ವಾಸಿಸುತ್ತಿದ್ದ ನಗರ. ಒಂದು ಕಾಲದಲ್ಲಿ ಸೋವಿಯತ್ ಒಕ್ಕೂಟದ ರಾಜಧಾನಿ ಸಹ ಆಗಿದ್ದಿತು. ರಷ್ಯಾದ ಎರಡನೇ ಅತಿ ದೊಡ್ಡ ನಗರ ಮತ್ತು ಸಾಂಸ್ಕೃತಿಕ ನಗರ ಎಂದೂ ಪ್ರಸಿದ್ಧ ಪಡೆದಿದೆ…..
ವೈಯಕ್ತಿಕವಾಗಿ ನಾನು ರಷ್ಯಾ ದೇಶವನ್ನು ನೋಡಿಲ್ಲ. ಒಂದು ವೇಳೆ ಯಾರಾದರೂ ವಿಶ್ವದ ನಗರಗಳನ್ನು ನೋಡಿರುವವರು ಇದರ ಸತ್ಯಾಸತ್ಯತೆಯ ಜೊತೆಗೆ ತಮ್ಮ ಅನುಭವ ಹಂಚಿಕೊಳ್ಳಬಹುದು.
ಆ ಟೂರ್ ಮ್ಯಾನೇಜರ್ ವರ್ಣಿಸಿದ ವಿಶ್ವದ ಸುಂದರ ನಗರ ನನ್ನ ಮನ ಸೆಳೆದಿದ್ದರಿಂದ ನಿಮ್ಮೊಂದಿಗೆ ಹಂಚಿಕೊಡಿದ್ದೇನೆ…….
ಪ್ರವಾಸಗಳು ಕೂಡ ನಮ್ಮ ಜ್ಞಾನಾರ್ಜನೆಯ ಬಹುಮುಖ್ಯ ಮಾರ್ಗಗಳು ಎಂದು ನೆನಪಿಸುತ್ತಾ……..
ಅವಕಾಶಗಳಿದ್ದರೆ ಪ್ರವಾಸಗಳನ್ನು ಮಿಸ್ ಮಾಡಿಕೊಳ್ಳಬೇಡಿ ಎಂದು ಹೇಳುತ್ತಾ………..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…