Spread the love

ಹೆಚ್ಚು ಕಡಿಮೆ ಡಿಸೆಂಬರ್ ಕೊನೆಯವಾರ ಬಹುಶಃ ಡಿಸೆಂಬರ್ 29 – 2019 ರ ಸಮಯದಲ್ಲಿ ಸಿದ್ದೇಶ್ವರ ಶ್ರೀಗಳಂತೆ ಆಧ್ಯಾತ್ಮಿಕ ಜಗತ್ತಿನಲ್ಲಿ ಜನಪ್ರಿಯರಾಗಿದ್ದು 90 ರ ವಯಸ್ಸಿನಲ್ಲಿ ಅಸ್ತಂಗತರಾದ ಮತ್ತೊಬ್ಬ ಯತಿಗಳು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಸ್ವಾಮಿಗಳು. ಅವರ ನಿರ್ಗಮನದ ಸಂದರ್ಭದಲ್ಲಿ ಬರೆದ ಲೇಖನ ಯಥಾವತ್ತಾಗಿ ಇಲ್ಲಿ ಮತ್ತೊಮ್ಮೆ………..

ಹೋಗಿ ಬನ್ನಿ ಅಜ್ಜ………

ತುಂಬು ಜೀವನ ನಡೆಸಿ, ಬಹುತೇಕ ಸಾಮಾಜಿಕ ಮತ್ತು ಆಧ್ಯಾತ್ಮಿಕವಾಗಿ ತಮ್ಮ ಮನದ ಬಯಕೆಗಳನ್ನು ತೃಪ್ತಿಪಡಿಸಿಕೊಂಡು, ಸನಾತನ ಧರ್ಮದ ಮೌಲ್ಯಗಳನ್ನು ಮೈಗೂಡಿಸಿಕೊಂಡು, ಜೊತೆಗೊಂದಿಷ್ಟು ಕ್ರಾಂತಿಕಾರಕ ಸಮಾಜ ಸುಧಾರಣೆಯ ಮುಖವಾಡವನ್ನು ಹೊತ್ತು ಬದುಕು ಮುಗಿಸಿದ ನಿಮಗೆ ಹೃದಯ ಪೂರ್ವಕ ಶ್ರದ್ಧಾಂಜಲಿ……

ಕಾಲನ ನಿರ್ಣಯದಲ್ಲಿ ಇಲ್ಲಿ ಯಾರಿಗೂ ವಿನಾಯಿತಿ ಇಲ್ಲ. ಪಂಡಿತರಿಂದ ಪಾಮರರವರೆಗೂ…

90 ವರ್ಷಗಳ ಹಿಂದೆ ಸ್ವಾತಂತ್ರ್ಯ ಪೂರ್ವದಲ್ಲಿ ಜನಿಸಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಂದರೆ 7ನೇ ವಯಸ್ಸಿನ ಬಾಲ್ಯದ ದಿನಗಳಲ್ಲಿಯೇ ಸನ್ಯಾಸ ದೀಕ್ಷೆ ಸ್ವೀಕರಿಸಿ ಈ 90 ವರ್ಷಗಳ ದೀರ್ಘ ಅವಧಿಯಲ್ಲಿ ಅನೇಕಾನೇಕ ಏರಿಳಿತಗಳನ್ನು ನೋಡಿ 2019 ರ ಅಂತಿಮ ದಿನಗಳಲ್ಲಿ ಪ್ರಕ್ಷುಬ್ಧ ಸಾಮಾಜಿಕ ರಾಜಕೀಯ ಪರಿಸ್ಥಿತಿಯಲ್ಲಿ ಅಸ್ತಂಗತರಾದ ಉಡುಪಿ ಪೇಜಾವರ ಮಠದ ವಿಶ್ವೇಶ ತೀರ್ಥ ಶ್ರೀಪಾದರೆಂಬ ವೆಂಕಟರಮಣರೇ ನಿಮ್ಮನ್ನು ವಿಮರ್ಶೆಗೆ ಒಳಪಡಿಸುವುದು ಅಷ್ಟು ಸುಲಭವಲ್ಲ. ನೇರವಾಗಿ ಆ ಕಡೆ ಅಥವಾ ಈ ಕಡೆ ಜನರ ಮೆಚ್ಚುಗೆಗಾಗಿ ಏನಾದರೂ ಹೇಳಬಹುದು. ಆದರೆ ನಿಮ್ಮ ನಿರ್ಗಮನದ ಸಂದರ್ಭದಲ್ಲಿ ಕನಿಷ್ಠ ‌ವಸ್ತುನಿಷ್ಠ ವಿಮರ್ಶೆ ಮಾಡುವ ಒಂದು ಸಣ್ಣ ಪ್ರಯತ್ನ.

ಒಬ್ಬ ಪಕ್ಕಾ ಸಂಪ್ರದಾಯಸ್ಥ ಶಿವಳ್ಳಿ ಮಾಧ್ವ ಕುಟುಂಬವೊಂದರಲ್ಲಿ ಹುಟ್ಟಿ ಯತಿಗಳಾಗಿ ಆಧ್ಯಾತ್ಮಿಕ ಪರಿಸರದಲ್ಲಿ ಬೆಳೆದು ಅದನ್ನು ಉಳಿಸುವ ಮಹತ್ತರ ಪೀಠಾಧಿಪತಿಗಳೆಂಬ ಜವಾಬ್ದಾರಿ ಸ್ಥಾನದಲ್ಲಿ ಕುಳಿತು ವ್ಯವಸ್ಥೆಯ ವಿರುದ್ಧ ಈಜುವ ಮನಸ್ಥಿತಿ ಹೊಂದುವುದು ಅಷ್ಟು ಸುಲಭವಲ್ಲ.

ಸಾಮಾನ್ಯವಾಗಿ ಯಾವುದೇ ವ್ಯಕ್ತಿಯ ಚಿಂತನೆ ಅಭಿಪ್ರಾಯ ಬದುಕಿನ ದೃಷ್ಟಿಕೋನ ಎಲ್ಲವೂ ಒಂದು ಸ್ಪಷ್ಟ ರೂಪ ಪಡೆಯುವುದು ಆತನ 20/30 ರ ವಯಸ್ಸಿನಲ್ಲಿ. ಅದು ಬಹುಮುಖ್ಯ ಸಮಯ. 1955 ರಲ್ಲಿ ವಿಶ್ವೇಶ ತೀರ್ಥರ ವಯಸ್ಸು ಸುಮಾರು 24/25. ಅಂದರೆ ಆಗಿನ ‌ಸಾಮಾಜಿಕ ಧಾರ್ಮಿಕ ರಾಜಕೀಯ ವಾತಾವರಣದ ಹಿನ್ನೆಲೆಯಲ್ಲಿ ಪೇಜಾವರರ ಚಿಂತನೆಗಳು ಮೂಡಿರುವ ಸಾಧ್ಯತೆ ಇರುತ್ತದೆ.

ಸ್ವಾತಂತ್ರ್ಯ ಬಂದದ್ದು, ಭಾರತ ವಿಭಜನೆಯಾಗಿದ್ದು, ಉಳಿದ ರಾಜ್ಯಗಳ ಒಕ್ಕೂಟ ವ್ಯವಸ್ಥೆ ಸಂವಿಧಾನದ ರೂಪದಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಹಿಂದೂ ಮುಸ್ಲಿಂ ವೈಮನಸ್ಯ, ಗಾಂಧಿ ಹತ್ಯೆ, ಸಾರ್ವರ್ಕರ್ ವಿಚಾರಗಳು, ಅಂಬೇಡ್ಕರ್ ಚಿಂತನೆಗಳು, ಜಾತಿ ಪದ್ದತಿ, ನೆಹರು ಆಡಳಿತ, ಭಾರತ ಪಾಕಿಸ್ತಾನ ಯುದ್ಧ, ಚೀನಾ ಯುದ್ಧ, ಅವರ ವೈಯಕ್ತಿಕ ಬದುಕಿನ ವೇದ ಉಪನಿಷತ್ತುಗಳ ಆಧ್ಯಯನ ಇವೆಲ್ಲವೂ ಪ್ರಾರಂಭದ ಹಂತದಲ್ಲಿ ಅವರ ಮೇಲೆ ಪರಿಣಾಮ ಬೀರಿರುತ್ತದೆ.

ಅಲ್ಲಿಂದ ಇಲ್ಲಿಯವರೆಗೂ ಈ ವ್ಯವಸ್ಥೆಯಲ್ಲಿ ರಾಜ್ಯ ಮತ್ತು ರಾಷ್ಟ್ರದ ಮುಖ್ಯವಾಹಿನಿಯಲ್ಲಿ ಅತ್ಯಂತ ಕ್ರಿಯಾಶೀಲರಾಗಿ, ಪ್ರಭಾವಿಗಳಾಗಿ ಭಾಗವಹಿಸಿರುವ ಉಡುಪಿ ಮಠಾಧೀಶರ ವಿವಿಧ ಮುಖಗಳು ನಮಗೆ ಕಾಣ ಸಿಗುತ್ತವೆ.

ಯಾವುದೇ ದೃಷ್ಟಿಕೋನದಿಂದ ಮತ್ತು ಅವರ ಕಾರ್ಯಚಟುವಟಿಕೆಗಳಿಂದ ಗಮನಿಸಿದರೂ ಅವರು ಅಪ್ಪಟ ಸನಾತನ ಧರ್ಮದ ವರ್ಣಾಶ್ರಮ ವ್ಯವಸ್ಥೆಯ ಹಿಂದೂ ಸಂಸ್ಕೃತಿಯ ಪ್ರಬಲ ಪ್ರತಿಪಾದಕರು ಎಂಬುದು ತಿಳಿದುಬರುತ್ತದೆ. ಬಾಬರಿ ಮಸೀದಿ ಕೆಡವಲು ಮತ್ತು ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ವಿಷಯದಲ್ಲಿ ಅವರ ಭಾಗವಹಿಸುವಿಕೆ ನೇರವಾಗಿಯೇ ಇದ್ದಿತು. ಹಿಂದೂ ಸಮಾಜೋತ್ಸವಗಳಲ್ಲಿ ಅವರದು ಪ್ರಮುಖ ಪಾತ್ರ. ಎಲ್ಲಾ ರಾಜಕೀಯ ಪಕ್ಷಗಳ ಜೊತೆ ಸ್ನೇಹ ಸಂಬಂಧ ಇದ್ದರೂ ಹಿಂದುತ್ವದ ಪ್ರತಿಪಾದಕ ಸಂಘ ಪರಿವಾರ, ಭಾರತೀಯ ಜನತಾ ಪಕ್ಷ ಮತ್ತು ಅದರ ನಾಯಕರ ಜೊತೆ ಒಡನಾಟ ತುಸು ಹೆಚ್ಚಾಗಿಯೇ ಇತ್ತು.

ಆಗಿನ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಶ್ಯತೆಯ ವಿರುದ್ದ ಯಾವುದೇ ಪ್ರಬಲ ಜಾತಿಯ ಸ್ವಾಮಿಗಳ ಹೋರಾಟ ಇರಲಿಲ್ಲ. ಅಂತಹ ಸಂದರ್ಭದಲ್ಲಿ ದಲಿತ ಕೇರಿಗಳಿಗೆ ಪ್ರವೇಶವನ್ನು ಪೇಜಾವರರ ಕ್ರಾಂತಿ ಕಾರಿ ನಡೆ ಎಂದು ಅರ್ಥೈಸಲಾಯಿತು. ಆದರೆ ಅದು ತೋರಿಕೆಯ ಮುಖವಾಡ ಎಂಬುದು ನಿಸ್ಸಂಶಯ. ಏಕೆಂದರೆ ಮುಸ್ಲಿಮರ ವಿರುದ್ಧದ ಮನಸ್ಥಿತಿಯಲ್ಲಿ ಹಿಂದೂ ಧರ್ಮದ ಅನಿಷ್ಟ ಅಸ್ಪೃಶ್ಯತೆ ಒಂದು ಶಾಪ ಎಂದು ಹೇಳುತ್ತಾ ಒಗ್ಗಟ್ಟಿನ ಮಂತ್ರ ಜಪಿಸುವ ಅನಿವಾರ್ಯ ವಾತಾವರಣ ಸೃಷ್ಟಿಯಾಗಿತ್ತು. ಅಂಬೇಡ್ಕರ್ ವಾದ ಬಂಡಾಯ ಸಾಹಿತ್ಯ ಬೆಳವಣಿಗೆಯ ಹಂತದಲ್ಲಿತ್ತು. ಅದನ್ನು ಬೇಗ ಗ್ರಹಿಸಿದ ಪೇಜಾವರರು ದಲಿತ ಕೇರಿ ಪ್ರವೇಶಿಸಿದರು. ನನಗೆ ಇರುವ ನೆನಪಿನ ಪ್ರಕಾರ ಅಲ್ಲಿ ಆಹಾರ ಸೇವಿಸಲಿಲ್ಲ. ಯತಿಗಳ ಆಹಾರ ಕ್ರಮದ ನೆಪದಿಂದ.
ಆದರೆ ನೆನಪಿಡಿ, ಮಠದಲ್ಲಿ ಪಂಕ್ತಿ ಭೇದ ಮಾಡಿ ಹೊರಗಡೆ ಜಾತಿ ನಿರ್ಮೂಲನೆಗಾಗಿ ಪ್ರಯತ್ನಿಸುವುದು ಆತ್ಮವಂಚನೆಯಾಗುತ್ತದೆ. ಆದರೆ ಇತರೆ ಸ್ವಾಮಿಗಳ ಹೋಲಿಕೆಯಲ್ಲಿ ಪೇಜಾವರ ಸ್ವಾಮಿಗಳ ಈ ನಡೆ ಮೇಲ್ನೋಟಕ್ಕಾದರೂ ಮೆಚ್ಚುಗೆಗೆ ಪಾತ್ರವಾಗುತ್ತದೆ.

ಹಾಗೆಯೇ ತಾವು ಜಾತ್ಯಾತೀತರು ಎಂಬ ತೋರಿಕೆಗಾಗಿ ಅಪರೂಪಕ್ಕೊಮ್ಮೆ ರಂಜಾನ್ ಹಬ್ಬದ ಸಮಯದಲ್ಲಿ ಇಫ್ತಾರ್ ಕೂಟವನ್ನು ಸಹ ಏರ್ಪಡಿಸಿದ್ದರು. ಆದರೆ ಅದು ಪ್ರಾಮಾಣಿಕ ಪ್ರಯತ್ನವಾಗಿರಲಿಲ್ಲ. ಸಾಮಾನ್ಯವಾಗಿ ಸನಾತನ ಹಿಂದೂ ಧರ್ಮದ ನಂಬಿಕೆಯಿರುವವರು ಮುಸ್ಲಿಮರನ್ನು ಬಂಧುಗಳು ಎಂದು ಆಂತರ್ಯದಲ್ಲಿ ಸ್ವೀಕರಿಸುವುದಿಲ್ಲ.

ಹಾಗೆಂದು ಜಾತಿ ಪದ್ದತಿ ಮತ್ತು ಅಯೋಧ್ಯೆ ರಾಮ ಮಂದಿರದ ಪರವಾಗಿದ್ದರು ಎಂದ ಮಾತ್ರಕ್ಕೆ ಅವರ ಎಲ್ಲಾ ನಡೆಗಳನ್ನು ಟೀಕಿಸಲು ಸಾಧ್ಯವಿಲ್ಲ. ಅವರ ಸ್ವಾತಂತ್ರ್ಯ ಮತ್ತು ಅವರು ಬೆಳೆದು ಬಂದ ಪರಿಸರದಲ್ಲಿ, ಭಾರತೀಯ ಮನಸ್ಥಿತಿಯಲ್ಲಿ ಒಬ್ಬ ಸ್ವಾಮೀಜಿಯಾಗಿ ಅದು ಸಹಜ.

ಮಠ ಪರಂಪರೆಯ ವ್ಯವಸ್ಥೆಯಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವೇಶ ತೀರ್ಥರು ಸನ್ಯಾಸಾಶ್ರಮದ ಅತ್ಯಂತ ಪ್ರಾಮಾಣಿಕ ಯತಿಗಳು ಎಂದು ಕರೆಯಬಹುದು. 7 ನೆಯ ವಯಸ್ಸಿನಿಂದ ಕೊನೆಯ ಉಸಿರಿರುವವರೆಗೂ ವೈಯಕ್ತಿಕ ಬದುಕಿನಲ್ಲಿ ತಮ್ಮ ನಡವಳಿಕೆಯಲ್ಲಿ ಸಾರ್ವಜನಿಕವಾಗಿ ಯಾವುದೇ ಅಪಚಾರವಾಗದಂತೆ ಜೀವಿಸಿದರು. ಶಿಸ್ತು ಬದ್ಧ ಆರೋಗ್ಯಕರ ಚಟುವಟಿಕೆಯ ಆದರ್ಶಮಯ ಜೀವನ ವಿಧಾನ ಅನುಸರಿಸಿದರು. ಅತ್ಯುತ್ತಮ ವೇದಾಧ್ಯಯನದ ಜ್ಞಾನಿಗಳಾಗಿದ್ದರು.

ಯತಿಗಳೆಂದರೆ ಪೇಜಾವರರ ರೀತಿಯಲ್ಲಿ ಇರಬೇಕು ಎಂಬಷ್ಟು ಆದರ್ಶಪ್ರಾಯರಾಗಿದ್ದರು.

ಕೊನೆಯದಾಗಿ,
ಯಾವುದೇ ವ್ಯಕ್ತಿಯ ಬದುಕು ಆತನ ತಿಳಿವಳಿಕೆಯ ರೀತಿಯಲ್ಲಿ ಸಾಗುತ್ತದೆ. ಆದು ಆತನ ಸ್ವಾತಂತ್ರ್ಯ. ಹೀಗೆ ಇರಬೇಕು ಎಂದು ಇತರರು ಹೇಳುವುದು ಉಚಿತವಲ್ಲ.

ಆದರೆ ಆತನ ಬದುಕಿನ ರೀತಿಯನ್ನು ನಾವು ನಮ್ಮ ಮಿತಿಯಲ್ಲಿ ಖಂಡಿತ ವಿಮರ್ಶಿಸಬಹುದು ಮತ್ತು ಆ ವ್ಯಕ್ತಿಯ ಬಗ್ಗೆ ಯಾವುದೇ ಅಭಿಪ್ರಾಯ ರೂಪಿಸಿಕೊಳ್ಳಬಹುದು.

ವಿಶ್ವೇಶ ತೀರ್ಥರು ಅವರ ಇಷ್ಟದಂತೆ ಬದುಕಿದರು. ಆ ಬದುಕನ್ನು ನಾವು ನಮ್ಮ ಮಿತಿಯಲ್ಲಿ ಅರ್ಥೈಸಿಕೊಳ್ಳಬಹುದು. ಕೆಲವರಿಗೆ ದೈವ ಸಮಾನರು. ಮತ್ತೆ ಹಲವರಿಗೆ ಇಷ್ಟವಾಗದೇ ಇರಬಹುದು.

ದೊಡ್ಡ ಪ್ರಜ್ಞಾವಂತ ಯತಿಗಳು ಭಕ್ತಿ ಭಾವಗಳ ಜೊತೆ ಪ್ರಾಮಾಣಿಕವಾಗಿ ಮಾನವ ಧರ್ಮದ ಪ್ರತಿಪಾದಕರಾದರೆ ಅದು ಅವರಿಗೆ ಮತ್ತಷ್ಟು ಮೆರಗು ತರುತ್ತದೆ. ಸಾಮಾನ್ಯರು ಮೀರಲಾಗದ ಅರಿಷಡ್ವರ್ಗಗಳ ಮೇಲೆ ನಿಯಂತ್ರಣ ಸಾಧಿಸುವುದರ ಜೊತೆಗೆ ವಿಶಾಲ ಮನೋಭಾವ ಬೆಳೆಸಿಕೊಂಡಲ್ಲಿ ಸ್ವಾಮೀಜಿಗಳ ಬದುಕಿನ ಸಾರ್ಥಕತೆ ಮತ್ತಷ್ಟು ಮೆರಗು ನೀಡುತ್ತದೆ. ಎಲ್ಲಾ ಸ್ವಾಮೀಜಿಗಳು ಜಾತಿ ಮತ ಪಂಥ ಭೇದಗಳನ್ನು ಮೀರಿ ವಿಶ್ವ ಮಾನವ ಪ್ರಜ್ಞೆ ಬೆಳೆಸಿಕೊಳ್ಳುವುದು ಸಮಾಜದ ಹಿತದೃಷ್ಟಿಯಿಂದ ಒಳ್ಳೆಯದು……

ಇರಲಿ,
ಇತಿಹಾಸದ ಪುಟಕ್ಕೆ ಸೇರಿದ ಅಜ್ಜ ನಿಮಗಿದೋ ಅಂತಿಮ ವಿದಾಯ. ಒಂದಷ್ಟು ಸಾರ್ಥಕತೆ, ಒಂದಷ್ಟು ದಾಖಲೆ, ಒಂದಷ್ಟು ಸ್ಪೂರ್ತಿ, ಒಂದಷ್ಟು ಆದರ್ಶ, ಒಂದಷ್ಟು ಆರೋಪಗಳನ್ನು ಹೊತ್ತು, ಅಪಾರ ಜನಪ್ರಿಯತೆ ಪಡೆದು, ಸುದೀರ್ಘ ಬದುಕಿನ ಪುಟಗಳನ್ನು ತಿರುವಿಹಾಕಿ ಬೃಂದಾವನ ಸೇರಿದ ವೆಂಕಟರಮಣರೇ ನಿಮಗಿದೋ ಭಾವಪೂರ್ಣ ಶ್ರದ್ಧಾಂಜಲಿ.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್. ಕೆ.
9844013068…

error: No Copying!